
ರೌಡಿಗಳನ್ನು ಸೇರಿಸಿಕೊಳ್ಳುವ ದೌರ್ಭಾಗ್ಯ ನಮ್ಮ ಪಕ್ಷಕ್ಕೆ ಬಂದಿಲ್ಲ: ಸುಧಾಕರ್
ಬೆಂಗಳೂರು, ಡಿಸೆಂಬರ್ 5 : ರೌಡಿಸಂ ಹುಟ್ಟು ಹಾಕಿದವರೇ ಕಾಂಗ್ರೆಸ್ ನವ್ರು ಎಂದು ಸಚಿವ ಡಾ.ಕೆ ಸುಧಾಕರ್ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ಈ ಕುರಿತು ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ರೌಡಿರಾಜಕಾರಣಕ್ಕೆ ಕಾಂಗ್ರೆಸ್ ತೀವ್ರ ಟೀಕೆ, ಪೋಸ್ಟರ್ ವಾರ್ ವಿಚಾರವಾಗಿ, ಕಾಂಗ್ರೆಸ್ ನಾಯಕರ ಇತಿಹಾಸ ಒಮ್ಮೆ ನೋಡಿ. ಯಾರ್ಯಾರ ಹಿನ್ನೆಲೆ ಏನಿದೆ ಅಂತ ಗೊತ್ತಾಗುತ್ತೆ. ಕಾಂಗ್ರೆಸ್ ನವರು ಮಾತಾಡೋದನ್ನು ಕೇಳಿದ್ರೆ ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಿದಂತೆ ಇದೆ. ಅವರು ಕಡಿಮೆ ಮಾತಾಡಿದಷ್ಟೂ ಅವರಿಗೇ ಒಳ್ಳೇದು, ಇಲ್ಲದಿದ್ರೆ ಅವರ ಇತಿಹಾಸ ಅವರೇ ಹೇಳಿಕೊಂಡಂತಾಗುತ್ತೆ ಎಂದು ಕಿಡಿಕಾರದರು.
ಇನ್ನೂ ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ರೌಡಿ ಶೀಟರ್, ರೌಡಿಗಳನ್ನ ಸೇರಿಸಿಕೊಳ್ಳುವ ಸಂಪ್ರದಾಯ ಇಲ್ಲ. ನಮ್ಮ ಪಕ್ಷಕ್ಕೆ ಇತಿಹಾಸ, ಶಿಸ್ತು, ಆದರ್ಶ ಇದೆ, ಇದೇ ಮಾರ್ಗದಲ್ಲಿ ನಾವು ನಡೆಯುತ್ತೇವೆ. ರೌಡಿಗಳನ್ನು ಸೇರಿಸಿಕೊಳ್ಳುವ ದೌರ್ಭಾಗ್ಯ ನಮ್ಮ ಪಕ್ಷಕ್ಕೆ ಬಂದಿಲ್ಲ ಎಂದರು.
ಕರ್ನಾಟಕದಲ್ಲೂ ಗುಜರಾತ್ ಮಾಡೆಲ್ ಅಳವಡಿಕೆ ಬಗ್ಗೆ ಚರ್ಚೆ ವಿಚಾರವಾಗಿ ಮಾತನಾಡಿ, ಮೂರೂ ಪಕ್ಷಗಳೂ ಅವರವರ ಸರ್ವೆ ಮಾಡಿಸಿದ್ದಾರೆ. ನಮ್ಮ ಪಕ್ಷದ ಸರ್ವೆ ಪ್ರಕಾರ ಸ್ಪಷ್ಟ ಬಹುಮತದೊಂದಿಗೆ ಗೆಲ್ತೇವೆ. ರಾಜಕಾರಣ ಒಂದು ರಾಜ್ಯದಲ್ಲಿರುವ ಹಾಗೆ ಇನ್ನೊಂದು ರಾಜ್ಯದಲ್ಲಿ ಇರಲ್ಲ, ಹಾಗಾಗಿ ಒಂದೊಂದು ರಾಜ್ಯಕ್ಕೆ ಒಂದೊಂದು ಸ್ಟ್ರಾಟೆಜಿ ಇರುತ್ತೆ. ಇದನ್ನೆಲ್ಲ ಬಹಿರಂಗವಾಗಿ ಹೇಳಿ ಮಾಡಲ್ಲ. ನಮ್ಮಲ್ಲಿ ಕೋರ್ ಕಮಿಟಿ ಇದೆ, ರಾಜಕೀಯ ತಂತ್ರಗಾರಿಕೆಯನ್ನು ಮಾಡೋರು ಬಹಳ ಜನ ಹಿರಿಯರು ನಮ್ಮಲ್ಲಿ ಇದಾರೆ. ಜಾತಿ ಪ್ರಭಾವ, ಭೌಗೋಳಿಕತೆ, ಈಗಿನ ಸ್ಥಿತಿಗತಿ ಅವಲೋಕಿಸಿ ತಂತ್ರಗಳನ್ನು ಮಾಡ್ತಾರೆ. ಎಲ್ಲವನ್ನೂ ಅವಲೋಕಿಸಿ ಯಾವ ತಂತ್ರಗಳನ್ನು ಮಾಡಬೇಕು ಅಂತ ಹಿರಿಯರು ನಿರ್ಧರಿಸುತ್ತಾರೆ.
ನಮ್ಮವರು ಸರಿಯಾದ ತಂತ್ರಗಳನ್ನು ಮಾಡಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರ್ತಾರೆ, ಎಲ್ಲರಿಗೂ ಟಿಕೆಟ್ ಸಿಗುತ್ತಾ ಇಲ್ವಾ ಅನ್ನೋದು ಹೈಕಮಾಂಡ್ ಗೆ ಬಿಟ್ಟ ವಿಚಾರವಾಗಿದೆ. ಸುಭಿಕ್ಷ ಕಾಲದಲ್ಲಿ ಆಡಳಿತ ಮಾಡೋದು ಬೇರೆ, ಕೋವಿಡ್ ಕಾಲ, ಅತಿವೃಷ್ಟಿ ಸಂದರ್ಭದಲ್ಲಿ ಆಡಳಿತ ಮಾಡೋದು ಬೇರೆ, ಕೋವಿಡ್, ನೈಸರ್ಗಿಕ ವಿಪತ್ತುಗಳ ನಡುವೆ ಉತ್ತಮ ಆಡಳಿತ ನೀಡಿದ್ದೇವೆ. ಜನ ಬಿಜೆಪಿಗೆ ಮತ ಹಾಕಿ ಗೆಲ್ಲಿಸ್ತಾರೆ ಅನ್ನೋ ವಿಶ್ವಾಸ ಇದೆ ಎಂದರು.

ಮಧುಗಿರಿಯಲ್ಲಿ ಸಂಪಲ್ಲಿ ಬಿದ್ದು ಬಾಲಕನ ಸಾವು ಪ್ರಕರಣವಾಗಿ ಮಾತನಾಡಿ, ಮೊದಲು ಏನಾಗಿದೆ ಅಂತ ತಿಳಿದುಕೊಳ್ಳಬೇಕು. ಕೊರಟಗೆರೆಯಲ್ಲಿ ಆ ಮಗು ಬೆಳಗ್ಗೆ 4.15ಕ್ಕೆ ಸಂಪಿನಲ್ಲಿ ಬಿದ್ದಿದೆ, ಆಗಲೇ ಆ ಬಾಲಕನಿಗೆ ಉಸಿರಾಟದ ತೊಂದರೆ ಇದೆ. 5 ಗಂಟೆಗೆ ಬಾಲಕನನ್ನು ಆಸ್ಪತ್ರೆಗೆ ಕರೆತಂದಿದ್ರು, ವಿಶೇಷ ನಿರ್ದೇಶಕರನ್ನು ಕಳಿಸಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ಪಡೆದಿದ್ದೇನೆ.
ಆರೋಗ್ಯ ವ್ಯವಸ್ಥೆ ಮೇಲೆ ಮಾತಾಡೋದು ಸುಲಭ, ಆದ್ರೆ ವ್ಯವಸ್ಥೆ ಮೇಲೆ ವಿಶ್ವಾಸ ಮೂಡಿಸುವುದು ಕಷ್ಟ. ಜವಾಬ್ದಾರಿ ಸ್ಥಾನದಲ್ಲಿರೋರು ಜವಾಬ್ದಾರಿಯಾಗಿ ಮಾತಾಡಬೇಕು. ಎಲ್ಲದಕ್ಕೂ ರಾಜಕೀಯದ ಬಣ್ಣ ಬಳಿಯಬಾರದು. ಕಾಂಗ್ರೆಸ್ ಕಾಲದಲ್ಲಿ ಆರೋಗ್ಯ ವ್ಯವಸ್ಥೆ ಹೇಗಿತ್ತು, ಈಗ ಹೇಗಿದೆ ಅಂತ ನೋಡಲಿ, 5 ಗಂಟೆಗೆ ಹೊತ್ತಿಗೆ ಬಾಲಕನಿಗೆ ಪಲ್ಸ್ ಇರಲಿಲ್ಲ, ಆಸ್ಪತ್ರೆಗೆ ಕರೆತರುವಾಗಲೇ ಬಾಲಕ ಮೃತಪಟ್ಟಿದ್ದ ಎಂದು ತಿಳಿಸಿದರು.
ಇನ್ನೂ 24 ಗಂಟೆ ಸೇವೆ ಕೊಡುವ ಆಸ್ಪತ್ರೆಗಳಲ್ಲಿ ಇಬ್ಬರು ವೈದ್ಯರ ನೇಮಿಸಿದ್ದೇವೆ, ಹಗಲು ಮತ್ತು ರಾತ್ರಿ ಪಾಳಿಗಳಲ್ಲಿ ಇಬ್ಬರೂ ಮಾತಾಡ್ಕೊಂಡು ಇರಬೇಕು ಅಂತ ಸೂಚಿಸಲಾಗಿದೆ. ಆದ್ರೆ ಸಂಪಲ್ಲಿ ಬಿದ್ದ ಬಾಲಕನನ್ನು ಕರೆತಂದಾಗ ವೈದ್ಯರು ಇರಲಿಲ್ಲ, ಆಗ ವೈದ್ಯರು ಉಪವಿಭಾಗ ಆಸ್ಪತ್ರೆಗೆ ಹೋಗಿದ್ರು. ಆದ್ರೆ ಆಸ್ಪತ್ರೆಯಲ್ಲಿ ಯಾರಾದರೊಬ್ಬರು ಇರಬೇಕಿತ್ತು. ರೋಗಿ ಬಂದಾಗ ಯಾರೂ ಇರಲಿಲ್ಲ ಅಂತ ವೈದ್ಯರನ್ನು ಅಮಾನತು ಮಾಡಿದ್ದೇವೆ. ವೈದ್ಯರು ಇದ್ದಿದ್ರೆ ಆ ಬಾಲಕ ಬದುಕ್ತಿದ್ದ ಅಂತ ಅರ್ಥ ಅಲ್ಲ, ಆದ್ರೆ ಆ ಸಂದರ್ಭದಲ್ಲಿ ವೈದ್ಯರು ಆಸ್ಪತ್ರೆಯಲ್ಲಿ ಇರಬೇಕಿತ್ತು. ವೈದ್ಯರು ಆ ವೇಳೆ ಇರಲಿಲ್ಲ ಅಂತ ಅಮಾನತುಗೊಳಿಸಿದ್ದೇವೆ. ಸುಮ್ಮನೆ ಕೆಲವರು ರಾಜಕಾರಣ ಮಾಡ್ತಿದ್ದಾರೆ, ಸಾವಿನ ಮನೆಯಲ್ಲಿ ರಾಜಕಾರಣ ಶೋಭೆ ತರಲ್ಲ, ನಕಾರಾತ್ಮಕ ಮಾತುಗಳಿಂದ ವೈದ್ಯರು ಧೃತಿಗೆಡ್ತಾರೆ ಎಂದರು.