ಮೋದಿ ಸಂಪುಟದಲ್ಲಿ ಕೈ ತಪ್ಪಿದ ಕೃಷಿ ಖಾತೆ: ನಿರಾಸೆಗೊಂಡ ಕುಮಾರಸ್ವಾಮಿ ಹೇಳಿದ್ದೇನು?
ಬೆಂಗಳೂರು, ಜೂನ್ 11: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಚಿವ ಸಂಪುಟದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್ಡಿ ಕುಮಾರಸ್ವಾಮಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಸಿಕ್ಕಿದ್ದು, ಕೃಷಿ ಖಾತೆ ಮಿಸ್ ಆಗಿದೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಕೃಷಿ ಖಾತೆ ಕೈ ತಪ್ಪಿದ ಹಿನ್ನೆಲೆ ತೀವ್ರ ನಿರಾಸೆಯುಂಟಾಗಿದೆ ಎನ್ನಲಾಗಿದೆ.
ಲೋಕಸಭಾ ಚುಣಾವಣೆ ಹಿನ್ನೆಲೆ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ಚುನಾವಣೆಯನ್ನ ಎದುರಿಸಿತ್ತು. ಬಿಜೆಪಿ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ರೆ, ಜೆಡಿಎಸ್ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಮಂಡ್ಯ ಕ್ಷೇತ್ರದಿಂದ ಗೆಲುವು ಕಂಡ ಕುಮಾರಸ್ವಾಮಿ ಅವರಿಗೆ ಮೋದಿ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಸಿಕ್ಕಿದೆ.

ಕೃಷಿ ಖಾತೆ ಬಯಸಿದ್ದ ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ನೀಡಲಾಗಿದೆ. ಇನ್ನು ಖಾತೆ ಹಂಚಿಕೆ ಬಳಿಕ ಮೊದಲ ಮಂಡ್ಯ ಸಂಸದರಾದ ಹೆಚ್ ಡಿ ಕುಮಾರಸ್ವಾಮಿ ಅವರು ಮಾತನಾಡಿ, ಸಚಿವ ಸಂಪುಟ ಸಭೆಯಲ್ಲಿ ಖಾತೆ ಹಂಚಿಕೆ ಮಾಡಿದ್ದು, ಕೃಷಿ ಖಾತೆ ನಿರೀಕ್ಷೆ ಇತ್ತು, ಆದರೆ ಮೋದಿ ತೀರ್ಮಾನ ಮಾಡಿದ್ದಾರೆ. ದೇಶದ ಅಭಿವೃದ್ಧಿಗೆ ಪೂರಕವಾಗಿ ನಿರೀಕ್ಷೆ ಮಾಡಿ ಖಾತೆ ನೀಡಿದ್ದಾರೆ. ಕನ್ನಡಿಗರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ದೇಶದ ಪ್ರಗತಿಗೆ ಕೆಲಸ ಮಾಡಬೇಕಿದೆ. ಎಲ್ಲವನ್ನು ಗಮನಿಸಿ ಇಲಾಖೆಯನ್ನು ಮೋದಿ ಕೊಟ್ಟಿದ್ದಾರೆ. ಪ್ರಮಾಣಿಕವಾಗಿ ಕ್ಷಣ ವ್ಯರ್ಥಮಾಡದೆ ಕೆಲಸ ಮಾಡುತ್ತೇನೆ. ರೂಟ್ ಮ್ಯಾಪ್ ಸಿದ್ದಮಾಡಿ ಕೆಲಸ ಮಾಡುತ್ತೇನೆ. ನನ್ನ ಜೀವನದಲ್ಲಿ ಅತಿ ದೊಡ್ಡ ಸವಾಲು. ಕರ್ನಾಟಕದಲ್ಲಿ ಹಲವಾರು ಸಮಸ್ಯೆಗಳು ಇವೆ. ಅವುಗಳನ್ನು ಈಗ ಚರ್ಚೆ ಮಾಡುವುದಿಲ್ಲ, ನನ್ನದೆ ಕಲ್ಪನೆಯಲ್ಲಿ ಕೆಲಸ ಮಾಡಲು ಪ್ರಮಾಣಿಕೆ ಪ್ರಯತ್ನ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ನನ್ನ ವಿಚಾರದಲ್ಲಿ ವಿಶೇಷವಾದ ನಂಬಿಕೆ ಇಟ್ಟು ಖಾತೆ ನೀಡಿದ್ದಾರೆ. ನನ್ನ ಮೇಲೆ ಸವಾಲಿದೆ. ದೇಶದ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಕೆಲಸ ಮಾಡಬೇಕಿದೆ. ಕರ್ನಾಟಕಕ್ಕೆ ಅಂತ ಮಾತ್ರ ಹೇಳಲ್ಲ. ದೇಶಾದ್ಯಂತ ಸುತ್ತಾಡಿ ಬದಲಾವಣೆ ತರಲು ಬಯಸಿದ್ದೇನೆ ಎಂದ ಅವರು, ಪ್ರಹ್ಲಾದ್ ಜೋಷಿಯವರಿಗೆ ಆಹಾರ ಖಾತೆ ಕೊಟ್ಟಿದ್ದಾರೆ. ಶೋಭಾ ಅವರಿಗೂ ಉತ್ತಮ ಖಾತೆ ಸಿಕ್ಕಿದೆ ಎಂದು ಹೇಳಿದರು.
ಇನ್ನೂ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಏಳು ಬೀಳುಗಳನ್ನು ಕಂಡಿದೆ. ದೇವೇಗೌಡರನ್ನು ಇಂದು ಸ್ಮರಿಸುತ್ತೇನೆ. ದೇವೇಗೌಡರ ರಾಜಕೀಯ ಮುಗಿದೇ ಹೋಯ್ತು ಎನ್ನುವಾಗ ಮತ್ತೆ ಪುಟಿದೇದ್ದಿದ್ದಾರೆ. ಕುಮಾರಸ್ವಾಮಿ ಮುಗಿದು ಹೋದ ಎನ್ನುವಾಗಲೇ ಯಾವುದೋ ಶಕ್ತಿ ಕಾಪಾಡಿದೆ. ಈ ಪಕ್ಷವನ್ನು ಯಾವುದೋ ಶಕ್ತಿ ಮೇಲೆತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications