ಬಳ್ಳಾರಿ ರಾಜಕೀಯ : ಬೆಂಬಲಿಗರ ಸಭೆ ಕರೆದ ಆನಂದ್ ಸಿಂಗ್!
ಬಳ್ಳಾರಿ, ಜನವರಿ 24 : ಬಳ್ಳಾರಿ ಜಿಲ್ಲೆಯ ರಾಜಕಾರಣದಲ್ಲಿ ಗುರುವಾರ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ. ವಿಜಯನಗರ (ಹೊಸಪೇಟೆ) ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಬೆಂಬಲಿಗರ ಸಭೆ ಕರೆದಿದ್ದಾರೆ. ಆನಂದ್ ಸಿಂಗ್ ಯಾವ ಪಕ್ಷ ಸೇರಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ನಾಯಕರು ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಪಕ್ಷ ಬಿಡುವುದಾಗಿ ಆನಂದ್ ಸಿಂಗ್ ಎಚ್ಚರಿಕೆ ನೀಡಿದ್ದರು. ಹೊಸಪೇಟೆಯಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಗೂ ಅವರು ಗೈರು ಹಾಜರಾಗಿದ್ದರು.
ಆನಂದ್ ಸಿಂಗ್ ಬಿಜೆಪಿ ತೊರೆಯುವುದು ಬಹುತೇಕ ಖಚಿತವಾಗಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಜೊತೆ ಕಳೆದವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆನಂದ್ ಸಿಂಗ್ ಭೇಟಿ ಮಾಡಿದ್ದರು. ಕಾಂಗ್ರೆಸ್ ಸೇರಲಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಗಣಿ ಉದ್ಯಮಿ ಪತ್ತಿಕೊಂಡ ಕಿಶೋರ್ 2018ರ ಚುನಾವಣೆಯಲ್ಲಿ ನಾನೇ ವಿಜಯನಗರ (ಹೊಸಪೇಟೆ) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಕರಪತ್ರಗಳನ್ನು ಹಂಚುತ್ತಿದ್ದಾರೆ. ಜಿಲ್ಲಾ ಘಟಕದ ಪದಾಧಿಕಾರಿಗಳು ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂಬುದು ಆನಂದ್ ಸಿಂಗ್ ಅವರ ಆರೋಪವಾಗಿದೆ...

ಗುರುವಾರ ನಡೆಯಲಿದೆ ಸಭೆ
ಗುರುವಾರ ಸಂಜೆ ತಮ್ಮ ನಿವಾಸದಲ್ಲಿ ಆನಂದ್ ಸಿಂಗ್ ಬೆಂಬಲಿಗರ ಸಭೆ ಕರೆದಿದ್ದಾರೆ. ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಸಭೆಯಲ್ಲಿ ಆನಂದ್ ಸಿಂಗ್ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

2 ಸಾವಿರ ಜನರು ಸೇರುವ ನಿರೀಕ್ಷೆ
ಬೆಂಬಲಿಗರ ಸಭೆಯಲ್ಲಿ 2 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹಿಂದೂ, ಕ್ರೈಸ್ತ ಮತ್ತು ಮುಸ್ಲಿಂ ಧರ್ಮದ ಗುರುಗಳಿಗೂ ಸಭೆಗೆ ಆಹ್ವಾನ ನೀಡಲಾಗಿದೆ.

ಸಿದ್ದರಾಮಯ್ಯ ಭೇಟಿಯಾಗಿದ್ದರು
ಆನಂದ್ ಸಿಂಗ್ ಕಳೆದ ವಾರ ಕಾರ್ಮಿಕ ಸಚಿವ ಸಂತೋಷ್ ಲಾಡ್ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಅವರು ಕಾಂಗ್ರೆಸ್ ಸೇರಲಿದ್ದಾರೆಯೇ? ಅಥವ ಜೆಡಿಎಸ್ ಸೇರಲಿದ್ದಾರೆಯೇ? ಎಂಬುದು ಸದ್ಯದ ಪ್ರಶ್ನೆ.

ಸಚಿವರಾಗಿದ್ದರು
ಆನಂದ್ ಸಿಂಗ್ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಜೊತೆ ಗುರುತಿಸಿಕೊಂಡಿದ್ದರು. ಆದರೆ, ಶ್ರೀರಾಮುಲು ಅವರು ಬಿಜೆಪಿ ತೊರೆದಾಗ ಆನಂದ್ ಸಿಂಗ್ ಬಿಜೆಪಿಯಲ್ಲಿಯೇ ಇದ್ದರು. ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಸಚಿವರು ಆಗಿದ್ದರು.

ಎರಡು ಬಾರಿ ಶಾಸಕರು
2013ರ ಚುನಾವಣೆಯಲ್ಲಿ ಆನಂದ್ ಸಿಂಗ್ 69,995 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಎಚ್.ಅಬ್ದುಲ್ ವಾಹಬ್ 39,358 ಮತ, ಜೆಡಿಎಸ್‌ನ ಕೆ.ಬಸವರಾಜ ಅವರು 611 ಮತಗಳನ್ನು ಪಡೆದಿದ್ದರು.












Click it and Unblock the Notifications