ರಾಜ್ಯದಲ್ಲಿ ಮೂವರು ಡಿಸಿಎಂ ಮಾಡುವ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದೇನು?
ಕಲಬುರಗಿ, ಜನವರಿ 09: ಲೋಕಸಭಾ ಚುನಾವಣೆಯ ಹೊತ್ತಲಿ ರಾಜ್ಯ ಕಾಂಗ್ರೆಸ್ ನಲ್ಲಿ ಮೂವರು ಡಿಸಿಎಂ ಆಯ್ಕೆಗಳ ಕುರಿತು ರಾಜ್ಯ ಕಾಂಗ್ರೆಸ್ ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇತ್ತ ಹೈಕಮಾಂಡ್ ನಾಯಕರ ಮಟ್ಟದಲ್ಲಿ ಹೆಚ್ಚುವರಿ ಡಿಸಿಎಂ ಕುರಿತು ಒತ್ತಡಗಳು ಕೇಳಿ ಬಂದಿವೆ ಎನ್ನಲಾಗಿದೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.
ಹೌದು, ಈ ಕುರಿತು ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ಅವರು, ರಾಜ್ಯದಲ್ಲಿ ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಮಾತು ಏನಿದ್ದರೂ ಕೇವಲ ಊಹಾಪೋಹ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲಿ ಮೂವರು ಉಪಮುಖ್ಯಮಂತ್ರಿ ಆಯ್ಕೆ ಕುರಿತು ಪಕ್ಷದ ಹೈಕಮಾಂಡ್ ಎದುರು ಇಂತಹ ಯಾವುದೇ ಪ್ರಸ್ತಾವನೆ ಇಲ್ಲ. ಇದಕ್ಕಿಂತಲೂ ಹೆಚ್ಚಿನ ಸ್ಪಷ್ಟನೆ ಬೇಕಿದ್ದರೆ ನೀವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಘೂ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನೇ ಕೇಳಿ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದರು. ಅಲ್ಲದೇ ಮೂವರು ಡಿಸಿಎಂ ವಿಚಾರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಂತಹ ವಿಚಾರ ಬರಬಾರದು. ಸದ್ಯಕ್ಕೆ ಸರ್ಕಾರ ನಡೆಸುವ ಕಡೆಗೆ, ಸಮಸ್ಯೆಗಳ ಕಡೆಗೆ ಗಮನ ಕೊಡಬೇಕು. ನಮ್ಮ ಪಂಚ ಗ್ಯಾರಂಟಿ ಗಳನ್ನು ಅನುಷ್ಠಾನಕ್ಕೆ ತರುವ ಕಡೆಗೆ ಗಮನ ಕೊಡಬೇಕು. ಆ ಕೆಲಸ ಸಿದ್ದರಾಮಯ್ಯ, ಡಿಕೆ ಶಿವಕುಮಾರ, ಪರಮೇಶ್ವರ ಎಲ್ಲರೂ ಸೇರಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಇನ್ನೂ 2024 ರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರಕ್ಕೆ ನಾಳೆ (ಜನವರಿ 10) ಸಭೆ ಕರೆಯಲಾಗಿದೆ. ಕರ್ನಾಟಕದ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ನಾಳೆ ಸಭೆ ನಡೆಯಲಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯರಾದ ಮಲ್ಲಿಕಾರ್ಜುನ್ ಖರ್ಗೆ ಹೇಳಿದರು. ನಾಳೆ ದೆಹಲಿಯಲ್ಲಿ ಅನೇಕ ಘಟಕಗಳ ಮೀಟಿಂಗ್ ಕರೆಯಲಾಗಿದೆ. ಎಲ್ಲಾ ಮತಕ್ಷೇತ್ರಗಳಿಗೆ ಈಗಾಗಲೆ ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೇ ಈ ಸಭೆಯಲ್ಲಿ ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಯನ್ನು ಹಾಕಬೇಕು ಎನ್ನುವುದರ ಬಗ್ಗೆ ಚರ್ಚಿಸಲಾಗುವುದು. ಇನ್ನು ದೇಶದಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ಇಂಡಿಯಾ ಒಕ್ಕೂಟ ಒಂದಾಗಿ, ಒಗ್ಗಟ್ಟಾಗಿ ಹೋಗುವ ನಿರ್ಣಯ ಕೈಗೊಂಡಿದೆ. ಅದಕ್ಕೆ ಬದ್ಧರಾಗಿ ಎಲ್ಲರೂ ಒಂದಾಗಿ ಕೆಲಸ ನಿರ್ವಹಿಸುತ್ತೇವೆ ಎಂದು ತಿಳಿಸಿದರು.

ಮಾಲ್ಡೀವ್ಸ್ ವೈರತ್ವ ಸಾಧಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೋದಿ ಅವರ ವಿದೇಶ ನೀತಿ ಸರಿಯಿಲ್ಲ. ಮೋದಿ ಅವರು ಬಂದ ಮೇಲೆ ಎಲ್ಲವೂ ಪರ್ಸನಲ್ ಆಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನೈ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲು ನಾವು ನಮ್ಮ ನೆರೆಹೊರೆಯವರನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಕೆಟ್ಟ ಪರಿಸ್ಥಿತಿ ಬಂದಾಗ ನಾವು ಹೋರಾಟಕ್ಕೂ ಸಿದ್ದರಾಗಬೇಕಾಗುತ್ತದೆ ಎಂದು ಹೇಳಿದರು.
ಇಂದಿರಾ ಗಾಂಧಿ ಯಾವ ರೀತಿ ಪಾಕಿಸ್ತಾನವನ್ನು ಬೇರ್ಪಡಿಸಿ ಬಾಂಗ್ಲಾದೇಶ ನಿರ್ಮಾಣ ಮಾಡಿದರೋ ಅಂತಹ ಹೋರಾಟ ಮಾಡಲೂ ಹಿಂದೆ ಮುಂದೆ ನೋಡಬಾರದು. ಅಂತಾರಾಷ್ಟ್ರೀಯ ಪಾಲಿಸಿ ವಿಚಾರದಲ್ಲಿ ಮೋದಿಯವರು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಯಾವಾಗ ಯಾರನ್ನು ಬೇಕಾದರೂ ತಬ್ಬಿಕೊಳ್ಳುತ್ತಾರೆ, ಯಾರನ್ನು ಬೇಕಾದರೂ ತೆಗಳುತ್ತಾರೆ. ನಾವು ನಮ್ಮ ನೆರೆಹೊರೆಯವರನ್ನು ಬದಲಾಯಿಸಲು ಆಗುವುದಿಲ್ಲ. ಹಾಗಾಗಿ ಅವರೊಂದಿಗೆ ಸೌಹಾರ್ದ ಸಂಬಂಧ ಇಟ್ಟುಕೊಂಡು ಒಂದಾಗಿ ಹೋಗಬೇಕಾಗುತ್ತದೆ. ಅವರು ನಮ್ಮ ಮೈಮೇಲೆ ಬಂದಾಗ ದೇಶಕ್ಕಾಗಿ ಹೋರಾಟಕ್ಕೂ ಸಿದ್ದರಾಗಬೇಕಾಗುತ್ತದೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.












Click it and Unblock the Notifications