8000 ಕೋಟಿ: MLCಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಸೆಪ್ಟೆಂಬರ್ 09: ಇಂದು ಆಡಳಿತ ಪಕ್ಷದ ವಿಧಾನಪರಿಷತ್ತಿನ ಸದಸ್ಯರೊಂದಿಗೆ ಸಭೆ ನಡೆಸಲಾಗಿದೆ. .ಈ ಹಿಂದೆ ಜಿಲ್ಲಾ ಶಾಸಕರೊಂದಿಗೆ ಸಭೆ ನಡೆಸಿದಂತೆ, ನಾಳೆ ಬೆಂಗಳೂರು ನಗರದ ಶಾಸಕರೊಂದಿಗೆ ಸಭೆ ನಡೆಸಲಾಗುವುದು. ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಆಯವ್ಯಯದಲ್ಲಿ 8000 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಶಾಸಕರಿಗೆ ನೀಡಿದಂತೆ ಎಂಎಲ್ ಸಿ ಗಳಿಗೂ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಬೇಡಿಕೆ ಸಲ್ಲಿಸಿದ್ದು, ಮೀಸಲಿರಿಸಿರುವ 8000 ಕೋಟಿ ರೂ.ಗಳಲ್ಲಿ ಎಂಎಲ್ ಸಿ ಗಳಿಗೂ ಅನುದಾನ ನೀಡಲು ಪರಿಶೀಲಿಸುವುದಾಗಿ ಆಶ್ವಾಸನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮದ್ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ, 21 ಜನರನ್ನು ಈಗಾಗಲೇ ಬಂಧಿಸಿದ್ದು, ಯಾವುದೇ ಜಾತಿ ಧರ್ಮಗಳನ್ನು ಸರ್ಕಾರ ಪರಿಗಣಿಸದೇ, ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮದ್ದೂರು ಗಲಭೆ ಗೆ ಸಂಬಂಧಪಟ್ಟಂತೆ ಬಿಜೆಪಿಯವರು ಮದ್ದೂರಿಗೆ ಪಾದಯಾತ್ರೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಮಾಜದಲ್ಲಿ ಶಾಂತಿ ಕದಡುವುದೇ ಬಿಜೆಪಿಯ ಉದ್ದೆಶವಾಗಿದೆ. ಮೈಸೂರಿನಲ್ಲಿ ಚಾಮುಂಡಿ ಬೆಟ್ ಚಲೋ ಎಂಬ ಕಾರ್ಯಕ್ರಮ ಮಾಡಿದರು. ಆರ್ ಎಸ್ ಎಸ್ ಸಂಘಟನೆಯವರು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರದವರು ಇದರಲ್ಲಿ ಪಾಲ್ಗೊಂಡು, ಶಾಂತಿ ಕದಡುವ ಕೆಲಸವನ್ನು ಮಾಡುತ್ತಾರೆಂಬ ಕಾರಣಕ್ಕೆ ಪೊಲೀಸರು ಚಾಮುಂಡಿ ಬೆಟ್ಟ ಚಲೋ ಗೆ ಅನುಮತಿ ನೀಡಲಿಲ್ಲ. ಮದ್ದೂರಿನಲ್ಲಿ ಬಂದ್ ಮಾಡಲು ಕರೆ ನೀಡಿದ್ದರು. ಗಲಭೆಯಲ್ಲಿ ನಿರತರಾಗಿದ್ದ ಯಾವುದೇ ಪಕ್ಷ, ಸಮುದಾಯವರೇ ಆಗಿದ್ದರೂ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿಯವರು ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದಾಗಿ ಕೇಂದ್ರ ಗೃಹ ಸಚಿವರಿಗೆ ದೂರು ನೀಡಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿರುತ್ತದೆ. ಕೇಂದ್ರದಲ್ಲಿ ರೈತ ಚಳವಳಿಯಲ್ಲಿ ಅನೇಕ ರೈತರು ಪ್ರಾಣ ಕಳೆದುಕೊಂಡ ಸಂದರ್ಭದಲ್ಲಿ ಬಿಜೆಪಿಯವರು ಎಲ್ಲಿದ್ದರು.? ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಯಾವುದೇ ಬಿಜೆಪಿಯವರು ಧ್ವನಿ ಎತ್ತಲಿಲ್ಲವೇಕೆ ಎಂದು ಮರುಪ್ರಶ್ನಿಸಿದರು. ಮಣಿಪುರದಲ್ಲಿ ಹಿಂಸಾಚಾರ ನಡೆದರೂ, ಪ್ರಧಾನಿಯವರು ಮಣಿಪುರಕ್ಕೆ ಭೇಟಿ ನೀಡಲೇ ಇಲ್ಲ ಎಂದರು.












Click it and Unblock the Notifications