ಅತ್ತ ಮೇಕೆದಾಟುವಿಗಾಗಿ ಡಿಕೆಶಿ ಕೇಂದ್ರಕ್ಕೆ ಮನವಿ, ತಮಿಳುನಾಡಲ್ಲಿ ಕರ್ನಾಟಕದ ಯೋಜನೆಗೆ ಅಡ್ಡಗಾಲು ಹಾಕಲು ವೇದಿಕೆ ರೆಡಿ
ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡು ನಡುವಿನ ದಶಕಗಳ ಇತಿಹಾಸವಿರುವ ಕಾವೇರಿ ನೀರಾವರಿ ಹೋರಾಟ ಮತ್ತೊಮ್ಮೆ ತಾರಕಕ್ಕೇರುವ ಮುನ್ಸೂಚನೆಗಳು ಸಿಗುತ್ತಿವೆ. ಒಂದು ಕಡೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಹಿತರಕ್ಷಣೆಗಾಗಿ ದೆಹಲಿಯಲ್ಲಿ ದಾಳ ಉರುಳಿಸುತ್ತಿದ್ದರೆ, ಇನ್ನೊಂದೆಡೆ ತಮಿಳುನಾಡಿನ ರಾಜಕೀಯ ಗದ್ದುಗೆಯ ಜಿದ್ದಾಜಿದ್ದಿನ ನಡುವೆ 'ಮೇಕೆದಾಟು' ಪ್ರಮುಖ ಅಸ್ತ್ರವಾಗುತ್ತಿದೆ.
ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು, ಮೇಕೆದಾಟು ಸೇರಿದಂತೆ ರಾಜ್ಯದ ಪ್ರಮುಖ ನಾಲ್ಕು ಬೃಹತ್ ನೀರಾವರಿ ಯೋಜನೆಗಳಿಗೆ ಶೀಘ್ರ ಅನುಮತಿ ಹಾಗೂ ಅನುದಾನ ನೀಡುವಂತೆ ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅತ್ತ ತಮಿಳುನಾಡಿನಲ್ಲಿ ರಾಜಕೀಯ ಚಿತ್ರಣ ವೇಗವಾಗಿ ಬದಲಾಗುತ್ತಿದೆ. ತಮಿಳು ಚಿತ್ರರಂಗದ ದಳಪತಿ, ನಟ ವಿಜಯ್ ಸದ್ಯದಲ್ಲೇ ತಮ್ಮ ಮೊದಲ ವಿಧಾನಸಭೆ ಅಧಿವೇಶನವನ್ನು ಎದುರಿಸಲಿದ್ದಾರೆ. ವಿಜಯ್ ಅವರ ರಾಜಕೀಯ ಎಂಟ್ರಿಯಿಂದ ಎಚ್ಚೆತ್ತಿರುವ ಆಡಳಿತಾರೂಢ ಡಿಎಂಕೆ (DMK) ನಾಯಕ ಉದಯನಿಧಿ ಸ್ಟಾಲಿನ್, ವಿರೋಧ ಪಕ್ಷಗಳು ಮೇಕೆದಾಟು ವಿಚಾರದಲ್ಲಿ ತಮ್ಮನ್ನು ಕಟ್ಟಿಹಾಕದಂತೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದಾರೆ.

ಕರ್ನಾಟಕವು ಮೇಕೆದಾಟು ಯೋಜನೆ ಜಾರಿಗೊಳಿಸದಂತೆ ಕೇಂದ್ರದ ಮೇಲೆ ತಮಿಳುನಾಡು ಸರ್ಕಾರದಿಂದ ತೀವ್ರ ಒತ್ತಡ ಹೇರಲು ಉದಯನಿಧಿ ಸ್ಟಾಲಿನ್ ನಿರ್ಧರಿಸಿದ್ದಾರೆ. ತಮಿಳುನಾಡಿನಲ್ಲಿ ತನ್ನ ರಾಜಕೀಯ ನೆಲೆಯನ್ನು ಗಟ್ಟಿಯಾಗಿಸಿಕೊಳ್ಳಲು ಮತ್ತು ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಡಿಎಂಕೆ ಸರ್ಕಾರ ಮೇಕೆದಾಟು ಯೋಜನೆಯನ್ನು ತೀವ್ರವಾಗಿ ವಿರೋಧಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಪಾದಯಾತ್ರೆ ಮಾಡಿದ್ದ ಡಿಕೆಶಿ
ಆದರೆ, ಇತ್ತ ಕರ್ನಾಟಕದಲ್ಲಿ ಮೇಕೆದಾಟು ಯೋಜನೆಗಾಗಿ ಈ ಹಿಂದೆ ಬೃಹತ್ 'ಪಾದಯಾತ್ರೆ' ನಡೆಸಿ ಹೋರಾಟ ಮಾಡಿದ್ದ ಡಿ.ಕೆ.ಶಿವಕುಮಾರ್ ಅವರು ಈಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ತಮಿಳುನಾಡಿನ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ, ಯೋಜನೆ ಜಾರಿಗೊಳಿಸಲು ಅವರು ಪಣ ತೊಟ್ಟಿರುವುದು ಗ್ಯಾರಂಟಿ ಎನ್ನುತ್ತಿವೆ ರಾಜಕೀಯ ಮೂಲಗಳು.
ಕೇಂದ್ರ ಜಲಶಕ್ತಿ ಸಚಿವರ ಭೇಟಿ ವೇಳೆ ಪ್ರಸ್ತಾಪಿಸಿದ ಡಿಕೆ ಶಿವಕುಮಾರ್, "2025ರಲ್ಲಿ ಸುಪ್ರೀಂಕೋರ್ಟ್ ತಮಿಳುನಾಡಿನ ವಿವಿಧ ಅರ್ಜಿಗಳನ್ನು ವಜಾಗೊಳಿಸಿದೆ. ಮೇಕೆದಾಟು ಯೋಜನೆ ಅನುಮತಿ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕೇಂದ್ರ ಜಲ ಆಯೋಗ (CWC) ನಿರ್ಧಾರ ತೆಗೆದುಕೊಳ್ಳಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಆದ್ದರಿಂದ ಕೇಂದ್ರ ಸರ್ಕಾರ ಇದಕ್ಕೆ ಶೀಘ್ರವೇ ಹಸಿರು ನಿಶಾನೆ ತೋರಬೇಕು" ಎಂದು ಗಟ್ಟಿ ಧ್ವನಿಯಲ್ಲಿ ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಡಿಕೆಶಿ ನೀರಾವರಿ ಪ್ರಸ್ತಾವನೆಗಳು
ಗುರುವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದ ಸಿಎಂ, ಶುಕ್ರವಾರ ಜಲಶಕ್ತಿ ಸಚಿವರ ಮುಂದೆ ರಾಜ್ಯದ ಬಾಕಿ ಇರುವ ಯೋಜನೆಗಳ ಸುದೀರ್ಘ ಪಟ್ಟಿಯನ್ನೇ ಇಟ್ಟಿದ್ದಾರೆ. ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೃಷ್ಣಾ ನೀರು ವಿವಾದ ನ್ಯಾಯಾಧೀಕರಣ ತೀರ್ಪು ನೀಡಿ ಒಂದು ದಶಕ ಕಳೆದರೂ ಕೇಂದ್ರ ಸರ್ಕಾರ ಇನ್ನು ಸಹ ಇದನ್ನು ಗೆಜೆಟ್ನಲ್ಲಿ ಅಧಿಸೂಚನೆ ಹೊರಡಿಸಿಲ್ಲ. ಕರ್ನಾಟಕವು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅನುಷ್ಠಾನದಲ್ಲಿ ಭಾರಿ ಮೊತ್ತ ಹೂಡಿಕೆ ಮಾಡಿದ್ದು, ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಕೇಂದ್ರದ ಬೆಂಬಲ ಬೇಕು ಎಂದು ಸಿಎಂ ಕೋರಿದ್ದಾರೆ.
ಭದ್ರಾ ಮೇಲ್ದಂಡೆಗೆ 3 ವರ್ಷವಾದ್ರೂ ಸಿಗದ 5,300 ಕೋಟಿ ರೂ
ಕೇಂದ್ರ ಸರ್ಕಾರವು 2023-24ರ ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳ ಆರ್ಥಿಕ ನೆರವು ಘೋಷಿಸಿತ್ತು. ಆದರೆ 3 ವರ್ಷ ಕಳೆದರೂ ಬಿಡುಗಡೆಯಾಗಿಲ್ಲ. ಈ ಯೋಜನೆಯ 21,167.93 ಕೋಟಿ ರೂ.ಗಳ ಪರಿಷ್ಕೃತ ವೆಚ್ಚದ ಪ್ರಸ್ತಾವನೆಯನ್ನು ಮೌಲ್ಯಮಾಪನ ಮಾಡಿ, PMKSY-AIBP ಯೋಜನೆಯಡಿ ಕೇಂದ್ರದ ನೆರವನ್ನು ತಕ್ಷಣ ಬಿಡುಗಡೆ ಮಾಡಲು ಮನವಿ ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡದ ಕುಡಿಯುವ ನೀರಿನ ಅಗತ್ಯಗಳಿಗಾಗಿ ಈ ಯೋಜನೆ ಅತ್ಯಂತ ಪ್ರಮುಖವಾಗಿದೆ. ಡಿಸೆಂಬರ್ 2022ರಲ್ಲೇ ಕೇಂದ್ರ ಜಲ ಆಯೋಗ ಇದಕ್ಕೆ ಅನುಮತಿ ನೀಡಿದ್ದರೂ, ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ವನ್ಯಜೀವಿ ಅನುಮತಿ ಇನ್ನು ಸಿಕ್ಕಿಲ್ಲ. ಈ ತಡೆ ನಿವಾರಿಸಿ ಕುಡಿಯುವ ನೀರಿನ ಯೋಜನೆಗೆ ವೇಗ ನೀಡಲು ಕೋರಿದ್ದಾರೆ.
ಫೆಬ್ರವರಿ 2025ರಲ್ಲೇ ರಾಜ್ಯ ಸರ್ಕಾರ ಸಲ್ಲಿಸಿರುವ ಸೊಂತಿ ಏತ ನೀರಾವರಿ, ಇಂಡಿ ಶಾಖಾ ಕಾಲುವೆ, ಮಲಪ್ರಭಾ, ಘಟಪ್ರಭಾ ಮತ್ತು ತುಂಗಭದ್ರಾ ಎಡದಂಡೆ ಕಾಲುವೆಗಳ ಬಾಕಿ ಕಾಮಗಾರಿಗಳಿಗೆ AIBP-PMKSY ಮತ್ತು FMBAP ಯೋಜನೆಗಳಡಿ ಆರ್ಥಿಕ ನೆರವು ನೀಡುವಂತೆ ಸಿಎಂ ಕೇಳಿದ್ದಾರೆ. ಜೊತೆಗೆ, ಕೇಂದ್ರದ ನದಿ ಜೋಡಣೆ ಯೋಜನೆಯಲ್ಲಿ ಸಮಾನ ಹಂಚಿಕೆಯ ತತ್ವದಡಿ ಕರ್ನಾಟಕಕ್ಕೆ ನ್ಯಾಯಸಮ್ಮತ ಪಾಲು ಸಿಗಬೇಕು ಎಂದು ತಾಕೀತು ಮಾಡಿದ್ದಾರೆ.
ತಮಿಳುನಾಡಿನಲ್ಲಿ ಚುನಾವಣೆ ಹಾಗೂ ಹೊಸ ರಾಜಕೀಯ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಡಿಎಂಕೆ ಮತ್ತು ವಿಪಕ್ಷಗಳ ನಡುವೆ 'ಕಾವೇರಿ ಕಿಚ್ಚು' ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಾಧನವಾಗುತ್ತಿದ್ದರೆ, ಇತ್ತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ಹಕ್ಕುಗಳಿಗಾಗಿ ಕೇಂದ್ರದ ಮೇಲೆ ಒತ್ತಡ ತಂತ್ರ ಮುಂದುವರಿಸಿದ್ದಾರೆ. ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಉಭಯ ರಾಜ್ಯಗಳ ನಡುವಿನ ನೀರಾವರಿ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ನೀಡುತ್ತಿವೆ.













Click it and Unblock the Notifications