ಮಂಡ್ಯದ ಟಿಕೆಟ್ : ಹೊಸ ಬೇಡಿಕೆ ಮುಂದಿಟ್ಟ ಅಂಬರೀಶ್!
Recommended Video

ಬೆಂಗಳೂರು, ಏಪ್ರಿಲ್ 08 : ಮಾಜಿ ಸಚಿವ, ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ನಡೆ ಕಾಂಗ್ರೆಸ್ ನಾಯಕರಲ್ಲಿ ಕುತೂಹಲ ಹುಟ್ಟು ಹಾಕಿದೆ. ಅಂಬರೀಶ್ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಸಹ ಪ್ರಯತ್ನ ನಡೆಸಿದೆ. ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ಅಂಬರೀಶ್ ಇನ್ನೂ ಮೌನ ಮುರಿದಿಲ್ಲ.
ಯಾವ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೂ ಸಿಗದೇ ಇದ್ದ ಅಂಬರೀಶ್ ಅವರಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕರೆ ಮಾಡಿದ್ದರು. ಭಾನುವಾರ ಸಂಜೆಯೊಳಗೆ ಚುನಾವಣೆಗೆ ಸ್ಪರ್ಧಿಸುವ ಕುರಿತು ತೀರ್ಮಾನ ತಿಳಿಸುವಂತೆ ಸೂಚಿಸಿದ್ದರು.
ಭಾನುವಾರ ಅಂಬರೀಶ್ ಅವರು ಸೋಮವಾರ ತಮ್ಮ ನಿರ್ಧಾರವನ್ನು ಘೋಷಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ಪಕ್ಷದ ನಾಯಕರ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಹೊಸ ಬೇಡಿಕೆಯಿಂದಾಗಿ ಕಾಂಗ್ರೆಸ್ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ.
ಅಂಬರೀಶ್ ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನ ನಡೆಸಿದೆ ಎಂದು ತಿಳಿದುಬಂದಿದೆ. ಆದರೆ, ಬಿಜೆಪಿ ಸೇರುವುದಿಲ್ಲ ಎಂದು ಅಂಬರೀಶ್ ಸ್ಪಷ್ಟಪಡಿಸಿದ್ದಾರೆ. ಆದರೆ, ಅಂಬರೀಶ್ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ?, ಇಲ್ಲವೇ? ಎಂಬ ಬಗ್ಗೆ ಇನ್ನೂ ಖಚಿತವಾಗಿಲ್ಲ.

ಸೋಮವಾರ ಸ್ಕ್ರೀನಿಂಗ್ ಕಮಿಟಿ ಸಭೆ
ಕರ್ನಾಟಕದ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ರಾಜ್ಯ ಚುನಾವಣಾ ಸಮಿತಿ ಈಗಾಗಲೇ 1 ಕ್ಷೇತ್ರಕ್ಕೆ ಎರಡು ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಿದೆ. ಸೋಮವಾರ ನವದೆಹಲಿಯಲ್ಲಿ ಕೇಂದ್ರ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ.
ಮಂಡ್ಯ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಆದರೆ, ಅಂಬರೀಶ್ ಅವರ ನಿರ್ಧಾರಕ್ಕಾಗಿ ಕಾಂಗ್ರೆಸ್ ನಾಯಕರು ಕಾಯುತ್ತಿದ್ದಾರೆ. ಆದ್ದರಿಂದ, ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ.

ಅಂಬರೀಶ್ ಇಟ್ಟಿರುವ ಬೇಡಿಕೆ ಏನು?
ಮಂಡ್ಯದ 4 ವಿಧಾನಸಭಾ ಕ್ಷೇತ್ರಗಳಿಗೆ ನಾನು ಹೇಳಿದಂತೆ ಟಿಕೆಟ್ ಹಂಚಿಕೆಯಾಗಬೇಕು. ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ಮತ್ತು ಕೆ.ಆರ್.ಪೇಟೆ ಕ್ಷೇತ್ರದ ಟಿಕೆಟ್ ಹಂಚಿಕೆ ಜವಾಬ್ದಾರಿಯನ್ನು ನೀಡಬೇಕು ಎಂದು ಅಂಬರೀಶ್ ಬೇಡಿಕೆ ಇಟ್ಟಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಪುಟ್ಟೇಗೌಡ, ಮದ್ದೂರಿನಲ್ಲಿಕಲ್ಪನಾ ಸಿದ್ದರಾಜು, ಕೆ.ಆರ್.ಪೇಟೆಯಲ್ಲಿ ಕಿಕ್ಕೇರಿ ಸುರೇಶ, ಮೇಲುಕೋಟೆಯಲ್ಲಿ ಎಲ್.ಡಿ.ರವಿಗೆ ಟಿಕೆಟ್ ನೀಡಬೇಕು ಎಂಬದು ಅಂಬರೀಶ್ ಬೇಡಿಕೆ. ಇದಕ್ಕೆ ಕಾಂಗ್ರೆಸ್ ನಾಯಕರು ಒಪ್ಪಿಗೆ ನೀಡಲಿದ್ದಾರೆಯೇ? ಕಾದು ನೋಡಬೇಕು.

ಕೆ.ಸಿ.ವೇಣುಗೋಪಾಲ್ ಸೂಚನೆ
2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳಿಂದ ಕಾಂಗ್ರೆಸ್ ಪಕ್ಷ ಟಿಕೆಟ್‌ಗೆ ಅರ್ಜಿ ಆಹ್ವಾನಿಸಿತ್ತು. ಸಿದ್ದರಾಮಯ್ಯ ಅವರು ಅರ್ಜಿ ಹಾಕಿದ್ದರು. ಆದರೆ, ಅಂಬರೀಶ್ ಮೌನವಾಗಿದ್ದರು. ಯಾವ ನಾಯಕರ ಸಂಪರ್ಕಕ್ಕೂ ಸಿಗದೇ ನಾಯಕರ ತಲೆ ನೋವು ಹೆಚ್ಚಿಸಿದ್ದರು. ಇದರಿಂದ ಅಂಬರೀಶ್ ಚುನಾವಣೆಗೆ ಸ್ಪರ್ಧಿಸುವರೋ? ಇಲ್ಲವೋ? ಎಂಬ ಗೊಂದಲ ಉಂಟಾಗಿತ್ತು.
ಕೆ.ಸಿ.ವೇಣುಗೋಪಾಲ್ ಅವರು ಅಂಬರೀಶ್ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದರು. ಅಂಬರೀಶ್ ಅವರಿಗರೆ ಏಪ್ರಿಲ್ 8ರ ತನಕ ಸಮಯ ನೀಡಿದ್ದರು. ಆದರೆ, ಅಂಬರೀಶ್ ಅವರು ಸೋಮವಾರ ನಿರ್ಧಾರವನ್ನು ತಿಳಿಸುವೆ ಎಂದು ಹೇಳಿದ್ದಾರೆ.

ಮಂಡ್ಯದ ಅಭಿಮಾನಿಗಳಿಂದ ಭೇಟಿ
ಮಾರ್ಚ್ 31ರಂದು ಅಂಬರೀಶ್ ಅವರು ಮಂಡ್ಯದಿಂದ ಆಗಮಿಸಿದ್ದ ಅಭಿಮಾನಿಗಳ ಜೊತೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು. 'ನಾನು ಸಿಂಗಪುರಕ್ಕೆ ಹೋಗಿ ಬಂದ ಮೇಲೆ ಹಿಂದಿನ ಶಕ್ತಿ ಉಳಿದಿಲ್ಲ. ಆದರೆ, ಏಪ್ರಿಲ್ 2ರಂದು ಎಲ್ಲರ ಜೊತೆ ಚರ್ಚಿಸಿ ತೀರ್ಮಾನ ಪ್ರಕಟಿಸುವೆ' ಎಂದು ಹೇಳಿದ್ದರು.
ಆದರೆ, ಏಪ್ರಿಲ್ 2ರಂದು ಯಾವುದೇ ನಿರ್ಧಾರವನ್ನು ಅವರು ಘೋಷಣೆ ಮಾಡಿಲ್ಲ. ಈಗ ಏಪ್ರಿಲ್ 9ರ ಸೋಮವಾರ ನಿರ್ಧಾರ ಪ್ರಕಟಿಸುವುದಾಗಿ ಹೇಳಿಕೆ ನೀಡಿದ್ದಾರೆ. ಅಂಬರೀಶ್ ಅವರ ಯಾವ ತೀರ್ಮಾನ ಘೋಷಣೆ ಮಾಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.











Click it and Unblock the Notifications