ಜೆಡಿಎಸ್ ನಿಂದ ಮೈನಾರಿಟಿ ಕೋಟಾದಲ್ಲಿ ಫಾರೂಕ್ ಗೆ ಮಂತ್ರಿ ಸ್ಥಾನ
ಬೆಂಗಳೂರು, ಅ.4: ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಖ್ ಅವರಿಗೆ ಜೆಡಿಎಸ್ ಪಾಲಿಗೆ ಉಳಿದಿರುವ ಏಕೈಕ ಸಚಿವ ಸ್ಥಾನ ದೊರಕುವುದು ಬಹುತೇಕ ಖಚಿತವಾಗಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ರಾಜಿನಾಮೆಯಿಂದ ತೆರವಾದ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಶೀಘ್ರ ಉಪ ಚುನಾವಣೆ ನಡೆಯಲಿದೆ. ಈ ಕ್ಷೇತ್ರದಲ್ಲಿನ ಮುಸ್ಲಿಂ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಹಾಗೂ ಜೆಡಿಎಸ್ ನಿಂದ ಯಾರಿಗೂ ಸಚಿವ ಸ್ಥಾನ ನೀಡಿಲ್ಲ ಎಂಬ ಕೊರತೆ ನೀಗಿಸಲು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಈ ತೀರ್ಮಾನಕ್ಕೆ ಬಂದಿದ್ದಾರೆ.
ಜೆಡಿಎಸ್ ಪಾಲಿಗೆ ಬಂದಿದ್ದ 11ರಲ್ಲಿ ಈ ಉಳಿದಿರುವುದು ಒಂದೇ ಸ್ಥಾನ, ವಿಧಾನಪರಿಷತ್ ಸದಸ್ಯ ಬಿಎಂ ಫಾರೂಕ್ ಸಚಿವರಾಗುವುದು ಬಹುತೇಕ ಖಚಿತವಾಗಿದೆ.ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಸೇರಿ 27ರಲ್ಲಿ 9 ಮಂದಿಯ ಒಕ್ಕಲಿಗರು, ತಲಾ 4 ಲಿಂಗಾಯತ ಹಾಗೂ ದಲಿತ, ತಲಾ ಇಬ್ಬರು ಕುರುಬ ಹಾಗೂ ಮುಸ್ಲಿಂ, ತಲಾ ಒಬ್ಬರು ಬ್ರಾಹ್ಮಣ, ರೆಡ್ಡಿ, ಬಿಲ್ಲವ, ಕ್ರೈಸ್ತ, ಉಪ್ಪಾರ ಹಾಗೂ ನಾಯಕ ಸಮಾಜದ ಸಚಿವರಿದ್ದಾರೆ.

ಈ ಪೈಕಿ ಜೆಡಿಎಸ್ ಏಳು ಮಂದಿ ಒಕ್ಕಲಿಗರು, ಇಬ್ಬರು ಲಿಂಗಾಯರು ಹಾಗೂ ಒಬ್ಬರು ಕುರುಬ ಸಮಾಜಕ್ಕೆ ಸೇರಿದರು, ಮುಸ್ಲಿಂ ಸಮುದಾಯದವರು ಇಲ್ಲ ಹಾಗಾಗಿ ಫಾರೂಕ್ ಅವರನ್ನು ಸಚಿವರನ್ನಾಗಿ ಮಾಡುವುದು ಖಚಿತ ಎಂದು ಜೆಡಿಎಸ್ ಉನ್ನತ ಮೂಲಗಳು ತಿಳಿಸಿವೆ.
ಹಾಗೆಂದು ಜೆಡಿಎಸ್ ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೇನೂ ಕಡಿಮೆ ಇಲ್ಲ, ಈಚೆಗೆ ವಿಧಾನಸಭೆಯಿಂದ ವಿಧಾನಪರಿಷತ್ ಗೆ ಒಂದು ಸ್ಥಾನ ಭರ್ತಿ ಮಾಡುವ ವೇಳೆ ಉಂಟಾಗಿರುವ ಅಸಮಾಧಾನ ಒಂದೆಡೆಯಾದರೆ, ಆಪರೇಷನ್ ಕಮಲ ಪರಿಣಾಮ ಕೆಲವರು ಪಕ್ಷ ತ್ಯಜಿಲಸು ಮುಂದಾಗಿರುವುದು ಗುಟ್ಟಾಗಿ ಉಳಿದಿಲ್ಲ.
ಚಿಂತಾಮಣಿ ಶಾಸಕ, ಡೆಪ್ಯೂಟಿ ಸ್ಪೀಕರ್ ಜೆ.ಕೆ. ಕೃಷ್ಣಾರೆಡ್ಡಿ, ಶಿರಾದ ಸತ್ಯನಾರಾಯಣ, ನಾಗಮಂಗಲದ ಸುರೇಶ್ ಗೌಡ, ಕೆಆರ್ ಪೇಟೆ ನಾರಾಯಣಗೌಡ ಕೂಡ ಪ್ರಮುಖ ಆಕಾಂಕ್ಷಿಗಳಾಗಿದ್ದರು.
ಈಗಾಗಲೇ 10 ಸಚಿವರ ಪೈಕಿ ಇಬ್ಬರು ಲಿಂಗಾಯತರಿಗೆ ಅವಕಾಶ ಕೊಟ್ಟಿರುವುದರಿಂದ ಮತ್ತೊಬ್ಬರಿಗೆ ಕೊಡುವುದು ಕಷ್ಟಕರ, ಈ ಹಿನ್ನೆಲೆಯಲ್ಲಿ ಹೊರಟ್ಟಿ ಅವರನ್ನೇ ಪೂರ್ಣಾವಧಿ ಸಭಾಪತಿಯನ್ನಾಗಿ ಮಾಡಲು ಸಿದ್ಧತೆ ನಡೆದಿದೆ. ದೇವೇಗೌಡರ ಜತೆ ಹೊರಟ್ಟಿ ನೇರ ಸಂಪರ್ಕದಲ್ಲಿದ್ದರೂ ಇತ್ತಚಿನ ದಿನಗಳಲ್ಲಿ ಯಾವುದೇ ವಿಚಾರ ವಿನಿಮಯ ನಡೆಸಿಲ್ಲ ಎಂದು ತಿಳಿದುಬಂದಿದೆ.











Click it and Unblock the Notifications