ಖರ್ಗೆ ಧೃತರಾಷ್ಟ್ರ, ಪ್ರಿಯಾಂಕ್ ಖರ್ಗೆ ದುರ್ಯೋಧನ: ಗುತ್ತೇದಾರ್
ಬೆಂಗಳೂರು, ಏಪ್ರಿಲ್ 02: ಕಾಂಗ್ರೆಸ್ ತೊರೆದು ಬಿಜೆಪಿ ತೆಕ್ಕೆ ಸೇರಿರುವ ಅಫ್ಜಲ್‌ಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರು ತಮ್ಮ ಹಳೆ ಪಕ್ಷದ ಹಳೆಯ ಸ್ನೇಹಿತರ ಮೇಲೆ ವಾಗ್ಬಾಣಗಳನ್ನು ಪ್ರಯೋಗಿಸುತ್ತಿದ್ದಾರೆ.
ಹಿರಿಯ ಕಾಂಗ್ರೆಸ್ಸಿಗ, ಸಂಸದ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ ಮಾಲೀಕಯ್ಯ ಗುತ್ತೇದಾರ್ ಅಪ್ಪ ಮಕ್ಕಳನ್ನು ಕೌರವರಿಗೆ ಹೋಲಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗುತ್ತೇದಾರ್ ಅವರು ' ಮಲ್ಲಿಕಾರ್ಜುನ ಖರ್ಗೆ ಧೃತರಾಷ್ಟ್ರನಂತೆ, ಅವರ ಮಗ ಪ್ರಿಯಾಂಕ್ ಖರ್ಗೆ ದುರ್ಯೋಧನನಂತೆ ವರ್ತಿಸುತ್ತಿದ್ದಾರೆ' ಎಂದರು.

'ಕಾಂಗ್ರೆಸ್‌ನ ಹಿರಿಯ ನಾಯಕರ ಪುತ್ರ ವ್ಯಾಮೋಹದಿಂದ ಪಕ್ಷ ಹಾಳಾಗಿ ಹೋಗುತ್ತಿದೆ ಎಂದ ಅವರು, ಕಾಂಗ್ರೆಸ್‌ನಲ್ಲಿ ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ' ಎಂದರು.
ಅಂಬರೀಶ್ ಅವರ ಬಗ್ಗೆ ಮಾತನಾಡಿದ ಅವರು 'ಅಂಬರೀಶ್ ಅವರು ಯಾವ ಲಿಸ್ಟ್‌ನಲ್ಲಿದ್ದಾರೊ ಗೊತ್ತಿಲ್ಲ ಎಂದ ಅವರು ಅಂಬರೀಶ್ ಅವರ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನೂ ಕಾಂಗ್ರೆಸ್ ಕಸಿದುಕೊಂಡು ಬಿಟ್ಟಿದೆ ಎಂದರು.
ಕಲಬುರಗಿಯಲ್ಲಿ ಕಾಂಗ್ರೆಸ್‌ಗೆ ಶಾಕ್ ಕೊಡುತ್ತೇನೆಂದು ಹೇಳಿದ ಮಾಲೀಕಯ್ಯ ಗುತ್ತೇದಾರ್ ಅವರು ಶೀಘ್ರವಾಗಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಳ್ಳುತ್ತೇನೆ ಎಂದರು.












Click it and Unblock the Notifications