ಸಿಎಂ ಇನ್ನೂ ಫೈನಲ್ ಆಗಿಲ್ಲ, ಆಗಲೇ ಸಹಕಾರ ಖಾತೆ ಕೇಳಿದ ಕಾಂಗ್ರೆಸ್ ಶಾಸಕ
ಬೆಂಗಳೂರು, ಮೇ 17: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಗೊಂದಲಕ್ಕೆ ಹೈಕಮಾಂಡ್ ಇನ್ನೂ ತೆರೆ ಎಳೆದಿಲ್ಲ. ಫಲಿತಾಂಶ ಬಂದು ಮೂರು ದಿನವಾದರೂ ಮೀಟಿಂಗ್ ಮೇಲೆ ಮೀಟಿಂಗ್ ಕಾಂಗ್ರೆಸ್ ನಾಯಕರು ನಡೆಸುತ್ತಿದ್ದಾರೆ. ಇದೊಂದು ಕಡೆಯಾದರೆ, ಸಚಿವ ಸಂಪುಟದಲ್ಲಿ ಯಾರು ಇರಲಿದ್ದಾರೆ ಎನ್ನುವ ಚರ್ಚೆಯೂ ಜೋರಾಗಿದೆ.
ಮಧುಗಿರಿ ಕ್ಷೇತ್ರದಲ್ಲಿ ಸುಮಾರು 35ಸಾವಿರಕ್ಕೂ ಅಧಿಕ ಮತಗಳಿಂದ ಜಯಭೇರಿ ಬಾರಿಸಿರುವ ಕ್ಯಾತ್ಸಂದ್ರ ರಾಜಣ್ಣ (ಕೆ.ಎನ್.ರಾಜಣ್ಣ) ಅವರು ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಬಹಿರಂಗವಾಗಿಯೇ ಹೇಳಿದ್ದರು. ರಾಜಣ್ಣ ಬರೀ ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಹಕಾರ ಖಾತೆಯೇ ಬೇಕೆಂದು ಹೇಳಿಕೆಯನ್ನು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರಾಜಣ್ಣ, "ಇದೇ 18ಕ್ಕೆ ಪ್ರಮಾಣವಚನ ಆಗಬಹುದು. ನನಗೆ ವಿಶ್ವಾಸ ಇದೆ ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸಿಎಂ ಆಗುತ್ತಾರೆ. ಹೈಕಮಾಂಡ್ ಒಲವು ಕೂಡ ಅವರ ಪರವಾಗಿದೆ. ಡಿ.ಕೆ.ಶಿವಕುಮಾರ್ ಕೂಡ ಸಹಕಾರ ಕೊಡುತ್ತಾರೆಂಬ ವಿಶ್ವಾಸ ಇದೆ. ಜೊತೆಗೆ ಸಿಎಂ ವಿಚಾರ ಇಂದು ಫೈನಲ್ ಆಗಲೇಬೇಕು" ಎಂದು ಹೇಳಿದ್ದಾರೆ.
"ಸಚಿವ ಸಂಪುಟ ಸ್ವಲ್ಪ ತಡವಾಗಬಹುದು. ಸದ್ಯಕ್ಕೆ ಸಿದ್ದರಾಮಯ್ಯ ಒಬ್ಬರೆ ಪ್ರಮಾಣವಚನ ಮಾಡಲಿದ್ದು, ಮೊದಲ ದಿನವೇ ಕ್ಯಾಬಿನೆಟ್ ಮಾಡಿ, 10 ಕೆಜಿ ಅಕ್ಕಿ ಘೋಷಣೆ ಮಾಡುವ ಮೂಲಕ ಅನ್ನಭಾಗ್ಯ ಯೋಜನೆ ಜಾರಿಗೆ ತರೋದೆ ಮೊದಲ ತೀರ್ಮಾನ. ನಾನು ಸಚಿವ ಆಗಲೇಬೇಕು ಅದು ಸಹಕಾರ ಸಚಿವ ಸ್ಥಾನವೇ ಬೇಕು. ಅದು ಬಿಟ್ಟು ಬೇರೆ ಏನು ಕೇಳಲ್ಲ" ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಫೈಟ್ ನಡೆಯುತ್ತಿದ್ದರೆ ಮತ್ತೊಂದೆಡೆ ಸಚಿವ ಸ್ಥಾನಕ್ಕೆ ಒಬ್ಬೊಬ್ಬರೇ ಕರ್ಚೀಫ್ ಹಾಕುತ್ತಿದ್ದಾರೆ. ಅಂತೆಯೇ ನಾನು ಸಚಿವ ಆಗಲೇಬೇಕು, ಎಂದು ಮಧುಗಿರಿ ನೂತನ ಶಾಸಕ ಕೆಎನ್ ರಾಜಣ್ಣ ಪಟ್ಟು ಹಿಡಿದಿದ್ದಾರೆ.
"ಬಿಜೆಪಿ ಸೋಲು ವಿಚಾರದ ಕುರಿತು ಮಾತನಾಡಿ, 40% ಕಮಿಷನ್ ಹಾಗೂ ಬೆಲೆ ಏರಿಕೆಯಿಂದ ಬಿಜೆಪಿ ಸೋತಿದೆ. ಇಲ್ಲಿರುವ ಬಿಜೆಪಿ ರಾಜ್ಯ ನಾಯಕರಿಗೆ ಮತ ಸೆಳೆಯುವ ಶಕ್ತಿ ಇಲ್ಲ. ರಾಜ್ಯದಲ್ಲಿ ಮೋದಿ ಅಲೆ ವರ್ಕೌಟ್ ಆಗಿಲ್ಲ" ಎಂದು ರಾಜಣ್ಣ ಅಭಿಪ್ರಾಯ ಪಟ್ಟರು. (Photo: ಸಾಂದರ್ಭಿಕ ಚಿತ್ರ)












Click it and Unblock the Notifications