ಬಡತನ ನಿರ್ಮೂಲನೆಗಾಗಿ ಹುಟ್ಟಿದ ಮೈಕ್ರೋಫೈನಾನ್ಸ್‌ಗಳು ಮಾಡುತ್ತಿರುವುದೇನು?
ಬೆಂಗಳೂರು, ಫೆಬ್ರವರಿ 15: ಇವತ್ತು ಮೈಕ್ರೋಫೈನಾನ್ಸ್ ಗಳಿಂದ ಸಾಲ ಪಡೆದವರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ಎಂಬ ಪ್ರಶ್ನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಸೂಲಿ ಸಂಬಂಧಿಸಿದ ವೀಡಿಯೋಗಳನ್ನು ನೋಡಿದರೆ ಗೊತ್ತಾಗಿ ಬಿಡುತ್ತದೆ. ವಸೂಲಿ ಮಾಡಲು ಬರುವವರ ಗೂಂಡಾವರ್ತನೆ, ಅಶ್ಲೀಲ ಬೈಗುಳಗಳು, ಬೆದರಿಕೆ, ಧಮಕಿ ಅದೆಲ್ಲವನ್ನೂ ಅನುಭವಿಸಿದವರು ಹಣವನ್ನು ಕಟ್ಟಲಾಗದೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದಕ್ಕಿಂತ ಹೆಚ್ಚಾಗಿ ಅವರು ಅವಮಾನದಿಂದಲೇ ಸಾವಿಗೆ ಶರಣಾಗುತ್ತಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.
ಮೈಕ್ರೋಫೈನಾನ್ಸ್ ಗಳಿಗೆ ಗ್ರಾಹಕರೇ ಬಡವರು, ಮಧ್ಯಮವರ್ಗದವರು. ಹೀಗಾಗಿ ಅವರಿಗೆ ಅವರ ಸಾಮರ್ಥ್ಯ ಮೀರಿದ ಸಾಲವನ್ನು ನೀಡಿ ದುಪ್ಪಟ್ಟು ಹಣವನ್ನು ಬಡ್ಡಿಯಾಗಿ ಕೊಡಿ ಎಂದು ಪೀಡಿಸಿದರೆ ಅವರು ತಾನೆ ಏನು ಮಾಡಬೇಕು? ಸಾಲ ಪಡೆದು ಗುಡಿಸಲೋ ಅಥವಾ ಮಗಳಿಗೆ ಮದುವೆನೋ ಮಾಡಿರುತ್ತಾರೆ. ಬೆಳೆ ಬಂದರೆ ಸಾಲ ಕಟ್ಟಿಬಿಡಬಹುದೇನೋ ಧೈರ್ಯ ಇರುತ್ತದೆ.

ಆದರೆ ಕೆಲವೊಮ್ಮೆ ಅಂದು ಕೊಂಡಿದ್ದು ಆಗದೇ ಹೋದರೆ ಸಾಲದ ಬಡ್ಡಿ ಕಟ್ಟಲಾಗದೆ ಕನಲಿ ಹೋಗಿ ಬಿಡುತ್ತಾರೆ. ದುಡ್ಡು ಇಟ್ಟುಕೊಂಡು ಬಡ್ಡಿಕಟ್ಟದೆ ಯಾರೂ ಕಳ್ಳಾಟ ಆಡುವುದಿಲ್ಲ. ದುಡ್ಡಿಲ್ಲದಾಗಲೇ ತಪ್ಪಿಸಿಕೊಂಡು ಓಡಾಡೋಕೆ ಶುರು ಮಾಡುತ್ತಾರೆ. ಹಾಗೆಂದು ಸಾಲವನ್ನು ವಾಪಸ್ ಕೊಡೋದಿಲ್ಲ ಅಂಥ ಹೇಳುತ್ತಿಲ್ಲ. ನ್ಯಾಯದಿಂದ ಬಡ್ಡಿ ತೆಗೆದುಕೊಳ್ಳಿ ಅಂತಿದ್ದಾರೆ.
ಇವತ್ತಿಗೂ ಬಡ್ಡಿಗೆ ಹಣ ನೀಡುವವರು ಎಲ್ಲ ಕಡೆಯೂ ಇದ್ದಾರೆ. ಅವರಿಗಿಂತಲೂ ಕ್ರೂರವಾಗಿ ಫೈನಾನ್ಸ್ ಸಂಸ್ಥೆಗಳು ನಡೆದುಕೊಳ್ಳುತ್ತಿರುವುದು ಮಾತ್ರ ಬೇಸರ ತರುವಂತಹದ್ದಾಗಿದೆ. ಬಹಳಷ್ಟು ಜನ ಮೈಕ್ರೋಫೈನಾನ್ಸ್ ಗಳಿಂದ ಸಾಲ ಪಡೆದ ತಪ್ಪಿಗೆ ಚಿನ್ನವನ್ನೆಲ್ಲ ಮಾರಿ ಸಾಲ ತೀರಿಸಿ ಅಬ್ಬಾ ಮಾರಿ ಹೋಯಿತೆಂದು ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೆ ಕೆಲವರು ಖಾಲಿ ಕೈಯಾಗಿ ಕುಳಿತವರು ಇಲ್ಲದಿಲ್ಲ. ಸಾಲ ಕೊಡುವಾಗ ಏನನ್ನೂ ಹೇಳದೆ ಏಜೆಂಟರ ಮೂಲಕ ಸಾಲ ಕೊಡಿಸುವ ಸಂಸ್ಥೆಗಳು ವಸೂಲಿಗೆ ಇಳಿದಾಗ ಸಾಲಪಡೆದವರ ನಿದ್ದೆ ಗೆಡಿಸುವಂತೆ ಮಾಡಿಬಿಡುತ್ತಾರೆ.

ಸದುದ್ದೇಶಕ್ಕಾಗಿ ಹುಟ್ಟಿಕೊಂಡ ಮೈಕ್ರೋಫೈನಾನ್ಸ್
ನಾವು ಮೈಕ್ರೋಫೈನಾನ್ಸ್ ಗಳ ಹಿಂದಿನ ಹುಟ್ಟು ಮತ್ತು ಬೆಳವಣಿಗೆಯನ್ನು ನೋಡಿದ್ದೇ ಆದರೆ ಅವುಗಳು ರೂಪುಗೊಂಡ ಉದ್ದೇಶವೇ ಬೇರೆಯಾಗಿತ್ತು. ಆದರೆ ಇವತ್ತು ಮೂಲ ಉದ್ದೇಶಗಳನ್ನು ಮರೆತು ಅವು ಕೇವಲ ಲಾಭ ಮಾಡುವ ಕಾಯಕದಲ್ಲಿ ತೊಡಗಿರುವುದು, ಆರ್ಥಿಕ ವಿಸ್ತರಣೆಗೆ ಮುಂದಾಗಿರುವುದು ಕಾಣಿಸುತ್ತಿದೆ. ಇದೆಲ್ಲದರ ನಡುವೆ ಮೈಕ್ರೋಫೈನಾನ್ಸ್ ಗಳ ಕುರಿತಂತೆ ತಿಳಿಯುತ್ತಾ ಹೋದರೆ ಒಂದಷ್ಟು ಮಾಹಿತಿಗಳು ನಮಗೆ ದೊರೆಯುತ್ತವೆ. ಅವುಗಳ ಸ್ಥಾಪನೆಯ ಉದ್ದೇಶ ಏನಾಗಿತ್ತು ಎಂಬುದು ಗೊತ್ತಾಗುತ್ತದೆ.
ಇಷ್ಟಕ್ಕೂ ಈ ಮೈಕ್ರೋಫೈನಾನ್ಸ್ ಗಳು ಕೇವಲ ನಮ್ಮ ದೇಶದಲ್ಲಿ ಮಾತ್ರ ಕಾರ್ಯಾಚರಿಸುತ್ತಿಲ್ಲ. ಎಲ್ಲ ಕಡೆಯೂ ಇವೆ. ಅದರಲ್ಲೂ ಬಾಂಗ್ಲಾದೇಶ, ಕಾಂಬೋಡಿಯಾ, ಅಫ್ಘಾನಿಸ್ತಾನ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಇಂಡೋನೇಷ್ಯಾ ಮತ್ತು ಈಕ್ವೆಡಾರ್‌ನಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇವು ಕಾರ್ಯಾಚರಿಸುತ್ತಿವೆ. ಬಡವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಮೈಕ್ರೋಫೈನಾನ್ಸ್ ಗಳು ಕಿರುಬಂಡವಾಳವನ್ನು ಸಾಲದ ರೂಪದಲ್ಲಿ ನೀಡಿ ಬಳಿಕ ಅವರಿಂದ ಅದನ್ನು ವಸೂಲಿ ಮಾಡುವ ಉದ್ದೇಶದಿಂದ ಹುಟ್ಟಿಕೊಂಡಿವೆ. ಮತ್ತು ಈ ಮೈಕ್ರೋಫೈನಾನ್ಸ್ ಗಳಿಗೆ ತನ್ನದೇ ಆದ ಇತಿಹಾಸ ಇರುವುದನ್ನು ನಾವು ಕಾಣಬಹುದಾಗಿದೆ.
18ನೇ ಶತಮಾನದಲ್ಲಿ ಹುಟ್ಟಿಕೊಂಡ ಕಲ್ಪನೆ
18ನೇ ಶತಮಾನದಲ್ಲಿ ಇವುಗಳು ಐರಿಶ್ ನಲ್ಲಿ ಅಸ್ಥಿತ್ವಕ್ಕೆ ಬಂದವು ಎಂದು ಹೇಳಲಾಗುತ್ತಿದೆ. ಅಲ್ಲಿನ ಜೊನಾಥನ್ ಸ್ವಿಫ್ಟ್ ಎಂಬಾತ ಇದನ್ನು ಪರಿಚಯಿಸಿದನು. ಆಗ ಇದನ್ನು ಮೈಕ್ರೋಲೆಂಡಿಂಗ್ ಎಂದೇ ಕರೆಯಲಾಗುತ್ತಿತ್ತು. ಅವತ್ತಿನ ಉದ್ದೇಶಗಳೇ ಬೇರೆಯಾಗಿತ್ತು. ಆಗ ಜನರಿಗೆ ಸ್ವಾವಲಂಬಿ ಜೀವನ ನಡೆಸಲು ಆರ್ಥಿಕ ಸಹಾಯದ ಅಗತ್ಯವಿದ್ದ ಕಾರಣ ಇದು ಸಹಕಾರಿಯಾಗಿತ್ತು. ಮತ್ತು ಬಡವರು ಮತ್ತು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಕೂಡ ಇದರ ಬಹುಮುಖ್ಯ ಉದ್ದೇಶವಾಗಿತ್ತು.
ಕಾಲಾನಂತರದಲ್ಲಿ ಒಂದಷ್ಟು ಬದಲಾವಣೆಗೊಂಡು 1970ರ ಹೊತ್ತಿಗೆ ಆಧುನಿಕ ಮಾರ್ಪಾಡುಗೊಂಡು ಮೈಕ್ರೋಫೈನಾನ್ಸಿಂಗ್ ಆಯಿತು. 1983ರಲ್ಲಿ ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನಸ್ ಮೈಕ್ರೋಫೈನಾನ್ಸಿಂಗ್ ಕಲ್ಪನೆಯಡಿ ಮೊದಲ ಗ್ರಾಮೀಣ ಬ್ಯಾಂಕ್ ನ್ನು ಸ್ಥಾಪಿಸಿದರು. ಆ ಮೂಲಕ ಗ್ರಾಹಕರಿಗೆ ಸಾಲಗಳನ್ನು ನೀಡುವುದರ ಜೊತೆಗೆ, ಬಡತನವನ್ನು ಅನುಭವಿಸುತ್ತಿರುವವರಿಗೆ ಆರ್ಥಿಕವಾಗಿ ಸಹಾಯ ಮಾಡುವ ಮತ್ತು ಜನರಲ್ಲಿ ಬ್ಯಾಂಕಿಂಗ್ ಅರಿವು ಮೂಡಿಸಿದಷ್ಟೇ ಅಲ್ಲದೆ, ಸಾಲ ಮತ್ತು ಉಳಿತಾಯ ಎರಡರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರು.
ನಾಯಿಕೊಡೆಗಳಂತೆ ಹುಟ್ಟಿಕೊಂಡ ಮೈಕ್ರೋಫೈನಾನ್ಸ್
ಇದೆಲ್ಲವೂ ಕೆಲವು ವರ್ಷಗಳ ಹಿಂದಿನ ತನಕವೂ ಚೆನ್ನಾಗಿಯೇ ಇತ್ತು ಆದರೆ ಈಗ ಎಲ್ಲವೂ ಬದಲಾಗಿ ಹೋಯಿತು. ಮೈಕ್ರೋಫೈನಾನ್ಸ್ ಹೆಸರಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡ ಸಂಸ್ಥೆಗಳು ಬಂಡವಾಳ ಹಾಕಿ ಲಾಭ ತರುವ ಉದ್ಯಮವಾಗಿ ಬದಲಾದವು. ಹೀಗಾಗಿ ದೇಶದ ಮಟ್ಟಿಗೆ ಹೇಳುವುದಾದರೆ ಆರ್ ಬಿಐನ ಮೂಲ ನಿಯಮವನ್ನು ಗಾಳಿಗೆ ತೂರಿ ಸಾಲ ನೀಡಿ ದುಪ್ಪಟ್ಟು ಬಡ್ಡಿ ವಸೂಲಿಗೆ ನಿಂತವು. ನಿಜಹೇಳಬೇಕೆಂದರೆ ಮೈಕ್ರೋಫೈನಾನ್ಸ್ ಗೆ ಸಾಲದ ವಿಚಾರದಲ್ಲಿ ತಮ್ಮದೇ ಆದ ಸಾಮಾನ್ಯ ನಿಯಮಗಳಿವೆ.
ಆ ನಿಯಮಗಳ ಬಗ್ಗೆ ನೋಡುವುದಾದರೆ, ಮೈಕ್ರೋಫೈನಾನ್ಷಿಯರ್ ಗಳು ಸಾಲಗಳ ಮೇಲೆ ಬಡ್ಡಿಯನ್ನು ಆರ್ ಬಿಐ ನಿಯಮದಡಿ ವಿಧಿಸಬೇಕು ಮತ್ತು ನಿಯಮಿತ ಮಧ್ಯಂತರಗಳಲ್ಲಿ ಪಾವತಿಗಳೊಂದಿಗೆ ನಿರ್ದಿಷ್ಟ ಮರುಪಾವತಿ ಯೋಜನೆಗಳನ್ನು ಸ್ಥಾಪಿಸಬೇಕು. ಕೆಲವು ಸಾಲದಾತರು ಸಾಲ ಪಡೆದವರು ತಮ್ಮ ಆದಾಯದ ಸ್ವಲ್ಪ ಭಾಗವನ್ನು ಉಳಿತಾಯ ಖಾತೆಯಲ್ಲಿ ಮೀಸಲಿಡುವಂತೆ ಮಾಡಿ ಗ್ರಾಹಕರು ಡೀಫಾಲ್ಟ್ ಆದಾಗ ಅದನ್ನು ವಿಮೆಯಾಗಿ ಬಳಸಲು ಅವಕಾಶ ಮಾಡಿಕೊಡಬೇಕು. ಸಾಲಗಾರನು ಸಾಲವನ್ನು ಯಶಸ್ವಿಯಾಗಿ ಮರುಪಾವತಿಸಿದರೆ, ಖಾತೆಯಲ್ಲಿ ಹೆಚ್ಚುವರಿ ಉಳಿತಾಯವನ್ನು ಗಳಿಸಿದ್ದಾರೆ ಎಂದರ್ಥ.
ಮೈಕ್ರೋಫೈನಾನ್ಸ್‌ಗಳ ಕಪಿ ಮುಷ್ಠಿಯಿಂದ ಹೊರಬರಲಿ
ಇಲ್ಲಿ ಮೈಕ್ರೋಫೈನಾನ್ಸ್ ಗಳು ಅದ್ಯಾವುದನ್ನು ಮಾಡದೆ ನಿಯಮವನ್ನು ಉಲ್ಲಂಘಿಸುತ್ತಿವೆ. ಹಲವು ಕಾರಣಗಳನ್ನು ಮುಂದಿಟ್ಟು ನೀಡುವ ಸಾಲದಲ್ಲಿ ಶೇ.25ರಷ್ಟು ಹಣವನ್ನು ಮೊದಲೇ ಹಿಡಿದಿಟ್ಟುಕೊಂಡು ಅದಕ್ಕೂ ಸೇರಿಸಿ ಬಡ್ಡಿಯನ್ನು ವಸೂಲಿ ಮಾಡಿ ಬಡವರ ಬದುಕಿನಲ್ಲಿ ಆಟವಾಡುತ್ತಿರುವುದು ಇವತ್ತು ಕಂಡು ಬರುತ್ತಿದೆ. ಹೆಚ್ಚು ದಾಖಲೆಗಳನ್ನು ಕೇಳದೆ ಸುಲಭವಾಗಿ ಸಾಲ ನೀಡುತ್ತಾರೆ ಎಂಬ ಉದ್ದೇಶದಿಂದ ಅವರು ಹೇಳಿದಕ್ಕೆಲ್ಲ ಸಹಿ ಹಾಕಿ ಸಾಲ ಪಡೆದುಕೊಳ್ಳುವುದು ಸುಲಭ ಆದರೆ ನಂತರದ ಪರಿಣಾಮ ಅನುಭವಿಸುವಾಗಲೇ ಗೊತ್ತಾಗುವುದು. ಅದು ಏನೇ ಇರಲಿ ಸಾಲಗಾರರು ಮೈಕ್ರೋಫೈನಾನ್ಸ್ ಗಳ ಕಪಿ ಮುಷ್ಠಿಯಿಂದ ಆದಷ್ಟು ಬೇಗ ಹೊರ ಬರುವಂತಾಗಲಿ ಎನ್ನುವುದಷ್ಟೇ ನಮ್ಮ ಆಶಯ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications