ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ!?; ಡಿ ಕೆ ಶಿವಕುಮಾರ್ ಹೇಳಿದ್ದೇನು.?
ಚುನಾವಣ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಇಬ್ಬರು ಬಿಜೆಪಿಯ ಸಚಿವರು ಕಾಂಗ್ರೆಸ್ ಸೇರ್ಪಡೆಯ ಚರ್ಚೆ ಜೋರಾಗಿದೆ.
ಬೆಂಗಳೂರು,ಮಾರ್ಚ್ 07: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವದ ಸುದ್ದಿ ಜೋರಾಗಿದೆ. ಈಗಾಗಲೇ ಸಾಕಷ್ಟು ಜನ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಹೇಳಿಕೆಯನ್ನ ನೀಡುತ್ತಿದ್ದು, ಬಸವರಾಜ ಬೊಮ್ಮಾಯಿ ಅವರ ಸಂಪುಟದ ಸದಸ್ಯರೇ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಚರ್ಚೆ ಹೆಚ್ಚಾಗಿದೆ.
ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಸಚಿವ ನಾರಾಯಣ ಗೌಡರು ಕಾಂಗ್ರೆಸ್ ಸೇರ್ಪಡೆ ಕುರಿತು ನಮ್ಮ ಜೊತೆಗೆ ಮಾತನಾಡಿಲ್ಲ. ಯಾರು ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಿದೆ. ನಮ್ಮ ಪಕ್ಷದಲ್ಲಿನ ಗೊಂದಲವನ್ನ ಸರಿಪಡಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಚಿವ ಸೋಮಣ್ಣ ಕಾಂಗ್ರೆಸ್ ಪಕ್ಷ ಸೇರುವ ಕುರಿತು ಮಾತನಾಡಿ, ಸೋಮಣ್ಣ ಅವರು ನಮ್ಮ ಜತೆ ಈ ವಿಚಾರವಾಗಿ ಮಾತನಾಡಿಲ್ಲ. ಕನಕಪುರದಲ್ಲಿ ವಸತಿ ಸಚಿವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಇತ್ತ ಕಾಂಗ್ರೆಸ್ ಸಂಪರ್ಕದಲ್ಲಿ ಸಚಿವ ನಾರಾಯಣ ಗೌಡರಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಕುರಿತು ಸಚಿವ ಬಿ,ಸಿ ಪಾಟೀಲ್ ಸಹ ಈ ಕುರಿತು ಸುಳಿವು ಬಿಟ್ಟುಕೊಟ್ಟಿದ್ದಾರೆ. ಸಚಿವ ನಾರಾಯಣಗೌಡ ಹೋಗಬಹುದು, ಅದು ಅವರ ವಯಕ್ತಿಕ ವಿಚಾರ ಎಂದು ಹೇಳಿದ್ದಾರೆ. ಇನ್ನೂ ಈ ತಿಂಗಳ ಕೊನೆಯಲ್ಲಿ ಸಚಿವ ನಾರಾಯಣ ಗೌಡರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

ಆದರೆ ಕೆ.ಆರ್ ಪೇಟೆಯಲ್ಲಿ ಸಚಿವ ನಾರಾಯಣ ಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಸಾಕಷ್ಟು ವಿರೋಧಗಳು ಕೇಳಿಬಂದಿವೆ. ಸೋಮವಾರ ಕಾಂಗ್ರೆಸ್ ಸ್ಥಳೀಯ ನಾಯಕರ ಸಭೆಯಲ್ಲಿ ಈ ಕುರಿತು ಅಪಸ್ವರಗಳು ಕೇಳಿಬಂದಿವೆ.
ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕರಾದ ಕೆ.ಬಿ ಚಂದ್ರಶೇಖರ್, ಬಿ.ಪ್ರಕಾಶ್, ಭಾರತ್ ಜೋಡೋ ಉತ್ಸುವಾರಿ ವಿಜಯರಾಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕಿಕ್ಕೇರಿ ಸುರೇಶ್, ಬಿ.ನಾಗೇಂದ್ರ ಕುಮಾರ್ ಮತ್ತು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ದಿ ಮತ್ತು ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ ಸೇರಿದಂತೆ ನೂರಾರು ಕಾರ್ಯಕರ್ತರು ಸೇರಿದ್ದ ಸಭೆಯಲ್ಲಿ ನಾರಾಯಣ ಗೌಡ ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತು ಸಾಕಷ್ಟು ಚರ್ಚೆಯಾಗಿದೆ.
ಸಭೆಯ ಸಚಿವ ಕೆ.ಸಿ.ನಾರಾಯಣಗೌಡರ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಟಿಕೆಟ್ ಆಕಾಂಕ್ಷಿತರಾಗಿ ಅರ್ಜಿ ಸಲ್ಲಿಸಿರುವ ಆರು ಜನರಲ್ಲಿ ಯಾರದರೂ ಒಬ್ಬರಿಗೆ ಇಲ್ಲಿಯೇ ಟಿಕೆಟ್ ಘೋಷಿಸುವಂತೆ ಪಟ್ಟು ಹಿಡಿದು ಗಲಭೆ ಎಬ್ಬಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸಚಿವ ಕೆ.ಸಿ.ನಾರಾಯಣಗೌಡರ ಕೊಡುಗೆಯೇನು? ಟಿಕೆಟ್ ಆಕಾಂಕ್ಷಿತರಾಗಿ ಅರ್ಜಿ ಸಲ್ಲಿಸಿರುವ ಆರು ಜನರಿಗೆ ಟಿಕೆಟ್ ನಿರಾಕರಿಸಲು ಕಾರಣವೇನು? ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ನಮ್ಮ ಶಾಸಕರಿಲ್ಲದಿದ್ದರೂ ನಾವೆಲ್ಲ ಗಟ್ಟಿಯಾಗಿ ಕಾಂಗ್ರೆಸ್ ಪಕ್ಷದಲ್ಲಿ ಉಳಿದಿದ್ದೇವೆ ಎಂದು ಆರಂಭದಲ್ಲಿ ನಾರಾಯಣ ಗೌಡ ಕಾಂಗ್ರೆಸ್ ಸೇರ್ಪಡೆಗೆ ವಿರೋಧಗಳು ಕೇಳಿ ಬಂದಿವೆ.
ಕೆ.ಆರ್ ಪೇಟೆಯ ಸ್ಥಳೀಯ ಕಾಂಗ್ರೆಸ್ ನಲ್ಲಿ ಈಗಾಗಲೇ ನಾರಾಯಣ ಗೌಡ ಪಕ್ಷಕ್ಕೆ ಸೇರ್ಪಡೆ ವಿಚಾರವಾಗಿ ಸಾಕಷ್ಟು ಅಸಮಾಧಾನ ಭುಗಿಲೆದಿದ್ದು, ಈ ಎಲ್ಲಾ ಅಸಮಾಧಾನವನ್ನ ಕಾಂಗ್ರೆಸ್ ಯಾವ ರೀತಿಯಲ್ಲಿ ಶಮನಗೊಳಿಸಿ ನಾರಾಯಣ ಗೌಡ ಅವರನ್ನ ಪಕ್ಷಕ್ಕೆ ಬರಮಾಡಿಕೊಳ್ಳುತ್ತಾರೆ ಎಂದು ಕಾದುನೋಡ್ಬೇಕಾಗಿದೆ.












Click it and Unblock the Notifications