ಕೇಂದ್ರ ಸರ್ಕಾರದಿಂದ ಕ್ಷುಲ್ಲಕ ರಾಜಕಾರಣ, ಜನರೇ ಉತ್ತರಿಸಲಿದ್ದಾರೆ: ಸಚಿವ ಈಶ್ವರ್ ಖಂಡ್ರೆ
ಚಿತ್ರದುರ್ಗ, ಜೂನ್ 16: ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದ ಮೇಲೆ ಕ್ಷುಲ್ಲಕ ರಾಜಕಾರಣ ಮಾಡಲಾಗುತ್ತಿದೆ. ರಾಜಕೀಯ ದುರುದ್ದೇಶದಿಂದ ಅಕ್ಕಿ ನೀಡಲು ಕೇಂದ್ರವು ನಿರಾಕರಿಸಿದೆ ಎಂದು ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ಆರೋಪಿಸಿದರು.
ಚಿತ್ರದುರ್ಗ ನಗರದ ಬೋವಿ ಮಠಕ್ಕೆ ಭೇಟಿ ನೀಡಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಆಶಿರ್ವಾದ ಪಡೆದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ನಮಗೆ ಅಕ್ಕಿ ನೀಡುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡುವುದಾಗಿ ಹಿಂದೆ ಹೇಳಿದ್ದರು ಆದರೆ ಇದೀಗ ರಾಜಕೀಯ ದುರುದ್ದೇಶದಿಂದ ಅಕ್ಕಿ ನೀಡಲು ನಿರಾಕರಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಕೇಂದ್ರ ಬಿಜೆಪಿ ಸರ್ಕಾರದಿಂದ ಕ್ಷುಲ್ಲಕ ರಾಜಕಾರಣ ಮಾಡಲಾಗುತ್ತಿದೆ. ಇದಕ್ಕೆ ಜನರೇ ಕೇಂದ್ರದ ನಿರ್ಧಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ ಅವರು, ಕೇಂದ್ರ ಸರ್ಕಾರ ಏನೇ ತಡೆದರೂ ಅನ್ನ ಭಾಗ್ಯ ಕಾರ್ಯಕ್ರಮ ನಿಲ್ಲುವುದಿಲ್ಲ. ಜನತೆಗೆ ನಾಲ್ಕು ದಿನ ತಡವಾಗಬಹುದು, ಆದರೆ ನಾವು ಕೊಟ್ಟ ಮಾತಿನಂತೆ ರಾಜ್ಯದ ಜನತೆಗೆ ಅಕ್ಕಿ ಕೊಡುತ್ತೇವೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಈಗಾಗಲೇ ಅಕ್ಕಿ ನೀಡಲು ನಮ್ಮ ಮುಖ್ಯಮಂತ್ರಿಗಳು ಮತ್ತು ಸಚಿವರು ವಿವಿಧ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಲಿಂಗಾಯಿತರನ್ನ ಒಬಿಸಿ ಪಟ್ಟಿಗೆ ಸೇರಿಸುವಂತೆ ಮಠಾಧೀಶರು ನಡೆಸಿರುವ ಸಭೆಯ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಹಿಂದೆಯೂ ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಬಹು ದಿನಗಳ ನ್ಯಾಯಯುತ ಬೇಡಿಕೆ ಇದಾಗಿದ್ದು ಈಗಿನ ಸರ್ಕಾರಕ್ಕೂ ಮನದಟ್ಟು ಮಾಡುವ ಕೆಲಸ ಮಾಡುತ್ತೇವೆ. ಲಿಂಗಾಯಿತ ವೀರಶೈವ ಮಹಾಸಭೆಯಿಂದ ಮನವಿ ಮಾಡುತ್ತೇವೆ ಎಂದು ಹೇಳಿದರು.












Click it and Unblock the Notifications