ಮೀಟರ್ ಬಡ್ಡಿ: '7 ಲಕ್ಷದ 80 ಸಾವಿರ ದೂರುಗಳು ಬರುವವರೆಗೂ ಬಾಳೆಹಣ್ಣು ತಿನ್ನುತ್ತಾ ಇದ್ರಾ?'

ಬೆಂಗಳೂರು, ಜನವರಿ 26: ಮೀಟರ್ ಬಡ್ಡಿ ಸಂಗ್ರಹದ ದೂರುಗಳ ಕುರಿತು ಕೈಗೊಂಡ ಕ್ರಮದ ವಿಷಯದಲ್ಲಿ ರಾಜ್ಯ ಸರಕಾರ ಶ್ವೇತಪತ್ರ ಬಿಡುಗಡೆ ಮಾಡಬೇಕು. 7 ಲಕ್ಷದ 80 ಸಾವಿರಕ್ಕೂ ಹೆಚ್ಚು ದೂರುಗಳು ಬರುವವರೆಗೂ ನೀವು ಬಾಳೆಹಣ್ಣು ತಿನ್ನುತ್ತಾ ಇದ್ರಾ? ಎಷ್ಟು ಕ್ರಮ ಕೈಗೊಂಡಿದ್ದೀರಿ? ಎಷ್ಟು ಜನರನ್ನು ಬಂಧಿಸಿದ್ದೀರಿ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಒತ್ತಾಯಿಸಿದರು.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಳಗಾವಿ ಒಂದೇ ಜಿಲ್ಲೆಯಲ್ಲಿ ಗರಿಷ್ಠ ಅಂದರೆ 2,71,466 ದೂರುಗಳು, ಬಾಗಲಕೋಟೆ ಜಿಲ್ಲೆಯಲ್ಲಿ 89,087, ಬಿಜಾಪುರ-75 ಸಾವಿರ, ಮಂಡ್ಯ ಜಿಲ್ಲೆಯಲ್ಲಿ 42,500,- ಹೀಗೆ ಕರ್ನಾಟಕದಾದ್ಯಂತ ಜನರು ನಮ್ಮನ್ನು ಶೋಷಿಸುತ್ತಿದ್ದಾರೆ. ದೌರ್ಜನ್ಯ ನಡೆದಿದೆ ಎಂದು ದೂರು ಕೊಟ್ಟಿದ್ದಾರೆ. ಮನೆ ಖಾಲಿ ಮಾಡಿಸಿದ, ಮನೆಗೆ ಬೀಗ ಹಾಕಿದ ದೂರುಗಳೂ ಇವೆ ಎಂದು ಹೇಳಿದರು.

Microfinance N Ravikumar Attacks The State Government

ಮೀಟರ್ ಬಡ್ಡಿ ಹಾವಳಿಯಿಂದ ಬಡವರು ಮನೆಗಳು, ಹಳ್ಳಿಗಳನ್ನು ಖಾಲಿ ಮಾಡಿ ತೆರಳುತ್ತಿದ್ದಾರೆ. ಬಡ್ಡಿ ವ್ಯವಹಾರ ಮಾಡುವವರು ದೌರ್ಜನ್ಯ ಮಾಡಿ, ಬಾರುಕೋಲಿನಿಂದ ಹೊಡೆದಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಶೋಷಣೆ ವಿಚಾರದಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ, ಅವರೂ ಶಾಮೀಲಾಗಿದ್ದಾರೆ ಎಂದು ಆಕ್ಷೇಪಿಸಿದರು.

ಸಮರ್ಪಕ ಕ್ರಮ ಕೈಗೊಳ್ಳದೆ ಇದ್ದರೆ ಎರಡ್ಮೂರು ದಿನಗಳಲ್ಲಿ ರಾಜ್ಯದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಳಿಕ ಪ್ರಶ್ನೆಗೆ ಉತ್ತರಿಸಿದ ಅವರು, ಅಂಬೇಡ್ಕರರ ವಿಚಾರಗಳನ್ನು ಜಾರಿ ಮಾಡುತ್ತೇವೆ. ಬಾಪೂ ಭಾರತ ಕಟ್ಟುತ್ತೇವೆ ಎಂದಿದ್ದಾರೆ. ಇದು ಬಾಪು ಭಾರತವೇ ಎಂದು ಕೇಳಿದರು.

ಮಹಿಳೆಯರು ನಿಮಗೆ ತಾಳಿ ಕಳಿಸಿಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ರಾಜ್ಯದ ಸಚಿವರಿಗೆ ನಾಚಿಕೆ ಆಗಬೇಕಲ್ಲವೇ? ಏನು ಕ್ರಮ ತೆಗೆದುಕೊಂಡಿದ್ದೀರಿ? ಬಡ್ಡಿ, ಮೀಟರ್ ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆ ಒಂದೆಡೆ ಆಗಿದ್ದರೆ ಮತ್ತೊಂದೆಡೆ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವು, ಸಾವಿರಾರು ಮಕ್ಕಳ ಸಾವು ಸಂಭವಿಸುತ್ತಿದೆ. ಆಸ್ಪತ್ರೆಗಳು ಸರಿ ಇಲ್ಲ; ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸರಿ ಇಲ್ಲ. ಬ್ಯಾಂಕ್‍ಗಳು ಲೂಟಿ ಆಗುತ್ತಿವೆ. ಈ ಸರಕಾರಕ್ಕೆ ಜೀವವೇ ಇಲ್ಲ ಎಂದು ಟೀಕಿಸಿದರು.

ಈ ಸರಕಾರಕ್ಕೆ ಆಮ್ಲಜನಕ ನೀಡಬೇಕಿದೆ. ಒಂದು ರೀತಿಯ ಶವದ ವ್ಯವಸ್ಥೆಯಲ್ಲಿ ಈ ಸರಕಾರ ಇದೆ ಎಂದು ಆರೋಪಿಸಿದರು. ಈ ಸರಕಾರಕ್ಕೆ ನಾಚಿಕೆ ಆಗಬೇಕು ಎಂದು ಛೀಮಾರಿ ಹಾಕಿದರು. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‍ಗಳ ಹಾವಳಿಯು ಸಂಪೂರ್ಣ ಹಳಿ ತಪ್ಪಿದೆ. ಪರಿಣಾಮವಾಗಿ ರಾಜ್ಯದಲ್ಲಿ ಸಾಲ ತೆಗೆದುಕೊಳ್ಳುವ ಬಡವರ ಜೀವನವನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಮೈಕ್ರೋ ಫೈನಾನ್ಸ್ ದಂಧೆಗೆ ಸರಕಾರದ ಕುಮ್ಮಕ್ಕೂ ಇದೆ. ಸರಕಾರದ ಕುಮ್ಮಕ್ಕು ಇಲ್ಲದಿದ್ದರೆ ಇದು ಇಲ್ಲಿನವರೆಗೆ ಮುಂದುವರೆಯುತ್ತಿರಲಿಲ್ಲ; ಎರಡೂ ಕಡೆಯಿಂದ ವಸೂಲಿ ಮಾಡಲು ಪೊಲೀಸರಿಗೆ ಇದು ದಂಧೆಯಾಗಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅನೇಕರ ಮಾರಣಹೋಮ ಆದ ಬಳಿಕ ಸರಕಾರವು ಎಚ್ಚತ್ತು ಇವತ್ತು ಒಂದು ಸಭೆ ಕರೆದು ಮೈಕ್ರೋ ಫೈನಾನ್ಸ್ ವಿಚಾರದಲ್ಲಿ ಚರ್ಚೆ ನಡೆಸಿದೆ. ಹೊಸ ಕಾನೂನು ತರುವ ಮತ್ತು ಅವರನ್ನು ಹದ್ದುಬಸ್ತಿನಲ್ಲಿಡುವ ಕೆಲಸ ಮಾಡುವುದಾಗಿ ತಿಳಿಸಿದೆ ಎಂದರು.

ಮೈಕ್ರೋ ಫೈನಾನ್ಸ್‍ಗಳ ಸಮಸ್ಯೆ ಕುರಿತು ಅನೇಕ ಮುಖಂಡರು ಗಮನ ಸೆಳೆದರೂ ಸರಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿತ್ತು. ಕೊನೆಗೂ ಇವತ್ತು ಒಂದು ತೀರ್ಮಾನಕ್ಕೆ ಬಂದಿದೆ. ಫೈನಾನ್ಸ್ ವಸೂಲಿಗೆ ತೊಂದರೆ ಕೊಟ್ಟರೆ, ಗೂಂಡಾಗಳನ್ನು ಕಳುಹಿಸಿದರೆ ಅವರನ್ನು ಬಂಧಿಸುವುದಾಗಿ ಹೇಳಿದ್ದಾರೆ. ಜನರ ಹಿತದೃಷ್ಟಿಯಿಂದ ಇದು ಸ್ವಾಗತಾರ್ಹ ಕಾಂಗ್ರೆಸ್ ಸರಕಾರದ ಹಿತದೃಷ್ಟಿಯಿಂದ ಅಲ್ಲ ಎಂದು ತಿಳಿಸಿದರು.

ಮೈಕ್ರೋ ಫೈನಾನ್ಸ್‍ನಲ್ಲಿ ಆಗುವ ಅನಾಹುತಕ್ಕಿಂತ 10ರಷ್ಟು ಅನಾಹುತಗಳು ಆನ್‍ಲೈನ್ ಗೇಮ್ಸ್ ಮೂಲಕ ಆಗುತ್ತಿದೆ ಎಂದು ಅವರು ತಿಳಿಸಿದರು. ಸರಕಾರದ ಕೆಲವು ಮಂತ್ರಿಗಳು, ಶಾಸಕರು ಆನ್‍ಲೈನ್ ಗೇಮ್ಸ್ ಕಂಪೆನಿಗಳನ್ನು ಮಾಡಿಕೊಂಡು ಜನರಿಂದ ಸುಲಿಗೆ ಮಾಡುತ್ತಿದ್ದಾರೆ. ಅನೇಕ ಯುವಕರು ಬೀದಿಪಾಲಾಗುತ್ತಿದ್ದಾರೆ. ರಮ್ಮಿ ಆಟದ ಮೂಲಕ ಸುಲಭದಲ್ಲಿ ಹಣ ಬರುವ ಸಾಮಾಜಿಕ ಜಾಲತಾಣದ ಜಾಹೀರಾತುಗಳನ್ನು ನಂಬಿ ಜನರ ಪ್ರಾಣ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಜನರು ಗೇಮ್‍ನಲ್ಲಿ ಸೋತ ಬಳಿಕ ಕಳ್ಳತನ ಮಾಡಿ ಆ ದುಡ್ಡು ಕಟ್ಟುತ್ತಾರೆ. ಇವತ್ತು ದರೋಡೆಗಳು, ಕಳ್ಳತನಗಳು ಇದೇ ಕಾರಣಕ್ಕಾಗಿ ಆಗುತ್ತಿವೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+