ಮರಾಠಿ ಕಾರ್ಯಕ್ರಮದಲ್ಲಿ ಮಿಂಚಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ?
ಕರ್ನಾಟಕದ ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಮರಾಠಿಯಲ್ಲಿ ಮಾತನಾಡಿಲ್ಲ ಅಂತ ಹಲ್ಲೆ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಈ ರೀತಿಯ ಬೆಳವಣಿಗೆ ನಡೆಯುವುದಕ್ಕೆ ಬೆಳಗಾವಿಯಲ್ಲಿ ಹೊಂದಾಣಿಕೆ ರಾಜಕೀಯವೇ ಕಾರಣ. ಕರ್ನಾಟಕದಲ್ಲಿ ಹೊಂದಾಣಿಕೆಯ ರಾಜಕೀಯ ಮುಂದುವರಿದಿದೆ. ಅದರಲ್ಲೂ ಬೆಳಗಾವಿಯಲ್ಲಿನ ಶಾಸಕರು ಈ ಬಗ್ಗೆ ಧ್ವನಿಯೇ ಎತ್ತುತ್ತಿಲ್ಲ ಎನ್ನುವ ಆರೋಪಗಳು ಇವೆ. ಆದರೆ ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮರಾಠಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಇಲ್ಲಿ ನಡೆದಿರುವ ಬೆಳವಣಿಗೆಯ ಬಗ್ಗೆಯೂ ಕನ್ನಡಿಗರು ಅಸಮಾಧಾನಿತರಾಗಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.
ಬೆಳಗಾವಿಯಲ್ಲಿ ಮರಾಠಿ ಪುಂಡರು ಮತ್ತೆ ಬಾಲ ಬಿಚ್ಚಿದ್ದಾರೆ. ಮರಾಠಿ ಹಾಗೂ ಕನ್ನಡ ಭಾಷೆ ವಿವಾದ ಹಾಗೂ ಗಡಿ ವಿವಾದ ಇಲ್ಲಿ ದಶಕಗಳಿಂದ ಇದೆ. ಆದರೆ, ಇಲ್ಲಿ ರಾಜಕಾರಣಿಗಳು ಮತಕ್ಕಾಗಿ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದ್ದಾರೆ ಎನ್ನುವ ಆರೋಪವು ಸಾರ್ವಜನಿಕರಿಂದ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬೆಳಗಾವಿ ಕನ್ನಡಿಗರು ಎನ್ನುವ ಖಾತೆಯಿಂದ, ಯಾವ ಊರಲ್ಲಿ ಕನ್ನಡ ಕಂಡಕ್ಟರ್ ಮೇಲೆ ಹಲ್ಲೆ ಆಯ್ತೋ ಅದೇ ಊರಲ್ಲಿ ನಿನ್ನೆ ಮರಾಠಿ ಕಾರ್ಯಕ್ರಮದಲ್ಲಿ ರಾಜಾರೋಷವಾಗಿ ಪಾಲ್ಗೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್. ಈ ಕಾರ್ಯಕ್ರಮ ಅಂತು ಸಂಪೂರ್ಣ ಮರಾಠಿಮಯವಾಗಿತ್ತು. ಎಲ್ಲಾ ಕನ್ನಡಿಗರು ಇಂದೇ ನಿರ್ಧಾರ ಮಾಡಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಎಂದಿಗೂ ಮತ ಹಾಕುವುದಿಲ್ಲ ಎಂದು ಪೋಸ್ಟ್ ಮಾಡಲಾಗಿದೆ.
ಹಲ್ಲೆಯ ಬಗ್ಗೆ ಮಾತನಾಡಲಿಲ್ಲ ?
ಇನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೇರಿದಂತೆ ಹಲವು ಬೆಳಗಾವಿಯ ಹಲವು ರಾಜಕಾರಣಿಗಳು ಈ ವಿಚಾರದ ಬಗ್ಗೆ ಮಾತನಾಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಯಾವೆಲ್ಲ ರಾಜಕಾರಣಿಗಳು ಏನು ಮಾತನಾಡಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರು ಮಾತ್ರ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಉಳಿದಂತೆ ಯಾವುದೇ ರಾಜಕಾರಣಿಗಳು ಸಹ ತುಟಿಕ್ ಪಿಟಿಕ್ ಎಂದಿಲ್ಲ ಎಂದು ದೂರಿದ್ದಾರೆ.
ಬೆಳಗಾವಿ ಪರಿಸ್ಥಿತಿಗೆ ಕನ್ನಡಿಗರ ಬೇಸರ: ಇನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯುವ ಯಾವುದೇ ಗಲಭೆ ಅಥವಾ ಗಲಾಟೆಗಳು ಕನ್ನಡಿಗರಿಂದ ಪ್ರಾರಂಭವಾದ ಉದಾಹರಣೆಗಳೇ ಇಲ್ಲ. ಇಲ್ಲಿ ಕನ್ನಡಿಗರ ಮೇಲೆ ವಿನಾಕಾರಣ ಹಲ್ಲೆಗಳು ನಡೆಯುತ್ತಿದ್ದರೂ ಇಲ್ಲಿನ ರಾಜಕಾರಣಿಗಳು ಧ್ವನಿ ಎತ್ತುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಕನ್ನಡಿಗರು ಈ ರಾಜಕಾರಣಿಗಳಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ವಿಚಾರವಾಗಿ ಏನು ಮಾತನಾಡದೆ ಇರುವುದು ಸಹ ಚರ್ಚೆಗೆ ಕಾರಣವಾಗಿದೆ.












Click it and Unblock the Notifications