ಮೇಕೆದಾಟು ಯೋಜನೆ: ನಾಡಿನ ರಾಜಕಾರಣಿಗಳು ಮಾಡಿರುವ 7 ತಪ್ಪುಗಳು!
ಬೆಂಗಳೂರು, ಜೂ. 14: ತಮಿಳುನಾಡು ಸಿಎಂ ಸ್ಟಾಲಿನ್ ಪತ್ರ ಬರೆದ ಬೆನ್ನಲ್ಲೇ ಮೇಕೆದಾಟು ಯೋಜನೆ ಮತ್ತೆ ಸುದ್ದಿಯಲ್ಲಿದೆ. ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು ಹಾಕುತ್ತಿದೆ. ಇದಕ್ಕೆ ಕಾರಣ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ಮಾಡಿರುವ ಮಹಾ ಪ್ರಮಾದಗಳು. ಹೌದು ಮೇಕೆದಾಟು ಯೋಜನೆ ವಿಚಾರದಲ್ಲಿ ಆಡಳಿತ ರೂಢ ಬಿಜೆಪಿ ಹಾಗೂ ಮೇಕೆದಾಟು ಪಾದಯಾತ್ರೆ ಮಾಡಿದ ಕಾಂಗ್ರೆಸ್ ಸರ್ಕಾರ ತೋರಿದ ಎಡಬಿಡಂಗಿತನ ಇಲ್ಲಿ ವಿವರಿಸಲಾಗಿದೆ.
ಮೇಕೆದಾಟು ಯೋಜನೆ ಸಂಬಂಧ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದಂತೆ ಜಲ ಶಕ್ತಿ ಸಚಿವರಿಗೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸಿಎಂ ಸ್ಟಾಲಿನ್ ಪತ್ರ ಬರೆದಿದ್ದಾರೆ. ಇದೇ ಜೂ. 17 ರಂದು ನಡೆಯಲಿರುವ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯಲ್ಲಿ ಮೇಕೆದಾಟು ಯೋಜನೆ ವಿಚಾರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳದಂತೆ ತಮಿಳುನಾಡು ಸರ್ಕಾರ ತನ್ನ ಪ್ರಭಾವ ಬೀರಿದೆ. ಜತೆಗೆ ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂಕೋರ್ಟ್ ಕೊಟ್ಟಿರುವ ತೀರ್ಪುನ್ನು ಜಾರಿ ಮಾಡುವುದು ಮಾತ್ರ ನಿರ್ವಹಣಾ ಮಂಡಳಿ ಕೆಲಸ. ಹೊಸ ಯೋಜನೆಗಳಿಗೆ ಅನುಮತಿ ನೀಡುವ ಅಧಿಕಾರ ಇಲ್ಲ ಎಂಬ ವಿಚಾರವನ್ನು ಸ್ಟಾಲಿನ್ ಪ್ರಸ್ತಾಪಿಸಿ ಮುಂದೆ ಕಾನೂನು ಸಮರದ ಎಚ್ಚರಿಕೆ ಕೊಟ್ಟಿದ್ದಾರೆ. ಮೇಕೆದಾಟು ಯೋಜನೆಗೆ ಅಡ್ಡ ಗಾಲು ಹಾಕಬಹುದಾದ ಹಲವಾರು ಕಾನೂನು ಸಂಗತಿಗಳನ್ನು ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಸ್ಟಾಲಿನ್ ಪತ್ರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮೇಕೆದಾಟು ಯೋಜನೆಯಲ್ಲಿ ತಮಿಳುನಾಡು ಸರ್ಕಾರ ರಾಜಕೀಯ ಸ್ಟಂಟ್ ಮಾಡುತ್ತಿದೆ. ಪಿಎಂಗೆ ಬರೆದಿರುವ ಪತ್ರವನ್ನು ತರಿಸಿಕೊಳ್ಳುತ್ತೇನೆ. ನಮ್ಮ ನೀರಿನ ಹಕ್ಕಿನ ಮೇಲೆ ರೂಪಿತ ಯೋಜನೆ ಎಂದು ಬೊಮ್ಮಾಯಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಆದರೆ, ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಸರ್ಕಾರ ಆರಂಭದಲ್ಲಿಯೇ ಎಡವಿ ಬಿದ್ದಿರುವುದು ಯೋಜನೆ ಜಾರಿಗೆ ಸಾಕಷ್ಟು ತೊಡಕುಗಳು ಎದುರಾಗುವ ಸಾಧ್ಯತೆಯಿದೆ. ಅಂದಹಾಗೆ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಮೇಕೆದಾಟು ಯೋಜನೆ ವಿಚಾರದಲ್ಲಿ ಮಾಡಿರುವ ಎಡವಟ್ಟುಗಳು ಒಂದೆರಡಲ್ಲ ಅವುಗಳ ಚಿತ್ರಣ ಇಲ್ಲಿದೆ ನೋಡಿ.

ಡಿಪಿಆರ್ ಸಮಗ್ರ ಚಿತ್ರಣ:
ಕಾವೇರಿ ನದಿಯಿಂದ ತಮಿಳುನಾಡಿಗೆ ಹರಿಯುತ್ತಿರುವ ಹೆಚ್ಚುವರಿ ನೀರನ್ನು ಸಂಗ್ರಹಿಸಿ ಹೈಡ್ರೋ ಪವರ್ ಪ್ರಾಜೆಕ್ಟ್ ಮೂಲಕ ವಿದ್ಯುತ್ ಉತ್ಪಾದನೆ. ಜತೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಶೇ. 100 ರಷ್ಟು ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದೆ ಎಂಬುದು ಖಾಸಗಿ ಸಂಸ್ಥೆ ಸಿದ್ಧ ಪಡಿಸಿದ ಸಮಗ್ರ ಯೋಜನಾ ವರದಿ. ಇದರಿಂದ ಹಾಸನ, ಕೊಡಗು, ಮೈಸೂರು, ಬೆಂಗಳೂರು, ಚಾಮರಾಜನಗರ, ಕೋಲಾರ ಸೇರಿ 2.5 ಕೋಟಿ ಜನರಿಗೆ ನೆರವಾಗಲಿದೆ ಎಂಬುದು ಡಿಪಿಆರ್ ಯೋಜನೆ ಸಂಕ್ಷಿಪ್ತ ವಿವರ. ಇನ್ನು ಯೋಜನೆ ಜಾರಿಗಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡಿದೆ. ಹಾಲಿ ಬಿಜೆಪಿ ಸರ್ಕಾರ ಕೂಡ ಯೋಜನೆ ಜಾರಿ ಮಾಡುವುದಾಗಿ ಬಡಾಯಿ ಕೊಚ್ಚಿಕೊಳ್ಳುಳ್ಳುತ್ತಿದೆ. ಆದ್ರೆ ಇಲ್ಲಿ ಅಗಿರುವ ಪ್ರಮಾದಗಳನ್ನು ನೋಡಿದ್ರೆ ಪ್ರತಿ ಕನ್ನಡಿಗನ ಕೋಪ ನೆತ್ತಿಗೇರುತ್ತದೆ.

ಖಾಸಗಿ ಡಿಪಿಆರ್ ಮಾಡಿಸಿದ್ದು ಮಹಾ ತಪ್ಪು
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಒಳಗಾಗಿ ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ನೀರು ಹಂಚಿಕೆಯಾಗಿದೆ. ನೀರು ಹಂಚಿಕೆ ಸಂಬಂಧ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯನ್ನು ಸುಪ್ರೀಂಕೋರ್ಟ್ ರಚನೆ ಮಾಡಿದೆ. ಕಾವೇರಿ ನದಿ ನೀರು ಮೂರು ರಾಜ್ಯಗಳ ವಿವಾದಕ್ಕೆ ಒಳಗಾಗಿರುವ ಕಾರಣ, ಇಂತಹ ನದಿ ನೀರಿಗೆ ಸಂಬಂಧಸಿದಿಂತೆ ನಮ್ಮ ನೀರಿನ ಹಕ್ಕಿನ ಮೇಲೆ ನಾವು ಡಿಪಿಆರ್ ಸಿದ್ದಪಡಿಸಬೇಕಾದರೆ ಕೇಂದ್ರ ಸರ್ಕಾರದ ಕೇಂದ್ರ ಜಲ ಆಯೋಗದಿಂದ ವರದಿ ತಯಾರಿಸಬೇಕಿತ್ತು. ಕೇಂದ್ರ ಜಲ ಆಯೋಗ ತಯಾರಿಸುವ ವರದಿ ಮೂರು ರಾಜ್ಯಗಳ ನದಿ ನೀರು ಹಂಚಿಕೆ, ಸುಪ್ರೀಂಕೋರ್ಟ್ ತೀರ್ಪು ಅಧ್ಯಯನ ಮಾಡಿ ಅದರ ಆಧಾರದ ಮೇಲೆ ವಿವಾದ ರಹಿತ ಸಮಗ್ರ ಯೋಜನಾ ವರದಿ ತಯಾರಿಸಿ ಕೊಡುತ್ತಿತ್ತು. ಕಮೀಷನ್ ಆಸೆಗೆ ಬಿದ್ದು ಖಾಸಗಿ ಏಜೆನ್ಸಿ ಮೂಲಕ ಮೇಕೆದಾಟು ಸಮಗ್ರ ಯೋಜನೆ ತಯಾರಿಸಿರುವುದು ಈ ಹಿಂದಿನ ಕರ್ನಾಟಕ ಸರ್ಕಾರ (ಕಾಂಗ್ರೆಸ್) ಮಾಡಿರುವ ಮೊದಲ ಪ್ರಮಾದ ಎಂಬುದು ನೀರಾವರಿ ತಜ್ಞರ ಅಭಿಮತ.

ಖಾಸಗಿ ಏಜೆನ್ಸಿ ವರದಿಗೆ ಮಾನ್ಯತೆ ಸಿಗೋದು ಕಷ್ಟ:
ಕಾವೇರಿ ನದಿ ನೀರಿನ ಬಳಕೆ ಕುರಿತು ಈಗಾಗಲೇ ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿದೆ. ಅದೇ ಕಾವೇರಿ ನದಿಯ ಭಾಗವಾಗಿಯೇ ಮೇಕೆದಾಟು ಯೋಜನೆ. ಕಾವೇರಿ ನೀರು ಬಳಕೆ ಸಂಬಂಧ ಅಣೆಕಟ್ಟು ಕಟ್ಟುವ ವಿಚಾರ ಬಂದರೆ, ಮೊದಲು ಕೇಂದ್ರ ಸರ್ಕಾರದ ಕೇಂದ್ರೀಯ ಜಲ ಆಯೋಗದಿಂದ ಸಮಗ್ರ ಯೋಜನಾ ವರದಿ ಸಿದ್ಧಪಡಿಸಬೇಕು. ಅದಕ್ಕೆ ಇರುವ ಮಾನ್ಯತೆ ಖಾಸಗಿ ಏಜೆನ್ಸಿಗಳು ಮಾಡುವ ವರದಿಗೆ ಇರುವುದಿಲ್ಲ. ಈ ಯೋಜನೆ ಜಾರಿಯಿಂದ ತಮಿಳುನಾಡು- ಕರ್ನಾಟಕಕ್ಕೆ ಆಗುವ ಉಪಯೋಗಗಳ ಕುರಿತು ಮನವರಿಕೆ ಮಾಡಿಕೊಡಬೇಕಿತ್ತು. ಜತೆಗೆ ಕೇಂದ್ರದ ಅರಣ್ಯ ಮತ್ತು ಪಸರಿಸರ ಇಲಾಖೆಯಿಂದ ಈ ಯೋಜನೆಗೆ ಕ್ಲಿಯರನ್ಸ್ ತೆಗೆದುಕೊಳ್ಳಬೇಕಿತ್ತು. ಕೇಂದ್ರದ ಜಲ ಆಯೋಗ ಸಮಗ್ರ ಯೋಜನಾ ವರದಿ ತಯಾರಿಸಿದ್ದಲ್ಲಿ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಅತಿ ಸುಲಭವಾಗಿ ಪಡೆಯಬಹುದಾಗಿತ್ತು. ಇದೀಗ ಪರಿಸರ ಇಲಾಖೆ ಒಂದು ಚಕಾರ ಎತ್ತಿದರೂ ಮೇಕೆದಾಟು ಯೋಜನೆ ಜಾರಿ ಮಾಡುವುದು ತುಂಬಾ ಕಷ್ಟ.

ಖಾಸಗಿಯವರಿಂದ 'ಕೈ'ರೂಪಿಸಿದ ಎರಡು ಡಿಪಿಆರ್ ಲೋಪ:
ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ನದಿ ನೀರು ಹಂಚಿಕೆಯಾಗಿದ್ದರೂ, ಕಾವೇರಿ ನದಿ ನೀರಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟುವ ಕುರಿತು ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗದಿಂದಲೇ ರೂಪಿಸಬೇಕಿತ್ತು. 2013 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ನೀರಾವರಿ ಸಚಿವರಾಗಿದ್ದ ಎಂ.ಬಿ. ಪಾಟೀಲ್ ಅವರು ಒಂದು ಖಾಸಗಿ ಸಂಸ್ಥೆ ಮೂಲಕ 5912 ಕೋಟಿ ರೂ. ಮೊತ್ತದಲ್ಲಿ ಸಮಗ್ರ ಯೋಜನಾ ವರದಿ(ಡಿಪಿಆರ್) ತಯಾರಿಸಿರುವುದೇ ಮೊದಲ ಎಡವಟ್ಟು. ಕೇಂದ್ರೀಯ ಜಲ ಆಯೋಗದಿಂದ ಮಾಡಿಸಬೇಕು ಎಂಬ ಸಾಮಾನ್ಯ ಪ್ರಜ್ಞೆ ತೋರದೇ ಡಿಪಿಆರ್ ರೂಪಿಸಿದ್ದು ಕಾಂಗ್ರೆಸ್ ಮಾಡಿರುವ ಮಹಾ ಎಡವಟ್ಟು. ಖಾಸಗಿ ಏಜನ್ಸಿ ಮೂಲಕ ಯೋಜನಾ ವರದಿ ತಯಾರಿಸಿ ಕೇಂದ್ರೀಯ ಜಲ ಆಯೋಗಕ್ಕೆ ಸಲ್ಲಿಸಿದ್ದಾರೆ. 2018 ರಲ್ಲಿ ಕೂಡ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ವಿದ್ದಾಗ ನೀರಾವರಿ ಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಅವರು 9000 ಕೋಟಿ ಮೊತ್ತದ ಪರಿಷ್ಕೃತ ಡಿಪಿಆರ್ ತಯಾರಿಸಿದ್ದಾರೆ. ವಿಪರ್ಯಾಸವೆಂದರೆ ಅದು ಕೂಡ ಖಾಸಗಿ ಏಜೆನ್ಸಿ ತಯಾರಿಸಿರುವ ವರದಿ. ಯೋಜನೆಯ್ನು ಜಾರಿ ಮಾಡುವ ಬದ್ಧತೆ ನಮ್ಮ ನಾಯಕರಿಗೆ ಇದ್ದಿದ್ದರೆ, ಕೇಂದ್ರೀಯ ಜಲ ಆಯೋಗದಿಂದ ಡಿಪಿಆರ್ ರಚಿಸುತ್ತಿದ್ದರು.

ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಧಾನಿಗೆ ಪ್ರಭಾವ:
ಕರ್ನಾಟಕ ಪಾಲಿನ ಕಾವೇರಿ ನದಿ ನೀರನ್ನು ಬೆಂಗಳೂರು ಸೇರಿದಂತೆ ನೆರೆಯ ಪ್ರದೇಶಗಳಿಗೆ ಕುಡಿಯುವ ನೀರು ಕಲ್ಪಿಸುವ ಸಂಬಂಧ ಮೊದಲು ಪ್ರಧಾನ ಮಂತ್ರಿ ಮೋದಿ ಅವರಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಕಾನೂನು ಚೌಕಟ್ಟಿನಲ್ಲಿ ಯೋಜನೆ ಜಾರಿ ಮಾಡುವ ವಾಸ್ತವವನ್ನು ಕೇಂದ್ರ ಜಲ ಸಂಪನ್ಮೂಲ ಇಲಾಖೆಗೂ ಮನವರಿಕೆ ಮಾಡಬೇಕಿತ್ತು. ಜನರ ಕಷ್ಟ, ನೀರಿನ ಬವಣೆ ಕುರಿತು ಕೇಂದ್ರ ಸರ್ಕಾರಕ್ಕೆ ಮೊದಲು ಮನವರಿಕೆ ಮಾಡಿಕೊಟ್ಟು ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಪಕ್ಷಾತೀತವಾಗಿ ಪ್ರಭಾವ ಬೀಳಬೇಕಿತ್ತು.

ಯೋಜನೆಯಿಂದ ತಮಿಳುನಾಡಿಗೆ ಅನುಕೂಲ ಮನವರಿಕೆ
ಕಾವೇರಿ ನದಿ ನೀರಿನ ಹಂಚಿಕೆ ಕುರಿತು ನೆರೆ ರಾಜ್ಯಗಳೊಂದಿಗೆ ವಿವಾದವಿದೆ. ಹೀಗಾಗಿ ಕಾನೂನು ಚೌಕಟ್ಟಿನಲ್ಲಿ ವೈಜ್ಞಾನಿಕವಾಗಿ ಮೇಕೆದಾಟು ಯೋಜನೆ ಜಾರಿಯಾದರೆ ತಮಿಳುನಾಡಿಗೆ ಅಗುವ ಅನುಕೂಲದ ಬಗ್ಗೆ ಪ್ರತ್ಯೇಕ ವರದಿ ತಯಾರಿಸಿ ತಮಿಳುನಾಡು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿತ್ತು. ಈ ಮೂಲಕ ತಮಿಳುನಾಡು ತಗಾದೆ ತೆಗೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಿತ್ತು. ಖಾಸಗಿ ಏಜೆನ್ಸಿ ಡಿಪಿಅರ್ ಪ್ರಕಾರ ತಮಿಳುನಾಡಿಗೆ ಅನುಕೂಲ ಎಂದು ಹೇಳಲಾಗಿದೆ. ಈ ಬಗ್ಗೆ ತಮಿಳುನಾಡು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ತಗಾದೆ ತೆಗೆಯದಂತೆ ಕರ್ನಾಟಕ ಸರ್ಕಾರ ಚಾಣಾಕ್ಷತೆ ಮೆರೆದು ವಿವಾದ ರಹಿತವಾಗಿ ಮೇಕೆದಾಟು ಯೋಜನೆ ಜಾರಿಗೆ ಆದ್ಯತೆ ನೀಡಬೇಕಿತ್ತು.

ಪರಿಸರದ ಮೇಲಿನ ಪರಿಣಾಮ ಅಧ್ಯಯನ ವರದಿ ಇಲ್ಲ!
ಯಾವುದೇ ರಿವರ್ ವ್ಯಾಲಿ ಅಂಡ್ ಹೈಡ್ರೋ ಪ್ರಾಜೆಕ್ಟ್ ಕಾರ್ಯಗತಗೊಳಿಸಬೇಕಾದರೆ ಕೇಂದ್ರ ಪರಿಸರ ಮಂತ್ರಾಲಯದಲ್ಲಿರುವ ರಿವರ್ ವ್ಯಾಲಿ, ಡ್ಯಾಮ್, ಹೈಡ್ರೋ ಪ್ರಾಜಕ್ಟ್ ಅನುಮತಿಗೆ ಸಂಬಂಧಿಸಿದಂತೆ ಎಕ್ಸ್ ಪರ್ಟ್ ಅಪ್ರೈಸಲ್ ಕಮಿಟಿಯಿಂದ "ನಿರಪೇಕ್ಷಣೆ' ಪತ್ರ ಪಡೆಯಬೇಕು. ಪರಿಸರ ಮತ್ತು ಸಾಮಾಜಿಕ ಪರಿಣಾಮ ಕುರಿತು ಅಧ್ಯಯನ ನಡೆಸಬೇಕಿತ್ತು. ಸಾಂವಿಧಾನಿಕವಾಗಿ ರಚನೆಯಾಗಿರುವ ಸಂಸ್ಥೆಗಳಿಂದ ಕಾನೂನಾತ್ಮಕವಾಗಿ ಮಾನ್ಯತೆಗಳನ್ನು ಪಡೆದು ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಬೇಕಿತ್ತು. ಈ ವಿಚಾರದಲ್ಲಿ ರಾಜ್ಯವನ್ನಾಳಿದ ಮೂರು ರಾಜಕೀಯ ಪಕ್ಷಗಳು ಎಡವಿ ಬಿದ್ದಿವೆ.
Recommended Video

ಸಂವಿಧಾನಾತ್ಮಕ ಸಂಸ್ಥೆಗಳ ಅನುಮತಿಗೆ ಪ್ರಯತ್ನವೇ ನಡೆದಿಲ್ಲ:
ಮೇಕೆದಾಟು ಯೋಜನೆ ಸಂಬಂಧ ಖಾಸಗಿ ಏಜೆನ್ಸಿಗಳಿಂದ ಡಿಪಿಆರ್ ತಯಾರಿಸಿರುವುದು ಬಿಟ್ಟರೆ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಯೋಜನೆ ಜಾರಿ ಸಂಬಂಧ ಯಾವ ಸಂವಿಧಾನಾತ್ಮಕ ಸಂಸ್ಥೆಗಳಿಂದ ಅನುಮತಿ ಪಡೆದಿಲ್ಲ. ಪಡೆದಿದ್ದಲ್ಲಿ ಸಾರ್ವಜನಿಕವಾಗಿ ಅವನ್ನು ಈವರೆಗೂ ಬಹಿರಂಗಪಡಿಸಿಲ್ಲ. ಕಳೆದ ಮೂರವರೆ ವರ್ಷದಿಂದ ರಾಜ್ಯವನ್ನಾಳುತ್ತಿರುವ ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ಕಾನೂನಾತ್ಮಕವಾಗಿ ಯಾವ ಪ್ರಯತ್ನ ಮಾಡಿದಂತೆ ಕಾಣುತ್ತಿಲ್ಲ.
ಮೇಕೆದಾಟು ಯೋಜನೆ ಜಾರಿ ಮಾಡಲು ಸರ್ಕಾರಕ್ಕೆ ಬದ್ಧತೆ ಇದ್ದರೆ, ನೀರಾವರಿ ತಜ್ಞರು, ತಜ್ಞ ಅಧಿಕಾರಿಗಳು, ಕಾನೂನು ಪಂಡಿತರು, ಪರಿಸರ ತಜ್ಞರುಳ್ಳ ಸಮಿತಿ ರಚಿಸಬೇಕು. ಮೇಕೆದಾಟು ಯೋಜನೆ ಜಾರಿಗೆ ಸಂವಿಧಾನಾತ್ಮಕ ಸಂಸ್ಥೆಗಳಿಂದ ಪಡೆಯಬೇಕಾದ ಅನುಮತಿಗಳನ್ನು ಪಡೆಯಬೇಕು. ಕಾನೂನಾತ್ಮಕವಾಗಿ ಎದುರಾಗುವ ತೊಡಕುಗಳ ಪರಿಹಾರಕ್ಕೆ ಈಗಲೇ ಸಿದ್ಧರಾಗಬೇಕು. ತಡವಾದರೂ ಪರವಾಗಿಲ್ಲ, ಕೇಂದ್ರೀಯ ಜಲ ಅಯೋಗದಿಂದಲೇ ಪರಿಷ್ಕತ ಯೋಜನಾ ವರದಿ ತಯಾರಿಸುವುದು ಸೂಕ್ತ. ಇಲ್ಲದಿದ್ದರೆ ಒಂದಲ್ಲಾ ಒಂದು ಕಾರಣಕ್ಕೆ ಮೇಕೆದಾಟು ಅರ್ಧದಲ್ಲಿ ಸ್ಥಗಿತಗೊಂಡರೆ, ಸಾರ್ವಜನಿಕರ ಹಣದ ದುಂದು ವೆಚ್ಚದ ಜತೆಗೆ ರಾಜಕಾರಣಿಗಳ ಚುನಾವಣೆ ಅಜೆಂಡಾ ಆಗಿಯೇ ಮೇಕೆದಾಟು ಉಳಿಯುವಲ್ಲಿ ಯಾವ ಸಂದೇಹವೂ ಇಲ್ಲ!.












Click it and Unblock the Notifications