Bengaluru Second Airport: 2ನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಅಪ್‌ಡೇಟ್ ಕೊಟ್ಟ ಎಂ ಬಿ ಪಾಟೀಲ್
ಬೆಂಗಳೂರು, ಆಗಸ್ಟ್ 27: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ವಿಚಾರ ರಾಜಕೀಯ ಸ್ವರೂಪವನ್ನ ಪಡೆದುಕೊಂಡಿದೆ. ಕರ್ನಾಟಕ ಸರ್ಕಾರ ಬೆಂಗಳೂರು ಸಮೀಪ ವಿಮಾನ ನಿಲ್ದಾಣದ ಬಗ್ಗೆ ಇನ್ನೂ ಚರ್ಚೆಯಲ್ಲಿರುವಾಗಲೆ ತಮಿಳುನಾಡು ಸರ್ಕಾರವು ಪ್ರಸ್ತಾವಿತ ಹೊಸೂರು ವಿಮಾನ ನಿಲ್ದಾಣದ ಸ್ಥಳವನ್ನು ಅಂತಿಮಗೊಳಿಸಿದೆ. ಇತ್ತ ಕರ್ನಾಟಕ ಸರ್ಕಾರ ಮೂರು ಸ್ಥಳಗಳನ್ನ ಅಂತಿಮಗೊಳಿಸಿ ಪ್ರಸ್ತಾವನೆಯನ್ನ ಕಳಿಹಿಸಿ ಕೇಂದ್ರ ಸರ್ಕಾರದತ್ತ ಮುಖ ಮಾಡಿತ್ತು. ಆದರೆ, ಆ ಮೂರು ಸ್ಥಳಗಳು ವಿಮಾನ ನಿಲ್ದಾಣಕ್ಕೆ ಸೂಕ್ತವಲ್ಲ ಎಂಬ ಮಾತು ಕೇಳಿ ಬಂದಿದ್ದು, ಈಗಾಗಲೇ ಕೇಂದ್ರ ವಿಮಾನಯಾನ ಸಚಿವರ ಜೊತೆಗೆ ರಾಜ್ಯ ಸಚಿವ ಎಂ ಬಿ ಪಾಟೀಲ್ ಅವರು ಚರ್ಚೆ ನಡೆಸಿದ್ದಾರೆ.
ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣ ವಿಚಾರವು ಹಲವು ದಿನಗಳಿಂದ ಭಾರೀ ಹಿನ್ನಡೆಯನ್ನ ಅನುಭವಿಸುತ್ತಿದ್ದು, ಆರಂಭದಿಂದಲೂ ರಾಜ್ಯ ಕಾಂಗ್ರೆಸ್‌ನಲ್ಲಿಯೇ ಸ್ಥಳ ಆಯ್ಕೆ ಕುರಿತು ತೀವ್ರ ಪೈಪೋಟಿ ನಡೆಸಿದ್ದರು. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಶಾಸಕರು ಪತ್ರದ ಮೂಲಕ ಮನವಿ ಸಲ್ಲಿಸಿದರು. ಇದೀಗ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಂ.ಬಿ ಪಾಟೀಲ ಅವರು ಮಾತನಾಡಿ, ಈ ಬಗ್ಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿತವಾಗಿ, ನಾಗರಿಕ ವೈಮಾನಿಕ ಸೇವೆಗಳ ಕಾರ್ಯಾಚರಣೆ ನಡೆಸುತ್ತಿರುವ ಶಿವಮೊಗ್ಗ ವಿಮಾನ ನಿಲ್ದಾಣವು ಮಂಗಳವಾರ ತನ್ನ ಎರಡನೆಯ ವಾರ್ಷಿಕೋತ್ಸವ ಆಚರಿಸಿತು. 'ಕೆಎಸ್ಐಐಡಿಸಿ ಮೂಲಕ ರಾಜ್ಯ ಸರಕಾರವೇ ನಿರ್ವಹಿಸಲು ಆರಂಭಿಸಿದ ಪ್ರಪ್ರಥಮ ವಿಮಾನ ನಿಲ್ದಾಣ ಇದಾಗಿದೆ. ಕೇವಲ ಎರಡು ವರ್ಷಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ 2,400 ವಿಮಾನಯಾನಗಳ ಮತ್ತು 1 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರ ನಿರ್ವಹಣೆ ಯಶಸ್ವಿಯಾಗಿ ನಡೆದಿದೆ ಎಂದಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂಡಿಗೋ ಕಂಪನಿಯು 670 ಯಾನಗಳಿಂದ 31,500 ಪ್ರಯಾಣಿಕರಿಗೆ, ಸ್ಟಾರ್ ಏರ್ ಸಂಸ್ಥೆಯು 1,200 ಯಾನಗಳ ಮೂಲಕ 47 ಸಾವಿರ ಪ್ರಯಾಣಿಕರಿಗೆ ಮತ್ತು ಸ್ಪೈಸ್ ಜೆಟ್ ಸಂಸ್ಥೆಯು 530 ಯಾನಗಳ ಮೂಲಕ 25 ಸಾವಿರ ಪ್ರಯಾಣಿಕರಿಗೆ ವಿಮಾನಯಾನ ಸೇವೆ ಒದಗಿಸಿವೆ ಎಂದು ಅವರು ಅಂಕಿಅಂಶಗಳನ್ನು ನೀಡಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದ ಮೂಲಕ ಬೆಂಗಳೂರು, ಗೋವಾ, ಹೈದರಾಬಾದ್, ತಿರುಪತಿ, ಚೆನ್ನೈಗೆ ಈಗ ವಿಮಾನಸೇವೆ ಲಭ್ಯವಿದೆ. ಇದರಿಂದ ಮಲೆನಾಡು ಪ್ರದೇಶದಲ್ಲಿ ವಾಣಿಜ್ಯ ವಹಿವಾಟು, ಪ್ರವಾಸೋದ್ಯಮ, ಶೈಕ್ಷಣಿಕ ಚಟುವಟಿಕೆ ಮತ್ತು ಆರ್ಥಿಕ ಬೆಳವಣಿಗೆಗೆ ಇಂಬು ದೊರೆತಿದೆ. ಇಲ್ಲಿ ಸದ್ಯದಲ್ಲೇ ವಿಮಾನ ತರಬೇತಿ (ಎಫ್.ಟಿ.ಒ) ಮತ್ತು ಎಂ.ಆರ್.ಒ. ವ್ಯವಸ್ಥೆಗಳನ್ನು ಕೂಡ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇಲ್ಲಿಯ ವೈಮಾನಿಕ ಸೇವೆಯ ಬೇಡಿಕೆಗಳನ್ನು ಪೂರೈಸಲು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಆಧುನಿಕ ಮಾದರಿಯ ಡಿಎಂಇ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದರಿಂದ 24x7 ವಿಮಾನಸೇವೆ ಒದಗಿಸಬಹುದು. ಆರ್.ಸಿ.ಎಸ್-ಉಡಾನ್ ಯೋಜನೆಯಡಿ ಇಲ್ಲಿಂದ ದೇಶದ ಮತ್ತಷ್ಟು ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಲಾಗುವುದು ಎಂದು ಪಾಟೀಲ ವಿವರಿಸಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣವು 758 ಎಕರೆ ವಿಸ್ತಾರವಿದ್ದು, ಇದನ್ನು 576.76 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎನ್ನುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ ಎಂದು ಎಂ ಬಿ ಪಾಟೀಲ್ ಅವರು ಹೇಳಿದರು.












Click it and Unblock the Notifications