ಮಹದಾಯಿ ಜಲವಿವಾದ : ಮುರಿದು ಬಿತ್ತು ಮಾತುಕತೆ ಪ್ರಸ್ತಾಪ?

Posted By:
Subscribe to Oneindia Kannada

ಬೆಂಗಳೂರು, ಜನವರಿ 30 : ಮಹದಾಯಿ ಜಲವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ ಹಿನ್ನಡೆ ಉಂಟಾಗಿದೆ. ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಗಳು ಮಾತುಕತೆಗೆ ಸಿದ್ಧವಿಲ್ಲ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

'ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಡಿ. ಮಹದಾಯಿ ನ್ಯಾಯಾಧೀಕರಣದ ಅಂತಿಮ ತೀರ್ಪು ಬರುವ ತನಕ ಕಾಯಿರಿ. ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಮಾತುಕತೆಗೆ ಸಿದ್ಧವಿಲ್ಲ' ಎಂದು ಉಮಾಭಾರತಿ ಅವರು ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.[ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದ ಕರ್ನಾಟಕ]

kalasa banduri

'ಮಹದಾಯಿ ನದಿ ನೀರು ಹಂಚಿಕೆ ವಿವಾದ ನ್ಯಾಯಾಲಯದ ಮುಂದಿದೆ. ನಾವು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ನೆರವು ನೀಡುತ್ತೇವೆ. ಆದರೆ, ಉಳಿದ ಎರಡೂ ರಾಜ್ಯಗಳು ಮಾತುಕತೆಗೆ ಸಿದ್ಧವಾಗಿಲ್ಲ. ಆದ್ದರಿಂದ, ನ್ಯಾಯಾಧೀಕರಣದ ಅಂತಿಮ ತೀರ್ಪು ಬರುವ ತನಕ ಕಾಯಿರಿ' ಎಂದು ಉಮಾಭಾರತಿ ಅವರು ಪತ್ರದಲ್ಲಿ ವಿವರಿಸಿದ್ದಾರೆ. [ಕಳಸಾ ಬಂಡೂರಿ ಅನುಷ್ಠಾನಕ್ಕೆ ಒತ್ತಾಯಿಸಿ ರೊಟ್ಟಿ ಚಳವಳಿ]

ಗೋವಾ ಸಿಎಂರಿಂದಲೂ ಪತ್ರ : ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೆಕರ್ ಅವರು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, 'ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಡಿ' ಎಂದು ಹೇಳುವ ಮೂಲಕ ಕರ್ನಾಟಕದ ಮಾತುಕತೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. [ಏನಿದು ಕಳಸಾ-ಬಂಡೂರಿ ಯೋಜನೆ]

'ನಿಮ್ಮ ರಾಜ್ಯದ ಜನರು ಮತ್ತು ಪ್ರತಿಪಕ್ಷದವರಿಗೆ ಈ ಬಗ್ಗೆ ಮನವರಿಕೆ ಮಾಡಿ ಕೊಡಿ. ನ್ಯಾಯಾಧೀಕರಣದ ತೀರ್ಪು ಬರುವ ತನಕ ಕಾಯಿರಿ' ಎಂದು ಪರ್ಸೆಕರ್ ಅವರು ಮುಖ್ಯಮಂತ್ರಿಗಳಿಗೆ ಪತ್ರದಲ್ಲಿ ತಿಳಿಸಿದ್ದಾರೆ.

ಏನಿದು ವಿವಾದ? : ಮಹಾದಾಯಿ ನದಿಯ 7.56 ಟಿಎಂಸಿ ನೀರನ್ನು ಮಲಪ್ರಭೆಗೆ ತಿರುಗಿಸಿಕೊಂಡು ಹುಬ್ಬಳ್ಳಿ-ಧಾರವಾಡ, ಗದಗ ಮುಂತಾದ ಜಿಲ್ಲೆಗಳ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಕಳಸಾ-ಬಂಡೂರಿ ಯೋಜನೆಗೆ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿವೆ.

ಈ ಜಲ ವಿವಾದದ ವಿಚಾರಣೆ ಮಹದಾಯಿ ನ್ಯಾಯಾಧೀಕರಣದಲ್ಲಿ ನಡೆಯುತ್ತಿದೆ. ಮಹದಾಯಿ ನದಿಯಿಂದ 7 ಟಿಎಂಸಿ ನೀರನ್ನು ಮಲಪ್ರಭಾ ಕಣಿವೆಯ ಮೂಲಕ ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಕರ್ನಾಟಕ ಸರ್ಕಾರ ಮಹದಾಯಿ ನ್ಯಾಯಾಧೀಕರಣಕ್ಕೆ 2015ರ ಡಿಸೆಂಬರ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಮಹದಾಯಿ ನ್ಯಾಯಾಧೀಕರಣದ ಹೊರಗೆ ವಿವಾದವನ್ನು ಬಗೆಹರಿಸಿಕೊಳ್ಳಲು ಕರ್ನಾಟಕ ಬಯಸಿದೆ. ಈ ಕುರಿತು ಮಧ್ಯಸ್ತಿಕೆವಹಿಸುವಂತೆ ಕೇಂದ್ರ ಸರ್ಕಾರವನ್ನು ಕೋರಿದೆ. ಆದರೆ, ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಮಾತುಕತೆಗೆ ಒಪ್ಪಿಗೆ ನೀಡಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a letter to Karnataka Chief Minister Siddaramaiah Water resources minister Uma Bharti said that, Goa and Maharashtra government not ready for discussion over the mahadayi water dispute row.
Please Wait while comments are loading...