ಶಾಸಕರ ವಿದೇಶ ಪ್ರವಾಸಕ್ಕೆ ಸರ್ಕಾರದ ಬ್ರೇಕ್
ಬೆಂಗಳೂರು, ಮೇ 4 : ಬರ ಪರಿಸ್ಥಿತಿ ನಡುವೆಯೇ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಹೊರಟಿದ್ದ ಶಾಸಕರಿಗೆ ನಿರಾಸೆಯಾಗಿದೆ. ರಾಜ್ಯ ವಿಧಾನಮಂಡಲದ ಯಾವ ಸಮಿತಿಯೂ ಸದ್ಯಕ್ಕೆ ವಿದೇಶ ಪ್ರವಾಸ ಕೈಗೊಳ್ಳಬಾರದು ಎಂದು ಸುತ್ತೋಲೆ ಹೊರಡಿಸಲಾಗಿದೆ.
ವಿಧಾನಸಭೆಯ ಭವರಸೆಗಳ ಸಮಿತಿ ಅಧ್ಯಕ್ಷ ತನ್ವೀರ್ ಸೇಠ್ ಅವರ ಅಧ್ಯಕ್ಷತೆಯಲ್ಲಿ ಸುಮಾರು 15 ಶಾಸಕರು ಪ್ರವಾಸ ಕೈಗೊಳ್ಳಲು ಸಿದ್ಧರಾಗಿದ್ದರು. ಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಮುಂತಾದ ಶಾಸಕರು ವಿದೇಶ ಪ್ರವಾಸ ಕೈಗೊಳ್ಳುವ ಸಿದ್ಧತೆಯಲ್ಲಿದ್ದರು.

ಆದರೆ, ಕಳೆದ ಕೆಲವು ತಿಂಗಳ ಹಿಂದೆ ಶಾಸಕರು ವಿದೇಶ ಪ್ರವಾಸಕ್ಕೆ ಹೊರಡಲು ಸಜ್ಜಾದಾಗ ಭಾರೀ ವಿರೋಧ ಉಂಟಾಗಿತ್ತು. ಆದ್ದರಿಂದ ಈ ಅಧ್ಯಯನ ಪ್ರವಾಸದ ಸಾಧಕ, ಬಾಧಕದ ಕುರಿತು ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿತ್ತು. [ಮತ್ತೆ ವಿದೇಶಕ್ಕೆ ಹೊರಟ ಶಾಸಕರು]
ಶಾಸಕರ ವಿದೇಶ ಪ್ರವಾಸದ ಮಾನದಂಡ ಪರಿಷ್ಕರಿಸುವ ಹೊಣೆಯನ್ನು ಈ ಸಮಿತಿಗೆ ನೀಡಲಾಗಿತ್ತು. ಅಂದಿನಿಂದ ಸಮಿತಿ ತನ್ನ ವರದಿ ತಯಾರಿಕೆಯಲ್ಲಿ ತೊಡಗಿದೆ. ಈ ಸಮಿತಿ ಸರ್ಕಾರಕ್ಕೆ ವರದಿ ನೀಡಿ, ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳುವ ತನಕ ಯಾವುದೇ ಸಮಿತಿ ವಿದೇಶ ಪ್ರವಾಸ ಕೈಗೊಳ್ಳಬಾರದು ಎಂದು ಸುತ್ತೋಲೆ ಹೊರಡಿಸಲಾಗಿದೆ.
ಸಮಿತಿಯಲ್ಲಿ ಯಾರಿದ್ದಾರೆ ? : ಶಾಸಕರ ವಿದೇಶ ಪ್ರವಾಸದ ಕುರಿತು ವರದಿ ತಯಾರಿಸುತ್ತಿರುವ ಸಮಿತಿಯ ನೇತೃತ್ವವನ್ನು ವಿಧಾನಸಭೆ ಕಾರ್ಯದರ್ಶಿ ಪಿ. ಓಂಪ್ರಕಾಶ್, ವಿಧಾನ ಪರಿಷತ್ ಕಾರ್ಯದರ್ಶಿ ಶ್ರೀಶ್ ವಹಿಸಿಕೊಂಡಿದ್ದಾರೆ. ಕೆಲವು ದಿನಗಳಲ್ಲೇ ಸಮತಿ ತನ್ನ ವರದಿಯನ್ನು ಸಲ್ಲಿಸುವ ಸಾಧ್ಯತೆ ಇದೆ.












Click it and Unblock the Notifications