ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು: ವೇದಿಕೆ ಮೇಲೆ ಸ್ವಾಮೀಜಿ ಆಗ್ರಹ
ಬೆಳಗಾವಿ, ಸೆಪ್ಟೆಂಬರ್ 17: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಒಂದು ವೇಳೆ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಂದರ್ಭ ಬಂದರೆ ಮುಂದಿನ ಸಿಎಂ ಯಾರು ಎನ್ನುವ ಚರ್ಚೆಗಳು ಜೋರಾಗಿದೆ.
ಈ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಸಚಿವ ಸತೀಶ್ ಜಾರಕಿಹೊಳಿ ಹೆಸರನ್ನು ಮುಂದಿನ ಮುಖ್ಯಮಂತ್ರಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಈ ಬೆಳವಣಿಗೆ ನಡುವೆ ನೂರಾರು ಜನರು ತುಂಬಿದ್ದ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎಂದು ಅಂಕಲಗಿ-ಕುಂದರಗಿ ಸ್ವಾಮೀಜಿ ಹಾರೈಸಿದ್ದಾರೆ.

ಶ್ರೀ ಮನಿಪ್ರ ಅಮರಸಿದ್ದೇಶ್ವರ ಮಹಾಸ್ವಾಮಿಗಳು ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಅಂಕಲಗಿ-ಕುಂದರಗಿ ಸ್ವಾಮೀಜಿಗಳು ಭಾಷಣದ ನಡುವೆ ಸಚಿವ ಸತೀಶ್ಮುಂದೆ ಮುಖ್ಯಮಂತ್ರಿಯಾಗಬೇಕು ಎಂದಿದ್ದಾರೆ.
ಬೆಳಗಾವಿಯಲ್ಲಿ ನಡೆದ ವಿವಿಧೋದ್ದೇಶಗಳ ಸಹಕಾರಿ ಸಂಘ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸ್ವಾಮೀಜಿಗಳು, ಸತೀಶ್ ಜಾರಕಿಹೊಳಿ ಅವರಿಗೆ ಸರಳತೆ, ಸೌಜನ್ಯತೆ ಇದೆ. ಏನೇ ಸಮಸ್ಯೆ ಇದ್ದರೂ ಸ್ಪಂದಿಸುವ ಗುಣ ಇದೆ. ನಾನು ಸಣ್ಣ ಹುಡಗ ಇದ್ದಾಗಿನಿಂದ ಸತೀಶ್ ಅವರನ್ನು ನೋಡಿದ್ದೇನೆ. ಲೋಕೋಪಯೋಗಿ ಸಚಿವರಾಗಿಯೇ ಇಷ್ಟು ಕೆಲಸ ಮಾಡಿದ್ದಾರೆ. ಇನ್ನು ರಾಜ್ಯದ ಚುಕ್ಕಾಣಿ ಕೊಟ್ಟರೆ ಎಷ್ಟು ಕೆಲಸ ಮಾಡಬಹುದು ಎಂದು ಊಹಿಸಲಾಗದು ಎಂದು ಸ್ವಾಮೀಜಿ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಒಮ್ಮೆಯಾದರೂ ರಾಜ್ಯದ ಚುಕ್ಕಾಣಿ ಹಿಡಿಯಬೇಕು. ಇನ್ನಷ್ಟು ಉನ್ನತ ಹುದ್ದೆಯಲ್ಲಿ ಇದ್ದರೆ ಇನ್ನಷ್ಟು ಕೆಲಸ ಮಾಡಲು ಅನುಕೂಲ ಆಗುತ್ತದೆ. ಶಾಸಕರಾದ ನಂತರ ಜಿಲ್ಲೆಯಲ್ಲಿ ಅನೇಕ ಒಳ್ಳೆಯ ಕೆಲಸ ಮಾಡಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ನೀವು ಮುಂದಿನ ದಿನದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗಬೇಕು. ಬೆಳಗಾವಿ ಜಿಲ್ಲೆಯ ಒಬ್ಬರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಸತೀಶ್ ಜಾರಕಿಹೊಳಿ ಅವರಿಗೆ ಅಡವಿಸಿದ್ದೇಶ್ವರ ಸಂಸ್ಥಾನ ಮಠ ಅಂಕಲಗಿ-ಕುಂದರಗಿ ಸ್ವಾಮೀಜಿ ಮನವಿ ಮಾಡಿದ್ದಾರೆ.
ವೇದಿಕೆಯಲ್ಲಿ ಮಾತು ಮುಂದುವರಿಸಿದ ಸ್ವಾಮೀಜಿ ಬೆಳಗಾವಿ ಜಿಲ್ಲೆಯಲ್ಲಿ ಒಬ್ಬರು ಮುಖ್ಯಮಂತ್ರಿ ಇದ್ದಾರೆ ಅಂತಾ ಹೇಳಿಕೊಳ್ಳುವುದಕ್ಕಾದರೂ ನೀವು ಮುಂಖ್ಯಮಂತ್ರಿಯಾಗಬೇಕು. ಕರ್ನಾಟಕದ ಮುಂಬರುವ ದಿನಗಳಲ್ಲಿ ಪ್ರಧಾನ ಸ್ಥಾನವಾಗಿರುವ ಮುಖ್ಯಮಂತ್ರಿ ಆಗಲಿ ಎಂದು ಸ್ವಾಮೀಜಿ ಶುಭ ಹಾರೈಸಿದ್ದಾರೆ.












Click it and Unblock the Notifications