ಕರ್ನಾಟಕದಲ್ಲಿರುವ ಶೇ.85ರಷ್ಟು ವಲಸಿಗರು ಈ 6 ರಾಜ್ಯಗಳಿಂದ ಬಂದವರು: ವರದಿ
ಕರ್ನಾಟಕದಲ್ಲಿ ವಲಸಿಗರ ಹಾವಳಿ ಹೆಚ್ಚಾಗಿದೆ ಎಂಬ ಕೂಗು ಮೊದಲಿನಿಂದಲೂ ಇದೆ. ದೇಶದ ಬಹುತೇಕ ರಾಜ್ಯದವರು ಪ್ರತಿದಿನವೂ ಗಂಟುಮೂಟೆ ಕಟ್ಟಿಕೊಂಡು ಕರ್ನಾಟಕಕ್ಕೆ ಬರುತ್ತಿದ್ದಾರೆ. ಇನ್ನು ಕರ್ನಾಟಕಕ್ಕೆ ಬಂದಿರುವ ವಲಸೆ ಕಾರ್ಮಿಕರ ಕುರಿತು ಅಂಕಿಅಂಶ ಹೊರಬಿದ್ದಿದೆ. ರಾಜ್ಯದಲ್ಲಿ ಸದ್ಯ ಈಗಿರುವ ಶೇ 85ರಷ್ಟು ವಲಸೆ ಕಾರ್ಮಿಕರೆಲ್ಲರೂ ಈ ಆರು ರಾಜ್ಯದವರು ಎಂದು ಕಾರ್ಮಿಕ ಇಲಾಖೆಯ ಅಂಕಿಅಂಶ ಬಹಿರಂಗಪಡಿಸಿದೆ. ಸುಮಾರು ಒಂದು ಲಕ್ಷ ನೋಂದಾಯಿತ ಕಾರ್ಮಿಕರಿಗೆ ನೆಲೆಯಾಗಿದ್ದು, ಅವರೆಲ್ಲರೂ ಜೀವನೋಪಾಯಕ್ಕಾಗಿ ಇಲ್ಲಿಗೆ ಬಂದಿದ್ದಾರೆ.
ಯಾವುದೇ ಸ್ಪಷ್ಟ ಸಮೀಕ್ಷೆ ನಡೆಸದ ಕಾರಣ ಕಾರ್ಮಿಕ ಇಲಾಖೆಗೆ ರಾಜ್ಯದಲ್ಲಿ ವಾಸಿಸುತ್ತಿರುವ ವಲಸೆ ಕಾರ್ಮಿಕರ ಸಂಖ್ಯೆಯ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದರೂ ವಿವಿಧ ಉದ್ಯೋಗದಾತರು ಮತ್ತು ಸಂಸ್ಥೆಗಳು ನೀಡಿರುವ ವಿವರಗಳ ಆಧಾರದ ಮೇಲೆ ಅಂತರರಾಜ್ಯ ಕಾರ್ಮಿಕರ ಮಾಹಿತಿ ಸಿಕ್ಕಿದೆ. ಇದರ ಪ್ರಕಾರ ಬೇರೆ ರಾಜ್ಯಗಳಿಂದ ಬಂದ 78,289 ಕಾರ್ಮಿಕರು ಕರ್ನಾಟಕದಲ್ಲಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಇಲ್ಲಿವರೆಗೆ 18,865 ವಲಸಿಗರು ನೋಂದಣಿ ಮಾಡಿಕೊಂಡಿದ್ದಾರೆ. ಅಂತರರಾಜ್ಯ ಕಾರ್ಮಿಕರು ರಾಜ್ಯದ ಈ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳುವುದರಿಂದ ಅವರಿಗೆ ಆರೋಗ್ಯ ರಕ್ಷಣೆ, ಮಕ್ಕಳ ಶಿಕ್ಷಣ, ಮದುವೆ ಸೇರಿದಂತೆ ಇತರ ಉದ್ದೇಶಗಳಿಗೆ ಆರ್ಥಿಕ ಸಹಾಯ ಕೂಡ ಸಿಗುತ್ತಿದೆ.
ಯಾವ ರಾಜ್ಯಗಳಿಂದ ವಲಸೆ ಹೆಚ್ಚು?
ಕಾರ್ಮಿಕ ಇಲಾಖೆಯ ಅಂಕಿಅಂಶಕ್ಕಿಂತಲೂ ವಲಸೆ ಕಾರ್ಮಿಕರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಿಗೆ ಇದೆ. ಈ 97,154 ವಲಸಿಗರು ಭಾರತದ ಎಲ್ಲ ರಾಜ್ಯಗಳಿಂದ ಬಂದವರಾಗಿದ್ದು, ಈ ಪೈಕಿ ಹೆಚ್ಚಿನವರು ಬಿಹಾರ, ಅಸ್ಸಾಂ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಿಂದ ವಲಸೆ ಬಂದಿದ್ದಾರೆ. ಕರ್ನಾಟಕದ ಪೈಕಿ ಹೆಚ್ಚಿನ ವಲಸೆ ಕಾರ್ಮಿಕರು ಬೆಂಗಳೂರಿನಲ್ಲೇ ಇದ್ದಾರೆ. ಒಳ್ಳೆಯ ಸಂಬಳ, ಜೀವನದ ಗುಣಮಟ್ಟದ ಕಾರಣದಿಂದಾಗಿ ಕಾರ್ಮಿಕರು ಕರ್ನಾಟಕದತ್ತ ಓಡೋಡಿ ಬರುತ್ತಿದ್ದು, ವಿಶೇಷವಾಗಿ ಬೆಂಗಳೂರಿಗೆ ವಲಸೆ ಹೋಗುತ್ತಾರೆ.
ಕನ್ನಡಿಗರು ಉದ್ಯೋಗಕ್ಕಾಗಿ ಉತ್ತರ ಪ್ರದೇಶಕ್ಕೆ ಹೋಗುತ್ತಾರಾ? ಇಲ್ಲಿರುವ ವಾತಾವರಣದಿಂದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಜನರು ಇಲ್ಲಿಗೆ ಬರುತ್ತಾರೆ. ಹಿಂದಿ ರಾಜ್ಯದವರು ಜೀವನೋಪಾಯಕ್ಕಾಗಿ ದಕ್ಷಿಣ ಭಾರತ ಮತ್ತು ಕರ್ನಾಟಕಕ್ಕೆ ಬರಬಹುದು ಎಂದು ಭಾವಿಸುತ್ತಾರೆ. ಆದರೆ ದಕ್ಷಿಣದವರು ಹಿಂದಿ ರಾಜ್ಯಗಳಿಗೆ ಜೀವನ ನಡೆಸಲು ಹೋಗಲ್ಲ. ಏಕೆಂದರೆ ಅಲ್ಲಿ ಸಾಮಾಜಿಕ ಮೂಲಸೌಕರ್ಯಗಳ ಕೊರತೆ ಇದೆ ಎನ್ನುತ್ತಾರೆ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ.

ವಲಸಿಗರಿಂದ ಅಪರಾಧ ಹೆಚ್ಚಳ
ಮೆಟ್ರೋ ಮತ್ತು ನೀರು ಸರಬರಾಜು ಸೇರಿದಂತೆ ಎಲ್ಲ ಪ್ರಮುಖ ಯೋಜನೆಗಳಲ್ಲಿ ಕೆಲಸ ಮಾಡುವವರು ಜಾರ್ಖಂಡ್, ಬಿಹಾರ ಮತ್ತು ಒಡಿಶಾದಿಂದ ಬರುತ್ತಾರೆ. ಬೆಂಗಳೂರಿನಲ್ಲಿ ವಲಸಿಗರ ಜೀವನ ಹಾಗೂ ಅವರಿಂದ ಅಪರಾಧಗಳು ಹೆಚ್ಚಾಗುತ್ತಿರುವ ಬಗ್ಗೆ ಶಾಸಕ ಸುರೇಶ್ ಕುಮಾರ್ ಕೂಡ ಕಳವಳ ವ್ಯಕ್ತಪಡಿಸಿದ್ದರು. ವಲಸಿಗರು ಇಲ್ಲಿನವರೊಂದಿಗೆ ಬೆರೆಯುವುದಿಲ್ಲ, ಕನ್ನಡ ಭಾಷೆಯನ್ನೂ ಕಲಿಯಲ್ಲ. ಗುಟ್ಕಾದಂತಹ ಕೆಟ್ಟ ಚಟಗಳಿಗೆ ಬಲಿಯಾಗುತ್ತಾರೆ ಎಂದಿದ್ದರು.












Click it and Unblock the Notifications