"ಮಲ್ಲಿಕಾರ್ಜುನ್ ಖರ್ಗೆಗೆ ನಾಮಕಾವಸ್ತೆಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ"
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ನನಗೇನೂ ಗೊತ್ತಿಲ್ಲ, ನನ್ನನೇನೂ ಕೇಳಬೇಡಿ. ಇವುಗಳ ಬಗ್ಗೆ ನಾನು ಮಾತನಾಡಲ್ಲ ಎಂದಿದ್ದಾರೆ. ಈ ಹೇಳಿಕೆಯು ಈಗ ಟೀಕೆಗೆ ಕಾರಣವಾಗಿದೆ. ಸುಮ್ಮನೆ ನಾಮಕಾವಸ್ತೆ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ಹಿರಿಯರಾದ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರನ್ನ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ನಡೆಸಿಕೊಳ್ಳುತ್ತಿರುವ ಪರಿ ನೋಡಿ. ರಾಜ್ಯ ರಾಜಕಾರಣದ ಪರಿಸ್ಥಿತಿ ಬಗ್ಗೆ "ನನಗೇನೂ ಗೊತ್ತಿಲ್ಲ, ನನ್ನನೇನೂ ಕೇಳಬೇಡಿ" ಎನ್ನುವ ಅವರ ಹೇಳಿಕೆಯಲ್ಲಿರುವ ಅಸಹಾಯಕತೆಯು ಕಾಂಗ್ರೆಸ್ ಪಕ್ಷದಲ್ಲಿ ಅವರಿಗಿರುವ ನಿಜವಾದ ಸ್ಥಾನಮಾನ ಏನು ಅನ್ನುವುದನ್ನ ತೋರಿಸುತ್ತದೆ ಎಂದಿದ್ದಾರೆ.

ಸುಮ್ಮನೆ ನಾಮಕಾವಸ್ತೆ ಖರ್ಗೆ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿ, ಅಧಿಕಾರವವನ್ನೆಲ್ಲ ತಮ್ಮ ಬಳಿಯೇ ಇಟ್ಟುಕೊಂಡಿರುವ ನಕಲಿ ಗಾಂಧಿಗಳು, ಮಲ್ಲಿಕಾರ್ಜುನ್ ಖರ್ಗೆ ಅವರಂತಹ ಹಿರಿಯ ಮುತ್ಸದ್ಧಿ ನಾಯಕನಿಗೆ ಅವಮಾನ ಮಾಡುತ್ತಿದೆ ಎಂದು ಅಶೋಕ್ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಹೈಕಮಾಂಡ್ ಅಲ್ಲವೇ?
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಹೈಕಮಾಂಡ್ ಅಲ್ಲದಿದ್ದರೆ, ಬೇರೆ ಯಾರು? ಇದು ನಿಜಕ್ಕೂ ಹಾಸ್ಯಾಸ್ಪದ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಕೂಡ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹೈಕಮಾಂಡ್ ವ್ಯಾಪ್ತಿಯಲ್ಲಿ ಬರುವುದಿಲ್ಲವೇ ಹಾಗಾದರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಪ್ರಕಾರ ಹೈಕಮಾಂಡ್ ಅಂದರೆ ಯಾರು? ಎಂದು ಕೇಳಿದ್ದಾರೆ.
ಖರ್ಗೆ ಹೇಳಿದ್ದೇನು?
ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಸದ್ಯದ ಬೆಳವಣಿಗೆ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆ ಕುತೂಹಲ ಮೂಡಿಸಿದ್ದಾರೆ. ಅದರ ಬಗ್ಗೆ ಹೇಳಲು ನನ್ನ ಬಳಿ ಏನೂ ಇಲ್ಲ, ಏನೇ ಇದ್ದರೂ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಈಗಿನ ವಿದ್ಯಮಾನಗಳ ಬಗ್ಗೆ ಹೇಳಲು ನನ್ನ ಬಳಿ ಏನೂ ವಿಷಯ ಇಲ್ಲ. ಯಾವ ವಿಚಾರದಲ್ಲೂ ಏನೂ ಇಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಸಿಎಂ ಹುದ್ದೆಯ ಕುರಿತಾದ ಊಹಾಪೋಹಗಳ ಬಗ್ಗೆ ನಿನ್ನೆ ಪ್ರತಿಕ್ರಿಯಿಸಿದ್ದ ಮಲ್ಲಿಕಾರ್ಜುನ ಖರ್ಗೆ, ಮಾಧ್ಯಮದವರು ಮೂರು ದಿನಗಳಿಂದ ನಿರಂತರವಾಗಿ ಇಲ್ಲೇ ಇದ್ದೀರಿ. ನನಗೆ ತುಂಬಾ ಬೇಸರವಾಗುತ್ತೆ. ಏಕೆಂದರೆ ಯಾವುದೇ ಸಮಸ್ಯೆ ಇಲ್ಲದೆ, ನಾನು ಏನನ್ನಾದರೂ ಹೇಳಿದರೆ ಅದು ತಪ್ಪಾಗುತ್ತೆ. ಇಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ನಾನು ಹೇಳಲು ಏನೂ ಇಲ್ಲ. ಏನೇ ಆಗಲಿ, ಹೈಕಮಾಂಡ್ ಅದನ್ನು ಮಾಡುತ್ತದೆ. ಆದ್ದರಿಂದ ಅದರ ಬಗ್ಗೆ ಹೆಚ್ಚು ಚಿಂತಿಸುವುದು ಒಳ್ಳೆಯದಲ್ಲ ಎಂದಿದ್ದಾರೆ.












Click it and Unblock the Notifications