ಜಿಮ್ ಗಾಗಿ ದೇಶಪಾಂಡೆ ಅವರ ಖಾತೆ ಬದಲಾವಣೆ
ಬೆಂಗಳೂರು, ಆಗಸ್ಟ್ 02: ಮುಖ್ಯಂತ್ರಿ ಸಿದ್ದರಾಮಯ್ಯ ಅವರು ಸಂಪುಟದ ಹಿರಿಯ ಸಚಿವ ಆರ್ ವಿ ದೇಶಪಾಂಡೆ ಅವರ ಖಾತೆ ಬದಲಾವಣೆ ಮಾಡಿ ಶನಿವಾರ ಆದೇಶ ಹೊರಡಿಸಿದ್ದಾರೆ. ದೇಶಪಾಂಡೆ ಅವರಿಗೆ ಮತ್ತೆ ತಮ್ಮ ಇಷ್ಟದ ಖಾತೆಯೇ ಸಿಕ್ಕಲು ಮುಖ್ಯ ಕಾರಣ ಮುಂಬರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಎಂಬುದು ಎಲ್ಲರಿಗೂ ಈಗ ಮನವರಿಕೆಯಾಗಿದೆ.
ಸಿದ್ದರಾಮಯ್ಯಾ ಅವರ ಬಳಿ ಇದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಯನ್ನು ಉನ್ನತ ಶಿಕ್ಷಣ ಸಚಿವ ದೇಶಪಾಂಡೆ ಅವರಿಗೆ ಬಿಟ್ಟುಕೊಡಲಾಗಿದೆ.[ಫಾರೀನ್ ನಲ್ಲಿ ಕರ್ನಾಟಕದ ರೋಡ್ ಶೋ]

ಪ್ರವಾಸೋದ್ಯಮ ಖಾತೆಯನ್ನು ಹೊಂದಿದ್ದ ಸಚಿವ ದೇಶಪಾಂಡೆ ಅವರಿಗೆ ಕೈಗಾರಿಕಾ ಖಾತೆ ಹೆಚ್ಚುವರಿ ಖಾತೆಯಾಗಲಿದೆ. ಉನ್ನತ ಶಿಕ್ಷಣ ಖಾತೆಯನ್ನು ಸಿದ್ದರಾಮಯ್ಯ ಅವರು ವಿನಿಮಯ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಿದ್ಧತೆಗಳಿಗೆ ಪೂರಕವಾಗಿ ಈ ಬೆಳವಣಿಗೆ ಕಂಡು ಬಂದಿದೆ. ಇತ್ತೀಚೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ದೇಶ ವಿದೇಶಗಳಲ್ಲಿ ರೋಡ್ ಶೋ ನಡೆಸುವ ಬಗ್ಗೆ ನಿರ್ಧರಿಸಲಾಗಿತ್ತು.
ಕೈಗಾರಿಕೆಯಂಥ ಮಹತ್ವದ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದ ಸಿಎಂ ಅವರಿಗೆ ಈ ಖಾತೆಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕೈಗಾರಿಕೆ ಖಾತೆಗೆ ಪ್ರತ್ಯೆಕ ಸಚಿವರು ಬೇಕು ಎಂಬ ಅಭಿಪ್ರಾಯ ಮೊದಲಿನಿಂದಲೂ ಇತ್ತು. ಜತೆಗೆ, ಸಚಿವ ದೇಶಪಾಂಡೆ ಅವರೂ ಉನ್ನತ ಶಿಕ್ಷಣ ಖಾತೆ ಬದಲು ಬೃಹತ್ ಕೈಗಾರಿಕೆ ಖಾತೆಯನ್ನು ಬಯಸಿದ್ದರು ಎಂದೂ ಹೇಳಲಾಗಿತ್ತು.
ನವೆಂಬರ್ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಿದ್ಧತೆಗಳಿಗೆ ವೇಗ ನೀಡುವ ಉದ್ದೇಶದಿಂದ ಈಗ ಖಾತೆ ಬದಲಾವಣೆಗೆ ಸಿಎಂ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications