ವ್ಯಂಗ್ಯವಾಗಿ ಸಿದ್ದರಾಮಯ್ಯಗೆ ಥ್ಯಾಂಕ್ಸ್ ಹೇಳಿದ ವಿಶ್ವನಾಥ್
Recommended Video
ಮುಂಬೈ, ಜುಲೈ 8: ನಾನು ಮತ್ತು ಇಲ್ಲಿರುವ ಯಾವುದೇ ಶಾಸಕರು ಸಚಿವ ಸ್ಥಾನ ಬೇಕೆಂದು ರಾಜೀನಾಮೆ ನೀಡಿ ಮುಂಬೈ ಹೋಟೆಲ್ ನಲ್ಲಿ ಕೂತಿರುವುದಲ್ಲ ಎಂದು ಹುಣಸೂರು ಶಾಸಕ ಎಚ್ ವಿಶ್ವನಾಥ್ ಹೇಳಿದ್ದಾರೆ.
ನನಗೆ ಈಗಲೂ ದೇವೇಗೌಡರ ಬಗ್ಗೆ ಏನೂ ತಕರಾರು ಇಲ್ಲ, ಅವರ ಸಹಕಾರವನ್ನು ಮರೆಯುವಂತಹ ವ್ಯಕ್ತಿತ್ವವೂ ನನ್ನದಲ್ಲ. ನಾನು ಯಾರ ವಿರುದ್ದ ಇಷ್ಟು ದಿನ ಮಾತನಾಡಿಕೊಂಡು ಬಂದಿದ್ದೇನೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ವಿಶ್ವನಾಥ್ ಹೇಳಿದ್ದಾರೆ.
ಅತೃಪ್ತ ಶಾಸಕರಿಗೆ ಸಚಿವ ಸ್ಥಾನದ ಆಫರ್ ನೀಡಿದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯನವರಿಗೆ ನನ್ನದೊಂದು ಥ್ಯಾಂಕ್ಸ್ ಎಂದು ಹೇಳಿರುವ ವಿಶ್ವನಾಥ್, ರಾಜೀನಾಮೆ ನೀಡಿ ದೇವೇಗೌಡರಿಗೆ ಅಗೌರವ ತೋರಿದ್ದೇನೆಂದು ನನಗನಿಸುವುದಿಲ್ಲ ಎಂದು ಹೇಳಿದ್ದಾರೆ.

ಯಾರೂ ನಮ್ಮನ್ನು ಸಮಾಧಾನ ಪಡಿಸಲು ಮುಂಬೈಗೆ ಬರಬೇಕಾಗಿಲ್ಲ, ಯಾಕೆಂದರೆ ಅದರಿಂದ ಏನು ಪ್ರಯೋಜನವಿಲ್ಲ. ಯಾರೂ ಇಲ್ಲಿಗೆ ಬರುವ ತೊಂದರೆ ತೆಗೆದುಕೊಳ್ಳಬೇಕಾಗಿಲ್ಲ ಎಂದು ವಿಶ್ವನಾಥ್ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.
ಈ ಸಮಯದಲ್ಲಿ ನಾನೂ ಕೆಲಸ ಮಾಡುತ್ತಿದ್ದೇನೆಂದು ಎಐಸಿಸಿಗೆ ತೋರಿಸಲು ಡಿ ಕೆ ಶಿವಕುಮಾರ್ ಓಡಾಡುತ್ತಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ನಾಳೆ (ಜುಲೈ 9) ಅಪಾಯಿಂಟ್ಮೆಂಟ್ ಕೊಟ್ಟರೆ ಬೆಂಗಳೂರಿಗೆ ಬರುತ್ತೇವೆ ಎಂದು ವಿಶ್ವನಾಥ್ ಹೇಳಿದ್ದಾರೆ.
ನಾನು ಹೆಸರಿಗೆ ಮಾತ್ರ ಜೆಡಿಎಸ್ ಅಧ್ಯಕ್ಷನಾಗಿದ್ದೆ. ನನ್ನ ಅಳಿಯನ ವರ್ಗಾವಣೆ ಮಾಡಿಸಲು ಸಹ ನನಗೆ ಆಗಲಿಲ್ಲ. ನನ್ನ ಅಳಿಯನಿಗೆ ಕುಡುಕನ ಪಟ್ಟ ಕಟ್ಟುವ ಕೆಲಸ ಮಾಡಿದ್ದು ಸಾ.ರಾ.ಮಹೇಶ್. ನನಗೆ ರಾಜಕೀಯ ಪುನರ್ಜನ್ಮ ನೀಡಿದ್ದು ನನ್ನ ಕ್ಷೇತ್ರದ ಜನರು, ಎಚ್.ಡಿ.ದೇವೇಗೌಡರಲ್ಲ ಎಂದು ಎಚ್.ವಿಶ್ವನಾಥ್ ಹೇಳಿದ್ದರು.












Click it and Unblock the Notifications