ಊಟ ಪಂಕ್ತಿಯಲ್ಲಿ ನಮ್ಮವರಿಗೇ ಕಡಿಮೆ ಬಡಿಸ್ತೀವಿ: ಇಬ್ರಾಹಿಂ ಸಂದರ್ಶನ
"ಊಟ ಬಡಿಸುವಾಗ ನಮ್ಮವರೇ ತಾನೇ ಅನ್ನೋ ಕಾರಣಕ್ಕೆ ಅವರಿಗೇ ಕಡಿಮೆ ಬಡಿಸ್ತೀವಿ. ಹಾಗಾಗಿದೆ ಇವತ್ತಿನ ಪರಿಸ್ಥಿತಿ" ಎಂದು ಮಾತಿಗಾರಂಭಿಸಿದರು ವಿಧಾನಪರಿಷತ್ ಸದಸ್ಯ, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ.
ಅವರ ಜತೆಗೆ ಒನ್ಇಂಡಿಯಾ ಕನ್ನಡ ಸಂದರ್ಶನ ನಡೆಸಿದೆ. ಈ ಬಾರಿಯ ಸಂಪುಟ ಪುನಾರಚನೆ ಹಾಗೂ ಕೆಪಿಸಿಸಿಗೆ ಎಐಸಿಸಿಯಿಂದ ನಡೆದ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲೂ ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮರಿಗೆ ಪ್ರಾತಿನಿಧ್ಯ ಸಿಗಲಿಲ್ಲವಲ್ಲಾ ಎಂಬ ಪ್ರಶ್ನೆಗೆ ಅವರಿಗೆ ಅಡುಗೆ ಬಡಿಸುವ ಈ ಉದಾಹರಣೆ ನೀಡಿದರು.
ಈ ಸರಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಅವರಿಗೂ ತಾವು ಅಂದುಕೊಂಡಿದ್ದನ್ನು ಶೇಕಡಾ ನೂರರಷ್ಟು ಕೆಲಸ ಮಾಡಲು ಸಾಧ್ಯವಾಗಿಲ್ಲ. ನಾವು ಹಿಂದಿನ ಸರಕಾರಕ್ಕೆ ಹೋಲಿಸಬಾರದು. ಆದರೂ ಒಂದು ಹೋಲಿಕೆ ಮಾಡುತ್ತೇವೆ ಅಂದರೆ ಅದಕ್ಕಿಂತ ಉತ್ತಮವಾಗಿದೆ ಎಂದು ಹೇಳಿದರು.
ಇದರ ಜತೆಗೆ ಸಿಫೋರ್ ಸಮೀಕ್ಷೆ ಬಗ್ಗೆ ಕೂಡ ಖಡಕ್ ಆದ ಉತ್ತರ ನೀಡಿದ್ದಾರೆ ಇಬ್ರಾಹಿಂ. ಅವರ ಜತೆ ಮಾತನಾಡುವಾಗ ವಚನಗಳು, ಸಾಹಿತ್ಯ, ರಾಮಾಯಣ- ಮಹಾಭಾರತ ಕೂಡ ಹೇರಳವಾಗಿ ಬರುತ್ತವೆ. ಇಬ್ರಾಹಿಂ ಅವರ ಜತೆಗಿನ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಪ್ರಶ್ನೆ: ಸಿ ಫೋರ್ ರಿಪೋರ್ಟ್ ನಲ್ಲಿ ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಪರ ಜನಾಭಿಪ್ರಾಯ ಬರುತ್ತದೆ ಎಂದು ಬಂದಿದೆ, ನಿಮ್ಮ ಅಭಿಪ್ರಾಯ ಏನು?
ಇಬ್ರಾಹಿಂ: ನಾನು ಯಾವುದೇ ರಿಪೋರ್ಟ್ ನಂಬುವುದಿಲ್ಲ. ಮತದಾರರಲ್ಲಿ ಸ್ಥಿರತೆ ಇರುವುದಿಲ್ಲ. ಗಂಟೆ, ನಿಮಿಷಕ್ಕೆ ಅಭಿಪ್ರಾಯ ಬದಲಾಗುತ್ತಲೇ ಇರುತ್ತದೆ. ಚುನಾವಣೆಯಲ್ಲಿ ಏನು ಫಲಿತಾಂಶ ಬರುತ್ತದೋ ಅದೇ ಲೆಕ್ಕ.

ಪ್ರಶ್ನೆ: ಕೆಪಿಸಿಸಿ ಪದಾಧಿಕಾರಿಗಳ ಆಯ್ಕೆ ಹಾಗೂ ಸಂಪುಟ ಪುನಾರಚನೆಯಲ್ಲಿ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲವಲ್ಲಾ?
ಇಬ್ರಾಹಿಂ: ಅಡುಗೆ ಬಡಿಸುವಾಗ ನಮ್ಮವರೇ ಇದ್ದರೆ ಯಾವ ಪಂಕ್ತಿ ಆದರೇನು ಅನ್ನೋ ಮಾತಿದೆ. ಅಂದರೆ ಅಡುಗೆ ಬಡಿಸುವಾಗ ನಮ್ಮವರೇ ಅಲ್ಲವಾ ಅಂತ ಅವರಿಗೆ ಕಡಿಮೆ ಬಡಿಸ್ತೀವಿ. ಯಾರು ನಂಬಿದ್ದರೋ ಅವರನ್ನೇ ಕೈ ಬಿಡ್ತಿದ್ದೀವಿ.

ಪ್ರಶ್ನೆ: ಇದು ರಾಜ್ಯ ನಾಯಕರ ನಿರ್ಧಾರವೋ ಅಥವಾ ಹೈ ಕಮಾಂಡ್ ಕಾರಣವೋ?
ಇಬ್ರಾಹಿಂ: ಇವರು ಹೇಳಿದರೆ ತಾನೆ ಅವರು ಕೊಡೋದು. ಇಬ್ಬರದೂ ತಪ್ಪಿದೆ.

ಪ್ರಶ್ನೆ: ಈ ಹಿಂದೆ ರಾಜ್ಯ ಸರಕಾರದ ಕಾರ್ಯ ವೈಖರಿ ತೃಪ್ತಿ ತಂದಿಲ್ಲ ಅಂತ ಹೇಳಿದ್ದಿರಿ. ಈಗಲೂ ಅದೇ ಅಭಿಪ್ರಾಯ ಇದೆಯಾ?
ಇಬ್ರಾಹಿಂ: ಸ್ವತಃ ಸಿದ್ದರಾಮಯ್ಯ ಅವರಿಗೆ ತಾವಂದುಕೊಂಡಂತೆ ಕೆಲಸ ಮಾಡಲು ಆಗಿಲ್ಲ ಎಂಬ ಅಭಿಪ್ರಾಯ ಇದೆ. ಆದರೆ ಹಿಂದಿನ ಸರಕಾರಕ್ಕೆ ಹೋಲಿಸಿದರೆ ಉತ್ತಮ. ಆದರೆ ನಾವು ಹೀಗೆ ಹೋಲಿಕೆ ಮಾಡಬಾರದು.

ಪ್ರಶ್ನೆ: ಈ ಬಾರಿ ನೀವು ಮಂತ್ರಿ ಆಗ್ತೀರಿ ಎಂಬ ನಿರೀಕ್ಷೆ ಇತ್ತು. ಅದರಲ್ಲೂ ಮುಸ್ಲಿಂ ಸಮುದಾಯದ ಪರ ಧ್ವನಿ ಎತ್ತುವುದಕ್ಕೆ ಒಬ್ಬ ನಾಯಕರ ಅಗತ್ಯವಿತ್ತು...
ಇಬ್ರಾಹಿಂ: ನನಗೆ ಮಂತ್ರಿ ಆಗಬೇಕು ಅಂತಿರಲಿಲ್ಲ. ಇನ್ನು ನಾನು ಒಂದು ಸಮಾಜಕ್ಕೆ ಸೀಮಿತನಾದವನಲ್ಲ. ಸರ್ವೇ ಜನಾಃ ಸುಖಿನೋ ಭವಂತು ಅಂತ ಯೋಚಿಸುವವನು. ಆದರೆ ಸಮಾಜದಲ್ಲಿ ಅಂಗ ವೈಕಲ್ಯ, ಸಮಸ್ಯೆ ಇರುವವರ ಪರವಾಗಿ ಧ್ವನಿ ಎತ್ತಬೇಕಾದದ್ದು ನನ್ನ ಕರ್ತವ್ಯ ಎಂದು ಭಾವಿಸುವವನು ನಾನು.

ಪ್ರಶ್ನೆ: ಬಿಜೆಪಿಯಿಂದ ರಾಜ್ಯ ಸರಕಾರದ ವಿರುದ್ಧ ನಿರಂತರವಾಗಿ ಆರೋಪ ಕೇಳಿಬರುತ್ತಿದೆಯಲ್ಲಾ?
ಇಬ್ರಾಹಿಂ: ರಾಜ್ಯ ಬಿಜೆಪಿ ನಾಯಕರು ಗಿಳಿಗಳಿದ್ದ ಹಾಗೆ. ಅಮಿತ್ ಶಾ ಬಂದು ಏನು ಗಿಳಿ ಪಾಠ ಮಾಡಿ ಹೋದರು. ಅದನ್ನೇ ಮತ್ತೆ ಮತ್ತೆ ಹೇಳ್ತಿದ್ದಾರೆ. ನೀವು ದೇವಸ್ಥಾನಕ್ಕೆ ಹೋದರೆ ಯಾರು ನಮಸ್ಕಾರ ಮಾಡಿದರೂ ಶತಮಾನಂ ಭವತಿ ಅಂತಲೇ ಶುರು ಮಾಡ್ತಾರೆ. ಹಾಗಾಗಿದೆ ಇಲ್ಲಿನ ಬಿಜೆಪಿಯವರ ಸ್ಥಿತಿ
ಅದೇನು ಆರೋಪವೋ ಅದನ್ನು ಸಾಕ್ಷ್ಯ ಸಮೇತ ಮುಂದಿಡಬೇಕು ಅಲ್ಲವಾ? ತತ್ವಾಧಾರಿತ, ಮೌಲ್ಯಾಧಾರಿತ ಹಾಗೂ ವಿಷಯಾಧಾರಿತ ರಾಜಕಾರಣವ ಮಾಡುವುದನ್ನೇ ಮರೆತು ಬಿಟ್ಟಿದ್ದಾರೆ.

ಪ್ರಶ್ನೆ: ರಾಷ್ಟ್ರ ರಾಜಕಾರಣದ ಬಗ್ಗೆ ಏನಂತೀರಿ?
ಇಬ್ರಾಹಿಂ: ಮೋದಿಯವರು ಡಿಮಾನಿಟೈಸೇಷನ್ ಮಾಡಿದರು. ಅದರ ಫಲಿತಾಂಶ ಏನಾಯಿತು? ಜಿಡಿಪಿ ಕುಸಿದು ಹೋಯಿತು. ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೇನೆ ಅಂದರು. ಪ್ರತಿ ವರ್ಷ ಹತ್ತು ಲಕ್ಷ ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ.
ಅಚ್ಛೇ ದಿನ್ ಅನ್ನೋದು ಮೋದಿ ಅವರಿಗೆ ಬಂದಿದೆ. ಲಕ್ಷಾಂತರ ರುಪಾಯಿ ಸೂಟ್ ಹಾಕಿಕೊಂಡು ದೇಶ-ದೇಶ ಸುತ್ತುತ್ತಿದ್ದಾರೆ. ನಮ್ಮ ದೇಶದ ಆರ್ಥಿಕ ಸ್ಥಿತಿ ಮುಂದೇನು ಎಂದು ಯೋಚಿಸುವಂತಾಗಿದೆ. ಇವರಿಗೆ ಹಿಂದೆ ಗುರುವೂ ಇಲ್ಲ, ಮುಂದೆ ಗುರಿಯೂ ಇಲ್ಲ.
ಆದರೆ, ದೇಶದಲ್ಲಿ ಪ್ರಬಲ ವಿರೋಧ ಪಕ್ಷ ಇಲ್ಲದಂತಾಗಿದೆ. ಎಲ್ಲರೂ ದೂರದೂರವಾಗಿದ್ದಾರೆ. ಎಲ್ಲರೂ ಒಟ್ಟು ಸೇರಿ ಹೋರಾಟ ರೂಪಿಸಬೇಕಿದೆ.

ಪ್ರಶ್ನೆ: ದಕ್ಷಿಣ ಕನ್ನಡದ ಈ ಕೋಮು ಸಂಘರ್ಷಕ್ಕೆ ಏನು ಕಾರಣ ಅಂತೀರಿ?
ಇಬ್ರಾಹಿಂ: ಅತಿ ವಿನಯಂ ಧೂರ್ತ ಲಕ್ಷಣಂ ಅಂತಾರೆ. ದಕ್ಷಿಣ ಕನ್ನಡದ ಜನ ಅತಿ ಬುದ್ಧಿವಂತರು. ಅವರ ಬುದ್ಧಿವಂತಿಕೆಯನ್ನು ಸರಿಯಾದ ವಿಚಾರಕ್ಕೆ ಬಳಸಬೇಕು. ಇಡೀ ದೇಶಕ್ಕೆ ಬ್ಯಾಂಕ್ ಗಳನ್ನು ಕೊಟ್ಟ ಜಿಲ್ಲೆ ಅದು. ಅಲ್ಲಿನ ಎಲ್ಲ ಜನರೂ ಒಟ್ಟಾಗಿ ಇಡೀ ದೇಶಕ್ಕೆ ಕೋಮು ಸೌಹಾರ್ದತೆಯ ಸಂದೇಶ ನೀಡಬೇಕು.

ಪ್ರಶ್ನೆ: ಹತ್ತನೇ ಕ್ಲಾಸ್ ಓದಿರುವ ಇಬ್ರಾಹಿಂ ವಚನ, ರಾಮಾಯಣ, ಮಹಾಭಾರತ ಇವೆಲ್ಲ ಯಾವಾಗ ತಿಳಿದುಕೊಂಡರು?
ಇಬ್ರಾಹಿಂ: ಹೌದು, ನಾನು ಓದಿರೋದು ಹತ್ತನೇ ಕ್ಲಾಸು. ಅಂತರಾತ್ಮ ಶುದ್ಧವಾಗಿರಬೇಕು. ಎನಗಿಂತ ಕಿರಿಯರಿಗಿಲ್ಲ ಎಂಬುದು ಗೊತ್ತಿರಬೇಕು. ಆ ನಂತರ ನನಗೇನೂ ಗೊತ್ತಿಲ್ಲ, ತಿಳಿದುಕೊಳ್ಳಬೇಕು ಎಂಬ ಹಂಬಲ ಇರಬೇಕು. ಇನ್ನು ಸಜ್ಜನರ ಸಹವಾಸ ದೋಷದಿಂದ ಅದು ಸಾಧ್ಯವಾಯಿತು.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications