ಸದನದಲ್ಲಿ ಸಾವರ್ಕರ್ ಪೋಟೋ ಇರಬಾರದು ಎಂದ ಸಚಿವ
ಬೆಳಗಾವಿ, ಡಿಸೆಂಬರ್ 7: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಾವರ್ಕರ್ ಪ್ರತಿಮೆ ಅಳವಡಿಸಿರುವುದಕ್ಕೆ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾತನಾಡಿರುವ ಅವರು, ದ್ವೇಷವನ್ನು ಹುಟ್ಟುಹಾಕುವ ಮತ್ತು ವಿಭಜನೆಯನ್ನು ಸೃಷ್ಟಿಸುವ ಯಾವುದೇ ಸಿದ್ಧಾಂತವು ವಿಧಾನಸಭೆಯಲ್ಲಿ ಇರಬಾರದು, ಬಿಜೆಪಿಯು ಅದನ್ನು ಸಮಸ್ಯಾತ್ಮಕವೆಂದು ಕಂಡುಕೊಂಡರೆ, ಅದು ಅವರ ವಿಷಯ ಎಂದು ಖರ್ಗೆ ಸುದ್ದಿಗಾರರಿಗೆ ತಿಳಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸಾವರ್ಕರ್ ಅವರ ಭಾವಚಿತ್ರವನ್ನು ಸುವರ್ಣ ವಿಧಾನ ಸೌಧದಲ್ಲಿ ಹಲವಾರು ರಾಷ್ಟ್ರೀಯ ನಾಯಕರೊಂದಿಗೆ ಅಸೆಂಬ್ಲಿ ಚೇಂಬರ್‌ನಲ್ಲಿ ಅನಾವರಣಗೊಳಿಸಲಾಗಿತ್ತು. ಆಗ ಕಾಂಗ್ರೆಸ್ ಪಕ್ಷ ಈ ಕ್ರಮವನ್ನು ಟೀಕಿಸಿತ್ತು.
ಈಗ ಸಾವರ್ಕರ್ ಭಾವಚಿತ್ರ ಸಂಬಂಧ ಸಭಾಧ್ಯಕ್ಷರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೇ ವಿಧಾನಸಭೆಯ ಸಭಾಂಗಣದಿಂದ ಭಾವಚಿತ್ರ ತೆಗೆಯಲಾಗುವುದು ಎಂಬ ಊಹಾಪೋಹಗಳು ದಟ್ಟವಾಗಿವೆ.
ಸಾವರ್ಕರ್ ಅವರ ಭಾವಚಿತ್ರವನ್ನು ತೆಗೆದುಹಾಕಲಾಗುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸದನದಲ್ಲಿ ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಬಿ ಆರ್ ಅಂಬೇಡ್ಕರ್, ಬಸವೇಶ್ವರ, ಮಹಾತ್ಮಾ ಗಾಂಧಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೊಂದಿಗೆ ಸಾವರ್ಕರ್ ಅವರ ಭಾವಚಿತ್ರವನ್ನು ಕಳೆದ ವರ್ಷ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಮೊದಲು ಅನಾವರಣಗೊಳಿಸಲಾಗಿತ್ತು. ಈ ನಿರ್ಧಾರವನ್ನು ಸ್ಪೀಕರ್ ಮುಂದೆ ಬಿಡಲಾಗಿದೆ ಎಂದು ಹೇಳಿದರು.
ಅನಾವರಣ ಸಮಾರಂಭದ ಸಂದರ್ಭದಲ್ಲಿ ಸುವರ್ಣ ವಿಧಾನ ಸೌಧದ ಹೊರಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್, ಅಂದಿನ ಬಿಜೆಪಿ ಸರ್ಕಾರ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿತ್ತು. ರಾಷ್ಟ್ರೀಯ ನಾಯಕರು ಹಾಗೂ ಸಮಾಜ ಸುಧಾರಕರ ಭಾವಚಿತ್ರ ಅಳವಡಿಸುವಂತೆ ಒತ್ತಾಯಿಸಿ ಈ ಪ್ರತಿಭಟನೆ ನಡೆಸಲಾಗಿದ್ದು, ಯಾವುದೇ ಒಂದು ಭಾವಚಿತ್ರದ ವಿರುದ್ಧ ತಾವು ಪ್ರತಿಭಟನೆ ನಡೆಸುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.
ವಿಧಾನಸಭೆಯ ಸಭಾಂಗಣದಲ್ಲಿ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಭಾವಚಿತ್ರವನ್ನು ಸ್ಥಾಪಿಸುವ ಪ್ರಸ್ತಾಪದ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಸ್ಪೀಕರ್ ಯು ಟಿ ಖಾದರ್ ಭಾನುವಾರ ಬಹಿರಂಗಪಡಿಸಿದ್ದು, ಸಾವರ್ಕರ್ ಅವರ ಭಾವಚಿತ್ರ ತೆಗೆಯಲಾಗುತ್ತದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ.












Click it and Unblock the Notifications