ಲೋಕಸಭೆಗೆ ಕೈ ಪಡೆಯಿಂದ ಸಚಿವರ ಸ್ಪರ್ಧೆ? ಕುಟುಂಬಸ್ಥರಿಗೂ ಟಿಕೆಟ್ ಕೇಳಿದ ಮಂತ್ರಿಗಳು! ಇಕ್ಕಟ್ಟಿನಲ್ಲಿ ಕೈ ಹೈಕಮಾಂಡ್ ?
ಬೆಂಗಳೂರು, ಆಗಸ್ಟ್ 20: 2023 ರ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಸರ್ಕಾರ ರಚಿಸಿರುವ ರಾಜ್ಯ ಕಾಂಗ್ರೆಸ್, ಇದೀಗ 2024 ರ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್, 28 ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಕೈ ಪಡೆ ಮಾಸ್ಟರ್ ಪ್ಲಾನ್ ನಡೆಸಿದೆ.
ಹೌದು, ಲೋಕಸಮರಕ್ಕೆ ಸಜ್ಜಾಗಿರುವ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗುವ ಕುರಿತು ಹೈಕಮಾಂಡ್ ನಾಯಕರ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಈ ಎರಡು ಪಕ್ಷಗಳ ತಂತ್ರಕ್ಕೆ ಪ್ರತಿತಂತ್ರವಾಗಿ ಹೆಚ್ಚು ಸ್ಥಾನ ಗೆಲ್ಲಲು, ಈ ಬಾರೀ ಕ್ಷೇತ್ರಗಳಲ್ಲಿ ವರ್ಚಸ್ಸಿರುವ ಮಂತ್ರಿಗಳನ್ನ ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.

ಇನ್ನೂ ಕಾಂಗ್ರೆಸ್ ಹೈಕಮಾಂಡ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನ ಹೊಡೆ ಕಾಂಗ್ರೆಸ್ ಹೈಕಮಾಂಡ್ ತಂತ್ರಗಾರಿಕೆಯನ್ನ ನಡೆಸಿದ್ದು, ಲೋಕಸಭಾ ಚುನಾವಣೆಗೆ ಸಮರ್ಥ ಸಚಿವರನ್ನ ಕಣಕ್ಕಿಳಿಸಲು ನಿರ್ಧಾರಿಸಿದ್ದು, ಒಂದು ವೇಳೆ ಆ ಸಚಿವರು ಲೋಕಸಮರದಲ್ಲಿ ಗೆಲುವು ಸಾಧಿಸಿದ್ರೆ, ಖಾಲಿಯಾಗುವ ಸಚಿವ ಸಂಪುಟದ ಸ್ಥಾನಗಳನ್ನು ಅಸಮಾಧಾನಗೊಂಡ ಶಾಸಕರಿಗೆ ಸಚಿವ ಸ್ಥಾನವನ್ನ ನೀಡಿ ಅತೃಪ್ತಿ ಶಮನಕ್ಕೆ ಹೈಕಮಾಂಡ್ ಚಿಂತನೆ ನಡೆಸಿದೆ.
ಈಗಾಗಲೇ ಹೈಕಮಾಂಡ್ ನಾಯಕರು ಒಪ್ಪಿಗೆ ಸೂಚಿಸಿದ್ರೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಒಲವು ತೋರಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪರ್ಧಿಸುವ ಸಾಧ್ಯತೆ ಇದೆ. ಸತೀಶ್ ಜಾರಕಿಹೊಳಿ ಕೇವಲ ವಾಲ್ಮೀಕಿ ಸಮುದಾಯ ಮಾತ್ರವಲ್ಲದೇ ಇತರೆ ಸಮುದಾಯದವರೆ ಜೊತೆಯು ಉತ್ತಮ ಜನಸಂಪರ್ಕ ಹೊಂದಿರುವುದು ಇಲ್ಲಿ ಕಾಂಗ್ರೆಸ್‌ಗೆ ಪ್ಲಸ್ ಆಗಲಿದೆ. ಇನ್ನೂ 2021 ರ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯ ಮಂಗಳಾ ಅಂಗಡಿ ಗೆಲುವು ಸಾಧಿಸಿದ್ದು, ಈ ಬಾರಿ ಮಂಗಳಾ ಅಂಗಡಿಯವರ ವರ್ಚಸ್ಸು ಕ್ಷೇತ್ರದಲ್ಲಿ ಕಡಿಮೆಯಾಗಿದೆ ಎನ್ನಲಾಗಿದೆ.
ಇನ್ನೂ ಲೋಕಸಭಾ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಸ್ಪರ್ಧಿಸಿದ್ರೆ, ಕೆಲ ಷರತ್ತುಗಳನ್ನ ಹೈಕಮಾಂಡ್ ನಾಯಕರ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ರೆ, ಯಮಕನಮರಡಿ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ತಮ್ಮ ಮಕ್ಕಳಾದ ರಾಹುಲ್ ಹಾಗೂ ಪ್ರಿಯಾಂಕಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂಬ ಷರತ್ತು ಇಡಲಿದ್ದಾರೆ ಎನ್ನಲಾಗಿದೆ. ಈ ಕುರಿತು ಹೈಕಮಾಂಡ್ ನಾಯಕರ ಜೊತೆಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಇತ್ತ ತುಮಕೂರಿನಿಂದ ಸಚಿವ ಕೆ ಎನ್ ರಾಜಣ್ಣ ಸ್ಪರ್ಧಿಸಿಲು ಹೈಕಮಾಂಡ್ ಒಪ್ಪಿಗೆ ನೀಡಿದ್ರೆ ಸ್ಪರ್ಧಿಸುವ ಮನಸ್ಸು ಹೊಂದಿರುವ ರಾಜಣ್ಣ ಅವರು, ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ರೆ ಉಪಚುನಾವಣೆಗೆ ಪುತ್ರನಿಗೆ ಟಿಕೆಟ್ ನೀಡಬೇಕು ಎಂಬ ಷರತ್ತನ್ನ ಹೈಕಮಾಂಡ್ ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಈ ಬಾರಿ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಒಂದು ವೇಳೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸದಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಮೈಸೂರಿನಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.
ಇನ್ನೂ 2023 ರ ಚುನಾವಣೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ಅಂತರದಿಂದ ಸೋಲು ಕಂಡಿರುವ ಸಚಿವ ರಾಮಲಿಂಗಾರೆಡ್ಡಿಯವರ ಪುತ್ರಿ ಹಾಗೂ ಮಾಜಿ ಶಾಸಕಿ ಸೌಮ್ಯ ರೆಡ್ಡಿಯವರನ್ನ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಬೇಕು ಎಂಬ ಬಗ್ಗೆ ಕಾಂಗ್ರೆಸ್ ಮುಂದೆ ರಾಮಲಿಂಗರೆಡ್ಡಿ ತಮ್ಮ ಬೇಡಿಕೆಯನ್ನ ಮುಂದಿಟ್ಟಿದ್ದಾರೆ. ಅಲ್ಲದೇ ಸಚಿವರನ್ನು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸುವ ಬಗ್ಗೆ ಪಕ್ಷ ಚಿಂತನೆ ನಡೆಸುತ್ತಿರುವುದು ನಿಜ ಎಂದು ರಾಮಲಿಂಗಾರೆಡ್ಡಿಯವರು ಹೇಳಿದ್ದಾರೆ. ಅಲ್ಲದೇ ಬೆಂಗಳೂರು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಸಚಿವರನ್ನ ಟಿಕೆಟ್ ಕೊಡಲು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದ್ದು, ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಲು ಈ ತಂತ್ರದ ಮೊರೆ ಹೋಗಿದೆ ಎಂದು ತಿಳಿಸಿದ್ದಾರೆ.
ಒಟ್ನಲಿ,ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ರ ಟಾರ್ಗೆಟ್ ನೀಡಿದ ಕಾಂಗ್ರೆಸ್ ಹೈಕಮಾಂಡ್ ಗೆ, ಸಚಿವರ ಷರತ್ತು ಕುರಿತು ತಲೆಬಿಸಿಯಾಗಿದ್ದು, ವರ್ಚಸ್ಸಿರುವ ಸಚಿವರನ್ನ ಕಣಕ್ಕಿಳಿಸುವ ನಿರ್ಧಾರ ಒಂದು ಕಡೆಯಾದ್ರೆ, ಇತ್ತ ಕುಟುಂಬಸ್ಥರಿಗೆ ಟಿಕೆಟ್ ನೀಡುವ ಕುರಿತು ಬೇಡಿಕೆ ಇಟ್ಟಿದ್ದು, ಹೈಕಮಾಂಡ್ ಯಾವ ನಿರ್ಧಾರವನ್ನ ತೆಗೆದುಕೊಳ್ಳಲಿದೆ ಎಂಬುದನ್ನ ಕಾದುನೋಡಬೇಕಾಗಿದೆ.












Click it and Unblock the Notifications