"ಮಲ್ಲಿಕಾರ್ಜುನ ಖರ್ಗೆ ಅವರನ್ನ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ": ಕಾಂಗ್ರೆಸ್‌ಗೆ ಸವಾಲ್
ಬೆಂಗಳೂರು, ಜುಲೈ 16: ಬಿಜೆಪಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಗಳಾಗಿ ಮಾಡಿತ್ತು. ಇದು ಕಾಂಗ್ರೆಸ್ ಪಕ್ಷದವರು ಮಾಡಿದ್ದಲ್ಲ. ಇಡೀ ದೇಶದಲ್ಲಿ 6 ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡದ ಬಿಜೆಪಿಯ ಮುಖ್ಯಮಂತ್ರಿಗಳಿದ್ದಾರೆ. 4 ರಾಜ್ಯಗಳಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದವರು ರಾಜ್ಯ ಮುನ್ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಪರಿಶಿಷ್ಟ ವರ್ಗಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಸಿದ್ದರಾಮಯ್ಯನವರಿಗೆ ವಿಜಯೇಂದ್ರ ಅವರು ಸವಾಲು ಹಾಕಿದರು. ಇವರ ಯೋಗ್ಯತೆಗೆ ಅದು ಸಾಧ್ಯವಿಲ್ಲ; ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇದನ್ನು ಒಪ್ಪಲು ಅಸಾಧ್ಯ ಎಂದರು.
ಇಂದು ಮಾಧ್ಯಮಗಳ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ಸಿದ್ದರಾಮಯ್ಯನವರು, ಬಿಜೆಪಿ ತನ್ನ ಹುಟ್ಟಿನಿಂದಲೇ ಸಾಮಾಜಿಕ ನ್ಯಾಯದ ವಿರೋಧಿ, ಅಲ್ಪಸಂಖ್ಯಾತರ ವಿರೋಧಿ ಎಂದು ಬಿಂಬಿಸುವ ಕೆಲಸ ಮಾಡಿದ್ದಾರೆ. ದೇಶದ ಪ್ರಥಮ ಪ್ರಜೆ ಮಾನ್ಯ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎಂಬುದನ್ನು ಮುಖ್ಯಮಂತ್ರಿಗಳು ಮರೆಯಬಾರದು ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷವು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಹಿಂದುಳಿದ ವರ್ಗಗಳ, ಎಸ್‍ಸಿ, ಎಸ್‍ಟಿ ಸಮಾಜದ ಬಗ್ಗೆ, ಅಲ್ಪಸಂಖ್ಯಾತರ ಬಗ್ಗೆಯೂ ನಿಮಗೆ ಕಾಳಜಿ ಇಲ್ಲ. ನಿಮ್ಮದು ಕೇವಲ ಮೊಸಳೆ ಕಣ್ಣೀರು ಎಂದು ಟೀಕಿಸಿದರು. ಪ್ರಧಾನಿಯವರು ದೂರದೃಷ್ಟಿಯಿಂದ ಕೊಟ್ಟ ಪ್ರತಿ ಕಾರ್ಯಕ್ರಮವೂ ಸರ್ವಸ್ಪರ್ಶಿ, ಸರ್ವವ್ಯಾಪಿ. ಮುಸಲ್ಮಾನರ ಬಗ್ಗೆ ಇವರು ಕೇವಲ ಮಾತನಾಡುತ್ತಾರೆ, ತ್ರಿವಳಿ ತಲಾಖ್ ರದ್ದು ಕುರಿತು ಮೋದಿಜೀ ಅವರು ದಿಟ್ಟ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.
ರಾಹುಲ್ ಗಾಂಧಿ, ಸಿದ್ದರಾಮಯ್ಯ- ಕಾಂಗ್ರೆಸ್ಸಿನಿಂದ ನಾವು ಆತಂಕ ಪಡುವ ಪ್ರಶ್ನೆಯೇ ಇಲ್ಲ. ಮೋದಿ ಅವರು ಜಾತಿ ಜನಗಣತಿ ಬಗ್ಗೆ ಪ್ರಾಮಾಣಿಕ ಕಳಕಳಿಯಿಂದ ನಿರ್ಧಾರ ಮಾಡಿದ್ದಾರೆ. ಎಲ್ಲಿದ್ದಾರೆ ಸಿದ್ದರಾಮಯ್ಯನವರು ಇವತ್ತು ಎಂದು ಕೇಳಿದರು. ಇವರ ಬೂಟಾಟಿಕೆ, ನಾಟಕ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಇನ್ನೂ ಕಾಂಗ್ರೆಸ್ ಪಕ್ಷದ ಒಳಬೇಗುದಿ ಮುಂದುವರೆದಿದೆ. ಆಡಳಿತ ಪಕ್ಷದ ಶಾಸಕರು ಹತಾಶರಾಗಿದ್ದಾರೆ. ಯಾರ ಪರ ವಕಾಲತ್ತು ವಹಿಸಬೇಕು? ಸಿದ್ದರಾಮಯ್ಯನವರ ಪರವೇ ಅಥವಾ ಡಿ.ಕೆ.ಶಿವಕುಮಾರ್ ಪರ ಇರಬೇಕೇ ಎಂಬ ಗೊಂದಲ ಶಾಸಕರದು. ಇದರ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ಕುದುರೆವ್ಯಾಪಾರ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಸಿದ್ದರಾಮಯ್ಯನವರು ಭ್ರಮೆಯಲ್ಲಿದ್ದಾರೆ. ಇವರೊಬ್ಬರೇ ಹಿಂದುಳಿದ ವರ್ಗಗಳ ಮತ್ತು ಅಹಿಂದ ಚಾಂಪಿಯನ್ ಎಂದು ಹೇಳಿಕೊಂಡಿದ್ದಾರೆ. ನರೇಂದ್ರ ಮೋದಿ ಅವರು 2001ರಿಂದ 2014ರವರೆಗೆ ಸತತ ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳಾಗಿ ಆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಿದರು. 2014ರಿಂದ ಕಳೆದ 11 ವರ್ಷಗಳಲ್ಲಿ ನಿರಂತರವಾಗಿ ಪ್ರಧಾನಿ ಮೋದಿಜೀ ಅವರು ದೇಶವನ್ನು ಮುನ್ನಡೆಸುತ್ತಿದ್ದಾರೆ. ಮೋದಿಜೀ ಅವರು ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ಒಬ್ಬ ಸಾಮಾನ್ಯ ವ್ಯಕ್ತಿ ಎಂದು ವಿಜಯೇಂದ್ರ ಅವರು ಗಮನ ಸೆಳೆದರು. ಅವರದು ರಾಜಕೀಯ, ರಾಜವಂಶಸ್ಥ ಕುಟುಂಬ ಅಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯನವರೇ ನಿಮ್ಮ ಥರ ಅವರು ಅದೃಷ್ಟದ ಸಿಎಂ ಅಲ್ಲ.ಲಾಟರಿ ಮುಖ್ಯಮಂತ್ರಿಯೂ ಅಲ್ಲ. ತಮ್ಮ ಪರಿಶ್ರಮದಿಂದ, ಈ ದೇಶದ ಬಗ್ಗೆ ವಿಶಿಷ್ಟ ಕಲ್ಪನೆ ಇಟ್ಟುಕೊಂಡು, ಭಾರತದ ಅಭಿವೃದ್ಧಿಗೆ ಸಂಕಲ್ಪ ಇಟ್ಟುಕೊಂಡು ಕಳೆದ 11 ವರ್ಷಗಳಿಂದ ನಿರಂತರ ದೇಶಸೇವೆ ಮಾಡುತ್ತಿದ್ದಾರೆ; ಮೋದಿಜೀ ಅವರು ನಿಮ್ಮ ಥರ ಹಿಂದುಳಿದ ವರ್ಗದವರು ಎಂದು ಎಲ್ಲೂ ಕೂಡ ಹೇಳಿಕೊಂಡು ರಾಜಕೀಯ ಬೇಳೆ ಬೇಯಿಸುವ ಪ್ರಯತ್ನ ಮಾಡಿಲ್ಲ. ಬದಲಾಗಿ ಮೋದಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎಂಬ ಧ್ಯೇಯವಾಕ್ಯ ಇಟ್ಟುಕೊಂಡು ಎಲ್ಲರನ್ನೂ ಒಗ್ಗೂಡಿಸಿ ಈ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications