ಸೋಲಿನ ಹತಾಶೆ; ಎಂಟಿಬಿ ನಾಗರಾಜ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವೆ: ಶರತ್ ಬಚ್ಚೇಗೌಡ
ಬೆಂಗಳೂರು, ಮೇ 18: ಡಿ.ಶೆಟ್ಟಿಹಳ್ಳಿ ಗಲಾಟೆಗೂ ನನಗೂ ಯಾವುದೇ ಸಂಬಂಧವಿಲ್ಲದಿದ್ದರು ನನ್ನ ಹೆಸರು ಬಳಿಸಿಕೊಂಡು ನನ್ನ ತೇಜೋವಧೆ ಮಾಡಲು ಹೊರಟಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್ ವಿರುದ್ದ ಮಾನನಷ್ಟಮೊಕದ್ದಮೆ ದಾಖಲಿಸುತ್ತೇನೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.
ಈ ಕುರಿತು ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಾಮಾಜಿಕ ಕಾಳಜಿ ಹಾಗೂ ಅಭಿವೃದ್ಧಿ ಜೊತೆಯಲ್ಲಿ ಮಾಡಬೇಕಾದ ರಾಜಕಾರಣ, ಆದರೆ ಸಾವಿನ ಮನೆಯಲ್ಲಿ ಮಾಡುವ ಸ್ಥಿತಿ ತಲುಪಿರುವುದು ವಿಷಾದನೀಯ ಸಂಗತಿ ಎಂದು ಎಂಟಿಬಿ ನಾಗರಾಜ್ ವಿರುದ್ದ ವಾಗ್ದಾಳಿ ನಡೆಸಿದರು. ಗಲಾಟೆಗೂ ನನಗೂ ಸಂಬಂಧವಿಲ್ಲದಿದ್ದರೂ ನನ್ನ ಹೆಸರನ್ನ ಬಳಿಸಿಕೊಂಡರೇ ಇದಕ್ಕೆ ಕಾನೂನು ಹೋರಾಟದ ಮೂಲಕ ಉತ್ತರ ನೀಡುತ್ತೇನೆ ಎಂದು ಗುಡುಗಿದರು.

ವಿಧಾನಸಭಾ ಚುನಾವಣಾ ಮತದಾನ ಮತ್ತು ಮತ ಎಣಿಕೆ ಎರಡು ಶಾಂತಿಯುತವಾಗಿ ನಡೆದಿದ್ದು, ಸೋಲಿನಿಂದ ಹತಾಶರಾಗಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದು ಇದಕ್ಕೆ ತಕ್ಕ ಉತ್ತರ ನೀಡುತ್ತೇನೆ ಎಂದು ಕಿಡಿಕಾರಿದರು.
ಮೇ 13 ಮತ ಎಣಿಕೆಯ ದಿನದಂದು ನಂದುಗುಡಿ ಹೋಬಳಿಯ ಡಿ.ಶೆಟ್ಟಿಹಳ್ಳಿಯಲ್ಲಿ ನಡೆದ ಕುಟುಂಬ ಕಲಹವನ್ನು ರಾಜಕೀಯ ಪ್ರೇರಿತವಾಗಿ ಬಿಂಬಿಸಲು ಹೊರಟಿರುವುದು ಖಂಡನೀಯ. ಇತ್ತ ಹೊಸಕೋಟೆಯಲ್ಲಿ ಮೇ 13 ರಂದು ನಡೆದ ಘಟನೆಯನ್ನು ಬಿಜೆಪಿ ಪಕ್ಷ ತನ್ನ ಸೋಷಿಯಲ್ ಮಿಡಿಯಾದಲ್ಲಿ ಕಾಂಗ್ರೆಸ್ ಹಾಗೂ ನನ್ನ ಹೆಸರಿಗೆ ಕಪ್ಪು ಮಸಿ ಬಳಿಯುವ ದುರುದ್ದೇಶದಿಂದ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಒಂದು ರಾಷ್ಟ್ರೀಯ ಪಕ್ಷದ ತತ್ವ ಸಿದ್ದಾಂತಗಳ ಬಗ್ಗೆ ಮಾಹಿತಿ ಇಲ್ಲದ ಹಾಗೂ ತತ್ವ ಸಿದ್ಧಾಂತಗಳ ಮಹತ್ವ ತಿಳಿಯದ ವ್ಯಕ್ತಿಯನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಹೇಳಿದಂತೆ ಕೇಳಿದ ವ್ಯಕ್ತಿಯ ವ್ಯಕ್ತಿತ್ವ ಅರಿವಾಗದಿರುವುದು ಬೇಸರ ಸಂಗತಿ ಎಂದು ಶರತ್ ಬಚ್ಚೇಗೌಡ ಕಿಡಿಕಾರಿದರು.
ಇನ್ನೂ ಡಿ.ಶೆಟ್ಟಿಹಳ್ಳಿ ಗಲಾಟೆ ಕುರಿತು ನಂದಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಫ್‌ಐಆರ್ ಪ್ರತಿಯಲ್ಲಿ ಯಾವುದೇ ರಾಜಕೀಯ ಪಕ್ಷ ಹಾಗೂ ರಾಜಕೀಯ ಗಲಾಟೆ ಎಂದು ನಮೂದಿಸಿಲ್ಲ. ಕುಟುಂಬದ ಕಲಹಗಳಿಂದ ನಡೆದ ಮಾತಿನ ಚಕಮುಕಿಯಲ್ಲಿ ಈ ಘಟನೆ ನಡೆದಿದೆ. ಆದರೂ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದರೇ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications