ಸಿಎಂ ಬದಲಾವಣೆ ಚರ್ಚೆ: ಮಲ್ಲಿಕಾರ್ಜುನ್ ಖರ್ಗೆಗೆ ಪತ್ರ ಬರೆದ ಶಾಸಕರು
ಬೆಂಗಳೂರು, ಸೆಪ್ಟೆಂಬರ್ 09: ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮ ಹಗರಣ ಇಡೀ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ವಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆಗೆ ಒತ್ತಾಯಿಸಿದ್ರೆ, ಇತ್ತ ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ.
ಪಕ್ಷದ ನಿಯಮ ಉಲ್ಲಂಘಿಸಿ ಸಚಿವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿತನದ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದು, ಇಂಥ ಚರ್ಚೆಗೆ ತಡೆ ಹಾಕಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಶಾಸಕರಾದ ದಿನೇಶ್ ಗೂಳಿಗೌಡ ಹಾಗು ಮಂಜುನಾಥ್ ಭಂಡಾರಿ ಅವರು ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಪಕ್ಷವು ರಾಜ್ಯದ ಕಳೆದ 34 ವರ್ಷಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಮತಗಳನ್ನು ಗಳಿಸಿ, 2023 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಬರೆದಿತ್ತು. ಶೇ. 42.88 ರಷ್ಟು ಮತ ಗಳಿಸಿ, 135 ಸ್ಥಾನಗಳನ್ನು ಗಳಿಸಿ, ಸರ್ಕಾರ ರಚಿಸಿದೆ. 1989 ರ ನಂತರ ಕರ್ನಾಟಕದಲ್ಲಿ ಯಾವುದೇ ಪಕ್ಷಕ್ಕೆ ಲಭಿಸದ ಅತಿ ದೊಡ್ಡ ಗೆಲುವು ಕಾಂಗ್ರೆಸ್‌ಗೆ ಲಭಿಸಿತ್ತು. ಮಾತ್ರವಲ್ಲ, ಸರ್ಕಾರ ಚುಕ್ಕಾಣಿ ಹಿಡಿದ ಆರೇ ತಿಂಗಳಲ್ಲಿ5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡುವ ಮೂಲಕ ದೇಶದಲ್ಲೇ ವಿಶಿಷ್ಟ ಹಾಗೂ ಗಮನ ಸೆಳೆಯುವ ಸಾಧನೆ ಮಾಡಿದೆ.
ಪಕ್ಷದ ವರಿಷ್ಠ ಮಂಡಳಿಯ ಅನುಮೋದನೆಯಿಂದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತಹ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಮುಂತಾದ ಗ್ಯಾರಂಟಿ ಯೋಜನೆಗಳು ಬಡ ಜನರಿಗೆ ಆಶ್ರಯವಾಗಿವೆ. ಮಹಿಳಾ ಸಬಲೀಕರಣಕ್ಕೆ ವಿಶಿಷ್ಟ ಅರ್ಥ ನೀಡಿವೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಗ್ಯಾರಂಟಿ ಯೋಜನೆಗಳು ಜನಜನಿತವಾಗಿವೆ. ಇವಕ್ಕೆಲ್ಲ ಕಾರಣ ಕಾಂಗ್ರೆಸ್ ಪಕ್ಷದ ನೇತೃತ್ವದ ಸರಕಾರ ಹಾಗೂ ಜನಪರ ಕಾಳಜಿ ಎಂಬುದರಲ್ಲಿ ಎರಡು ಮಾತಿಲ್ಲ.
ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂತ ಆತಂಕಿತವಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಮುಡಾ ಹಗರಣ ಎಂಬ ಹುರುಳಿಲ್ಲದ ಸುಳ್ಳು ಆರೋಪ ಮಾಡಿ, ಸರ್ಕಾರವನ್ನು ಅಭದ್ರ ಮಾಡಲು ಹೊರಟಿವೆ. ಆದರೆ, ಕಾಂಗ್ರೆಸ್ ಸರ್ಕಾರದ ಭಾಗವಾಗಿರುವ ಸಚಿವರು ತಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಮೂಲಕ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ.
ಕಾಂಗ್ರೆಸ್ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಶಿಸ್ತಿನ ಪಕ್ಷ. ಮುಖ್ಯಮಂತ್ರಿ ಮುಂತಾದ ಮಹತ್ವದ ಸ್ಥಾನಗಳು ಹೈಕಮಾಂಡ್ ಹಂತದಲ್ಲಿ ನಿರ್ಧಾರವಾಗುತ್ತವೆ, ಆಗಬೇಕು ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಹಾಗಿರುವಾಗ ಸಚಿವರ ಹಾಗೂ ಪಕ್ಷದ ಕೆಲ ಹಿರಿಯರ ಹೇಳಿಕೆಗಳಿಂದ ಮಾಧ್ಯಮಗಳಲ್ಲಿ ಈಗ ಮುಖ್ಯಮಂತ್ರಿ ಬದಲಾವಣೆಯ ವಿಷಯ ಚರ್ಚೆಯಾಗುತ್ತಿದೆ. ಸರ್ಕಾರದ ಭಾಗವಾಗಿರುವ ಸಚಿವರ ಲಗಾಮಿಲ್ಲದ ಹೇಳಿಕೆಗಳಿಂದ ಮುಂದೆ ಪಕ್ಷದ ವರ್ಚಸಿಗೆ ದಕ್ಕೆ ತರುವ ಹಾಗೂ ಸರ್ಕಾರದ ಅಭದ್ರತೆಯ ಬಗ್ಗೆ ಚರ್ಚೆಗಳಿಗೆ ಎಡೆಮಾಡಿ ಕೊಟ್ಟಂತಾಗುತ್ತದೆ.. ಹಾಗಾಗಿ ಇಂಥ ಚರ್ಚೆಗಳಿಗೆ ತಕ್ಷಣ ತಡೆ ಹಾಕುವ ಅವಶ್ಯಕತೆ ಇದೆ.
ಸಚಿವರಾಗಿ ಅಧಿಕಾರ ವಹಿಸಿಕೊಂಡವರು ತಮ್ಮ ಇಲಾಖೆಗೆ ಕಳೆದ ಆಯವ್ಯಯದಲ್ಲಿ ನೀಡಿದ ಕೊಡುಗೆಗಳ ಜಾರಿಗೆ ಕ್ರಮ ವಹಿಸಲಿ. ಸಾರ್ವಜನಿಕರಿಗೆ, ರಾಜ್ಯದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಜನರ ಸಮಸ್ಯೆಗಳನ್ನು ಆಲಿಸಬೇಕು. ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು. ಅದನ್ನು ಬಿಟ್ಟು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೊಂಡು ಹೋಗುವುದು ತಪ್ಪು. ಅಂಥವರ ಮೇಲೆ ಶಿಸ್ತುಕ್ರಮದ ಎಚ್ಚರಿಕೆ ನೀಡಬೇಕು ಎಂದು ಈ ಮೂಲಕ ವಿನಂತಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.












Click it and Unblock the Notifications