ಗರ್ಭಿಣಿ ಯುವತಿಗೆ ಪ್ರಿಯಕರನ ಜತೆಗೆ ಮದುವೆ ಮಾಡಿದ ಮಾಗಡಿ ಗ್ರಾಮಸ್ಥರು
ಮಾಗಡಿಯ ಇರುಳಿಗರ ಕಾಲೋನಿಯಲ್ಲಿ ಮದುವೆಯಾಗುವುದಾಗಿ ನಂಬಿಸಿ, ಯುವತಿ ಗರ್ಭಿಣಿಯಾಗಲು ಕಾರಣವಾದ ಯುವಕನಿಗೆ ಗ್ರಾಮಸ್ಥರೇ ಮುಂದಾಗಿ ಮದುವೆ ಮಾಡಿಸಿದ್ದಾರೆ
ಮಾಗಡಿ, ಮೇ 1: ಮದುವೆಯಾಗುವ ಭರವಸೆ ನೀಡಿ, ಮದುವೆಗೆ ಮೊದಲೇ ಪ್ರಿಯತಮೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಗರ್ಭಿಣಿಯನ್ನಾಗಿಸಿ, ಬಳಿಕ ಗರ್ಭಪಾತ ಮಾಡಿಸಲು ಮುಂದಾಗಿದ್ದ ಪ್ರಿಯಕರನ ಸಂಚು ಗ್ರಾಮಸ್ಥರಿಗೆ ತಿಳಿದಿದ್ದರಿಂದ ಊರವರೇ ಮುಂದೆ ನಿಂತು ಇಬ್ಬರಿಗೂ ಮದುವೆ ಮಾಡಿಸಿದ ಘಟನೆ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಇರುಳಿಗರ ಕಾಲೋನಿಯಲ್ಲಿ ನಡೆದಿದೆ.
ಬಾಚೇನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರುಳಿಗರ ಕಾಲೋನಿಯ ನಿವಾಸಿಗಳಾದ ಶ್ರೀನಿವಾಸ್ ಮತ್ತು ಚಿಕ್ಕವೆಂಕಟಮ್ಮ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ನಡುವೆ ಮದುವೆಗೆ ಮೊದಲೇ ಇವರಿಬ್ಬರ ನಡುವೆ ದೈಹಿಕ ಸಂಬಂಧ ಬೆಳೆದು, ಆಕೆ ಆರು ತಿಂಗಳ ಗರ್ಭಿಣಿಯಾಗಿದ್ದಳು.[ಮಾಗಡಿ ಶಾಸಕ ಬಾಲಕೃಷ್ಣ ಜೆಡಿಎಸ್ ನಿಂದ ಕಾಂಗ್ರೆಸ್ ಕಡೆಗೆ!]

ತಾನು ಗರ್ಭಿಣಿಯಾಗಿರುವ ವಿಚಾರವನ್ನು ಚಿಕ್ಕವೆಂಕಟಮ್ಮ ಪ್ರಿಯಕರ ಶ್ರೀನಿವಾಸ್ ಗಮನಕ್ಕೆ ತಂದಿದ್ದಾಳೆ. ಆಗ ಮದುವೆಯಾಗುವುದರ ಬದಲಿಗೆ ಆತ ಗರ್ಭಪಾತ ಮಾಡಿಸಲು ಮುಂದಾಗಿ, ಆಸ್ಪತ್ರೆಗೆ ತೆರಳಿ ಗರ್ಭಪಾತ ಮಾಡಿಸುವಂತೆ ಹೇಳಿದ್ದಾನೆ. ಆದರೆ ವೈದ್ಯರು ಆಗುವುದಿಲ್ಲ ಎಂದು ಹಿಂದಕ್ಕೆ ಕಳುಹಿಸಿದ್ದಾರೆ.

ಈ ವಿಚಾರ ಅದು ಹೇಗೋ ಗ್ರಾಮಸ್ಥರ ಕಿವಿಗೆ ಬಿದ್ದಿದ್ದರಿಂದ ಎಲ್ಲರೂ ಒಂದೆಡೆ ಸೇರಿ, ಯುವತಿ ಚಿಕ್ಕವೆಂಕಟಮ್ಮನಿಗೆ ಗ್ರಾಮಸ್ಥರೇ ಮುಂದೆ ನಿಂತು ಮನೆ ಬಳಿಯೇ ಸರಳವಾಗಿ ವಿವಾಹ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು, ಮುಖಂಡರು ಹಾಗೂ ಜನಪ್ರತಿನಿಧಿಗಳು ಭಾಗಿಯಾಗಿದ್ದರು.












Click it and Unblock the Notifications