ಮೇಕೆದಾಟು ಪಾದಯಾತ್ರೆ: ಡಿಕೆಶಿ ಸೇರಿ 30 ಮಂದಿ ವಿರುದ್ಧ ಸಾತನೂರು ಠಾಣೆಯಲ್ಲಿ ಎಫ್ಐಆರ್
ಬೆಂಗಳೂರು, ಜ. 10: ಕೋವಿಡ್ ವೀಕೆಂಡ್ ಕರ್ಫ್ಯೂ ಉಲ್ಲಂಘನೆ ಮಾಡಿ ಮೇಕೆದಾಟು ಪಾದಯಾತ್ರೆ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹಿತ 30 ಮಂದಿಯ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಲಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿತ್ತು. ಇದನ್ನು ಉಲ್ಲಂಘನೆ ಮಾಡಿ ಸಾವಿರಾರು ಜನರನ್ನು ಒಂದಡೆ ಸೇರಿಸಿ ಪಾದಯಾತ್ರೆ ಮಾಡಿದ ಕಾಂಗ್ರೆಸ್ ಮುಖಂಡರ ವಿರುದ್ಧ ಸಾತನೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ವಿಪತ್ತು ನಿರ್ವಹಣಾ ಕಾಯ್ದೆ 2005ರ ಐಪಿಸಿ ಸೆಕ್ಷನ್ 141, 143, 290, 336ರ ಅಡಿ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಮೂವತ್ತು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಪಾದಯಾತ್ರೆ ಮೊಟಕುಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ಸಚಿವರುಗಳು ಮನವಿ ಮಾಡಿದ್ದರು. ಯಾವ ಮನವಿಗೂ ಕ್ಯಾರೆ ಎನ್ನದೇ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿದೆ. ಕೋವಿಡ್ ವೀಕೆಂಡ್ ಕರ್ಫ್ಯೂ ಉಲ್ಲಂಘನೆ ಮಾಡಿದ ಪ್ರಕರಣ ಸಂಬಂಧ ಸಾತನೂರು ಪೊಲೀಸರು ದಾಖಲಿಸಿರುವ ಕೇಸ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ.
ಡಿ.ಕೆ. ಶಿವಕುಮಾರ್ ಕಿಡಿ:
ಪಾದಯಾತ್ರೆ ಮಾಡಿದವರ ವಿರುದ್ಧ ಎಫ್ಐಅರ್ ದಾಖಲಿಸಿದ ಪೊಲೀಸರ ಕ್ರಮದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ಪಾದಯಾತ್ರೆಯಲ್ಲಿ ಭಾಗವಹಿಸಿದವರು ಸಾವಿರಾರು ಜನ. ಬರೀ ಮೂವತ್ತು ಮಂದಿ ಮೇಲೆ ಎಫ್ಐಆರ್ ಹಾಕಿದ್ದೀರಿ. ಈ ಡಿ.ಕೆ ಶಿವಕುಮಾರ್ ಯಾರಿಗೂ ಹೆದರುವುದಿಲ್ಲ. ನಿಮಗೆ ತಾಕತ್ತು ಇದ್ದರೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಎಲ್ಲರ ವಿರುದ್ಧ ಕೇಸು ದಾಖಲಿಸಿ. ವಿಡಿಯೋ ನಾನೇ ಕಳಿಸಿಕೊಡುತ್ತೇನೆ. ಬಿಜೆಪಿ ಮತ್ತು ಜೆಡಿಎಸ್ ವಿರುದ್ಧದ ಹೋರಾಟ ಮಾಡುತ್ತಿದ್ದೇವೆ. ನಮ್ಮನ್ನು ಟೀಕೆ ಮಾಡ್ತೀರಾ ? ಎಫ್ಐಆರ್ ದಾಖಲಿಸಿದರೆ ಸೊಪ್ಪು ಹಾಕುವರು ಯಾರು ? ಎಸ್ಪಿಗಳೇ , ಹೋಮ್ ಮಿನಿಸ್ಟರ್ ಅವರೇ ನಾನೇ ವಿಡಿಯೋ ಕಳಿಸಿಕೊಡುತ್ತೇನೆ. ಕಾನೂನಿಗೆ ಗೌರವ ಕೊಡುತ್ತೇವೆ. ಕಾನೂನು ವಿರುದ್ಧ ಆದೇಶ ಹೊರಡಿಸಿದ್ದೀರಿ. ಎಲ್ಲರ ವಿರುದ್ಧ ಕೇಸು ದಾಖಲಿಸಿ. ಯಾವುದಕ್ಕೂ ನಾವು ಹೆದರಲ್ಲ ಎಂದು ಡಿ.ಕೆ. ಶಿವಕುಮಾರ್ ಕಿಡಿ ಕಾರಿದ್ದಾರೆ.

ಪಾದಯಾತ್ರೆ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಿಸಿದ ಸಂಬಂಧ ಸಂಸದ ಡಿ.ಕೆ. ಸುರೇಶ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಪಾದಯಾತ್ರೆ ತಡೆಯುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಸರ್ಕಾರ ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಯೋಜನೆಯಿಂದ ಜನರಿಗೆ ಅನುಕೂಲ. ಈ ನೆಪದಲ್ಲಾದರೂ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿ. ಮೇಕೆದಾಟು ಯೋಜನೆ ಜಾರಿಗೆ ತರಲಿ. ಇದರಿಂದ ನಮ್ಮ ರಾಜ್ಯದ ರೈತರಿಗೆ ಅನುಕೂಲವಾಗಲಿದೆ. ರಾಜಕೀಯ ದೂಷಣೆ ಮರೆತು, ಎಲ್ಲಾ ಸಚಿವರು ಸಂಸದರು, ಸಿಎಂ ಪ್ರಧಾನಿ ಅವರ ಮೇಲೆ ಒತ್ತಡ ತಂದು ಯೋಜನೆ ಜರಿಗೆ ತರಲಿ. ಇದರಿಂದ ಬಿಜೆಪಿಗೆ ಒಳ್ಳೆಯ ಹೆಸರು ಬರಲಿದೆ ಎಂದು ಸಲಹೆ ಮಾಡಿದ್ದಾರೆ.












Click it and Unblock the Notifications