ಯತ್ನಾಳ್ ಬಿಜೆಪಿ ಸೇರ್ಪಡೆಗೆ ಬಿಎಸ್‌ವೈ ಪಟ್ಟು, ಜೋಶಿ-ಶೆಟ್ಟರ್ ಅಡ್ಡಗಾಲು

Written By: Basavaraj
Subscribe to Oneindia Kannada

ವಿಜಯಪುರ, ಜುಲೈ 11: ಈಗಾಗಲೇ ಎರಡು ಬಾರಿ ಬಿಜೆಪಿ ತೊರೆದಿರುವ ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಕೇಂದ್ರದ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತೆ ಪಕ್ಷ ಸೇರಲು ಮುಂದಾಗಿದ್ದಾರೆ.

ಆದರೆ, ಪಕ್ಷಕ್ಕೆ ಸೇರಿಸಿಕೊಳ್ಳಲು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಿದ್ದವಾಗಿದ್ದರೂ,ವಿಜಯಪುರ ಜಿಲ್ಲಾ ಘಟಕ, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹಾಗೂ ಸಂಸದ ಪ್ರಹ್ಲಾದ್ ಜೋಶಿ ಅಡ್ಡಗಾಲಾಗಿದ್ದಾರೆ.

ಈ ಹಿಂದೆ ಯತ್ನಾಳ್ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆದು, ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಿಷತ್‌ಗೆ ಆಯ್ಕೆಯಾಗಿದ್ದಾರೆ.

ಶೆಟ್ಟರ್, ಜೋಶಿ ವಿರೋಧ
ಒಂದು ಕಾಲದಲ್ಲಿ ಅನಂತಕುಮಾರ್, ಜಗದೀಶ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಶಿ ಅವರ ಪಾಳೆಯದಲ್ಲಿದ್ದ ಬಸವರಾಜ ಪಾಟೀಲ್ ಯತ್ನಾಳ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ತಪ್ಪುತಿದ್ದಂತೆ ಅಂದಿನ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಪ್ರಹ್ಲಾದ್ ಜೋಶಿ ವಿರುದ್ಧ ಗುಡುಗಿದ್ದರು.

MLC Basavaraj Patil Yatnal ready to join BJP, but Shettar and Joshi opposes the joining

ಅಲ್ಲದೆ ಪಕ್ಷ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಅತಿ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದರು. ಇದರಿಂದ ಬೇಸರಗೊಂಡಿರುವ ಜೋಶಿ ಮತ್ತು ಶೆಟ್ಟರ್ ಅವರು ಯತ್ನಾಳ ಬಿಜೆಪಿ ಸೇರ್ಪಡೆಗೆ ಸಮ್ಮತಿ ಸೂಚಿಸುತ್ತಿಲ್ಲ ಎನ್ನಲಾಗಿದೆ.

ಜಿಲ್ಲಾ ಘಟಕದ ವಿರೋಧ
ಯತ್ನಾಳರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಸೇರಿದಂತೆ ವಿಜಯಪುರ ಬಿಜೆಪಿ ಜಿಲ್ಲಾ ಘಟಕದಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಪ್ರಮುಖ ಕಾರಣರಾಗಿದ್ದಲ್ಲದೆ, ಪಕ್ಷದಲ್ಲಿದ್ದುಕೊಂಡೆ ಮುಖಂಡರ ವಿರುದ್ಧ ಹೇಳಿಕೆಗಳನ್ನು ನೀಡಿ ಮುಜುಗುರಕ್ಕೀಡು ಮಾಡಿದ್ದಾರೆ. ಅಂಥವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡಾ ಎಂಬುದು ಜಿಲ್ಲಾ ಘಟಕದ ಪ್ರಮುಖರ ವಾದವಾಗಿದೆ.

ಬಿಎಸ್‌ವೈ ಸಿದ್ಧತೆ
ಈ ಮಧ್ಯೆ ಯತ್ನಾಳ ಅವರು ಸೇರ್ಪಡೆಯಾದರೆ ಪಕ್ಷಕ್ಕೆ ಇನ್ನಷ್ಟು ಬಲ ಬರಲಿದೆ ಎಂದು ಮುಖ್ಯಮಂತ್ರಿ ಕನಸು ಕಾಣುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಂದುಕೊಂಡಿದ್ದಾರೆ. ಹಾಗಾಗಿ ಹಿರಿಯ ನಾಯಕರ ವಿರೋಧ ಅವರನ್ನೀಗ ಇಕ್ಕಟ್ಟಿಗೆ ಸಿಲುಕಿಸಿದೆ. ರಾಜ್ಯ ಉಸ್ತುವಾರಿ ಪಿ.ಮುರುಳೀಧರ ರಾವ್ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರೊಂದಿಗೆ ಚರ್ಚಿಸಿರುವ ಬಿಎಸ್‌ವೈ ಚುನಾವಣೆಯ ಹೊಸ್ತಿಲಲ್ಲಿ ಯತ್ನಾಳ್ ಅವರಿಗೆ ರತ್ನಗಂಬಳಿ ಹಾಸಲು ಸಿದ್ಧತೆ ನಡೆಸಿದ್ದಾರೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಬಹಿರಂಗವಾಗಿ ಟೀಕಿಸಿ ಪಕ್ಷದಿಂದ ಹೊರ ನಡೆದಿದ್ದ ಯತ್ನಾಳ್ ಜೆಡಿಎಸ್ ಸೇರಿದ್ದರು. ನಂತರ ಯಡಿಯೂರಪ್ಪ ಬಿಜೆಪಿ ಬಿಡುತ್ತಿದ್ದಂತೆ ಪುನಃ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former union minister Basavaraj Patil Yatnal ready to join BJP. Even BJP state president BS Yeddyurappa is ready to welcome him. But, former CM and opposition leader in assembly Jagadish Shettar and MP Pralhad Joshi are opposing the decision.
Please Wait while comments are loading...