ಲೋಕಸಭೆ ಚುನಾವಣೆ: ಜ್ಯುವೆಲ್ಲರಿ ಶಾಪ್ ಮಾಲೀಕರಿಗೆ ಖಡಕ್ ಸೂಚನೆ
ಬೆಂಗಳೂರು, ಮಾರ್ಚ್ 27: ಕರ್ನಾಟಕದ 28 ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನಲೆಯಲ್ಲಿ ಜ್ಯುವೆಲ್ಲರಿ ಶಾಪ್ ಮಾಲೀಕರಿಗೆ ಖಡಕ್ ಸೂಚನೆಗಳನ್ನು ನೀಡಲಾಗಿದೆ.
ಜಿಲ್ಲಾ ಚುನಾವಣಾಧಿಕಾರಿಗಳು ಜವಳಿ, ಚಿನ್ನ-ಬೆಳ್ಳಿ ವರ್ತಕರು ಹಾಗೂ ಟ್ರಾನ್ಸ್‌ಪೋರ್ಟ್ ಮಾಲೀಕರೊಂದಿಗೆ ಸಭೆ ನಡೆಸಿದ್ದಾರೆ. ಜಿಎಸ್‌ಟಿ ನಿಯಮದನ್ವಯ ವ್ಯಾಪಾರ ವಹಿವಾಟು ನಡೆಸಲು ಸೂಚನೆ ಕೊಡಲಾಗಿದೆ. ನಿಯಮದಂತೆ ವಹಿವಾಟು ನಡೆಸುವ ಮೂಲಕ ಚುನಾವಣಾ ನೀತಿ ಸಂಹಿತೆ ಪಾಲನೆ ಮಾಡಿ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾದ ಚುನಾವಣೆ ನಡೆಸಲು ಸಹಕಾರ ನೀಡಬೇಕೆಂದು ತಿಳಿಸಲಾಗಿದೆ.

ಚುನಾವಣಾ ಸಂದರ್ಭದಲ್ಲಿ ಜನರಿಗೆ ಉಚಿತ ಕೊಡುಗೆ ನೀಡಲು ವಸ್ತುಗಳನ್ನು ಖರೀದಿ ಮಾಡುವ ಸಂಭವವಿರುತ್ತದೆ. ಸೀರೆ ಹಂಚಿಕೆ, ಕಿಚನ್ ವಸ್ತುಗಳ ಹಂಚಿಕೆ, ಬೆಳ್ಳಿ-ಬಂಗಾರದ ಉಡುಗೊರೆ ನೀಡುವ ಸಂಭವಿರುತ್ತದೆ. ಮಾಲೀಕರು ಯಾರು ಒಂದೇ ತರಹದ ವಸ್ತುಗಳನ್ನು ಖರೀದಿಸುವರು ಅಂತಹವರ ವಿವರವನ್ನು ನೀಡಬೇಕು ಎಂದು ಸೂಚಿಸಲಾಗಿದೆ.
ಬಿಲ್ ಇಟ್ಟುಕೊಳ್ಳಲು ಅವಕಾಶ: ಯಾವುದೇ ವಸ್ತುಗಳನ್ನು ಖರೀದಿಸಿದರೂ ಜಿಎಸ್‌ಟಿ ಬಿಲ್ ನೀಡುವುದು ಕಡ್ಡಾಯವಾಗಿರುತ್ತದೆ. ಯಾವುದೇ ಮದುವೆಯ ಸಮಾರಂಭಕ್ಕೆ ಜವಳಿ ಖರೀದಿಸಿದಲ್ಲಿ ಅದಕ್ಕೆ ಸಂಬಂಧಿಸಿದ ಜಿಎಸ್‌ಟಿ ಬಿಲ್ ಇಟ್ಟುಕೊಳ್ಳಬೇಕಾಗುತ್ತದೆ ಮತ್ತು ಅಂಗಡಿ ಮಾಲೀಕರು ಆಗಮಿಸುವ ಗ್ರಾಹಕರಿಗೆ ಆನ್‍ಲೈನ್ ವ್ಯವಹಾರ ಮಾಡಲು ತಿಳಿಸಬೇಕು. ಯಾವುದೇ ಅಂಗಡಿಗೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಬಂದಾಗ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ಪರಿಶೀಲನೆಗೆ ಸಹಕಾರ ನೀಡಬೇಕಾಗುತ್ತದೆ. ನಿಯಮಬದ್ದವಾಗಿ ವ್ಯವಹಾರ ಮಾಡಲು ಯಾವುದೇ ಅಭ್ಯಂತರ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಅಂಗಡಿಯಲ್ಲಿ ವ್ಯಾಪಾರ ಮಾಡಿದ ವೇಳೆ ಸ್ವೀಕರಿಸಲಾದ ನಗದನ್ನು ಬ್ಯಾಂಕ್‍ಗೆ ಹೋಗಿ ಜಮಾ ಮಾಡಲು ಹೋಗುವಾಗ ನಗದು ವಶಕ್ಕೆ ಪಡೆಯುತ್ತಾರೆ ಎಂದು ವರ್ತಕರು ಆಯೋಗದ ಮುಂದೆ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರ ನೀಡಿದ ಅಧಿಕಾರಿಗಳು ವಹಿವಾಟು ನಡೆಸುತ್ತಿರುವ ಬಗ್ಗೆ ಮತ್ತು ಹಣವನ್ನು ಸಾಗಣೆ ಮಾಡುತ್ತಿರುವ ಬಗ್ಗೆ ದಾಖಲೆಗಳ ಸಮೇತ ಮಾಹಿತಿಯನ್ನು ಆಯಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಗೆ ಸಲ್ಲಿಸಿ ವಹಿವಾಟು ನಡೆಸಬಹುದು.
ಈಗಾಗಲೇ ಧರ್ಮಸ್ಥಳ ಸಂಘದವರು ಹಣಕಾಸಿನ ವಹಿವಾಟು ನಡೆಸುತ್ತಿರುವ ಮತ್ತು ಸಂಗ್ರಹಿಸಲಾದ ನಗದನ್ನು ಬ್ಯಾಂಕ್‍ಗೆ ತೆಗೆದುಕೊಂಡು ಹೋಗಿ ಜಮಾ ಮಾಡಲು ಅನುಮತಿ ನೀಡಲಾಗಿದೆ. ಅದೇ ರೀತಿ ಯಾವುದೇ ಟ್ರೇಡ್‍ನವರು ನಗದು ಸಾಗಣೆ ಬಗ್ಗೆ ಸೂಕ್ತ ದಾಖಲೆಗಳನ್ನಿಟ್ಟುಕೊಳ್ಳಬೇಕಾಗುತ್ತದೆ. ವಶಕ್ಕೆ ಪಡೆದ ಹಣದ ಪುನರ್ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಿಡ್ರೆಸ್ಸೆಲ್ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಲಾಗಿದೆ.
ಚಿನ್ನ-ಬೆಳ್ಳಿ ವ್ಯಾಪಾರಿಗಳು ಸಣ್ಣ ಸಣ್ಣ ವಸ್ತುಗಳನ್ನು ಹೆಚ್ಚಾಗಿ ಖರೀದಿ ಮಾಡುವವರ ವಿವರವನ್ನು ನೀಡಬೇಕು. ಯಾವುದೇ ಖರೀದಿ ಮಾಡಿದ್ದರೂ ಸಹ ಜಿಎಸ್‌ಟಿ ಬಿಲ್ ನೀಡುವುದು ಕಡ್ಡಾಯವಾಗಿದೆ ಎಂದು ಸೂಚಿಸಲಾಗಿದೆ.
ಯಾವುದೇ ಹೋಟೆಲ್, ಅಂಗಡಿಗಳಲ್ಲಿ ಕೂಪನ್ ಮೂಲಕ ವಹಿವಾಟು ನಡೆಸುವಂತಿಲ್ಲ. ಯಾವುದೇ ಹೋಟೆಲ್‍ನಲ್ಲಿ ಯಾರು ವಾಸ್ತವ್ಯ ಹೂಡುವರು ಅವರೇ ಬಿಲ್ ಪಾವತಿಸಬೇಕು ಮತ್ತು ಯಾವುದೇ ಹೋಟೆಲ್, ಅಂಗಡಿ, ಪೆಟ್ರೋಲ್ ಬಂಕ್‍ಗಳಲ್ಲಿ ಕೂಪನ್ ಆಧರಿಸಿ ಯಾವುದೇ ವಸ್ತುಗಳು, ಉಪಹಾರ, ಊಟ ನೀಡುವಂತಿಲ್ಲ ಮತ್ತು ಸಮುದಾಯ ಭವನಗಳನ್ನು ರಾಜಕೀಯ ಉದ್ದೇಶಕ್ಕೆ ನೀಡುವಾಗ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವ್ಯಾಪಾರ ವಹಿವಾಟಿನಲ್ಲಿ ಯಾವುದೇ ಉಲ್ಲಂಘನೆಯಾಗಬಾರದು. ಗೋಡೌನ್‍ಗಳಲ್ಲಿ ದಾಸ್ತಾನಿರುವ ವಸ್ತುಗಳಿಗೂ ನಿಮ್ಮಲ್ಲಿರುವ ಬಿಲ್‍ಗಳಿಗೂ ತಾಳೆಯಾಗುವಂತಿರಬೇಕು. ಕೆಲವು ಸಂದರ್ಭದಲ್ಲಿ ದಾಸ್ತಾನು ಮಳಿಗೆ ಪರಿಶೀಲನೆ ಮಾಡುವ ಸಂದರ್ಭ ಬಂದಾಗ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ರೂ.50 ಸಾವಿರಕ್ಕೂ ಹೆಚ್ಚು ನಗದು ತೆಗೆದುಕೊಂಡು ಹೋಗುವಂತಿಲ್ಲ. ಹೋದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ ಎಂದು ವ್ಯಾಪಾರಿಗಳಿಗೆ ಮಾಹಿತಿ ನೀಡಲಾಗಿದೆ.












Click it and Unblock the Notifications