ಗಂಗೂಬಾಯಿ ಹಾನಗಲ್ ನಿವಾಸ ಹಾಳು ಕೊಂಪೆ ಮಾಡಿ ಅವಮಾನ: ಶಾಸಕ ಯತ್ನಾಳ್ ಗರಂ
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೇರು ಕಲಾವಿದೆ ಗಂಗೂಬಾಯಿ ಹಾನಗಲ್ ಅವರು ನಾಡಿನ ಹೆಮ್ಮೆ. ಆದರೆ ಅವರ ನಿವಾಸ ಪಾಳು ಬಿದ್ದ ಸ್ಥಿತಿಯಲ್ಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಳವಳ ವ್ಯಕ್ತಪಡಿಸಿದ್ದಾರೆ. ಧಾರವಾಡದ, ಹೊಸ ಯಲ್ಲಾಪುರ ರಸ್ತೆಯಲ್ಲಿರುವ ಹಿಂದೂಸ್ಥಾನಿ ಸಂಗೀತದ ಗಾನಸಾಮ್ರಾಜ್ಞಿ, ಸಂಗೀತ ಶಿರೋಮಣಿ, ಸಂಗೀತ ಕಲಾರತ್ನ, ಪದ್ಮವಿಭೂಷಣ ಪುರಸ್ಕೃತ ಡಾ.ಗಂಗೂಬಾಯಿ ಹಾನಗಲ್ ಅವರ ಶಿಥಿಲಗೊಂಡಿರುವ ನಿವಾಸವಿದು ಎಂದು ಯತ್ನಾಳ್ ವಿಡಿಯೋ ಹಂಚಿಕೊಂಡಿದ್ದಾರೆ.
ಎಕ್ಸ್‌ನಲ್ಲಿ ಈ ವಿಚಾರದ ಬಗ್ಗೆ ಬರೆದುಕೊಂಡಿರುವ ಯತ್ನಾಳ್, ಈ ಹಿಂದೆ ಸರ್ಕಾರ ಅವರ ನಿವಾಸವನ್ನು ಸ್ಮಾರಕವನ್ನಾಗಿ ಮಾಡಲು ಹಣ ಬಿಡುಗಡೆ ಮಾಡಿದರೂ ಸಹ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ, ಸರ್ಕಾರಗಳ ನಿರ್ಲಕ್ಷ್ಯದಿಂದ ಈ ಮಟ್ಟಕ್ಕೆ ತಲುಪಿರುವುದು ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾಡಿನ ಕಲೆ, ಪರಂಪರೆ, ಸಂಗೀತ, ಸಾಹಿತ್ಯಕ್ಕೆ ಕೊಡುಗೆ ನೀಡಿದ ಮಹಾನ್ ಕಲಾವಿದೆ, ಸ್ವರ ಸಾಮ್ರಾಜ್ಞಿ, ಗಾನ ಸರಸ್ವತಿ, ತಮ್ಮ ಕಂಚಿನ ಸಿರಿಕಂಠದಿಂದ ದೇಶ-ವಿದೇಶಗಳಲ್ಲಿ ಪ್ರಖ್ಯಾತವಾಗಿದ್ದ ಗಂಗವ್ವ (ಗಂಗೂಬಾಯಿ) ಅವರ ನಿವಾಸವನ್ನು ಹಾಳು ಕೊಂಪೆ ಮಾಡಿರುವುದು ನಾಡಿನ ಹಿರಿಯ ಕಲಾವಿದರಿಗೆ ಮಾಡಿರುವ ಅವಮಾನವೇ ಸರಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹತ್ತೇ ವರ್ಷದಲ್ಲಿ ಪಾಳು ಬಿದ್ದಿದೆ
ಸ್ಮಾರಕದ ಕಟ್ಟಡವು ಹತ್ತೇ ವರ್ಷದಲ್ಲಿ ಪಾಳು ಬಿದ್ದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಸಡ್ಡೆಗೆ ಹಿಡಿದ ಕೈಗನ್ನಡಿ. ಸಂಗೀತ ಕ್ಷೇತ್ರದ ಬೆಳವಣಿಗೆಗೆ ಇಡೀ ತಮ್ಮ ಜೀವನದುದ್ದಕ್ಕೂ ಸೇವೆಯನ್ನು ಸಲ್ಲಿಸಿ, ನಮ್ಮ ನಾಡು ಹಾಗೂ ದೇಶದ ಕೀರ್ತಿಯನ್ನು ವಿಶ್ವವ್ಯಾಪಿ ಪಸರಿಸುವಂತೆ ಮಾಡಿದ ಸಂಗೀತ ದಿಗ್ಗಜೆ ಗಂಗವ್ವರವರ ನಿವಾಸವನ್ನು ಸಂಪೂರ್ಣವಾಗಿ ನವೀಕರಿಸಿ ಅವರಿಗೆ ಗೌರವ ಸಲ್ಲಿಸಬೇಕಾದದ್ದು ಸರ್ಕಾರದ ಕರ್ತವ್ಯ ಎಂದಿದ್ದಾರೆ.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಸಂಸ್ಕೃತಿ ಸಚಿವರಿಗೆ ಸಮಸ್ತ ಕಲಾಭಿಮಾನಿಗಳ ಪರವಾಗಿ, ಗಂಗವ್ವರವರ ಅಭಿಮಾನಿಗಳ ಪರವಾಗಿ ನಿರ್ಧಿಷ್ಟ ಕಾಲಮಿತಿಯಲ್ಲಿ ಸ್ಮಾರಕವನ್ನು ಪೂರ್ಣಗೊಳ್ಳಿಸಬೇಕೆಂದು ಪತ್ರ ಬರೆಯುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಹಿಂದೂಸ್ತಾನಿ ಸಂಗೀತದ ಮೇರುಗಾಯಕರು, ಗಾಯನ ಗಂಗೆ, ಪದ್ಮಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರ ಅವರ ಪುಣ್ಯ ಸ್ಮರಣೆಯ ಜುಲೈ ತಿಂಗಳಲ್ಲಿ ನಡೆದಿತ್ತು. ರಾಜ್ಯದ ಸರ್ಕಾರದ ಸಚಿವರು ಪುಣ್ಯಸ್ಮರಣೆ ಪೋಸ್ಟ್ ಹಾಕಿ ನೆನೆದಿದ್ದರು. ತಮ್ಮ ಅಪ್ರತಿಮ ಗಾನಸುಧೆಯಿಂದ ಅವರು ಕರ್ನಾಟಕದ ಕೀರ್ತಿಯನ್ನು ಜಗದಗಲ ಬೆಳಗಿದರು ಎಂದಿದ್ದರು. ಆದರೆ ಅವರ ಸ್ಮಾರಕವು ನೋಡಲಾರದ ಸ್ಥಿತಿಯಲ್ಲಿದೆ.












Click it and Unblock the Notifications