ತಾಯಿ, ಮಕ್ಕಳ ಸಾವು: ಸಿದ್ದರಾಮಯ್ಯ, ಎಚ್‌ಡಿಕೆ ವಿರುದ್ಧ ಸುಧಾಕರ್ ಕಿಡಿ

ಬೆಂಗಳೂರು, ನ. 04: ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ ಹಾಗೂ ನವಜಾತ ಶಿಶುಗಳು ಸಾವನ್ನಪ್ಪಿದ ದುರ್ಘಟನೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಘಟನೆ ಕುರಿತು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್. ಡಿ. ಕುಮಾರಸ್ವಾಮಿ ಕಿಡಿಕಾರಿದ್ದರು.

ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಮತ್ತು ಎಚ್. ಡಿ. ಕುಮಾರಸ್ವಾಮಿ ಆಗ್ರಹಿಸಿದ್ದರು. ಇದಕ್ಕೆ ಸುಧಾಕರ್ ಆಕ್ರೋಶ ಹೊರಹಾಕಿದ್ದು, ಇಬ್ಬರು ನಾಯಕರ ವಿರುದ್ಧ ಅವರ ಆಡಳಿತದಲ್ಲಿ ನಡೆದ ದುರ್ಘಟನೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಕೆ. ಸುಧಾಕರ್, "ಮಾನ್ಯ ಸಿದ್ದರಾಮಯ್ಯನವರೇ, ಸಾವಿನ ಮನೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಮ್ಮ ಕೀಳು ಮಟ್ಟದ ರಾಜಕಾರಣ ರಾಜ್ಯದ ಜನತೆಗೆ ಹೊಸತೇನಲ್ಲ. 2015ರಲ್ಲಿ ರಾಜ್ಯದಲ್ಲಿ 5,109 ನವಜಾತ ಶಿಶುಗಳು, 519 ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂದು ಅಂಕಿ-ಅಂಶ ಹೇಳುತ್ತದೆ. ಆಗ ನೀವು ನಿಮ್ಮ ಆರೋಗ್ಯ ಸಚಿವರ ರಾಜೇನಾಮೆ ಪಡೆದುಕೊಂಡಿರಾ?" ಎಂದು ಪ್ರಶ್ನಿಸಿದ್ದಾರೆ.

90 ಹಸುಗೂಸುಗಳ ಮರಣದ ನೈತಿಕ ಹೊಣೆ ಹೊತ್ತಿರೆ?

90 ಹಸುಗೂಸುಗಳ ಮರಣದ ನೈತಿಕ ಹೊಣೆ ಹೊತ್ತಿರೆ?

"ತಾವು ಮುಖ್ಯಮಂತ್ರಿಗಳಾಗಿದ್ದಾಗ ತಮ್ಮ ತವರು ಜಿಲ್ಲೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಒಂದೇ ತಿಂಗಳಿನಲ್ಲಿ 6 ಬಾಣಂತಿ ಮಹಿಳೆಯರು ಜೀವ ಕಳೆದುಕೊಂಡಾಗ ಅಥವಾ ಕೋಲಾರದಲ್ಲಿ 90 ಹಸುಗೂಸುಗಳ ಮರಣದ ಪ್ರಕರಣ ಬೆಳಕಿಗೆ ಬಂದಾಗ ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಿರೇನು..?" ಎಂದು ಸಿದ್ದರಾಮಯ್ಯ ವಿರುದ್ಧ ಸುಧಾಕರ್ ಆಕ್ರೋಶ ಹೊರಹಾಕಿದ್ದಾರೆ.

"ತುಮಕೂರು ಜಿಲ್ಲೆಯ ವೈದ್ಯರ ನಿರ್ಲಕ್ಷದಿಂದಾಗಿ ನಡೆದ ಬಾಣಂತಿ ಮತ್ತು ಎರಡು ಹಸುಗೂಸುಗಳ ಸಾವಿಗೆ ಕಾರಣಕರ್ತರಾದ ಆರೋಗ್ಯ ಸಚಿವ ಸುಧಾಕರ್ ಅವರು ತಕ್ಷಣ ರಾಜೀನಾಮೆ ನೀಡಬೇಕು, ಆರೋಪಿ ವೈದ್ಯರನ್ನು ಸೇವೆಯಿಂದ ವಜಾಗೊಳಿಸಿ ಇಡೀ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು" ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು.

2017ರಲ್ಲಿ ವೈದ್ಯರ ಮುಷ್ಕರಕ್ಕೆ ಬಲಿಯಾದವರ ಗತಿಯೇನು?

2017ರಲ್ಲಿ ವೈದ್ಯರ ಮುಷ್ಕರಕ್ಕೆ ಬಲಿಯಾದವರ ಗತಿಯೇನು?

"2017ರಲ್ಲಿ ತಮ್ಮ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಒಣ ಪ್ರತಿಷ್ಠೆಗೋಸ್ಕರ ವೈದ್ಯರನ್ನು 2 ವಾರ ಮುಷ್ಕರಕ್ಕೆ ದೂಡಿ ರಾಜ್ಯಾದ್ಯಂತ ಆಸ್ಪತ್ರೆಗಳು, ಕ್ಲಿನಿಕ್‌ಗಳು ಮುಚ್ಚಿ 65 ಕ್ಕೂ ಹೆಚ್ಚು ಜನ ಚಿಕಿತ್ಸೆ ಸಿಗದೆ ಸತ್ತಾಗ ಆತ್ಮಸಾಕ್ಷಿ ಇಲ್ಲದೆ ಅವರ ಸಾವಿಗೆ ಸಾಕ್ಷಿ ಕೇಳಿದ ತಾವು ಯಾವ ನೈತಿಕತೆ ಇಟ್ಟುಕೊಂಡು ನನ್ನ ರಾಜೀನಾಮೆ ಕೇಳುತ್ತಿದ್ದೀರಿ..?" ಎಂದಿದ್ದಾರೆ.

 2019ರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿ ಬಲಿಯಾದಾಗ ರಾಜಿನಾಮೆ ಕೊಟ್ಟಿರೆ?

2019ರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿ ಬಲಿಯಾದಾಗ ರಾಜಿನಾಮೆ ಕೊಟ್ಟಿರೆ?

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧವೂ ಕಿಡಿ ಕಾರಿರುವ ಸುಧಾಕರ್, "ಕುಮಾರಸ್ವಾಮಿ ಸರ್ಕಾರ ಇದ್ದಾಗ ಸುಲುವಾಡಿ ಗ್ರಾಮದಲ್ಲಿ ವಿಷಪೂರಿತ ಪ್ರಸಾದ ಸ್ವೀಕರಿಸಿ 15 ಮಂದಿ ಮೃತಪಟ್ಟಾಗ ಅವರ ಆರೋಗ್ಯ ಸಚಿವರಿಗೆ 2 ದಿನವಾದರೂ ಅದರ ಮಾಹಿತಿಯೇ ಇರಲಿಲ್ಲ" ಎಂದಿದ್ದಾರೆ.

ಮುಂದುವರಿದು, "ಮೇ 2019ರಲ್ಲಿ ಕೆಜಿಎಫ್ ನಲ್ಲಿ ಸಮೀನಾ ಎಂಬ ಗರ್ಭಿಣಿ ಮಹಿಳೆ ವೈದ್ಯರ ನಿರ್ಲಕ್ಷ್ಯದಿಂದ ತನ್ನ ಮಗುವನ್ನು ಕಳೆದುಕೊಂಡಾಗ ರಾಜೀನಾಮೆ ಕೊಟ್ಟರೆ..?" ಎಂದು ಪ್ರಶ್ನೆ ಮಾಡಿದ್ದಾರೆ.

"ಈ ಸರಕಾರಿ ಕೊಲೆಗಳಿಗೆ ಆರೋಗ್ಯ ಸಚಿವರು ನೈತಿಕ ಹೊಣೆ ಹೊರಲೇಬೇಕು, ಡಾ.ಕೆ.ಸುಧಾಕರ್ ಅವರು ಕೂಡಲೇ ರಾಜೀನಾಮೆ ನೀಡಲೇಬೇಕು, ಇಲ್ಲವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು. ತಬ್ಬಲಿಯಾದ ಮಗುವಿನ ಜವಾಬ್ದಾರಿಯನ್ನು ಸರಕಾರವೇ ವಹಿಸಿಕೊಳ್ಳಬೇಕು" ಎಂದು ಕುಮಾರಸ್ವಾಮಿ ಈ ಹಿಂದೆ ಆಗ್ರಹಿಸಿದ್ದರು.

ಜನರ ಮುಂದೆ ಮೊಸಳೆ ಕಣ್ಣೀರು ಸುರಿಸುವುದು ನಾಯಕತ್ವವಲ್ಲ!

ಜನರ ಮುಂದೆ ಮೊಸಳೆ ಕಣ್ಣೀರು ಸುರಿಸುವುದು ನಾಯಕತ್ವವಲ್ಲ!

"ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ, ನಗರ ಪ್ರದೇಶಗಳಲ್ಲಿ 'ನಮ್ಮ ಕ್ಲಿನಿಕ್' ಸ್ಥಾಪನೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳ ನಿರ್ಮಾಣ, 4 ನೂತನ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಜಯದೇವ, ಕಿದ್ವಾಯಿ ಆಸ್ಪತ್ರೆಗಳ ಪ್ರಾದೇಶಿಕ ಕೇಂದ್ರಗಳ ಆರಂಭ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಸೇರಿದಂತೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂರು ಹಂತಗಳಲ್ಲಿ ಆಮೂಲಾಗ್ರ ಪರಿವರ್ತನೆ ತರಲು ನಮ್ಮ ಸರ್ಕಾರ ಶ್ರಮಿಸುತ್ತಿದೆ. ಕೊರೊನಾದಂತಹ ಶತಮಾನದ ದೊಡ್ಡ ಸಂಕ್ರಾಮಿಕವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ ಪ್ರತಿಯೊಬ್ಬರಿಗೂ ಲಸಿಕೆ ಒದಗಿಸಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ.

"ಜನರ ಮುಂದೆ ಮೊಸಳೆ ಕಣ್ಣೀರು ಸುರಿಸುವುದು ನಾಯಕತ್ವವಲ್ಲ. ಸಮಸ್ಯೆಗಳನ್ನು ಮೆಟ್ಟಿನಿಂತು ಜನರ ಕಣ್ಣೀರೊರೆಸುವುದು ನಿಜವಾದ ನಾಯಕತ್ವ. ಈ ನಿಟ್ಟಿನಲ್ಲಿ ಮುಂದೆಂದೂ ಈ ರೀತಿಯ ಘಟನೆಗಳು ಮರುಕಳಿಸದಂತೆ ನಮ್ಮ ಸರ್ಕಾರ ಕಾನೂನಿಗೆ ಸೂಕ್ತ ತಿದ್ದುಪಡಿ ಸಹ ತರಲಿದೆ" ಎಂದು ಹೇಳಿದ್ದಾರೆ.

ಇನ್ನು, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವೈದ್ಯೆ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಆದೇಶ ಹೊರಡಿಸಿದ್ದಾರೆ.

ಆಸ್ಪತ್ರೆಗಳಲ್ಲಿ ವೈದ್ಯರು, ವೈದ್ಯಾಧಿಕಾರಿಗಳು ಅಮಾನವೀಯವಾಗಿ ನಡೆದುಕೊಂಡರೆ ಕೇವಲ ಅಮಾನತಲ್ಲ, ಕೆಲಸದಿಂದಲೇ ವಜಾ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆ ವಜಾ ಮಾಡಲು ಕಾನೂನಿನಲ್ಲಿ ಬದಲಾವಣೆ ತರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು. ಮುಂದಿನ ಅಧಿವೇಶನದಲ್ಲೇ ಕಾನೂನು ತಿದ್ದುಪಡಿ ತರಲು ಅಧಿಕಾರಿಗಳೊಂದಿಗೂ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+