ಕೆಆರ್ ಎಸ್ ಹಿನ್ನೀರಿನಲ್ಲಿ ಗತ ವರ್ಷಗಳ ದೇವಾಲಯಗಳು ಪ್ರತ್ಯಕ್ಷ!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ,ಮಾರ್ಚ್,23: ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಮುಳುಗಡೆಯಾಗಿದ್ದ ಗ್ರಾಮಗಳು, ವೀರಗಲ್ಲು, ಮಾಸ್ತಿಗಲ್ಲಿನಂತಹ ಶಾಸನಗಳು, ದೇವಾಲಯಗಳು ಕಾಣತೊಡಗಿವೆ.

ಜಲಾಶಯ ನಿರ್ಮಾಣವಾದಂದಿನಿಂದಲೂ ನೀರಿನಿಂದ ತುಂಬಿ ತುಳುಕುತ್ತಿದ್ದ ಜಲಾಶಯ ಬೇಸಿಗೆಯ ಝಳಕ್ಕೆ ಇದೀಗ ಬರಿದಾಗುತ್ತಿದೆ. ಆದ್ದರಿಂದ ಜಲಾಶಯದ ಮತ್ತೊಂದು ನೋಟ ಲಭ್ಯವಾಗುತ್ತಿದ್ದು, ಜನ ಹಿನ್ನೀರಿನತ್ತ ಧಾವಿಸತೊಡಗಿದ್ದಾರೆ. ಜಲಾಶಯದಲ್ಲಿ ನೀರು ಕಡಿಮೆಯಾದರೂ ಪ್ರವಾಸಿಗರ ಕೊರತೆ ಕಾಣಿಸಿಲ್ಲ.[ಬಿರು ಬೇಸಿಗೆ, ಆಟದ ಮೈದಾನವಾದ ಕೆಆರ್ ಎಸ್ ಜಲಾಶಯ!]

ಮಂಡ್ಯ ಜಿಲ್ಲೆಯ ಕೆಆರ್ ಎಸ್ ದೇವಾಲಯದ ಹಿನ್ನಿರಿನಲ್ಲಿ ಮನಸೆಳೆಯುವ ವೇಣುಗೋಪಾಲ ದೇಗುಲ, ನಾರಾಯಣಸ್ವಾಮಿ ದೇವಾಲಯ, ಸುಬ್ರಹ್ಮಣ್ಯೇಶ್ವರ ಗೋಪುರ, ಹಲವಾರು ಕಲ್ಲಿನ ಶಾಸನಗಳು ಗೋಚರಿಸುತ್ತಿವೆ.[ಕುಡಿಯುವ ನೀರಿಗಾಗಿ 3ನೇ ಮಹಾಯುದ್ಧ ಬೇಕೆ?]

ಇಲ್ಲಿ ನಾಲ್ಕು, ಐದು ವರ್ಷದ ಹಿಂದೆ ಹಿನ್ನೀರಿನಲ್ಲಿ ಪತ್ತೆಯಾಗಿದ್ದವು. ಸಾಮಾನ್ಯವಾಗಿ ಕೆಆರ್ ಎಸ್ ಎಂದಾಕ್ಷಣ ತುಂಬಿ ತುಳುಕುವ ನೀರು ಮಾತ್ರ ಜನರ ಮನಪಟಲದಲ್ಲಿ ಸುಳಿಯುತ್ತಿತ್ತು. ಆದರೆ ಈಗ ಖಾಲಿ ಬಿದ್ದ ಜಲಾಶಯ ಮತ್ತು ಅದರೊಳಗೆ ಅವಿತಿದ್ದ ದೇವಾಲಯವನ್ನು ನೋಡಲು ಜನ ಆಗಮಿಸುತ್ತಿದ್ದಾರೆ.

ಮನಸೆಳೆಯುವ ವೇಣುಗೋಪಾಲ ದೇಗುಲ

ಮನಸೆಳೆಯುವ ವೇಣುಗೋಪಾಲ ದೇಗುಲ

2000ರಲ್ಲಿ ಕೆಆರ್ ಎಸ್ ನಲ್ಲಿ ನೀರಿನ ಮಟ್ಟ ಇಳಿದಾಗ ಹಿನ್ನೀರಿನಲ್ಲಿ ವೇಣುಗೋಪಾಲಸ್ವಾಮಿ ದೇವಾಲಯ ಪತ್ತೆಯಾಗಿತ್ತಲ್ಲದೆ, ಅದು ಪ್ರವಾಸಿಗರು, ಸಾರ್ವಜನಿಕರನ್ನು ಬಹುವಾಗಿ ಆಕರ್ಷಿಸಿತ್ತು. ದೇವಾಲಯದ ಸೌಂದರ್ಯಕ್ಕೆ ಮಾರು ಹೋಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರಿಂದ ಖೋಡೆಸ್ ಕಂಪನಿ ಜಲಾಶಯದಿಂದ ಹೊರಭಾಗಕ್ಕೆ ಸ್ಥಳಾಂತರ ಮಾಡಿ ಸುಂದರವಾಗಿ ದೇವಾಲಯ ನಿರ್ಮಿಸಲಾಗಿದೆ. ಇದೀಗ ದೇವಾಲಯವು ಪ್ರವಾಸಿಗರ ಮನಸೆಳೆಯುತ್ತಿದೆ.

ಗೋಚರಿಸಿದ ನಾರಾಯಣಸ್ವಾಮಿ ದೇವಾಲಯ

ಗೋಚರಿಸಿದ ನಾರಾಯಣಸ್ವಾಮಿ ದೇವಾಲಯ

ಕೆಆರ್ ಎಸ್ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಬೋರೆ ಆನಂದೂರಿನ ನಾರಾಯಣಸ್ವಾಮಿ ದೇವಾಲಯ ಸಂಪೂರ್ಣ ಗೋಚರವಾಗಿದೆ. ಈ ದೇವಾಲಯ ನೀರಿನ ಮಟ್ಟ 85 ಅಡಿಗಿಂತಲೂ ಕಡಿಮೆಯಾದಾಗ ಮಾತ್ರ ಗೋಚರಿಸುತ್ತದೆ. ಆದರೆ ಈ ದೇವಸ್ಥಾನ ನಿಜವಾಗಿಯೂ ನಾರಾಯಣಸ್ವಾಮಿ ದೇವಸ್ಥಾನವೇ ಎಂಬುದರ ಬಗ್ಗೆ ಸ್ಥಳೀಯರಲ್ಲೇ ಗೊಂದಲವಿದೆ. ಕೆಲವರು ನಾರಾಯಣಸ್ವಾಮಿ ದೇವಸ್ಥಾನವಲ್ಲ ಮುಳುಗಡೆಯಾಗಿ ಇದೀಗ ಸ್ಥಳಾಂತರಗೊಂಡಿರುವ ವೇಣುಗೋಪಾಲಸ್ವಾಮಿಯ ತೀರ್ಥ ಮಂಟಪ ಎಂದರೆ ಮತ್ತೆ ಕೆಲವರು ಕಾಳಮ್ಮ ದೇವಸ್ಥಾನ ಎಂದು ಹೇಳುತ್ತಾರೆ. ಅದೇನೇ ಇರಲಿ ನೋಡಲು ಭವ್ಯವಾಗಿರುವ ಈ ದೇಗುಲ ಬೃಹತ್ ಕಲ್ಲುಕಂಬಗಳಿಂದ ನಿರ್ಮಿಸಲಾಗಿದ್ದು ಗೋಪುರದ ಕೆತ್ತನೆ ಸುಂದರವಾಗಿದೆ.

ಅಚ್ಚರಿ ಮೂಡಿಸಿದ್ದ ಸುಬ್ರಹ್ಮಣ್ಯೇಶ್ವರ ಗೋಪುರ

ಅಚ್ಚರಿ ಮೂಡಿಸಿದ್ದ ಸುಬ್ರಹ್ಮಣ್ಯೇಶ್ವರ ಗೋಪುರ

ಕನ್ನೇಶ್ವರ, ಕಾಳಮ್ಮ ಮತ್ತು ಸುಬ್ರಹ್ಮಣ್ಯೇಶ್ವರ ದೇಗುಲ ಮುಳುಗಡೆಯಾಗಿವೆ. ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಗೋಪುರ 2013ರ ಜೂನ್ ತಿಂಗಳಲ್ಲಿ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 65 ಅಡಿ ತಲುಪಿದಾಗ ಕಾಣಿಸಿತ್ತು. ಬೋರೆ ಆನಂದೂರಿನಿಂದ 2 ಕಿ.ಮೀ. ದೂರದಲ್ಲಿ ಜಲಾಶಯದೊಳಗೆ ಅರಮನೆ ತಿಟ್ಟು ಎಂಬ ಗುಂಡು ತೋಪು ಸ್ಥಳದಲ್ಲಿ ಸುಬ್ರಹ್ಮಣ್ಯೇಶ್ವರ ದೇವಾಲಯವಿದೆ. ಈ ದೇವಾಲಯ ಅಣೆಕಟ್ಟೆ ನಿರ್ಮಾಣದ ನಂತರ ಕಾಣಿಸಿದ ನೆನಪಿಲ್ಲ ಎನ್ನುವ ಸ್ಥಳೀಯರು 2013ರಲ್ಲಿ ಗೋಪುರ ತುದಿ ಮಾತ್ರ ದೂರದಿಂದ ಕಾಣಿಸಿದ್ದನು ಹೇಳುತ್ತಾರೆ.

ಸುಬ್ರಹ್ಮಣ್ಯ ದೇವಾಲಯದ ಬಗ್ಗೆ ಜನ ಏನು ಹೇಳ್ತಾರೆ?

ಸುಬ್ರಹ್ಮಣ್ಯ ದೇವಾಲಯದ ಬಗ್ಗೆ ಜನ ಏನು ಹೇಳ್ತಾರೆ?

ಕೆಲವರು ಹೇಳುವ ಪ್ರಕಾರ ಗೋಪುರ ಮಾತ್ರ ಗೋಚರಿಸಿದ ಸುಬ್ರಹ್ಮಣ್ಯ ದೇವಾಲಯದ ಪ್ರದೇಶ ಹಿಂದೆ ಸುಬ್ರಹ್ಮಣ್ಯಪುರವಾಗಿತ್ತು. ಈ ಹೆಸರು ಬರಲು ಕಾರಣ ಇಲ್ಲಿ ಸುಬ್ರಹ್ಮಣ್ಯೇಶ್ವರ ದೇವಸ್ಥಾನವಿತ್ತು. ಜಲಾಶಯ ನಿರ್ಮಾಣ ಆರಂಭವಾದೊಡನೆ ನೀರಿನಲ್ಲಿ ಮುಳುಗಡೆಯಾಗಿ, ಸುಬ್ರಹ್ಮಣ್ಯಪುರದಲ್ಲಿದ್ದ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಯಿತು.

ಸುಬ್ರಹ್ಮಣ್ಯ ದೇವಾಲಯದ ಗೋಪುರ ಕಾಣಿಸಿಕೊಂಡಿದ್ದು ಯಾವಾಗ?

ಸುಬ್ರಹ್ಮಣ್ಯ ದೇವಾಲಯದ ಗೋಪುರ ಕಾಣಿಸಿಕೊಂಡಿದ್ದು ಯಾವಾಗ?

ಊರಿನಲ್ಲಿದ್ದ ಸುಬ್ರಹ್ಮಣ್ಯೇಶ್ವರ ದೇವಾಲಯ ಜಲಾಶಯದ ಹಿನ್ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿತು. ಆಗ ಮುಳುಗಿದ ದೇವಾಲಯ ಇದುವರೆಗೂ ಒಮ್ಮೆಯೂ ಯಾರ ಕಣ್ಣಿಗೂ ಕಾಣಿಸಿರಲಿಲ್ಲ. ಸುಮಾರು 8 ದಶಕಗಳ ಬಳಿಕ 2013ರಲ್ಲಿ ಗೋಪುರ ಕಾಣಿಸಿಕೊಂಡಿತ್ತು. ಆದರೆ ಸುಬ್ರಹ್ಮಣ್ಯೇಶ್ವರ ದೇವಾಲಯ ಹೇಗಿದೆ ಎಂಬುದು ಮಾತ್ರ ತಿಳಿಯುತ್ತಿಲ್ಲ.

ಕಲ್ಲಿನ ಶಾಸನಗಳು

ಕಲ್ಲಿನ ಶಾಸನಗಳು

ಹಿನ್ನಿರಿನಲ್ಲಿರುವ ಕಲ್ಲಿನ ಶಾಸನಗಳು ಇದೀಗ ಕಂಡು ಬರುತ್ತಿದ್ದು, ಇದು ಯಾರ ಹಾಗೂ ಯಾವ ಕಾಲದ್ದು ಎಂದು ತಿಳಿದು ಬಂದಿಲ್ಲ. ಕಾಣಿಸಿಕೊಂಡ ಕಲ್ಲಿನ ಶಾಸನಗಳು ಜನರ ಕುತೂಹಲ ಕೆರಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Many temples like Naryana swamy temple, Subramanya swamy, stone sculpture showed in KRS back water, Mandya. Due to lack of rain and fiery summer water level at Krishna Raja Sagara dam in Mandya district has come down drastically. The water level has reached 83 ft (124 ft) as on 22nd March.
Please Wait while comments are loading...