E-Swathu: ಇ-ಸ್ವತ್ತು ಕುರಿತು ಅಧಿಕಾರಿಗಳ ಜೊತೆ ಸಭೆ: ಪ್ರಿಯಾಂಕ್ ಖರ್ಗೆ ಕೊಟ್ಟ ಸೂಚನೆ ಏನು?
ಬೆಂಗಳೂರು: ಇ-ಸ್ವತ್ತು ಸೌಲಭ್ಯವನ್ನು ಜಾರಿಗೊಳಿಸುವಲ್ಲಿ ಎದುರಾಗಿರುವ ಸಮಸ್ಯೆಗಳನ್ನು ನಿವಾರಿಸಲು ಜಿಲ್ಲಾ ಮಟ್ಟದಲ್ಲಿ ತೆಗೆದುಕೊಳ್ಳಲಾಗಿರುವ ಕ್ರಮಗಳ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದ ಗ್ರಾಮ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವಿಡಿಯೊ ಸಭೆಯಲ್ಲಿ ಚರ್ಚಿಸಿದರು.
ಗ್ರಾಮೀಣ ಜನರು ಈ ಯೋಜನೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದ್ದು, ಸಾರ್ವಜನಿಕರಿಂದ ಬರುವ ದೂರುಗಳ ಬಗ್ಗೆ ವಿಶೇಷ ಆಸಕ್ತಿವಹಿಸಿ ಬಗೆಹರಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಇ-ಸ್ವತ್ತು ತಂತ್ರಾಂಶದಲ್ಲಿನ ಕೆಲವು ಲೋಪಗಳ ಬಗ್ಗೆ ಕೆಲವು ಸಿಇಒಗಳು ಮಾಹಿತಿ ನೀಡಿದರು. ಶೀಘ್ರದಲ್ಲೇ ಈ ಸಮಸ್ಯೆಗಳನ್ನು ಪರಿಹರಿಸಲಾಗುವುದೆಂದು ಸಚಿವರು ತಿಳಿಸಿದರು. ತಂತ್ರಾಂಶವನ್ನು ಎನ್.ಐ.ಸಿ ಸಿದ್ಧಪಡಿಸಿದ್ದು ಲೋಪಗಳನ್ನು ಸರಿಪಡಿಸಲು ವಿಳಂಬಗೊಂಡಿತೆಂಬ ವಿಷಯ ಪ್ರಸ್ತಾಪವಾಯಿತು.

ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಕಾಲ್ ಸೆಂಟರ್ ಸಂಖ್ಯೆಗಳನ್ನು ಪ್ರದರ್ಶಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರಲ್ಲದೆ, ಇ-ಸ್ವತ್ತು ಬಗ್ಗೆ ಬರುವ ಯಾವುದೇ ದೂರುಗಳನ್ನು ಆದ್ಯತೆಯ ಮೇಲೆ ಪರಿಹರಿಸಿ ಅರ್ಜಿದಾರರಿಗೆ ಮಾಹಿತಿ ನೀಡಬೇಕೆಂದು ನಿರ್ದೇಶಿಸಿದರು.
3 ಬಹುಗ್ರಾಮ ನೀರು ಪೂರೈಕೆ ಯೋಜನೆಗಳಿಗೆ ಒಪ್ಪಿಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ನೀರು ಸರಬರಾಜು ವಿಭಾಗದ ಮೂಲಕ ಚಾಮರಾಜನಗರ ತಾಲ್ಲೂಕಿನ 166 ಗ್ರಾಮಗಳು ಮತ್ತು ಗುಂಡ್ಲುಪೇಟೆ ತಾಲ್ಲೂಕಿನ 163 ಗ್ರಾಮಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ 95 ಗ್ರಾಮಗಳಲ್ಲಿ ಬಹುಗ್ರಾಮ ನೀರು ಸರಬರಾಜು ಯೋಜನೆಯಡಿ ಮನೆ ಮನೆಗೆ ನೀರು ಪೂರೈಸುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಚಾಮರಾಜನಗರ ತಾಲ್ಲೂಕಿನ 166 ತಾಲ್ಲೂಕುಗಳ ಯೋಜನೆಗೆ 33.04 ಕೋಟಿ ರೂ., ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ 131 ಗ್ರಾಮಗಳು ಹಾಗೂ ಮತ್ತು ಮಾರ್ಗ ಮಧ್ಯದ 32 ಗ್ರಾಮಗಳ ಯೋಜನೆಗೆ 27.38 ಕೋಟಿ ರೂ., ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಸರವಾಡಿ ಹಾಗೂ ಇತರ 95 ಗ್ರಾಮಗಳ ಯೋಜನೆಗೆ 16.70 ಕೋಟಿ ರೂ ವೆಚ್ಚದಲ್ಲಿ ಬಹುಗ್ರಾಮ ನೀರು ಸರಬರಾಜು ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.












Click it and Unblock the Notifications