Lok sabha Election 2024: ಲೋಕಸಮರಕ್ಕೆ ಕೈ ಪಾಳಯದಲ್ಲಿ ಭರ್ಜರಿ ಕಸರತ್ತು; ಸಚಿವರೂ ಕಣಕ್ಕೆ: ರಾಮಲಿಂಗಾರೆಡ್ಡಿ
ಬೆಂಗಳೂರು, ಆಗಸ್ಟ್ 10: ವಿಧಾನಸಭಾ ಚುನಾವಣೆಯ ಗೆಲುವಿನ ಬಳಿಕ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿರುವ ಕಾಂಗ್ರೆಸ್ ಪಾಳಯದಲ್ಲಿ ಲೋಕಸಮರಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದ್ದು, ಈ ಬಾರೀ ಲೋಕಸಭಾ ಚುನಾವಣೆ ಕೈ ಪಡೆಗೆ ಪ್ರತಿಷ್ಠೆಯಾಗಿದ್ದು, ಸಚಿವರೂ ಕಣಕ್ಕಿಳಿಯಲಿದ್ದಾರೆ.
ಹೌದು, 2024 ರ ಲೋಕಸಭಾ ಚುನಾವಣೆಯಲ್ಲಿ ಈ ಬಾರೀ ಬೆಂಗಳೂರು ನಗರ ಜಿಲ್ಲೆಯ ಕ್ಷೇತ್ರಗಳಲ್ಲಿ ಸಚಿವರು ಕಣಕ್ಕಿಳಿಯುವುದಿಲ್ಲ. ಉಳಿದ 25 ಕ್ಷೇತ್ರಗಳ ಪೈಕಿ ಕೆಲ ಕ್ಷೇತ್ರಗಳಲ್ಲಿ ಸಚಿವರು ಕಣಕ್ಕಿಳಿಯುವ ಸೂಚನೆಯಿದೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರವನ್ನು ಎಲ್ಲರೂ ಒಪ್ಪಿ, ಸ್ಪರ್ಧಿಸಬೇಕಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದ್ದಾರೆ.

ಈ ಕುರಿತು ಕನ್ನಡ ಪ್ರಭ ಪತ್ರಿಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 20ರಲ್ಲಿ ಗೆಲ್ಲುವುದು ನಮ್ಮ ಗುರಿಯಾಗಿದೆ. ಅದಕ್ಕೆ ತಕ್ಕಂತೆ ಕಾರ್ಯತಂತ್ರ ರೂಪಿಸುತ್ತೇವೆ. ಕಳೆದ ಚುನಾವಣೆಯಲ್ಲಿ ದೊಡ್ಡ ಅಂತರದಲ್ಲಿ ನಮ್ಮ ಅಭ್ಯರ್ಥಿಗಳು ಸೋತಿದ್ದರು. ಇದೀಗ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಕಾಂಗ್ರೆಸ್ ಬಗ್ಗೆ ಜನರಿಗೆ ಒಲವು ಬಂದಿದೆ. ಬೆಂಗಳೂರು ಕೇಂದ್ರದಲ್ಲಿ ನಮಗೆ ಉತ್ತಮ ಅವಕಾಶವಿದೆ. ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳಲ್ಲಿ ಬಿಜೆಪಿ ಜತೆ ಪೈಪೋಟಿಯಿದೆ ಎಂದು ಹೇಳಿದ್ದಾರೆ.
ಇನ್ನೂ ನನ್ನ ಹಿರಿತನಕ್ಕೆ ಒಳ್ಳೆಯ ಖಾತೆ ಕೊಡಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿರುವ ರಾಮಲಿಂಗರೆಡ್ಡಿ, ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಕುರಿತು ಮಾತನಾಡಿ, ಶಕ್ತಿ ಯೋಜನೆ ಆರಂಭಕ್ಕೂ ಮುನ್ನ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳಲ್ಲಿ 83 ಲಕ್ಷ ಪ್ರಯಾಣಿಕರಿದ್ದರು. ಈಗ ಅದು 1.10 ಕೋಟಿಗೆ ಏರಿಕೆಯಾಗಿದೆ. ಮಹಿಳಾ ಪ್ರಯಾಣಿಕರ ಜತೆಗೆ ಪುರುಷ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಈವರೆಗೆ 34 ಕೋಟಿ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದರು.
ನಿಗಮಗಳಲ್ಲಿ ಬಸ್‌ಗಳ ಕೊರತೆಯಿದೆ ಕುರಿತು ಮಾತನಾಡಿ, ಈ ಹಿಂದೆ ಅಂದರೆ, 2018ರಲ್ಲಿ ನಾನು ಸಾರಿಗೆ ಸಚಿವನಾಗಿ ಹೊರಬಂದಾಗ ಎಷ್ಟುಬಸ್‌ಗಳಿದ್ದವೋ ಈಗಲೂ ಅಷ್ಟೇ ಬಸ್‌ಗಳಿವೆ. ಜನಸಂಖ್ಯೆಗೆ ಅನುಗುಣವಾಗಿ ಬಸ್‌ಗಳನ್ನು ಖರೀದಿಸಿಲ್ಲ. ಈಗ ನಾವು 5 ಸಾವಿರ ಬಸ್‌ಗಳ ಖರೀದಿಗೆ ನಿರ್ಧರಿಸಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಅದಕ್ಕಾಗಿ ರಾಜ್ಯ ಸರ್ಕಾರ 500 ಕೋಟಿ ರು. ಅನುದಾನ ನೀಡುತ್ತಿದೆ. ಜತೆಗೆ ಹಳೇ ಬಸ್‌ಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಇನ್ನೂ ಬಿಬಿಎಂಪಿ ಗುತ್ತಿಗೆದಾರರ ಬಿಲ್ ಪಾವತಿಗೆ ಕಮಿಷನ್ ಕೇಳಲಾಗುತ್ತಿದೆ ಎಂಬ ಆರೋಪದ ಕುರಿತು ಮಾತನಾಡಿ, ಬಿಬಿಎಂಪಿ ಗುತ್ತಿಗೆದಾರರು ಮಾಡಿರುವ ಕೆಲಸದ ಬಗ್ಗೆ ತನಿಖೆ ಮಾಡಲಾಗುತ್ತಿದೆ. ತನಿಖೆ ನಡೆಸುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ ಅವರು, ಗುತ್ತಿಗೆದಾರರ ಬಾಕಿ ಬಿಲ್ ಬೇಗ ಪಾವತಿಯಾಗಬೇಕು ಎಂಬುದು ನಿಜ. ಆದರೆ, ತನಿಖೆಯಾಗಬೇಕಲ್ಲ? ಇನ್ನು ಕಮಿಷನ್ ಕೇಳುತ್ತಿದ್ದಾರೆ ಎಂಬುದೆಲ್ಲ ಸುಳ್ಳು ಎಂದು ಹೇಳಿದರು.












Click it and Unblock the Notifications