Get Updates
Get notified of breaking news, exclusive insights, and must-see stories!

'ಘಟನೆ ನಡೆದಿರಬಹುದು, ಸಾಕ್ಷ್ಯ ಇಲ್ಲ'; ಶೃತಿ ಹರಿಹರನ್ #ಮೀಟೂ ಪ್ರಕರಣದ ಅಸಲಿ ಕತೆ!

ಬೆಂಗಳೂರು, ಡಿ. 11: ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿಹರಿಹರನ್ ಮಾಡಿದ್ದ "ಮೀಟೂ"ಆರೋಪ ಪ್ರಕರಣ ತನಿಖೆ ನಡೆಸಿದ ಕಬ್ಬನ್ ಪಾರ್ಕ್ ಪೊಲೀಸರು 'ಬಿ ವರದಿಯನ್ನು' ಸಲ್ಲಿಕೆ ಮಾಡಿದ್ದಾರೆ.

ಆದರೆ ಇಲ್ಲಿ ಶೃತಿ ಹರಿಹರನ್ ಮೇಲೆ ದೌಜನ್ಯ ನಡೆದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಆರೋಪಕ್ಕೆ ಸಂಬಂಧಿಸಿದಂತೆ ಪೂರಕ ಸಾಕ್ಷಾಧಾರಗಳು ತನಿಖಾಧಿಕಾರಿಗಳಿಗೆ ಲಭ್ಯವಾಗಿಲ್ಲ! ಮಿಗಿಲಾಗಿ ಐದು ವರ್ಷದ ಹಿಂದೆ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಫೂಟೇಜ್ ಸಿಕ್ಕಿಲ್ಲ ! ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಿದ ಕಬ್ಬನ್ ಪಾರ್ಕ್ ಪೊಲೀಸರು ರು ಬಿ ವರದಿ ಸಲ್ಲಿಸಿದ್ದಾರೆ. ಆ ವರದಿಯ ಪಿನ್ ಟು ಪಿನ್ ಡಿಟೇಲ್ 'ಒನ್ ಇಂಡಿಯಾ' ಕನ್ನಡವು ಪ್ರಸ್ತುತ ಪಡಿಸುತ್ತಿದೆ.

ಮೀಟೂ ಪ್ರಕರಣ ನಡೆದಿದ್ದು: 27, ಅಕ್ಟೋಬರ್ 2018 ರಂದು ನಟಿ ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಶ್ವದಲ್ಲಿ ಮೀಟೂ ಅಭಿಯಾನ ಶುರುವಾಗಿತ್ತು.

ಬಾಲಿವುಡ್, ಕಾಲಿವುಡ್ ನ ನಟಿಮಣಿಯರು ತಮ್ಮ ಜೀವನದಲ್ಲಿ ಆದ ಮೀಟು ಅನುಭವ ಸಮಾಜದ ಮುಂದೆ ತೆರೆದಿಟ್ಟಿದ್ದರು.

2015 ರಲ್ಲಿ ವಿಸ್ಮಯ ಸಿನಿಮಾ ಶೂಟಿಂಗ್ ವೇಳೆ ನಡೆದಿದ್ದ ಘಟನೆ ಆಧರಿಸಿ ನಟಿ ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಹೊರಿಸಿದ್ದರು. ಅದ್ಯಾಕೋ ಇದು ಪೊಲೀಸ್ ಠಾಣೆ ಮೆಟ್ಟಿಲೇರಿತು. ನಟಿ ಶೃತಿ ಹರಿಹರನ್ ಮಾಡಿದ್ದ ಅರೋಪ ಕುರಿತು ನಟ ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

ನಟಿ ಶೃತಿ ಹರಿಹರನ್ ಆರೋಪ

ನಟಿ ಶೃತಿ ಹರಿಹರನ್ ಆರೋಪ

" ನಾನು ವೃತ್ತಿಯಲ್ಲಿ ಚಿತ್ರನಟಿಯಾಗಿದ್ದು, ಕನ್ನಡ, ತಮಿಳು, ತೆಲಗು ಚಿತ್ರಗಳಲ್ಲಿ ನಟಿಸಿದ್ದು, 2015 ರಲ್ಲಿ ಅರ್ಜುನ್ ಸರ್ಜಾ ರವರೊಂದಿಗೆ ವಿಸ್ಮಯ ಎಂಬ ಹೆಸರಿನ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದ ಶೂಟಿಂಗ್ ಹೆಬ್ಬಾಳದ ರೆಸಿಡೆನ್ಸಿ ಕಾಲೇಜಿನಲ್ಲಿ ನಡೆಯುತ್ತಿದ್ದ ವೇಳೆ ರೊಮ್ಯಾಂಟಿಕ್ ಸೀನ್ ರಿಹರ್ಸಲ್ ವೇಳೆಯಲ್ಲಿ ಅರ್ಜುನ್ ಸರ್ಜಾರವರು ನನ್ನ ಖಾಸಗಿ ಅಂಗವನ್ನು ಮುಟ್ಟಿ, ನನ್ನ ಬ್ರಾ ಅನ್ನು ಹಿಡಿದು ಎಳೆದು ನಂತರ ತೊಡೆಯ ಮೇಲೆ ಕೈಯಾಡಿಸಿದ್ದರು. ಅವರ ಈ ರೀತಿಯ ವರ್ತನೆಯ ಬಗ್ಗೆ ಬೇಜಾರಾಗಿದ್ದು, ಆಗ ತಾನೆ ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಸಿಕೊಳ್ಳೂತ್ತಿದ್ದ ನಟಿಯಾಗಿದ್ದರಿಂದ ನಾನು ಏನೂ ಮಾಡದೇ ಸುಮ್ಮನಾದೆ.

ಪುನಃ ಅವರು ನನ್ನನ್ನು ಜೋರಾಗಿ ತಬ್ಬಿಕೊಂಡು ನನ್ನ ಬೆನ್ನಿನ ಹಿಂಭಾಗದಲ್ಲೇಲ್ಲಾ ಕೈಯಾಡಿಸಿ ನಮ್ಮ ಡೈರೆಕ್ಟರ್ ಬಳಿ ದೃಶ್ಯಾವನ್ನು ಈ ರೀತಿ ಇನ್ನು ಸುಧಾರಣೆ ಮಾಡಿಕೊಳ್ಳಬಹುದಲ್ಲಾ ಎಂದು ಹೇಳಿದ್ದು, ಇದರಿಂದ ನನಗೆ ಬೇಜಾರಾಗಿತ್ತು. ಈ ವಿಷಯವನ್ನು ನನ್ನೊಂದಿಗಿದ್ದ ಬೋರೆಗೌಡ ಮತ್ತು ಕಿರಣ್ ರವರಿಗೆ ತಿಳಿಸಲಾಗಿ ಅವರು ಸಮಾಧಾನ ಪಡಿಸಿದರು.

2015 ಡಿಸೆಂಬರ್ ನಲ್ಲಿ ದೇವನಹಳ್ಳಿ ಆಕಾಶ್ ಆಸ್ಪತ್ರೆಯಲ್ಲಿ ಶ್ಯೂಟಿಂಗ್ ನಡೆಯುತ್ತಿತ್ತು. ಶೂಟಿಂಗ್ ವೇಳೆ ಖಾಸಗಿ ಸ್ಥಳದಲ್ಲಿ ಪ್ರತ್ಯೇಕವಾಗಿ ಇರೋಣ ಎಂದು ಕರೆದಿದ್ದರು. ಅದಕ್ಕೆ ನಾನು ನಿರಾಕರಿಸಿದ್ದೆ. ಆ ಬಳಿಕ 2016, ಜು. 18 ರಂದು ಯು.ಬಿ. ಸಿಟಿಯಲ್ಲಿ ಶ್ಯುಟಿಂಗ್ ಮುಗಿದು ಲಾಬಿಯಲ್ಲಿ ಕೂತಿದ್ದ ವೇಳೆ ಅರ್ಜುನ್ ಸರ್ಜಾ ನನ್ನನ್ನು ರೂಮ್‌ಗೆ ಕರೆದಿದ್ದರು.
ಒಬ್ಬರೇ ಯಾಕೆ ಕಾಯುತ್ತಿದ್ದೀರಾ ಎಂದು ಕೈ ಹಿಡಿದು ರೂಮಿಗೆ ಎಳೆಯಲು ಯತ್ನಿಸಿದ್ದರು. ಇದಕ್ಕೆ ನಿರಾಕರಿಸಿದಾಗ ಒಂದು ದಿನ ನೀನೇ ಬರುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರದ್ಧ ಮಾಡಿದ್ದ ಗಂಭೀರ ಆರೋಪ.

ಮಹಜರು ನಡೆದ ಸ್ಥಳಗಳು: ನಟಿ ಶೃತಿ ಹರಿಹರನ್ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿಯ ಕೆಂಪಾಪುರ ಸಮೀಪದ ಮನೆ, ದೇವನಹಳ್ಳಿಯ ಆಕಾಶ್ ಆಸ್ಪತ್ರೆ, ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾದಹಳ್ಳಿ ಗೇಟ್, ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಯು.ಬಿ. ಸಿಟಿಯಲ್ಲಿ ಪಂಚರ ಸಮಕ್ಷಮ ಮಹಜರು ನಡೆದಿದೆ.

ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಮೋನಿಕಾ ನೋಯಲ್ ಹೇಳಿಕೆ ಪೊಲೀಸರು ದಾಖಲಿಸಿದ್ದು, ಶೃತಿ ಹರಿಹರನ್ ಜತೆ ನಟ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಆದರೆ, ಮೋನಿಕಾ ನೋಯಲ್ ನೋಡಿರಲಿಲ್ಲ ಎಂದು ಹೇಳಿಕೆ ದಾಖಲಿಸಿದ್ದಾರೆ. ಅಸಿಸ್ಟೆಂಟ್ ಮೇಕಪ್ ಮ್ಯಾನ್ ಮಂಜುನಾಥ್ ಎಂಬಾತ ಕೂಡ ಕೆಂಪಾಪುರದ ಮನೆಯಲ್ಲಿ ಶ್ಯೂಟಿಂಗ್ ನಡೆಯುವಾಗ ಅರ್ಜುನ್ ಸರ್ಜಾ ಶೃತಿ ಹರಿಹರನ್ ಜತೆ ಅಸಭ್ಯವಾಗಿ ವರ್ತನೆ ಮಾಡಿದ್ದ ಬಗ್ಗೆ ಹೇಳಿಕೊಂಡಿದ್ದರು. ಘಟನೆಯನ್ನು ನೋಡಿಲ್ಲ ಎಂದು ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.

ಚಿತ್ರ ನಿರ್ಮಾಪಕನ ಹೇಳಿಕೆ: ಚಿತ್ರ ನಿರ್ಮಾಪಕ ಉಮಾಶಂಕರ್ ರೆಡ್ಡಿ ಹೇಳಿಕೆ ದಾಖಲಿಸಿದ್ದು, ರೊಮ್ಯಾಂಟಿಕ್ ಸೀನ್ ಶೂಟಿಂಗ್ ವೇಳೆ ರಿಹರ್ಸಲ್ ನಡೆದಿದೆ. ಆದರೆ ಶೂಟಿಂಗ್ ಸೆಟ್ ನಲ್ಲಿ 100 ಜನ ಇರುತ್ತಿದ್ದರು.
ಸಿನಿಮಾ ಚಿತ್ರೀಕರಣ ವೇಳೆ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಯಾವುದೇ ದೂರು ಹೇಳಿಲ್ಲ. ತನಗಾದ ಸಮಸ್ಯೆ ಬಗ್ಗೆ ನನ್ನ ಬಳಿ ಹೇಳಿಕೊಂಡಿಲ್ಲ. ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿಕೆ ದಾಖಲಿಸಿದ್ದಾರೆ.

ಶಾಟ್ ಓಕೆ ಆಗದಿದ್ದರೆ ರೀ ಟೇಕ್ ಎಂದಿದ್ದೆ ಅಂದ ನಿರ್ದೇಶಕ: ನಟಿ ಶೃತಿ ಹರಿಹರನ್ ಮಾಡಿದ್ದ ಮೀಟೂ ಪ್ರಕರಣದ ಸಾಕ್ಷಿದಾರ ನಿರ್ದೇಶಕ ಅರುಣ್ ವೈದ್ಯನಾಥನ್ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದು, ನಟಿ ಶೃತಿ ಹರಿಹರನ್ ಮಾಡಿರುವ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ದಾಖಲಿಸಿದ್ದಾರೆ. "ತಾನು ಹತ್ತು ವರ್ಷದಿಂದ ಸಿನಿಮಾ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೇನೆ.

ಇದರಲ್ಲಿ ವಿಸ್ಮಯ ಕೂಡ ಒಂದು. ನಾಯಕ ನಟ ಅರ್ಜುನ್ ಸರ್ಜಾ ಮತ್ತು ನಾಯಕ ನಟಿ ಶೃತಿ ಹರಿಹರನ್ ಆಯ್ಕೆ ಮಾಡಿ ಸಿನೆಮಾ ಮಾಡಿರುತ್ತೇವೆ. ವಿಸ್ಮಯ ಸಿನೆಮಾ 2015 ರಲ್ಲಿ ಶೂಟಿಂಗ್ ಶುರುವಾಗಿತ್ತು. ಮೊದಲನೆಯದೃಶ್ಯ ಕೆಂಪಾಪುರದ ಮನೆಯಲ್ಲಿ ಶೃತಿ ಹಾಗೂ ಅರ್ಜುನ್ ಸರ್ಜಾ ರವರ ರೋಮ್ಯಾಂಟಿಕ್ ಸೀನ್ ಆಗಿದ್ದು, ದೃಶ್ಯಾವಳಿಯನ್ನು ಚಿತ್ರೀಕರಿಸುವ ವೇಳೆಯಲ್ಲಿ ತಾನು ಅಲ್ಲಿಯೇ ಸ್ಪಾಟ್‌ನಲ್ಲಿಇದ್ದೆನು. ದೃಶ್ಯದ ಎಲ್ಲಾ ಸೀನ್‌ಗಳನ್ನು ಶೃತಿ ಹರಿಹರನ್ ರವರಿಗೆ ಮೊದಲೇ ತಿಳಿಸಿ, ಅವರ ಒಪ್ಪಿಗೆ ಪಡೆದು ಶೂಟಿಂಗ್ ಮಾಡಿರುತ್ತೇವೆ.

ಇದಕ್ಕಾಗಿ ರಿಹರ್ಸಲ್ ಕೂಡ ಮಾಡಿರುತ್ತೇವೆ. ಕೆಲವೊಮ್ಮೆ ಶಾಟ್ ಓಕೆ ಆಗದಿದ್ದರೆ, ನಾನು ಮತ್ತೆ ಪುನಃ ರಿಟೇಕ್ ಮಾಡಿಸುತ್ತಿದ್ದೆ. ಪ್ರತಿ ಸೀನ್ ಶೂಟಿಂಗ್ ಮಾಡುವಾಗ ಹಲವಾರು ಜನ ಇರುತ್ತಿದ್ದೆವು. ಸಿನೆಮಾದಲ್ಲಿ ರೋಮ್ಯಾಂಟಿಕ್ ಸೀನ್ ಇದ್ದಾಗ, ಒಬ್ಬರಿಗೊಬ್ಬರುಅನ್ಯೋನ್ಯವಾಗಿ ನಟಿಸುವುದುಸಾಮಾನ್ಯವಾಗಿರುತ್ತದೆ. ಸೆಟ್‌ನಲ್ಲಿ ತುಂಬಾ ಜನರು ಶೂಟಿಂಗ್ ಮಾಡುವಾಗ ಅನ್ಯ ರೀತಿಯಲ್ಲಿ ನಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ.

ಶೃತಿ ಹರಿಹರನ್ ರವರು ಅರ್ಜುನ್ ಸರ್ಜಾ ರವರ ಮೇಲೆ ಆಪಾದನೆ ಮಾಡಿರುವ ವಿಷಯ ತಿಳಿದು ನನಗೆ ನೋವು ಮತ್ತು ಆಶ್ಚರ್ಯ ಆಯಿತು. ಶೃತಿ ಹರಿಹರನ್ ರವರು ಒಟ್ಟು 9 ದಿನ ನಮ್ಮ ಶ್ಯೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಒಂದೇ ರೋಮ್ಯಾಂಟಿಕ್ ಸೀನ್ ಇದ್ದು, ಇದನ್ನು ೨ ಗಂಟೆಗಳ ಕಾಲ ಶೂಟಿಂಗ್ ಮಾಡಿರುತ್ತೇವೆ.

ನಾನು ಶೃತಿ ಹರಿಹರನ್ ರವರು ಸಂಪರ್ಕದಲ್ಲಿದ್ದೆವು. ಅವರು ಸಿನೆಮಾದ ಬಗ್ಗೆ ಮತ್ತು ಅರ್ಜುನ್ ಸರ್ಜಾ ರವರ ಜೊತೆ ಕೆಲಸ ಮಾಡಿದ ಬಗ್ಗೆ ತಮ್ಮ ಅಭಿಪ್ರಾಯವನ್ನು ಒಳ್ಳೆಯ ರೀತಿಯಲ್ಲಿ ಹಂಚಿಕೊಂಡಿದ್ದಾರೆ. ಅವರು ಶೂಟಿಂಗ್ ಬರುವಾಗ ಅವರ ತಾಯಿ ಮತ್ತು ಅಜ್ಜಿಯಜೊತೆ ಬರುತ್ತಿದ್ದರು.

ಆದರೆ ಶೃತಿ ರವರು ಸಿನೆಮಾ ಶೂಟಿಂಗ್ ಮುಗಿದು, ರಿಲೀಸ್ ಆದ ಮೇಲೂ, ಯಾವತ್ತೂ ನನ್ನ ಬಳಿ ಅರ್ಜುನ್ ಸರ್ಜಾ ರವರ ಕೆಟ್ಟ ರೀತಿಯಲ್ಲಿ ನಡೆದುಕೊಂಡಿರುತ್ತಾರೆ ಎಂಬುದಾಗಿ ತಿಳಿಸಿರುವುದಿಲ್ಲ ಹಾಗೂ ನನ್ನ ಅಸೋಸಿಯೇಟ್ಸ್ ನಿರ್ದೇಶಕರುಗಳಾದ ಭರತ್ ನೀಲಕಂಠನ್ ಮತ್ತು ಮೋನಿಕಾ ನೀಯೋಲ್ ರವರೂ ಸಹ ಶೃತಿ ಹರಿಹರನ್ ರವರ ಬಗ್ಗೆ ಯಾವುದೇ ವಿಚಾರವನ್ನು ನನಗೆ ತಿಳಿಸಿರುವುದಿಲ್ಲ. ಸಿನೆಮಾ ಶೂಟಿಂಗ್ ಶುರುವಾದಾಗಿನಿಂದ ಮುಗಿಯುವವರೆಗೂ ಯಾವುದೇ ರೀತಿಯಲ್ಲಿ ತೊಂದರೆಯಾಗದೇ ಮುಗಿದಿರುತ್ತದೆ" ಹೀಗೆ ಹೇಳಿಕೆ ದಾಖಲಿಸಿದ್ದಾರೆ.

ಕೆಂಪಾಪುರದ ಬೆಡ್ ರೂಮ್ ಸೀನ್ ನಲ್ಲಿ ನಟ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂದು ನಟಿ ಶೃತಿ ಹರಿಹರನ್ ಮಾಡಿದ್ದ ಆರೋಪಕ್ಕೆ ಯಾವುದೇ ಸಾಕ್ಷಾಧಾರ ಸಿಕ್ಕಿಲ್ಲ. ನಿರ್ಮಾಪಕ ಮತ್ತು ನಿರ್ದೇಶಕ ಕೂಡ ಶೃತಿ ಹರಿಹರನ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ದಾಖಲಿಸಿದ್ದಾರೆ. ಮಿಗಿಲಾಗಿ ಶ್ಯೂಟಿಂಗ್ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗುತ್ತವೆ. ಹೀಗಾಗಿ ಅಸಭ್ಯ ವರ್ತನೆ ಮಾಡಲು ಸಾಧ್ಯವಿಲ್ಲ ಎಂಬುದು ಕೆಂಪಾಪುರ ಬೆಡ್ ಸೀನ್ ಶ್ಯೂಟಿಂಗ್ ಆರೋಪಕ್ಕೆ ಸಂಬಂಧಿಸಿಂತೆ ಕಬ್ಬನ್ ಪಾರ್ಕ್ ಪೊಲೀಸರ ವರದಿಯ ಸಾರಾಂಶ.

 ನಟಿ ಶೃತಿ ಹರಿಹರನ್ ಅಪ್ತೆ, ಯಶಸ್ವಿನಿ ಹೇಳಿಕೆ ಸಾರಾಂಶ

ನಟಿ ಶೃತಿ ಹರಿಹರನ್ ಅಪ್ತೆ, ಯಶಸ್ವಿನಿ ಹೇಳಿಕೆ ಸಾರಾಂಶ

ಕನಕಪುರ ರಸ್ತೆಯಲ್ಲಿರುವ ಯಶಸ್ವಿನಿ ಶೃತಿ ಹರಿಹರನ್ ಕ್ಲಾಸ್ ಮೇಟ್, ಒಬ್ಬರೂ ಪರಮಾಪ್ತರು. ಯು.ಬಿ. ಸಿಟಿಯಲ್ಲಿರುವ ಕಂಪನಿಯಲ್ಲಿ ಮಾರ್ಕೆಂಟಿಂಗ್ ಮ್ಯಾನೇಜರ್ ಅಗಿ ಕೆಲಸ ಮಾಡುತ್ತಿದ್ದು, ಅವರು ನೀಡಿರುವ ಹೇಳಿಕೆ ವಿವರ ಹೀಗಿದೆ. " ತಾನು ಮತ್ತು ಶೃತಿ ಹರಿಹರನ್ ಕಾಲೇಜಿನಲ್ಲಿ ಒಟ್ಟಿಗೆ ಓದಿರುತ್ತೇವೆ. ಮತ್ತು ಸ್ನೇಹಿತರಾಗಿರುತ್ತೇವೆ.

ಮೊಬೈಲ್‌ನಲ್ಲಿ ಇಬ್ಬರೂ ಆಗಾಗ ಮಾತನಾಡುತ್ತಿರುತ್ತೇವೆ. 2015-16 ರಲ್ಲಿ ವಿಸ್ಮಯ ಚಿತ್ರದ ಶೂಟಿಂಗ್ ಸಮಯದಲ್ಲಿಯೂ ಕೂಡ ಶೃತಿ ನನ್ನೊಂದಿಗೆ ಫೋನಿನಲ್ಲಿ ಮಾತನಾಡಿರುತ್ತಾಳೆ. ಆ ಸಮಯದಲ್ಲಿ ಶೃತಿ ಒಂದ ಬಾರಿ ನಮ್ಮ ಮನೆಗೆ ಬಂದಿದ್ದಾಗ ನನ್ನ ಬಳಿ ಅರ್ಜುನ್ ಸರ್ಜಾ ಜೊತೆ ನಟಿಸಲು ತುಂಬಾ ಅನ್ ಕಂಫರ್ಟಬಲ್ ಆಗುತ್ತಿದೆ, ಅವರೊಟ್ಟಿಗೆ ನನಗೆ ನಟಿಸಲುಆಗುತ್ತಿಲ್ಲ ಎಂದು ನನ್ನ ಬಳಿ ಬೇಸರ ತೋಡಿಕೊಂಡಿದ್ದಳು.

ಅಲ್ಲದೇ ಆಗ ಶೃತಿ ಅರ್ಜುನ್ ಸರ್ಜಾರವರ ವಿರುದ್ಧ ಪೋಲಿಸರಿಗೆ ಕಂಪ್ಲೇಟ್ ಕೊಡಬೇಕೆಂದಿದ್ದೇನೆಂದು ಹೇಳಿದ್ದು, ಆಗ ನಾನು ಶೃತಿಗೆ ಬೇಡ ನಿನ್ನ ಭವಿಷ್ಯದ ಬಗ್ಗೆ ಯೋಚನೆ ಮಾಡು. ನಿನ್ನ ಮರ್ಯಾದೆ ಹೋಗುತ್ತದೆಯೆಂದು ಹೇಳಿದೆನು. ಆದರೆ ಘಟನೆಯನ್ನು ನಾನು ನೋಡಿಲ್ಲ ಎಂದು ಹೇಳಿಕೆ ದಾಖಲಿಸಿದ್ದಾರೆ.

ಮೀಟೂ ಪ್ರಕರಣದ ಸಿಸಿಟಿವಿ ಕಥೆ:

ನಟಿ ಶೃತಿ ಹರಿಹರನ್ ಆರೋಪಿಸಿದಂತೆ ಮೀಟೂ ಘಟನೆ ನಡೆದಿದ್ದು 2015 ರಲ್ಲಿ. ಆದರೆ ಪ್ರಕರಣ ದಾಖಲಾಗಿದ್ದು 2018 ರಲ್ಲಿ. ತನಿಖೆ ನಡೆಸಿದ್ದು 2020 ರಲ್ಲಿ. ವಿಸ್ಮಯ ಸಿನಿಮಾ ಚಿತ್ರೀಕರಣ ಸಂಬಂಧ ದೇವನಹಳ್ಳಿಯ ಆಕಾಖಶ್ ಆಸ್ಪತ್ರೆಗೆ ಭೇಟಿ ನೀಡಿ ಸಿಸಿಟಿವಿ ಪರಿಶೀಲಿಸಲು ಪೊಲೀಸರು ಮುಂದಾಗಿದ್ದಾರೆ. ಆದರೆ, ಸ್ಥಳದಲ್ಲಿ ಯಾವುದೇ ಸಿಸಿಟಿವಿ ಫೂಟೇಜ್ ಸಿಕ್ಕಿಲ್ಲ. ಇನ್ನು ಕೆಂಪಾಪುರದಲ್ಲಿ ಶ್ಯೂಟಿಂಗ್ ನಡೆದ ಮನೆಯಲ್ಲಿ ಸಿಸಿಟಿವಿ ಇದ್ದರೂ, ಸಿಸಿಟಿವಿ ಬ್ಯಾಕಪ್ ಇಲ್ಲ. ಸಾದರಹಳ್ಳಿ ಗೇಟ್ ಬಳಿ ಸಿನಿಮಾ ಶ್ಯೂಟಿಂಗ್ ಸಂಬಂಧ ಯಾವುದೇ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿಲ್ಲ.

 ಅರ್ಜುನ್ ಸರ್ಜಾ ( ಶ್ರೀನಿವಾಸ ಸರ್ಜಾ ) ಹೇಳಿಕೆ

ಅರ್ಜುನ್ ಸರ್ಜಾ ( ಶ್ರೀನಿವಾಸ ಸರ್ಜಾ ) ಹೇಳಿಕೆ

ನಟಿ ಶೃತಿ ಹರಿಹರನ್ ಆರೋಪ ಕುರಿತು ಕಬ್ಬನ್ ಪಾರ್ಕ್ ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದು ಕೋರಿ ಅರ್ಜುನ್ ಸರ್ಜಾ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಇಡೀ ರಾಜ್ಯದಲ್ಲಿ ದೊಡ್ಡ ಸಂಚಲನ ಹುಟ್ಟು ಹಾಕಿತ್ತು. ಅ ಬಳಿಕ ಬಂಧನ ಮಾಡದಂತೆ ನ್ಯಾಯಾಲಯ ವಿಧಿಸಿದ್ದ ಷರತ್ತು ಅನ್ವಯ ವಿಚಾರಣೆಯನ್ನು ಎದುರಿಸಿದ್ದರು. ಅರ್ಜುನ್ ಸರ್ಜಾ ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ದಾಖಲಿಸಿರುವ ಹೇಳಿಕೆ ಶಾರಾಂಶ ಹೀಗಿದೆ.

" ನಾನು ವಿಸ್ಮಯ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಶೃತಿ ಹರಿಹರನ್ ರವರು ನಾಯಕಿ ನಟಿಯಾಗಿ ನಟಿಸಿರುತ್ತಾರೆ. ಕೆಂಪಾಪುರದ ಮನೆಯಲ್ಲಿ ಶೂಟಿಂಗ್ ನಡೆಯುತ್ತಿರುವಾಗ ಮೊದಲ ಬಾರಿಗೆ ಶೃತಿಯನ್ನು ನೋಡಿದ್ದೆನು. ಚಿತ್ರದ ಮೊದಲ ದೃಶ್ಯ ಶೃತಿಹರನ್ ಹಾಗೂ ನನ್ನ ರೋಮ್ಯಾಂಟಿಕ್ ಸೀನ್ ಆಗಿರುತ್ತದೆ. ಕೆಂಪಾಪುರದ ಮನೆಯಲ್ಲಿ ಸುಮಾರು ಮೂರು ದಿನ ಶೂಟಿಂಗ್ ಮಾಡಿರುತ್ತಿರುತ್ತಾನೆ. ಕೆಂಪಾಪುರ ಮನೆಯಲ್ಲಿ ಬೆಡ್‌ರೂಂ ಸೀನ್ ಮಾಡುವಾಗ ಒಂದು ಬಾರಿ ರಿಹರ್ಸಲ್ ಮಾಡಿರುತ್ತೇವೆ.

ಶೃತಿ ಆರೋಪಿಸಿದಂತೆ ನಾನು ಅವರಿಗೆ ಮುಜುಗರ ಆಗುವ ರೀತಿಯಲ್ಲಿ ಅವರ ದೇಹವನ್ನು ಮುಟ್ಟಿರುವುದಿಲ್ಲ. ಆ ದೃಶ್ಯಾವಳಿ ನಡೆಯುವ ಸಮಯದಲ್ಲಿ ಡೈರೆಕ್ಟರ್ ಕ್ಯಾಮರಾಮ್ಯಾನ್ ಹಾಗೂ ಸುಮಾರು ಜನ ಬೇರೆ ಕೆಲಸಗಾರರು ಇದ್ದರು. ಈ ಚಿತ್ರದ ಶೂಟಿಂಗ್ ವೇಳೆಯಲ್ಲಿ ಡೈರೆಕ್ಟರ್ ಹೇಳಿದಷ್ಟನ್ನು ಮಾಡಿರುತ್ತೇನೆ.

ಈ ಸಮಯದಲ್ಲಿ ಕ್ಯಾಮರಾಮೆನ್ ಅರವಿಂದ ಕೃಷ್ಣ ರವರು ಸ್ಥಳದಲ್ಲಿಯೇ ಇದ್ದರು. ನಾನು ವಿಸ್ಮಯಚಿತ್ರದ ಶೂಟಿಂಗ್ ಸಮಯದಲ್ಲಿ ಬಿಡುವಿನ ವೇಳೆಯಲ್ಲಿ ನನ್ನ ಪ್ರೇಮಬರಹ ಚಿತ್ರದ ಪ್ರೋಡ್ಯೂಸರ್, ಡೈರೆಕ್ಟರ್‌ಎಲ್ಲಾ ನಾನೇ ಆಗಿದ್ದರಿಂದ ಆ ಚಿತ್ರದ ಬಗ್ಗೆ ತೊಡಗಿಸಿಕೊಳ್ಳುತ್ತಿದ್ದೆನು. ಈ ಸಮಯದಲ್ಲಿ ಶೃತಿಯಾಗಲಿ ಬೇರೆಯಾರಜೊತೆಯಾಗಲಿ ನಾನು ಹೆಚ್ಚು ಮಾತನಾಡುತ್ತಿರಲಿಲ್ಲ. ಕೆಂಪಾಪುರದ ಮನೆಯಲ್ಲಿ ಶೃತಿಯವರೊಂದಿಗೆ ಸುಮಾರು ಮೂರ್ನಾಲ್ಕು ದಿನ ಶೂಟಿಂಗ್ ನಡೆಯಿತು ಎಂದು ಹೇಳಿಕೆ ದಾಖಲಿಸಿದ್ದಾರೆ.

ಇನ್ನು ದೇವನಹಳ್ಳಿ ಆಕಾಶ್ ಆಸ್ಪತ್ರೆಯಲ್ಲಿ ಚಿತ್ರೀಕರಣ ಮತ್ತು ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ದಾಖಲಿಸಿರುವ ವಿವರ ಹೀಗಿದೆ. "ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಲ್ಲಿ ಚಿತ್ರೀಕರಣ ನಡೆಯಿತು. ಆ ವೇಳೆಯಲ್ಲಿ ನನ್ನತಮ್ಮನ ಪಾತ್ರ ಮಾಡುತ್ತಿದ್ದ ವೈಭವ್, ಸುಧಾರಾಣಿ, ನನ್ನ ಮಗುವಿನ ಪಾತ್ರ ಮಾಡಿದ್ದ ಒಂದು ಹೆಣ್ಣು ಮಗು ಮತ್ತು ಶೃತಿಹರಿಹರನ್ ರವರು ಇದ್ದರು. ಹಾಗೂ ಇವರೊಂದಿಗೆ ಪ್ರಸನ್ನ ಮತ್ತು ವರಲಕ್ಷ್ಮೀ ಎಂಬ ನಟರು ಸಹ ಇದ್ದರು. ಅಲ್ಲಿ2 ದಿನ ಶೂಟಿಂಗ್ ನಡೆಯಿತು. ಒಂದು ದಿನ ಸಂಜೆ 6 ಗಂಟೆ ವರೆಗೂ ಮತ್ತೊಂದು ದಿನ ರಾತ್ರಿ 9 ಗಂಟೆ ವರೆಗೂ ಶೂಟಿಂಗ್ ನಡೆಯಿತು. ಆ ಎರಡು ದಿನ ಶೃತಿ ಹರಿಹರನ್ ರವರು ಅಲ್ಲಿಇದ್ದರು. ಎರಡೂ ದಿನ ನಾನು ಶೃತಿ ಹರಿಹರನ್ ರವರೊಂದಿಗೆ ಮಾತನಾಡಿರುವುದಿಲ್ಲ. ನಂತರ ನಾನು ನೇರವಾಗಿ ಮನೆಗೆ ಹೋಗಿರುತ್ತೇನೆ ಎಂದು ಹೇಳಿಕೆ ದಾಖಲಿಸಿದ್ದಾರೆ.

ಇನ್ನು ಯುಬಿ ಸಿಟಿನಲ್ಲಿ ನಡೆದ ಘಟನೆ ಬಗ್ಗೆ ಸಹ ಅರ್ಜುನ್ ಸರ್ಜಾ ತನ್ನ ಹೇಳಿಕೆಯಲ್ಲಿ ಪ್ರಸ್ತಾಪ ಮಾಡಿದ್ದು,"ಯು.ಬಿ.ಸಿ.ಟಿ ಮುಂದ ಕಾರಿನೊಳಗೆ ನನ್ನ ಹಾಗೂ ಶೃತಿಯವರ ಒಂದು ಸೀನ್ ಇದ್ದು, ಆ ಸೀನ್‌ನ ಶೂಟಿಂಗ್ ಮುಗಿದ ಮೇಲೆ ಶೃತಿರವರು ಹೋಗಿರುತ್ತಾರೆ. ನಾನು ಇನ್ನೂ ಕೆಲವು ಚಿತ್ರೀಕರಣವನ್ನು ಓಕ್‌ವುಡ್ ಹೋಟೆಲ್‌ನಲ್ಲಿ ಹಾಗೂ ಬೇರೆಕಡೆಇದ್ದಕಾರಣ ನಾನು ಅಲ್ಲಿಯೇ ಉಳಿದುಕೊಂಡೆನು.

ಆ ಸಮಯದಲ್ಲಿ ನನ್ನ ಸಿನಿಮಾ ಪ್ರೇಮಬರಹದ ಚಿತ್ರೀಕರಣವೂ ಸಹ ನಡೆಯುತ್ತಿದ್ದ ಕಾರಣ ಓಕ್‌ವುಡ್ ಹೋಟೆಲ್‌ನಲ್ಲಿ ನನ್ನ ಹೋಂ ಪ್ರೋಡೋಕ್ಷನ್ ಹೆಸರಿನಲ್ಲಿಯೇ ರೂಂ ಅನ್ನು ಬುಕ್ ಮಾಡಲಾಗಿರುತ್ತದೆ. ಆ ಸಮಯದಲ್ಲಿ ನಾನು ಶೃತಿಯವರನ್ನು ಓಕ್‌ವುಡ್‌ನ ಲಾಬಿಯಲ್ಲಿ ಎಲ್ಲಿಯೋ ನೋಡಿರುವುದಿಲ್ಲ. ಆ ದಿನ ನನ್ನ ಹಾಗೂ ಶೃತಿಯವರ ಮಧ್ಯೆ ವೈಯಕ್ತಿಕವಾಗಿ ಯಾವುದೇ ಮಾತುಕತೆ ನಡೆದಿರುವುದಿಲ್ಲ. ವಿಸ್ಮಯ ಚಿತ್ರದಲ್ಲಿ ಶೃತಿಯವರೊಂದಿಗೆ ಐದಾರು ದಿನ ಚಿತ್ರೀಕರಣ ಮಾಡಿರಬಹುದು. ನಾನು ಶೃತಿಯವರೊಂದಿಗೆ ಕನ್ನಡದಲ್ಲಿಯೇ ಮಾತನಾಡುತ್ತಿದ್ದೆನು.

ಶೃತಿಯವರು ಯಾವಾಗಲೂ ನನಗೆ ನಿಮ್ಮಜೊತೆ ಕೆಲಸ ಮಾಡಿದ್ದು, ತುಂಬಾ ಖುಷಿಯಾಗಿರುತ್ತದೆಯೆಂದು ಸಹಜವಾಗಿ ಹೇಳಿದ್ದರು. ಚಿತ್ರೀಕರಣ ಸಮಯದಲ್ಲಿ ಶೃತಿಯೂ ನನ್ನೊಂದಿಗೆ ತುಂಬಾ ಮರ್ಯಾದೆಯಿಂದ ಮಾತನಾಡುತ್ತಿದ್ದರು. ಶೃತಿ ಹರಿಹರನ್ ರವರು ನನ್ನ ಮೇಲೆ ಮಾಡಿರುವ ಆರೋಪ ಉದ್ದೇಶಪೂರ್ವಕವಾಗಿರುತ್ತದೆ ಎಂದು ಅರ್ಜುನ್ ಸರ್ಜಾ ತನಿಖಾ ಕಾಲದಲ್ಲಿ ಪೊಲೀಸರಿಗೆ ನೀಡಿರುವ ಹೇಳಿಕೆಯ ಸಾರಾಂಶವಿದು.

 ಅಸೋಸಿಯೇಟ್ ನಿರ್ದೇಶಕ ಭರತ್ ನೀಲಕಂಠನ್ ಹೇಳಿದ್ದೇನು ?

ಅಸೋಸಿಯೇಟ್ ನಿರ್ದೇಶಕ ಭರತ್ ನೀಲಕಂಠನ್ ಹೇಳಿದ್ದೇನು ?

ವಿಸ್ಮಯ ಸಿನಿಮಾ ನಿರ್ವಹಣೆ, ಶ್ಯೂಟಿಂಗ್ ಆಯೋಜನೆ ಮಾಡುತ್ತಿದ್ದೆ. ಎಲ್ಲರ ಜತೆ ಮಾತನಾಡಿ ಬರುವಂತೆ ಸೂಚಿಸುತ್ತಿದ್ದೆ. 2015 ನವೆಂಬರ್ ನಲ್ಲಿ ವಿಸ್ಮಯ ಶ್ಯೂಟಿಂಗ್ ನಡೆಯಿತು. ಮೊದಲು ಹೆಬ್ಬಾಳದ ಹತ್ತಿರದ ಬಂಗ್ಲೋನಲ್ಲಿ ಶೂಟಿಂಗ್ ಸುಮಾರು ಹತ್ತು ದಿವಸ ನಡೆದಿರುತ್ತದೆ. ನಂತರ ಆಕಾಶ್ ಆಸ್ಪತ್ರೆಯಲ್ಲಿ ಸುಮಾರು 5 ದಿವಸಗಳ ಶೂಟಿಂಗ್ ನಡೆದಿರುತ್ತದೆ. ಹೆಬ್ಬಾಳದ ಬಂಗ್ಲೋನಲ್ಲಿ ಶೂಟಿಂಗ್ ನಡೆಯುವಾಗ ಶೃತಿ ರವರು ಶೂಟಿಂಗ್ ರೆಡಿಯಾದಾಗ ನನಗೆ ಕರೆಯಿರಿ. ಮೊದಲೇ ಕರೆಯಬೇಡಿ ಎಂದು ಹೇಳಿದ್ದರು.

ನಾನು ಕ್ಯಾಮೆರಾ ಮ್ಯಾನ್ ಮತ್ತು ಲೈಟಿಂಗ್ ನವರು ತುಂಬಾ ಕಾಯಿಸುತ್ತಿದ್ದುದರಿಂದ ಈ ರೀತಿ ಹೇಳಿರಬಹುದೆಂದು ಸುಮ್ಮನಾದೆನು. ನಂತರ ಅವರ ಹತ್ತಿರ ಈ ಬಗ್ಗೆ ಅಪೋಲೋಜಿಯನ್ನು ಕೇಳಿದೆನು. ಉಳಿದಂತೆ ಶೂಟಿಂಗ್ ಸಮಯದಲ್ಲಿ ಶೃತಿ ರವರು ಬೇರೆ ಯಾವುದೇ ರೀತಿಯಲ್ಲಿ, ಅವರಿಗೆ ಬೇಜರಾಗಿರುವ ಬಗ್ಗೆ ಕಂಡುಬಂದಿರುವುದಿಲ್ಲ. ಈ ಬಗ್ಗೆ ನಾನೂ ನೋಡಿರುವುದಿಲ್ಲ. ಕೇಳಿರುವುದಿಲ್ಲ ಎಂದು ಹೇಳಿಕೆ ದಾಖಲಿಸಿದ್ದಾರೆ.

ಭರತ್ ನೀಲಕಂಠನ್ ಗೆ ನನಗೆ ನಡೆದ ವಿಷಯವನ್ನು ತಿಳಿಸಿದ್ದಾಗಿ ನಟಿ ಶೃತಿ ಹರಿಹರನ್ ನ್ಯಾಯಾಧೀಶರ ಮುಂದೆ ದಾಖಲಿಸಿದ್ದ ಹೇಳಿಕೆಯಲ್ಲಿ ಉಲ್ಲೇಖಿಸಿದ್ದರು. ಆದರೆ ಆತ ತನ್ನ ಹೇಳಿಕೆಯಲ್ಲಿ ಶೃತಿ ಹರಿಹರನ್ ಹೇಳಿಕೆಗೆ ವಿರುದ್ಧವಾಗಿ ಹೇಳಿಕೆ ದಾಖಲಿಸಿದ್ದಾರೆ. ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತನೆ ಮಾಡಿಲ್ಲ ಎಂಬ ಹೇಳಿಕೆ ದಾಖಲಿಸಿದ್ದಾರೆ.

ಶೃತಿ ಹರಿಹರನ್ ಮೀಟೂಗೆ ಮಾರಕವಾದ ಅಂಶಗಳು: ಅಸೋಸಿಯೇಟ್ ಡೈರೆಕ್ಟರ್ ಭರತ್ ನೀಲಕಂಠನ್ ಮತ್ತ ಇತರರ ಹೇಳಿಕೆಲ್ಲಿ ನಟ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತನೆ ಮಾಡಿದ್ದರು. ಅದನ್ನು ನಟಿ ಶೃತಿ ಹರಿಹರನ್ ನಮ್ಮ ಜತೆ ಹೇಳಿಕೊಂಡಿದ್ದು ನಿಜ ಎಂಬ ಹೇಳಿಕೆಯನ್ನು ಯಾರೂ ದಾಖಲಿಸಿಲ್ಲ. ಪ್ರಮುಖ ಸಾಕ್ಷಿದಾರ ಭರತ್ ನೀಲಕಂಠನ್ ಸಹ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತನೆ ಮಾಡಿರುವ ಬಗ್ಗೆ ಪ್ರಸ್ತಾಪ ಮಾಡಿಲ್ಲ. ವಿಸ್ಮಯ ಚಲನಚಿತ್ರದ ಪ್ರೊಡ್ಯೂಸರ್ ಆದ ಉಮಾಶಂಕರ್ ರೆಡ್ಡಿ ಮುಂದುವರಿದ ಹೇಳಿಕೆಯನ್ನು ಪಡೆದುಕೊಂಡಿದ್ದು, ವಿಸ್ಮಯ ಚಲನಚಿತ್ರದ ಶೂಟಿಂಗ್ ನಲ್ಲಿದ್ದ ಸಿಬ್ಬಂದಿ ವಿವರವನ್ನು ನೀಡಿದ್ದು ಬಹುತೇಕರು ನಟಿ ಶೃತಿ ಅವರ ಆರೋಪವನ್ನು ಅಲ್ಲಗಳೆದಿದ್ದಾರೆ.

ವಿಸ್ಮಯ ಸಿನಿಮಾ ನಿರ್ಮಾಣ ಸಂಯೋಜಕ ಅನಿರೀತ್ ಹೇಳಿಕೆ:

"ವಿಸ್ಮಯಚಿತ್ರದ ಪ್ರತಿ ದೃಶ್ಯಾವಳಿಗಳನ್ನು ರಿಹರ್ಸಲ್ ಮಾಡಿಯೇ ಶೂಟ್ ಮಾಡಲಾಗಿರುತ್ತದೆ. ಕೆಂಪಾಪುರ ಮನೆಯಲ್ಲಿಯೇ ಸುಮಾರು100 ಜನ ಕೆಲಸಗಾರರು ಇದ್ದರು. ಜನ ಕೆಲಸಗಾರರುಇದ್ದರು. ಚಿತ್ರದ ಪ್ರತಿದೃಶ್ಯದ ಚಿತ್ರೀಕರಣದ ವೇಳೆ ಹಾಗೂ ರಿಹರ್ಸಲ್ ಮಾಡಲು ಸುಮಾರು ಐವತ್ತು ಜನ ಇರುತ್ತಿದ್ದರು. ನಾನು ಚಿತ್ರದ ಪ್ರತಿ ಚಿತ್ರೀಕರಣದ ಸ್ಥಳಗಳಲ್ಲಿ ಇದ್ದು, ನಿರ್ಮಾಣ ಸಂಯೋಜಕನ ಎಲ್ಲಾ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಿರುತ್ತೇನೆ. ಈ ಚಿತ್ರದ ಚಿತ್ರೀಕರಣ ವೇಳೆಯಲ್ಲಿ ಶೃತಿಯವರು ಅರ್ಜುನ್ ಸರ್ಜಾರವರ ವಿರುದ್ದ ನನ್ನ ಬಳಿ ಯಾವುದೇ ದೂರನ್ನು ಹೇಳಿರುವುದಿಲ್ಲ.

ಹಾಗೂ ಡೈರೆಕ್ಷನ್ ಡಿಪಾರ್ಟ್ಮೆಂಟ್ ನಿಂದಳೂ ಈ ವಿಷಯವಾಗಿ ಯಾರು ಏನು ನನ್ನ ಬಳಿ ಏನು ಹೇಳಿರುವುದಿಲ್ಲ. ಈ ಪರಿ ಈ ಚಲನಚಿತ್ರದ ದ್ವನಿ ಮುದ್ರಣವನ್ನು ಚಿಕ್ಕಲ್ಲಸಂದ್ರದಲ್ಲಿರುವ ಅಬ್ಬಾಯನಾಯ್ಡ ಸ್ಟೋಡಿಯೋ ವ್ಯಾಪ್ತಿಯಲ್ಲಿಇರುವ ಬಾಲಾಜಿ ಡಿಜಿಟಲ್ ಸ್ಟುಡಿಯೋ ದಲ್ಲಿ ನಡೆಯಿತು. ನಟ ಅರ್ಜುನ್ ಸರ್ಜನ್ ಸುಮರು ಏಳು ದಿನ ಬಂದು ತಮ್ಮ ಕೆಲಸ ಮುಗಿಸಿದರು. ಸಹ ನಟ ಜಯರಾಮ್‌ ಕಾರ್ತಿಕ್ ಹಾಗೂ ಶೃತಿ ಹರಿಹರನ್ ರವರು ಕೂಡ 4-5 ದಿನಗಳ ಕಾಲ ಡಬ್ಬಿಂಗ್ ಪೂರ್ಣಗೊಳಿಸಿದರು.

ಇದರಲ್ಲಿ ನಟ ಅರ್ಜುನ್ ಸರ್ಜಾ ಮಧ್ಯಾಹ್ನ ಎರಡ ಗಂಟೆಯಿಂದ ಸಂಜೆ ಏಳು ಗಂಟೆ ವರೆಗೆ. ಈ ಬಿಡುವಿನ ಸಮಯದಲ್ಲಿ ಸ್ಟುಡೀಯೋ ಲಭ್ಯವಾಗಿರುವ ಸಮಯದಲ್ಲಿ ಶೃತಿ ಹರಿಹರನ್ ಕಾರ್ಯ ನಿರ್ವಹಿಸುತ್ತಿದ್ದರು. ಶೃತಿ ಹರಿಹರನ್ ರವರಿಗೆ ಸಂಚಾರ ವ್ಯವಸ್ಥೆಯನ್ನು ನಾನೇ ಮಾಡಿಕೊಡಲಾಗುತ್ತಿದ್ದು, ಅರ್ಜುನ್ ಸರ್ಜಾರವರ ವಿರುದ್ಧ ಮಾಡಿರುವ ಯಾವುದೇ ಆರೋಪಗಳು ನನ್ನ ಗಮನಕ್ಕೆ ಬಂದಂತೆ ನಮ್ಮ ಸೆಟ್ ನಲ್ಲಿ ನಡೆದಿರುವುದಿಲ್ಲ" ಎಂದು ಹೇಳಿಕೆಯಲ್ಲಿ ದಾಖಲಿಸಿದ್ದಾರೆ.

 ವಿಸ್ಮಯ ನಿರ್ದೇಶಕ ಅರುಣ್ ವೈದ್ಯನಾಥನ್ ಹೆಚ್ಚುವರಿ ಹೇಳಿಕೆಯಲ್ಲಿ ಏನಿದೆ ?

ವಿಸ್ಮಯ ನಿರ್ದೇಶಕ ಅರುಣ್ ವೈದ್ಯನಾಥನ್ ಹೆಚ್ಚುವರಿ ಹೇಳಿಕೆಯಲ್ಲಿ ಏನಿದೆ ?

ಚೆನ್ನೈ ಮೂಲದ ಅರುಣ್ ವೈದ್ಯನಾಥನ್, " ತಾನು 2015 ನೇ ಸಾಲಿನಲ್ಲಿ ವಿಸ್ಮಯ ಹೆಸರಿನ ಕನ್ನಡ ಸಿನೆಮಾದ ನಿರ್ದೇಶಕನಾಗಿ ಕೆಲಸ ಮಾಡಿರುತ್ತೇನೆ. ತಾನೇ ಸ್ಟೋರಿ ಬರೆದು, ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್ ರವರುಗಳಿಗೆ ಈ ಮೂವಿಯಲ್ಲಿಆಕ್ಟ್ ಮಾಡುವಂತೆ ಮನವಿ ಮಾಡಿರುತ್ತೇನೆ. ಈ ಸಿನೆಮಾದಲ್ಲಿ ಒಂದು ರೊಮ್ಯಾಂಟಿಕ್ ಸೀನ್ ಇದ್ದು, ಇದಕ್ಕೆ ಅರ್ಜುನ್ ಸರ್ಜಾ ರವರು ಆಕ್ಷೇಪ ವ್ಯಕ್ತಪಡಿಸಿ, ಇದನ್ನು ಬದಲಾಯಿಸುವಂತೆ ಕೋರಿದರು. ಏಕೆಂದರೆ ಈ ಸೀನ್ ತುಂಬಾ ರೋಮ್ಯಾಂಟಿಕ್ ಇದ್ದು, ತನಗೆ ಎರಡು ಜನ ಹೆಣ್ಣು ಮಕ್ಕಳಿರುತ್ತಾರೆ. ಈ ರೀತಿ ನಾನು ನಾಯಕಿ ನಟಿ ಜೊತೆ ನಟಿಸಿದರೆ ಚೆನ್ನಾಗಿರುವುದಿಲ್ಲ.

ಇದು ತುಂಬಾ ಅನ್ ಕಂಫರ್ಟ್ ಆಗಿ ಇರುತ್ತದೆ ಎಂದು ಹೇಳಿದ್ದರು. ಹೀಗಾಗಿ ಸ್ಕ್ರಿಪ್ಟ್‌ ಬದಲಾಯಿಸಿ ಅರ್ಜುನ್ ಸರ್ಜಾರವರಿಗೆ ಮತ್ತು ಶೃತಿ ಹರಿಹರನ್ ರವರಿಗೆ ಮತ್ತು ಉಳಿದ ಎಲ್ಲಾ ಕಲಾವಿದರಿಗೆ ನೀಡಿದೆನು. ಅರ್ಜುನ್ ಸರ್ಜಾ ಮತ್ತು ಶೃತ ಹರಿಹರನ್ ರವರು ಸೇರಿದಂತೆ ಎಲ್ಲರೂ ಇದನ್ನುಇಷ್ಟಪಟ್ಟರು.2015 ರ ನವೆಂಬರ್ ನಲ್ಲಿ ಸಿನೆಮಾ ಶೂಟಿಂಗ್ ಪ್ರಾರಂಭವಾಯಿತು. ಮೊದಲು ಫ್ಯಾಮಿಲಿ ಸೀನ್ ಅನ್ನು ಶುರು ಮಾಡಿ ಮುಗಿಸಲು ಯೋಜನೆ ರೂಪಿಸಿದೆವು. ಇದರಲ್ಲಿಗಂಡ-ಹೆಂಡತಿ ಸೀನ್ ಇರುತ್ತದೆ. ಅರ್ಜುನ್ ಸರ್ಜಾ ಗಂಡನ ಪಾತ್ರದಲ್ಲಿ, ಹೆಂಡತಿಯ ಪಾತ್ರದಲ್ಲಿ ಶೃತಿ ಹರಿಹರನ್ ರವರು ನಟಿಸಬೇಕಾಗಿತ್ತು.

ಪ್ರತಿ ಸೀನ್ ಅಂತಿಮಗೊಳಿಸಲು ರಿಹರ್ಸಲ್ ಮಾಡುತ್ತಿದ್ದೆವು. ಇದರಲ್ಲಿ ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ರವರು ಬೆಡ್‌ರೂಮಿನಲ್ಲಿ ಬೆಡ್ ಮೇಲೆ ಬೀಳುವ ದೃಶ್ಯವಿತ್ತು. ಇದಕ್ಕೆ ಶೃತಿ ಹರಿಹರನ್ ರವರು ಈ ಸೀನ್ ಅಂತಿಮಗೊಳಿಸಲು ಎಷ್ಟು ಸಮಯವಾಗುತ್ತದೆ ಎಂದು ಕೇಳಿದರು. ಅದಕ್ಕೆ ನಾನು, ನೀವಿಬ್ಬರೂ ಬೆಡ್ ಮೇಲೆ ಬಿದ್ದ ತಕ್ಷಣ ಸೀನ್ ಕಟ್‌ ಆಗುತ್ತದೆ. ಸೀನ್ ಮುಗಿಯುತ್ತದೆ ಎಂದು ತಿಳಿಸಿದೆನು. ಇದಕ್ಕೆ ಶೃತಿ ಹರಿಹರನ್ ರವರು ಯಾವುದೇ ಆಕ್ಷೇಪ ಮಾಡಲಿಲ್ಲ. ತುಂಬಾ ಚೆನ್ನಾಗಿ ಈ ಸೀನ್ ಶೂಟ್ ನಡೆಯಿತು. ಶೃತಿ ಹರಿಹರನ್ ರವರು ಖುಷಿಯಿಂದಲೇ ನಟಿಸಿದರು.

ಈ ತರಹದ ಸೀನ್‌ಗಳು ಶೂಟಿಂಗ್ ಮಾಡುವಾಗ ರಿಹರ್ಸಲ್ ಮಾಡುವುದು, ಹೆಚ್ಚಿನ ಸಮಯ ತೆಗೆದುಕೊಳ್ಳುವುದು ಎಲ್ಲಾ ಸಿನೆಮಾದಲ್ಲಿ ಸಾಮಾನ್ಯವಾಗಿರುತ್ತದೆ. ಇದು ಎಲ್ಲಾ ನಾಯಕ ಮತ್ತು ನಾಯಕಿ ನಟಿಯರಿಗೆ ಮತ್ತು ಇತರೆ ಕಲಾವಿದರಿಗೆ ಗೊತ್ತಿರುತ್ತದೆ. ಯಾವುದೇ ಕಲಾವಿದನಿಗೆ ಯಾವುದೇ ಸೀನ್‌ಗಳಲ್ಲಿ ನಟಿಸಲು ಅನ್‌ಕಂಫರ್ಟ್ ಆದರೆ, ಅಲ್ಲಿ ಎಲ್ಲಾ ಕಲಾವಿದರಿಗೆ, ಶೂಟಿಂಗ್ ಸ್ಥಳದಲ್ಲಿರುವವರಿಗೆ ಅದಕ್ಕಿಂತಲೂ ಮಿಗಿಲಾಗಿ ನಿರ್ದೇಶಕನಿಗೆ ಗೊತ್ತಾಗುತ್ತದೆ.

ಈ ಸಿನೆಮಾದಲ್ಲಿ ಶೃತಿ ಹರಿಹರನ್ ರವರು ಒಟ್ಟು9 ದಿವಸ ನಮ್ಮಜೊತೆ ಕೆಲಸ ಮಾಡಿದ್ದು, ಈ ಸಿನೆಮಾದಲ್ಲಿ ಇದು ಒಂದೇ ರೋಮ್ಯಾಂಟಿಕ್ ಸೀನ್ ಇದ್ದು, ಈ ರೋಮ್ಯಾಂಟಿಕ್ ಸೀನ್ ಅನ್ನು ರಿಹರ್ಸಲ್ ಸೇರಿದಂತೆ 2 ಗಂಟೆಯಲ್ಲಿ ಮುಗಿಸಿರುತ್ತೇವೆ. ಶೂಟಿಂಗ್ ಮುಗಿದ ಮೇಲೂ ಶೃತಿ ಹರಿಹರನ್ ರವರು ನಮ್ಮಜೊತೆಯಿದ್ದು, ಅವರು ತುಂಬಾ ಸಂತೋಷದಿಂದ ಇದ್ದರು. ನಮ್ಮ ಮೂವಿ ಮತ್ತು ತಂಡದ ಬಗ್ಗೆ ತುಂಬಾ ಸಂತೋಷ ವ್ಯಕ್ತಪಡಿಸಿದ್ದರು.

ಸುಮಾರು ಒಂದೂವರೆ ವರ್ಷಗಳ ನಿನೆಮಾ ಶೂಟಿಂಗ್ ನಡೆದಿದ್ದು, ಈ ಶೂಟಿಂಗ್ ಮುಗಿದ ಮೇಲೆ ನಾನು ಶೃತಿ ಹರಿಹರನ್ ರವರನ್ನು ಡಬ್ಬಿಂಗ್ ಮಾಡಿಸುವ ಸಲುವಾಗಿ ಭೇಟಿ ಮಾಡಿದ್ದೆನು. ಆ ಸಮಯದಲ್ಲೂ ಸಿನೆಮಾ ನೋಡಿ ತುಂಬಾ ಖುಷಿ ಪಟ್ಟರು. ಅಲ್ಲದೇ ಅವರು ಆಡಿಯೋ ಲಾಂಚ್‌ಗೂ ಬಂದಿದ್ದರು, ಅಲ್ಲಿಆಂಕರ್ ಮಾಡಲು ತಿಳಿಸಿದಾಗಲೂ ಅವರು ತುಂಬಾ ಸಂತೋಷದಿಂದ ಒಪ್ಪಿಕೊಂಡರು. ಆದರೆ ಶೃತಿ ಹರಿಹರನ್ ರವರು ಅರ್ಜುನ್ ಸರ್ಜಾ ರವರ ಜೊತೆ ಏನು ಆಪಾದನೆ ಮಾಡಿದ್ದಾರೆ, ಅದೂ ಮೂರು ವರ್ಷದ ನಂತರ, ಇದು ನನಗೂ ಆಶ್ಚರ್ಯವಾಗಿದೆ. ಅಲ್ಲದೇ ಶೃತಿ ಹರಿಹರನ್ ರವರು, ಶೂಟಿಂಗ್ ನಲ್ಲಿ ಅವರ ಮನಸ್ಸಿಗೆ ನೋವಾದ ಬಗ್ಗೆ ನನ್ನ ಬಳಿ ಯಾವತ್ತೂ ಹೇಳಿಕೊಂಡಿರುವುದಿಲ್ಲ. ಅಲ್ಲದೇ ಶೂಟಿಂಗ್ ಸಮಯದಲ್ಲಿ ಯಾರಲ್ಲೂ ಅಸಮಧಾನವಿರುವ ಬಗ್ಗೆ ನಾನು ನೋಡಿರುವುದಿಲ್ಲ" ಎಂಬುದಾಗಿ ತಮ್ಮ ಹೇಳಿಕೆಯಲ್ಲಿ ನುಡಿದಿರುತ್ತಾರೆ.

 ಅಂತಿಮ ತನಿಖೆ ಬಳಿಕ ಬಿ ವರದಿ ಸಲ್ಲಿಕೆ

ಅಂತಿಮ ತನಿಖೆ ಬಳಿಕ ಬಿ ವರದಿ ಸಲ್ಲಿಕೆ

ತನಿಖಾ ವಿಷಯವನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿರುತ್ತೇನೆ. ಈ ಪ್ರಕರಣದಲ್ಲಿ ನೊಂದ ಯುವತಿ ಶೃತಿ ಹರಿಹರನ್ ರವರು ಒಬ್ಬರು ಚಲನಚಿತ್ರ ನಟಿಯಾಗಿದ್ದು, ಅನೇಕ ಕನ್ನಡ, ತಮಿಳು, ತೆಲಗು ಚಿತ್ರಗಳಲ್ಲಿ ನಟಿಸಿರುತ್ತಾರೆ. 2015 ನೇ ಸಾಲಿನಲ್ಲಿ ಉಮಾಶಂಕರ್ ರವರು ನಿರ್ಮಿಸಿರುವ, ಶ್ರೀ ಅರುಣ್ ವೈದ್ಯನಾಥನ್ ರವರು ನಿರ್ದೇಶಿಸಿರುವ 'ವಿಸ್ಮಯ' ಸಿನೆಮಾದಲ್ಲಿ ನಾಯಕ ನಟಿಯಾಗಿ, ನಾಯಕ ನಟನಾದ ಶ್ರೀ ಅರ್ಜುನ್ ಸರ್ಜಾ ರವರೊಂದಿಗೆ ನಟಿಸಿರುತ್ತಾರೆ.

ಈ ಚಿತ್ರದ ಶೂಟಿಂಗ್ ಹೆಬ್ಬಾಳದ ರೆಸಿಡೆನ್ಸಿ ಕಾಲೇಜಿನಲ್ಲಿ ನಡೆಯುತ್ತಿದ್ದ ವೇಳೆ ರೋಮ್ಯಾಂಟಿಕ್ ಸೀನ್ ರಿಹರ್ಸಲ್ ವೇಳೆಯಲ್ಲಿ ಅರ್ಜುನ್ ಸರ್ಜಾರವರು ನನ್ನ ಖಾಸಗಿ ಅಂಗ ಕೈಯಿಂದ ಮುಟ್ಟಿ, ನನ್ನ ಬ್ರಾ ಅನ್ನು ಹಿಡಿದು ಎಳೆದು ನಂತರ ತೊಡೆಯ ಮೇಲೆ ಕೈಯಾಡಿಸಿದ್ದು, ಆಗ ನನಗೆ ಅವರ ಈ ರೀತಿಯ ವರ್ತನೆಯ ಬಗ್ಗೆ ಬೇಜಾರಾಗಿದ್ದು, ಆಗ ತಾನೆ ನಾನು ಇಂಡಸ್ಟ್ರಿಯಲ್ಲಿ ಗುರ್ತಿಸಿಕೊಳ್ಳುತ್ತಿದ್ದ ನಟಿಯಾಗಿದ್ದರಿಂದ ನಾನು ಏನು ಮಾಡದೇ ಸುಮ್ಮನಾಗಿದ್ದು, ನಂತರ ಪುನಃ ಅವರು ನನ್ನನ್ನು ಜೋರಾಗಿ ತಬ್ಬಿಕೊಂಡು ನನ್ನ ಬೆನ್ನಿನ ಹಿಂಭಾಗದಲ್ಲೆಲ್ಲಾ ಕೈಯಾಡಿಸಿ ನಮ್ಮ ಡೈರೆಕ್ಟರ್ ಬಳಿ ದೃಶ್ಯಾವನ್ನು ಈ ರೀತಿ ಇನ್ನು ಸುಧಾರಣೆ ಮಾಡಿಕೊಳ್ಳಬಹುದಲ್ಲಾಎಂದು ಹೇಳಿದ್ದು, ಇದರಿಂದ ನನಗೆ ಬೇಜಾರಾಗಿದೆ.
ಈ ವಿಷಯವನ್ನು ನನ್ನೊಂದಿಗಿದ್ದ ಬೋರೆಗೌಡ ಮತ್ತು ಕಿರಣ್ ರವರಿಗೆ ತಿಳಿಸಲಾಗಿ ಅವರು ಸಮಾಧಾನ ಪಡಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಇದಕ್ಕೆ ಪೂರಕವಾಗಿ ಯಾವುದೇ ಸಾಕ್ಷಾಧಾರಗಳು ಲಭ್ಯವಾಗಿಲ್ಲ.

ದೇವನಹಳ್ಳಿಯ ಆಸ್ಪತ್ರೆಯೊಂದರ ಶೂಟಿಂಗ್ ವೇಳೆ ನನ್ನನ್ನು ಮೇಲಿಂದ ಮೇಲೆ ಶೂಟಿಂಗ್ ನಂತರ ಈ ದಿನ ಪೂರ್ತಿ ಸಮಯವಿದೆ. ಖಾಸಗಿ ಸ್ಥಳದಲ್ಲಿ ಪ್ರತ್ಯೇಕವಾಗಿ ಇರೋಣ ಎಂದು ಕರೆದಿದ್ದರು. ನಾನು ನಿರಾಖರಿಸಿದ್ದೆನು.

ನಂತರ ಯು.ಬಿ. ಸಿಟಿಯಲ್ಲಿ ಶೂಟಿಂಗ್ ಆಗಿ ಲಾಬಿಯಲ್ಲಿ ಕಾಯುತ್ತಿದ್ದಾಗ ಅಲ್ಲಿಗೆ ಬಂದ ಅರ್ಜುನ್ ಸರ್ಜಾ ನನ್ನ ಬೆನ್ನನ್ನು ಗಟ್ಟಿಯಾಗಿ ಹಿಡಿದು ಒಬ್ಬರೇ ಏಕೆ ಕಾಯುತ್ತಿದ್ದಿರಾ, ನನ್ನ ರೂಮಿಗೆ ಬರಬಹುದಿತ್ತಲ್ಲ ಎಂದು ಹೇಳಿದ್ದರು. ಅದಕ್ಕೆ ನಾನು ಬರುವುದಿಲ್ಲ ಎಂದಿದ್ದಕ್ಕೆ ಒಂದು ದಿನ ನೀನೆ ಬರುವಂತೆ ಮಾಡುತ್ತೇನೆ. ಎಚ್ಚರದಿಂದಿರು ಎಂದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಬೇರೆ ಬೇರೆ ಜಾಗಗಳಿಗೆ ಎಳೆಯುತ್ತೇನೆ ಮತ್ತು ನಿನ್ನ ಜೀವನ ನರಕಯಾತನೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದರು.

ಇತ್ತೀಚಿನ ದಿನಗಳಲ್ಲಿ ಮೀ ಟೂ ಅಭಿಯಾನದಡಿಯಲ್ಲಿತಾನೂ ದೂರು ಸಲ್ಲಿಸುತ್ತಿರುವುದಾಗಿ ತಿಳಿಸಿ ತನ್ನ ಮೂರು ವರ್ಷ ಹಿಂದಿನ ಘಟನೆಯನ್ನು ನೆನಪಿಸಿಕೊಂಡು ದೂರು ನೀಡಿದ್ದಾರೆ ಎಂಬುದು ಪೊಲೀಸ್ ತನಿಖೆಯ ತಿರುಳು.

ಚಿತ್ರೀಕರಣದ ಸಂದರ್ಭದಲ್ಲಿ ನಾಯಕ ನಟ ಲೈಂಗಿಕ ಉದ್ದೇಶ ಇಟ್ಟುಕೊಂಡು ಅನುಚಿತವಾಗಿ ವರ್ತಿಸಿದ ಎಂಬ ಆರೋಪ ಸಾಮಾನ್ಯವಾಗಿ ಮೀ ಟೂ ಪ್ರಕರಣದಲ್ಲಿ ಕೇಳಿ ಬರುತ್ತದೆ. ಆದರೆ ಚಿತ್ರೀಕರಣ ನಾಲ್ಕು ಗೋಡೆಯ ಮಧ್ಯೆ ಯಾರಿಗೂ ಕಾಣದಂತೆ ನಡೆಯುವ ಕ್ರಿಯೆಯಲ್ಲ. ಯಾಕೆಂದರೆ ಕ್ಯಾಮೆರಾದ ಮುಂದೆ ಇಡೀ ಚಿತ್ರೀಕರಣದ ಸನ್ನಿವೇಶ ನಡೆಯುತ್ತದೆ. ಜೊತೆಗೆ ಈ ಸನ್ನಿವೇಶ ಚಿತ್ರಿಸುವಾಗ ಇಡೀ ಚಿತ್ರ ತಂಡವೇ ಎದುರಿರುತ್ತದೆ.

ಹೀಗಿರುವಾಗ ನಾಯಕ ತನ್ನ ಮೇಲೆ ಲೈಂಗಿಕ ದೃಷ್ಟಿಕೋನದಿಂದ ನಡೆದುಕೊಂಡ, ತನ್ನ ತೊಡೆಯ ಮೇಲೆ ಕೈಯಾಡಿಸಿದ ಎಂಬ ಆರೋಪದಲ್ಲಿ ಯಾವುದೇ ಸ್ವಷ್ಟವಾದ ಸಾಕ್ಷಿಗಳು ಲಭ್ಯವಿರುವುದಿಲ್ಲ. ಏಕೆಂದರೆ ಇಲ್ಲಿ ನಡೆಯುತ್ತಿರುವುದು ಒಂದು ಸಿನೆಮಾದ ಶೂಟಿಂಗ್ ಆಗಿದ್ದು, ಇಲ್ಲಿ ಕ್ಯಾಮೆರಾದಲ್ಲಿ ಪ್ರತೀ ಸೀನ್ ರೆಕಾರ್ಡ್ ಆಗುತ್ತದೆ. ಅಲ್ಲದೇ ಇಡಿ ಸಿನೆಮಾ ತಂಡವೇ ಎದುರಿರುತ್ತದೆ. ಹಾಗಾಗಿ ಇಲ್ಲಿ ಪಿರ್ಯಾದುದಾರರು ಮಾಡಿರುವ ಆಪಾದನೆಯನ್ನು ಪುಷ್ಟಿಕರಿಸುವ ಸಾಕ್ಷಿಗಳು ಲಭ್ಯವಾಗಿರುವುದಿಲ್ಲ.

ಅಲ್ಲದೇ ಈ ಘಟನೆಯನ್ನು ಪಿರ್ಯಾದುದಾರರು ತಮಗೆ ಹತ್ತಿರವಿದ್ದವರ ಜೊತೆ ಹೇಳಿಕೊಂಡಿರುವುದಾಗಿ ತಿಳಿದು ಬಂದಿದ್ದು, ಉಳಿದಂತೆ ಘಟನೆ ನಡೆಯಿತೆನ್ನಲಾದ ಸ್ಥಳದಲ್ಲಿ ಹಾಜರಿದ್ದ ಅನೇಕ ಸಾಕ್ಷಿದಾರರು ಇಂತಹ ಘಟನೆಗಳು ನಡೆದೇ ಇಲ್ಲ ಎಂಬುದಾಗಿ ತಿಳಿಸಿರುತ್ತಾರೆ. ಆದುದದರಿಂದ ಈ ಘಟನೆಯನ್ನು ಪುಷ್ಟಿಕರಿಸಲು ಇನ್ನೂ ಹೆಚ್ಚಿನ ಸಾಕ್ಷಿಗಳು ಅಗತ್ಯವಿದ್ದು, ಅಂತಹ ಸಾಕ್ಷಾಧಾರಗಳು ತನಿಖಾ ಕಾಲದಲ್ಲಿ ಕಂಡು ಬಂದಿರುವುದಿಲ್ಲ.

ನಿರ್ದೇಶಕನ ಅಣತಿಯಂತೆ ಮತ್ತು ಕಲ್ಪನೆಯಂತೆ ಸಿನೆಮಾ ಮೂಡಿ ಬರಬೇಕೆಂದು, ಚಿತ್ರವನ್ನು ನಿರ್ದೇಶಿಸುತ್ತಿರುತ್ತಾರೆ. ಹಾಗಾಗಿ ಇಲ್ಲಿ ಬೆಡ್‌ರೂಮಿನ ರೋಮ್ಯಾಂಟಿಕ್ ಸೀನ್ ಎಂಬುದು ಮೊದಲೇ ನಿರ್ಧಾರವಾಗಿ ನಾಯಕ ನಟ ಮತ್ತು ನಾಯಕನಟಿಯ ಪೂರ್ವಾನುಮತಿಯನ್ನು ತೆಗೆದುಕೊಂಡು ಸಿನೆಮಾದ ಶೂಟಿಂಗ್ ನಡೆಸುತ್ತಿರುತ್ತಾರೆ. ರೋಮ್ಯಾಂಟಿಕ್ ಸೀನ್‌ನಲ್ಲಿ ತಬ್ಬಿಕೊಳ್ಳುವುದು, ಅಪ್ಪಿಕೊಳ್ಳುವುದು, ಮುತ್ತಿಡುವುದು, ಮೈಮೇಲೆ ಕೈಯಾಡಿಸುವುದು ಇದು ಸರ್ವೇ ಸಾಮಾನ್ಯ.

ಇದು ಚಿತ್ರೀಕರಣದ ಒಂದು ಭಾಗವಾಗಿರುತ್ತದೆ. ಇಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಆಪಾದಿಸಿದರೆ ಅದಕ್ಕೇ ಸೂಕ್ತವಾದ ಕಾರಣ ಮತ್ತು ಸಾಕ್ಷಿ ಒದಗಿಸುವ ಅಗತ್ಯವಿರುತ್ತದೆ.

ಸಾಕ್ಷಿಗಳನ್ನು ಸಂಗ್ರಹಿಸುವ ಅಗತ್ಯವಿರುತ್ತದೆ. ಆದರೆ ಈ ಘಟನೆಯಲ್ಲಿ ನಾಯಕ ನಟಿಗೆ ದೌರ್ಜನ್ಯ ನಡೆದಿರುವ ಬಗ್ಗೆ ಬಲವಾದ ಸಾಕ್ಷಿಗಳು ಲಭ್ಯವಾಗಿಲ್ಲ. ಒಬ್ಬ ವ್ಯಕ್ತಿ ಲೈಂಗಿಕ ಅಭಿವ್ಯಕ್ತಿಯನ್ನು ಅನೇಕ ರೂಪದಲ್ಲಿ ಪ್ರಕಟಿಸಬಹುದು. ಅಶ್ಲೀಲ ಮಾತುಗಳ ಮೂಲಕ ಅಥವಾ ಕಾಮೋತ್ತೇಜಕ ಮಾತುಗಳಿಂದ ಲೈಂಗಿಕ ಅಭಿಲಾಷೆ ವ್ಯಕ್ತಪಡಿಸಬಹುದು. ಆದರೆ ಈ ಪ್ರಕರಣದಲ್ಲಿ ಕೇಳಿ ಬಂದಿರುವ ಆರೋಪ ಗಮನಿಸಿದಾಗ ಇಂತಹ ಸಂಭಾಷಣೆ ನಡೆದಿರುವುದಿಲ್ಲ.

ಇನ್ನು ಅನುಮತಿಯಿಲ್ಲದೆ ಹೆಣ್ಣೊಬ್ಬಳ ಖಾಸಗಿ ಅಂಗವನ್ನು ಸ್ಪರ್ಶಿಸುವುದು ಕೂಡ ಲೈಂಗಿಕ ಶೋಷಣೆ ಸ್ವರೂಪ ಪಡೆದುಕೊಳ್ಳುತ್ತದೆ. ಈ ಪ್ರಕರಣ ಗಮನಿಸಿದಾಗ ಆರೋಪಿತ ವ್ಯಕ್ತಿಯು ಸಂತ್ರಸ್ತೆಯ ಖಾಸಗಿ ಅಂಗ ಸ್ಪರ್ಶಿಸಿದ್ದಕ್ಕೆ ಸಾಕ್ಷಿಯಾಗಲೀ, ಆಧಾರವಾಗಲೀ ಇಲ್ಲ. ನಿರ್ದೇಶಕನ ಸೂಚನೆ ಮೇರೆಗೆ ನಾಯಕಿಯನ್ನು ಅಪ್ಪಿಕೊಂಡಿದ್ದರೂ ಅದು ಚಿತ್ರೀಕರಣದ ಒಂದು ಭಾಗವಷ್ಟೆ.

ವ್ಯಕ್ತಿಯೊಬ್ಬ ಯಾವುದೇ ಹೆಣ್ಣನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುವ ಉದ್ದೇಶದಿಂದ ನೇರವಾಗಿ ಆಹ್ವಾನ ನೀಡಿದರೆ ಅದು ಕ್ರಿಮಿನಲ್ ಸಂಚು ಮತ್ತು ಅಪರಾಧ. ಈ ಪ್ರಕರಣದಲ್ಲಿ ಆರೋಪಿತ ವ್ಯಕ್ತಿ ಸಂತ್ರಸ್ತೆಯನ್ನು ಔತಣಕೂಟಕ್ಕೆ, ರೆಸಾರ್ಟ್ಗೆ ಆಹ್ವಾನ ನೀಡಿದ್ದಾರೆ ಎಂಬುದಾಗಿರುತ್ತದೆ.
ಆದರೆ ರೆಸಾರ್ಟ್‌ಗೆ, ಔತಣಕೂಟಕ್ಕೆ ಆಹ್ವಾನ ನೀಡಿರುವುದು ಲೈಂಗಿಕವಾಗಿ ಬಳಸಿಕೊಳ್ಳಲು ಎಂಬ ತೀರ್ಮಾನಕ್ಕೆ ಬರಲು ಸಾಕ್ಷಾಧಾರಗಳು ಕೊರತೆಯಿವೆ.

ಈ ಮೇಲಿನ ಅಂಶಗಳನ್ನು ಪಿರ್ಯಾದುದಾರರು ಸುಮಾರು3 ವರ್ಷದ ಹಿಂದೆ ನಡೆದಿರುವಂತಹ ಘಟನೆಗಳೆಂದು, ಹಾಲಿ ಮೀ ಟೂ ಅಭಿಯಾನದಡಿ ದೂರು ದಾಖಲಿಸುತ್ತಿರುವುದಾಗಿ ತಿಳಿಸಿದ್ದು, ಈ ವಿಚಾರವನ್ನು ಪುಷ್ಟಿಕರಿಸುವಂತ ಯಾವುದೇ ಸಾಕ್ಷಿಗಳು ಲಭ್ಯವಾಗಿಲ್ಲ. ಇಲ್ಲಿ ದೂರುದಾರರು ಒಬ್ಬರು ಜವಾಬ್ಧಾರಿಯುತ ನಟಿಯಾಗಿದ್ದು, ಇವರು ಒಬ್ಬ ಜವಾಬ್ಧಾರಿಯುತ ನಟನ ಮೇಲೆ ವಿಳಂಭವಾಗಿ ದೂರು ನೀಡುವಾಗ ಅದರ ಸಂಬಂಧ ನಿಖರ ಮತ್ತು ಸ್ಪಷ್ಟವಾದ ಸಾಕ್ಷಿ ಒದಗಿಸುವ ಹೊಣೆಗಾರಿಕೆಯೂ ಇರುತ್ತದೆ.

ಆದರೆ ಇದಕ್ಕೆ ಫಿರ್ಯಾದುದಾರರು ಸಾಕ್ಷಿ ಒದಗಿಸಿರುವುದಿಲ್ಲ. ಅಲ್ಲದೇ ತನಿಖೆಯಿಂದಲೂ ಅವರ ಆರೋಪಗಳನ್ನು ಪುಷ್ಟಿಕರಿಸುವಂತಹ ಯಾವುದೇ ಸಾಕ್ಷಿಗಳು ಲಭ್ಯವಾಗಿರುವುದಿಲ್ಲ.

ಆದುದರಿಂದ ಈ ಪ್ರಕರಣವನ್ನು ಸಾಕ್ಷಾಧಾರಗಳ ಕೊರತೆಯಿಂದ ಬಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+