ಮೇಕೆದಾಟು ತಮಿಳುನಾಡಿಗೂ ಮಹತ್ವದ್ದು; 5 ಟಿಎಂಸಿ ಕುಡಿಯುವ ನೀರು ಬಳಸುತ್ತೇವಷ್ಟೇ: ವಿಜಯ್ - ಡಿ.ಕೆ ಶಿವಕುಮಾರ್ ಪಿಸುಮಾತು ವೈರಲ್!
ಮೇಕೆದಾಟು ಯೋಜನೆ ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡಿಗೂ ಮಹತ್ವದ ಯೋಜನೆಯಾಗಿದೆ. ಸಭೆಗೆ ಬರುತ್ತಿದ್ದಾಗ ಹಿರಿಯ ನಾಯಕರು ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಕಾವೇರಿ ನೀರಿನ ಸಮಸ್ಯೆಯನ್ನು ನಾವು ಪರಿಹರಿಸಬೇಕಾಗಿದೆ ಎಂದು ನನಗೆ ಹೇಳಿದರು. ಮೇಕೆದಾಟು ಯೋಜನೆಯಿಂದ ಹರಿಯುವ ಪ್ರತಿಯೊಂದು ಹನಿ ನೀರೂ ತಮಿಳುನಾಡು ಮತ್ತು ಪುದುಚೇರಿಯ ರೈತರಿಗೆ ನೆರವಾಗಲಿದೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ. ನಮಗೆ ಸಹಾಯ ಮಾಡಿ, ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ತಮಿಳುನಾಡಿನ ಚೆನ್ನೈನಲ್ಲಿ ನಡೆದ ದಕ್ಷಿಣ ವಲಯ ಮಂಡಳಿಯ 31ನೇ ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್, ಜನಸಂಖ್ಯೆ ನಿಯಂತ್ರಿಸುವಲ್ಲಿ ದಕ್ಷಿಣ ರಾಜ್ಯಗಳು ಸಾಧಿಸಿರುವ ಯಶಸ್ಸು ಅವುಗಳ ರಾಜಕೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡಲು ಕಾರಣವಾಗಬಾರದು ಎಂದು ಹೇಳಿದರು.

ತಮ್ಮ ಭಾಷಣದ ಕೊನೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ವಿಚಾರಗಳನ್ನೂ ಅವರು ಪ್ರಸ್ತಾಪಿಸಿದರು. ಈ ಎರಡೂ ವಿಷಯಗಳು ದಕ್ಷಿಣ ರಾಜ್ಯಗಳಿಗೆ ಆದ್ಯತೆಯ ವಿಚಾರಗಳಾಗಿದ್ದು, ಈಗಿರುವ ಸಂಸತ್ ಸ್ಥಾನಗಳ ಸಂಖ್ಯೆಯಲ್ಲೇ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಯಾವುದೇ ರೀತಿಯ ವಿಳಂಬವಾಗಬಾರದು. ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಳ ಮಾಡಬಾರದು, 1971ರ ಜನಸಂಖ್ಯೆ ಆಧಾರವನ್ನು ಗೌರವಿಸಬೇಕು ಎಂಬುದು ನಮ್ಮ ಸಭೆಯ ಪ್ರಮುಖ ಅಜೆಂಡಾ ಆಗಿತ್ತು. ಈ ವಿಚಾರದಲ್ಲಿ ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ರಾಜ್ಯಗಳು ಒಮ್ಮತದ ತೀರ್ಮಾನಕ್ಕೆ ಮುಂದಾಗಿದ್ದೇವೆ ಎಂದರು.
ಇದರ ಜೊತೆಗೆ ನೀರು ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಈ ವಿಚಾರವಾಗಿ ಪ್ರತ್ಯೇಕ ಸಭೆ ಕರೆದು ಸೂಕ್ತ ರೀತಿಯಲ್ಲಿ ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ. ಗೃಹಸಚಿವರ ಸಮ್ಮುಖದಲ್ಲಿ ನಾನು ಮೇಕೆದಾಟು ಯೋಜನೆಯಡಿ ಸಂಗ್ರಹವಾಗುವ ಒಂದೇ ಒಂದು ಹನಿ ನೀರನ್ನು ನೀರಾವರಿಗೆ ಬಳಸುವುದಿಲ್ಲ ಎಂದು ತಮಿಳುನಾಡಿಗೆ ಸ್ಪಷ್ಟಪಡಿಸಿದ್ದೇನೆ. ಕುಡಿಯಲು 5 ಟಿಎಂಸಿ ನೀರು ಬಳಸುವುದು ಬಿಟ್ಟರೆ ಉಳಿದ ನೀರನ್ನು ತಮಿಳುನಾಡಿಗೆ ಹರಿಸಲಾಗುವುದು. ಮೇಕೆದಾಟು ಯೋಜನೆಯಿಂದ ತಮಿಳುನಾಡು ಹಾಗೂ ಪಾಂಡಿಚೇರಿ ಪಾಲಿನ ನೀರು ನೀಡಲು ಸಾಧ್ಯ. ಈ ಅಣೆಕಟ್ಟು ನಿರ್ಮಾಣವಾಗುತ್ತಿರುವುದೇ ನಿಮಗಾಗಿ ಎಂದಿದ್ದಾರೆ.
ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆ: ಡಿ.ಕೆ ಶಿವಕುಮಾರ್ ಹೇಳಿದ್ದೇನು
ಇನ್ನು ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಗೆ 1971ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು, ಮುಂದಿನ 25 ವರ್ಷಗಳವರೆಗೆ ಲೋಕಸಭೆಯ ಈಗಿರುವ 543 ಸ್ಥಾನಗಳ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವಂತೆ ಹಾಗೂ ಇದೇ 543 ಸ್ಥಾನಗಳ ವ್ಯಾಪ್ತಿಯಲ್ಲಿ ಮಹಿಳಾ ಮೀಸಲಾತಿಯನ್ನು ಕಲ್ಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ದಕ್ಷಿಣ ವಲಯ ಮಂಡಳಿ ಅಂಗೀಕರಿಸಬೇಕು ಎಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.
ಯಾವುದೇ ದಕ್ಷಿಣ ರಾಜ್ಯ ತನ್ನ ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುವುದಿಲ್ಲ ಎಂಬ ಭರವಸೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಪ್ರಾತಿನಿಧ್ಯ ಎಂಬುದು ಕೇವಲ ಸಂಖ್ಯೆಗಳ ವಿಚಾರವಲ್ಲ. ಅದು ಪ್ರಭಾವ ಮತ್ತು ಧ್ವನಿಯ ವಿಚಾರವೂ ಹೌದು. ಜನಸಂಖ್ಯೆ ಸ್ಥಿರೀಕರಣಕ್ಕೆ ದೇಶ ನೀಡಿದ ಕರೆಯನ್ನು ದಕ್ಷಿಣ ರಾಜ್ಯಗಳು ಶಿಸ್ತು ಮತ್ತು ಯಶಸ್ಸಿನೊಂದಿಗೆ ಅನುಸರಿಸಿವೆ. ಕ್ಷೇತ್ರ ಪುನರ್ವಿಂಗಡಣೆ ಸಂದರ್ಭದಲ್ಲಿ ಈ ಸಾಧನೆಗಾಗಿ ಅವುಗಳನ್ನು ಶಿಕ್ಷಿಸಬಾರದು. ನಮ್ಮ ಈ ಯಶಸ್ಸು ನಮ್ಮ ಧ್ವನಿಯನ್ನು ದುರ್ಬಲಗೊಳಿಸಲು ಎಂದಿಗೂ ಕಾರಣವಾಗಬಾರದು. ನಮ್ಮ ಆರ್ಥಿಕ ಪ್ರಭಾವಕ್ಕೆ ತಕ್ಕಂತೆ ರಾಜಕೀಯ ಧ್ವನಿಯೂ ಇರಬೇಕು ಎಂದರು.
ಕ್ಷೇತ್ರ ಪುನರ್ವಿಂಗಡಣೆ ವಿಚಾರವನ್ನು ಮಹಿಳಾ ಮೀಸಲಾತಿಯೊಂದಿಗೆ ಜೋಡಿಸಿದ ಶಿವಕುಮಾರ್, ಹೊಸ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಕಾರಣಕ್ಕೆ ಮಹಿಳಾ ಮೀಸಲಾತಿಯ ಅನುಷ್ಠಾನವನ್ನು ವಿಳಂಬ ಮಾಡಬಾರದು. ಮಹಿಳೆಯರು ತಮ್ಮ ನ್ಯಾಯಯುತ ಪ್ರಾತಿನಿಧ್ಯಕ್ಕಾಗಿ ಸಾಕಷ್ಟು ಕಾಲ ಕಾದಿದ್ದಾರೆ. ಜನಸಂಖ್ಯೆಯ ಲೆಕ್ಕಾಚಾರಕ್ಕಾಗಿ ಅವರ ಮೀಸಲಾತಿ ಕಾಯಬಾರದು. ಮುಂದಿನ 25 ವರ್ಷಗಳವರೆಗೆ ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು ಈಗಿರುವ 543ಕ್ಕೆ ಸೀಮಿತಗೊಳಿಸುವಂತೆ ಹಾಗೂ ಇದೇ 543 ಸ್ಥಾನಗಳ ವ್ಯಾಪ್ತಿಯಲ್ಲಿ ಮಹಿಳಾ ಮೀಸಲಾತಿಯನ್ನು ಕಲ್ಪಿಸುವಂತೆ ನಿರ್ಣಯ ಅಂಗೀಕರಿಸಬೇಕೆಂದು ಅವರು ದಕ್ಷಿಣ ವಲಯ ಮಂಡಳಿಯನ್ನು ಒತ್ತಾಯಿಸಿದರು.
ವಿಜಯ್ - ಡಿ.ಕೆ ಶಿವಕುಮಾರ್ ಪಿಸುಮಾತು ವಿಡಿಯೋ ವೈರಲ್
ಇನ್ನು ಈ ಸಭೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪಿಸುಮಾತಿನಲ್ಲಿ ಮಾತನಾಡುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ.


Click it and Unblock the Notifications
