CM Change: ನವೆಂಬರ್ ಕ್ರಾಂತಿ: 'ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ'
ಬೆಂಗಳೂರು, ಅಕ್ಟೋಬರ್ 02: ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಈಗಾಗಲೇ ಒಪ್ಪಂದವಾಗಿದೆ ಎಂದು ಈ ಹಿಂದೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿಕೆ ಸದ್ಯ ಕೈ ಪಾಳಯದಲ್ಲಿ ಹಲವು ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ. ಆದರೆ, ಸಿಎಂ ಹುದ್ದೆ ವಿಚಾರವಾಗಿ ಯಾವುದೇ ಒಪ್ಪಂದವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ಇದೀಗ ಮತ್ತೆ ನವೆಂಬರ್ ನಲ್ಲಿ ಮಹಾಕಾಂತ್ರಿಯಾಗಲಿದೆ. ಮುಖ್ಯಮಂತ್ರಿ ಬದಲಾಗುತ್ತಾರೆ ಎನ್ನುವ ಮಾತುಗಳು ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರುತ್ತಿದೆ.
ಹೌದು, ವಿಪಕ್ಷ ನಾಯಕರು ನವೆಂಬರ್ ನಲ್ಲಿ ಕಾಂತ್ರಿಯಾಗಲಿದೆ ಎಂದು ಕಳೆದ ಎರಡು ತಿಂಗಳಿನಿಂದ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ನಡುವೆ ಡಿ ಕೆ ಶಿವಕುಮಾರ್ ಬಣದ ಹಲವು ಶಾಸಕರು ಶೀಘ್ರದಲ್ಲೇ ಸಿಎಂ ಬದಲಾವಣೆಯಾಗಲಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಇನ್ನೂ ಡಿ ಕೆ ಶಿವಕುಮಾರ್ ಬಣದ ನಾಯಕರ ಹೇಳಿಕೆಗೆ ಸಿದ್ದರಾಮಯ್ಯ ಬಣದ ಶಾಸಕರು ಮುಖ್ಯಮಂತ್ರಿ ಬದಲಾವಣೆ ಇಲ್ಲ. ಮುಂದಿನ ಎರಡೂವರೆ ವರ್ಷಕ್ಕೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ವಿಚಾರವಾಗಿ ಕುಣಿಗಲ್ ಶಾಸಕರಾದ ಹೆಚ್.ಡಿ. ರಂಗನಾಥ್ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 140 ಸ್ಥಾನಗಳನ್ನು ಪಡೆದಿರುವುದರ ಹಿಂದೆ ಶಿವಕುಮಾರ್ ಅವರು ಶಕ್ತಿ ಹಾಗೂ ಶ್ರಮವಿದೆ ಎಂದು ಅನೇಕ ನಾಯಕರು ಹೇಳುತ್ತಾರೆ. ಇದನ್ನು ಪಕ್ಷದ ಹೈಕಮಾಂಡ್ ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡಬೇಕು ಎಂದರು. ಶಿವಕುಮಾರ್ ಅವರಂತೆ ಬೆಳಿಗ್ಗೆ 8 ರಿಂದ ರಾತ್ರಿ 3 ಗಂಟೆಯ ತನಕ ಕೆಲಸ ಮಾಡುವ ನಾಯಕರಿದ್ದರೆ ನನಗೆ ತಿಳಿಸಿ. ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ. ಡಿ.ಕೆ.ಶಿವಕುಮಾರ್ ಅವರು ಒಂದಲ್ಲ ಒಂದು ದಿನ, ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬುದಾಗಿ ನಾವೆಲ್ಲರೂ ಅಪೇಕ್ಷೆ ಪಡುತ್ತೇವೆ. ಆಗುತ್ತಾರೆ ಅಂದುಕೊಂಡಿದ್ದೇವೆ. ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಮಗೆಲ್ಲಾ ರಾಜಕೀಯ ಗುರುಗಳು. ಅವರ ಸಮಾಜಸೇವೆ, ಆಡಳಿತ ವೈಖರಿ, ಅಭಿವೃದ್ಧಿ ಮಾದರಿಗಳನ್ನು ನಡೆ- ನುಡಿಗಳಲ್ಲಿ ನೋಡುತ್ತಾ ಬಂದಿದ್ದೇವೆ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿವೆ ಎಂದರು. ನವೆಂಬರ್ ಕ್ರಾಂತಿಯ ಬಗ್ಗೆ ಮಾಹಿತಿ ನನಗಿಲ್ಲ ಹಾಗೂ ಮಾತನಾಡಬಾರದು. ಯಾವುದೇ ಹುದ್ದೆಯಿದ್ದರು ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.
ಡಿ.ಕೆ.ಶಿವಕುಮಾರ್ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆಯೇ ಎಂದು ಕೇಳಿದಾಗ, ರಾಜಕೀಯ ಎಂಬುದು ಕೃಷಿಯಿದ್ದಂತೆ. ಹೆಚ್ಚು ಶ್ರಮ ಹಾಕಿದಷ್ಟು ಉತ್ತಮ ರೀತಿಯಲ್ಲಿ ಬೆಳೆ ಬರುತ್ತದೆ. ಕಠಿಣ ಪರಿಶ್ರಮದ ಮೇಲೆ ನಮಗೆ ಹೆಚ್ಚು ನಂಬಿಕೆಯಿದೆ. ಇವರ ಮೇಲೆ ಭಗವಂತನ ಹಾರೈಕೆ, ಜನರ ಪ್ರೀತಿ, ವಿಶ್ವಾಸ, ಹೈಕಮಾಂಡ್ ಆಶೀರ್ವಾದವಿದೆ ಎಂದು ಶಾಸಕ ರಂಗನಾಥ್ ಅವರು ಹೇಳಿದರು.












Click it and Unblock the Notifications