Railway: ಮಂಗಳೂರು- ಕಬಕ ಪುತ್ತೂರು ರೈಲ್ವೆ ಪ್ರಯಾಣಿಕರಿಗೆ ಸಂಕಷ್ಟ: ಕೇಂದ್ರ ಸರ್ಕಾರಕ್ಕೆ ಪತ್ರ
ಮಂಗಳೂರು- ಕಬಕ ಪುತ್ತೂರು ವ್ಯಾಪ್ತಿಯಲ್ಲಿ ರೈಲ್ವೆ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಕರ್ನಾಟಕದವೇ ಇದೀಗ ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವರು ಆಗಿರುವುದರಿಂದ ಕರ್ನಾಟಕದ ರೈಲ್ವೆ ಸಮಸ್ಯೆಗಳು ಪರಿಹಾರವಾಗಬಹುದು ಎನ್ನುವ ನಿರೀಕ್ಷೆ ಹೆಚ್ಚಾಗಿದೆ. ಇದೀಗ ಮಂಗಳೂರು- ಕಬಕ ಪುತ್ತೂರು ರೈಲ್ವೆಯಲ್ಲಿ ಇರುವ ಹಲವು ಪ್ರಮುಖ ಹಾಗೂ ಗಂಭೀರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನ ಸೆಳೆಯಲಾಗಿದೆ.
ಪುತ್ತೂರು - ಸುಬ್ರಹ್ಮಣ್ಯ ವಲಯದಲ್ಲಿ ರೈಲ್ವೆ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆಯಲಾಗಿದೆ. ತುರ್ತಾಗಿ ಎರಡು ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ಸೌಕರ್ಯಗಳನ್ನು ಸುಧಾರಿಸುವುದಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಕೇಂದ್ರ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದಿದ್ದಾರೆ.

1. 16575/76 ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ (YPR-MAJN) ಮಂಗಳೂರು ಸೆಂಟ್ರಲ್ (MAQ)ಗೆ ವಿಸ್ತರಣೆ: ಸದ್ಯ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ನಗರದ ಹೊರವಲಯದಲ್ಲಿರುವ ಮಂಗಳೂರು ಜಂಕ್ಷನ್‌ನಲ್ಲಿ (ಎಂಎಜೆಎನ್) ಮುಕ್ತಾಯಗೊಳ್ಳುತ್ತಿದೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತಿದೆ ಎಂದು ಹೇಳಲಾಗಿದೆ.
ಹೊರವಲಯದಲ್ಲಿ ರೈಲು ನಿಲ್ಲುವುದರಿಂದ ರೈಲು ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಡಿ.ವಿ. ಸದಾನಂದ ಗೌಡ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಮಂಗಳೂರು ಸೆಂಟ್ರಲ್‌ನಲ್ಲಿ ಪ್ಲಾಟ್‌ಫಾರ್ಮ್ ವಿಸ್ತರಣೆ ಪೂರ್ಣಗೊಂಡ ನಂತರ ಈ ರೈಲನ್ನು ಮಂಗಳೂರು ಸೆಂಟ್ರಲ್ (MAQ) ವರೆಗೆ ವಿಸ್ತರಿಸಲು ಯೋಜನೆಗಳನ್ನು ಪ್ರಾರಂಭಿಸಲಾಗಿತ್ತು . ಇನ್ನು ಮಂಗಳೂರು ಸೆಂಟ್ರಲ್‌ನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಅಥವಾ ಅವಕಾಶ ಇರುವ ಹೊರತಾಗಿಯೂ, ರೈಲು ಸೇವೆಯನ್ನು ಈ ನಿಲ್ದಾಣಕ್ಕೆ ಇನ್ನೂ ವಿಸ್ತರಿಸಲಾಗಿಲ್ಲ ಎಂದು ಹೇಳಲಾಗಿದೆ.
2. ಕಬಕ - ಪುತ್ತೂರು (ಕೆಬಿಪಿಆರ್) ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ರೂಫಿಂಗ್ ನಿರ್ಮಾಣಕ್ಕೆ ಮನವಿ: ಕಬಕ - ಪುತ್ತೂರು ನಿಲ್ದಾಣದಲ್ಲಿ ಪ್ರಸ್ತುತ ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ರೂಫಿಂಗ್ ಸೌಲಭ್ಯ ಇಲ್ಲ. ಇದರಿಂದ ಮುಖ್ಯವಾಗಿ ರೈಲ್ವೆ ಪ್ರಯಾಣಿಕರು ವಿಶೇಷವಾಗಿ ಮಳೆಗಾಲದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ಲಾಟ್‌ಫಾರ್ಮ್‌ಗಳಿಂದ ಪ್ರಯಾಣಿಕರು ಹತ್ತುವಾಗ ಜಾರಿ ಬೀಳುವ ಘಟನೆಗಳು ಆಗಾಗ ನಡೆಯುತ್ತಿದ್ದು, ಆತಂಕ ಹೆಚ್ಚಿಸಿದೆ. ಹೀಗಾಗಿ, ಈ ಎರಡು ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು.
ಈ ಪ್ರದೇಶದಲ್ಲಿ ರೈಲು ಬಳಕೆದಾರರ ಅನುಕೂಲತೆ ಹಾಗೂ ಸುರಕ್ಷತೆಗೆ ಸಂಬಂಧಿಸಿದಂತೆ ಈ ವಿಷಯಗಳಿಗೆ ಆದ್ಯತೆ ಕೊಡಬೇಕು ಎಂದು ಮನವಿ ಮಾಡಲಾಗಿದೆ. ಆದಷ್ಟು ಬೇಗ ಈ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮನವಿ ಮಾಡಲಾಗಿದೆ.
ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಹಲವು ಮೂಲಸೌಕರ್ಯ ಸಮಸ್ಯೆಗಳಿದ್ದು, ಈ ಸಮಸ್ಯೆಗಳನ್ನು ಪರಿಹರಿಸುವಂತೆ ರೈಲ್ವೆ ಇಲಾಖೆಗೆ ಇಲ್ಲಿನ ಜನ ನಿರಂತರವಾಗಿ ಮನವಿ ಮಾಡುತ್ತಲ್ಲೇ ಇದ್ದಾರೆ. ಆದರೆ, ಸಮಸ್ಯೆಗೆ ಪರಿಹಾರ ಸಿಗುವ ಮುನ್ಸೂಚನೆ ಕಾಣಿಸುತ್ತಿಲ್ಲ. ಇಲ್ಲಿನ ರೈಲು ನಿಲ್ದಾಣದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡಿದರೂ, ಜನರಿಗೆ ಅವಶ್ಯವಿರುವ ಸೇವೆಗಳು ಇನ್ನೂ ಸಿಗುತ್ತಿಲ್ಲ ಎಂದು ಇಲ್ಲಿನ ರೈಲು ಪ್ರಯಾಣಿಕರು ಹೇಳಿದ್ದಾರೆ.












Click it and Unblock the Notifications