Hosur-Bengaluru Metro Line: ತಮಿಳುನಾಡಿನ ಹೊಸೂರಿನಿಂದ ಬೆಂಗಳೂರಿಗೆ ಮೆಟ್ರೋ ಸಂಪರ್ಕ, ಯೋಜನೆಯ ಪೂರ್ಣ ಮಾಹಿತಿ
ತಮಿಳುನಾಡಿನ ಹೊಸೂರಿನಿಂದ ಬೆಂಗಳೂರಿನ ಬೊಮ್ಮಸಂದ್ರವರೆಗೆ ಮೆಟ್ರೋ ಮಾರ್ಗ. ಈ ಬಗ್ಗೆ ಯೋಜನೆ ರೂಪಿಸಿರುವ ತಮಿಳುನಾಡು ಸರ್ಕಾರದಿಂದ ಕೇಂದ್ರಕ್ಕೆ ಪತ್ರ. ಯೋಜನೆಯ ಗುರು, ಮೊತ್ತ, ಎಲ್ಲ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 16: ಬೆಂಗಳೂರಿನಲ್ಲಿ 'ನಮ್ಮ ಮೆಟ್ರೋ' ವೇಗದ ಹಾಗೂ ಸುರಕ್ಷಿತ ಸಾರಿಗೆ ಸೇವೆ ನೀಡುತ್ತಿದೆ. ಹಲವೆಡೆ ಮೆಟ್ರೋ ಮಾರ್ಗ ವಿಸ್ತರಣೆ ಕೆಲಸವು ನಡೆಯುತ್ತಿದೆ. ಇದೇ ರೀತಿ ನೆರೆ ರಾಜ್ಯ ತಮಿಳುನಾಡಿನ ಚೆನ್ನೈ ಮೆಟ್ರೋ ರೈಲು ನಿಗಮವು (CMRL) ಸಹ ಹೊಸೂರು- ಬೆಂಗಳೂರು ನಡುವೆ ಮೆಟ್ರೋ ಸಂಪರ್ಕ ಸಾಧಿಸಲು ಬಯಿಸಿದ್ದು, ಅದಕ್ಕಾಗಿ ಅನುಮತಿ ಕೋರಿದೆ.
ಹೌದು, ಚೆನ್ನೈ ಮೆಟ್ರೋ ರೈಲು ನಿಗಮವು (CMRL) ಬೆಂಗಳೂರು ಪಕ್ಕದ ಕೈಗರಿಕಾ ಪ್ರದೇಶವಾಗಿ ಬೆಳೆಯುತ್ತಿರುವ ಬೊಮ್ಮಸಂದ್ರದಿಂದ ರೈಲು ಸಂಪರ್ಕ ನಿರ್ಮಿಸಲು ಕಾರ್ಯಸಾಧ್ಯತಾ ಅಧ್ಯಯನ ನಡೆಸುವುದಕ್ಕಾಗಿ ಕೇಂದ್ರ ವಸತಿ-ನಗರ ವ್ಯವಹಾರಗಳ ಸಚಿವಾಲಯಕ್ಕೆ ಅನುಮತಿ ಕೇಳಿದೆ. ಈ ಪ್ರಸ್ತಾವನೆಗೆ ಅನುಮೋದನೆ ದೊರೆತ ಬಳಿಕ ಚೆನ್ನೈ ಮೆಟ್ರೋ ನಿಗಮವು ಕರ್ನಾಟಕದವರೆಗೆ ಮೆಟ್ರೋ ಸಂಪರ್ಕ ನಿರ್ಮಿಸಲಿದೆ.
ತಮಿಳುನಾಡಿನ ಹೊಸೂರು ಮತ್ತು ಕರ್ನಾಟಕದ ಬೊಮ್ಮಸಂದ್ರ ರಾಜ್ಯಗಳ ಗಡಿ ಭಾಗದ ಪ್ರದೇಶಗಳು. ನಿತ್ಯ ಲಕ್ಷಾಂತರ ಜನರು ಹಾಗೂ ಸಾವಿರಾರು ವಾಹನಗಳು ಅತ್ತಿಂದ ಇತ್ತ, ಇತ್ತಿಂದ ಅತ್ತ ಸಂಚಾರ ನಡೆಸುತ್ತವೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಪರಿಣಿತರ ಸಲಹೆ ಮೇರೆಗೆ ಹೊಸೂರಿನಿಂದ ಕರ್ನಾಟಕದ ಬೊಮ್ಮಸಂದ್ರದವರೆಗೆ ಒಟ್ಟು 20.5 ಕಿಲೋ ಮಿಟರ್ ಉದ್ದದ ಮೆಟ್ರೋ ರೈಲು ಸಂಪರ್ಕ ಜೋಡಣೆಗೆ ಟೆಂಡರ್ ಕರೆಯಲಿದೆ.
ತಮಿಳುನಾಡಿನ ಹೊಸೂರು-ಬೆಂಗಳೂರಿನ ಬೊಮ್ಮಸಂದ್ರವರೆಗೆ ಮೆಟ್ರೋ ಸಂಚಾರ ಕಲ್ಪಿಸಬೇಕು ಎಂಬುದು ಲಕ್ಷಾಂತರ ಜನರ ಬಹುದಿನಗಳ ಬೇಡಿಕೆಯಾಗಿದೆ. ಕರ್ನಾಟಕ ಸರ್ಕಾರವು 2022 ರಲ್ಲಿ ಕೇಂದ್ರ ವಸತಿ-ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಹೊಸೂರು-ಬೆಂಗಳೂರು ಮಧ್ಯೆ ಲಕ್ಷಾಂತರ ಜನ ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ಮಾಡಲು ಮನವಿ ಮಾಡಿತ್ತು.
ಇದೀಗ ತಮಿಳುನಾಡು ರಾಜ್ಯ ಸರ್ಕಾರ ಸಿಎಂಆರ್‌ಎಲ್‌ಗೆ 75 ಲಕ್ಷ ರೂಪಾಯಿ ಮಂಜೂರು ಮಾಡಿದೆ. ಮೆಟ್ರೋ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಸೂಚನೆ ನೀಡಿದೆ. ಅಷ್ಟೇ ಅಲ್ಲದೇ ಬೊಮ್ಮಸಂದ್ರ ಮೆಟ್ರೊ ನಿಲ್ದಾಣದಿಂದ ಹೊಸೂರುವರೆಗೆ ಹೊಸ ಮೆಟ್ರೋ ಮಾರ್ಗ ವ್ಯವಸ್ಥೆಗೆ ಯೋಜನೆ ರೂಪಿಸಿದೆ.

ಮೆಟ್ರೋ: ಕೈಗಾರಿಕೆಗಳಿಗೆ ಭಾರಿ ಉತ್ತೇಜನ
ಚೆನ್ನೈ ಮೆಟ್ರೋ ರೈಲು ನಿಗಮ (CMRL) ಉದ್ದೇಶಿಸಿರುವ ಮೆಟ್ರೋ ಮಾರ್ಗ ಯೋಜನೆಯ 20.5 ಕಿಲೋ ಮೀಟರ್ ಪೈಕಿ 11.7ಕಿಲೋ ಮೀಟರ್ ಕರ್ನಾಟಕದಲ್ಲಿ ಸ್ಥಾಪಿತವಾಗಲಿದೆ. 8.8 ಕಿಮೀ ಮೆಟ್ರೋ ಹಳಿ ತಮಿಳುನಾಡಿನ ವ್ಯಾಪ್ತಿಗೆ ಒಳಪಡಲಿದೆ. ಹೊಸೂರು ಮತ್ತು ಬೆಂಗಳೂರು ಮಧ್ಯದ ಮೆಟ್ರೋ ಮಾರ್ಗವು ಈ ಭಾಗದ 2,000ಕ್ಕೂ ಅಧಿಕ ಸಣ್ಣ ಅತೀ ಸಣ್ಣ ಕೈಗಾರಿಕಾ ಪಟ್ಟಣದ ಬೆಳವಣಿಗೆಗೆ ಪೂರಕವಾಗಲಿದೆ. ಕೈಗಾರಿಕೆಗಳಿಗೆ ಯೋಜನೆಯಿಂದ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ತಮಿಳುನಾಡು ಸರ್ಕಾರ ಅಭಿಪ್ರಾಯಪಟ್ಟಿದೆ. ಸದ್ಯ ಕೇಂದ್ರದಿಂದ ಒಪ್ಪಿಗೆಗಾಗಿ ಸರ್ಕಾರ ಕಾಯುತ್ತಿದ್ದು, ಅನುಮೋದನೆ ಬಂದ ತಕ್ಷಣವೇ ಕೆಲಸ ಆರಂಭವಾಗಲಿದೆ ಎಂದು ಸಿಎಂಆರ್‌ಎಲ್ ವ್ಯವಸ್ಥಾಪಕ ನಿರ್ದೇಶಕರು ಹೇಳಿದರು.

ಸ್ವದೇಶಿ ಕಂಪನಿಗಳಿಗೆ ಹೆಚ್ಚು ಅನುಕೂಲ
ಟೈಟಾನ್, ಅಶೋಕ್ ಲೇಲ್ಯಾಂಡ್, ಟಿವಿಎಸ್ನಂತಹ ದೊಡ್ಡ ಕಂಪನಿಗಳಿಗೆ ಹೊಸೂರು ನೆಲೆ ಒದಗಿಸಿದೆ. ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಪ್ರಮುಖ ಕೇಂದ್ರವು ಆಗಿದೆ. ಈಗಾಗಲೇ ಹೆಸರು ಮಾಡಿರುವ ಹಾಗೂ ಸ್ವದೇಶಿ ಇವಿ ಕಂಪನಿಗಳಾದ ಅಥರ್, ಓಲಾ ಎಲೆಕ್ಟ್ರಿಕ್, ಸಿಂಪಲ್ ಎನರ್ಜಿ ಹಾಗೂ ಟಿವಿಎಸ್ ಮೋಟಾರ್ಸ್ ಈ ಹೊಸೂರು-ಕೃಷ್ಣಗಿರಿ-ಧರ್ಮಪುರಿ ಪ್ರದೇಶಗಳಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿಕೊಂಡಿವೆ. ಕಾರ್ಯಸಾಧ್ಯತೆ ಅಧ್ಯಯನ ಬಳಿಕ ಹಣಕಾಸಿನ ವರದಿ ಸಿದ್ಧವಾಗಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಯೋಜನೆಗೆ ಹಣ ವಿತರಿಸಲಿವೆ.

ಮೆಟ್ರೋ ನಿಲ್ದಾಣ ಸ್ಥಾಪನೆಗೆ ಸರ್ಕಾರ ಚಿಂತನೆ
ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ (ಟಿಡ್ಕೊ) ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವ ಸಂಬಂಧ ಕಾರ್ಯಸಾಧ್ಯತೆ ಹಾಗೂ ಪ್ರಯಾಣಿಕರಷ್ಟೇ ಅಲ್ಲದೇ ಸರಕು ಸಾಗಣೆಯ ಬಗ್ಗೆ ವಿವರವಾಗಿ ಅಧ್ಯಯನ ಮಾಡಲು ಸಲಹೆಗಾರರನ್ನು ನೇಮಕ ಮಾಡಿಕೊಂಡಿದೆ. ಹೊಸೂರಿನಿಂದ ವಿಮಾನ ಸಂಪರ್ಕ ಸಾಧಿಸುವ ಬಗ್ಗೆ ಆ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಹೊಸೂರಿನಲ್ಲಿ ವಿಮಾನ ನಿಲ್ದಾಣ ಯೋಜನೆಯು ಕೈಗಾಗರಿಕಾ ಉದ್ಯಮದ ತ್ವರಿತ ಬೆಳವಣಿಗೆಗೆ ಹಾಗೂ ನೆರೆ ರಾಜ್ಯದಲ್ಲಿ ಅಧಿಕ ಉದ್ಯೋಗ ಸೃಷ್ಟಿಗೆ ಪೂರಕವಾಗಲಿದೆ ಎಂದು ತಿಳಿದು ಬಂದಿದೆ.

ವಿಮಾನ ನಿಲ್ದಾಣದ ಬಗ್ಗೆ ವಿಶೇಷಣೆ
ಹೂಸೂರಿನಲ್ಲಿ ವಿಮಾನ ನಿಲ್ದಾಣ ಚಿಂತನೆ ಬಗ್ಗೆ ಒಂದಷ್ಟು ವಿಶ್ಲೇಷಣೆಗಳು ಕೇಳಿ ಬಂದಿವೆ. ಸಂಚಾರ ದಟ್ಟಣೆ ಏರಿಕೆ ಸಮಸ್ಯೆ ಉಂಟಾಗಬಹುದು. ಮುಂದಿನ 30 ವರ್ಷಗಳ ಭವಿಷ್ಯದ ಸಂಚಾರ ಮುನ್ಸೂಚನೆ ಬಗ್ಗೆ ಗಮನಿಸಬೇಕಿದೆ. ಉದ್ದೇಶಿತ ವಿಮಾನ ನಿಲ್ದಾಣ ಯೋಜನೆ ಜಲಾನಯನ, ಭೂಭಾಗದ ರಸ್ತೆ ಮತ್ತು ರೈಲು ಸಂಪರ್ಕ ಬಗ್ಗೆ ನಿರ್ಧರಿಸುವಂತೆ ಮಾಡುತ್ತದೆ. ಅಲ್ಲದೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೇವಲ 80 ಕಿಮೀ ದೂರದಲ್ಲಿದೆ. ಇದರಿಂದಾಗಿ ಹೊಸೂರು ವಿಮಾಣ ನಿಲ್ದಾಣಕ್ಕೆ ಅಷ್ಟಾಗಿ ಪ್ರಾಮುಖ್ಯತೆ ಧಕ್ಕದು ಎನ್ನಲಾಗಿದೆ. ಆದರೆ ಕೈಗಾರಿಕೆ ದೃಷ್ಟಿಯಿಂದ ಯೋಜನೆ ಸಹಕಾರಿಯಾಗಬಲ್ಲದು ಎಂಬ ಮಾತುಗಳು ಕೇಳಿ ಬಂದಿವೆ.












Click it and Unblock the Notifications