ಮಹದಾಯಿ ವಿವಾದ : ಜ.27ರಂದು ಸರ್ವಪಕ್ಷ ಸಭೆ
ಬೆಂಗಳೂರು, ಜನವರಿ 18 : ಮಹದಾಯಿ ವಿವಾದದ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 27ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಮತ್ತೊಮ್ಮೆ ಸರ್ವಪಕ್ಷ ನಿಯೋಗ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡುವ ಸಾಧ್ಯತೆ ಇದೆ.
ವಿಧಾನಸೌಧದಲ್ಲಿ ಜ.27ರಂದು ಸರ್ವ ಪಕ್ಷ ಸಭೆ ನಡೆಯಲಿದೆ. ನ್ಯಾಯಾಧೀಕರಣದ ಹೊರಗೆ ವಿವಾದ ಬಗೆಹರಿಸಿಕೊಳ್ಳಲು, ಪ್ರಧಾನಿ ಮಧ್ಯಪ್ರವೇಶಕ್ಕೆ ಮುಖ್ಯಮಂತ್ರಿಗಳು ಒತ್ತಾಯಿಸುವ ಸಾಧ್ಯತೆ ಇದೆ.
ಮಹದಾಯಿ ವಿವಾದದ ಕುರಿತು ಚರ್ಚೆ ನಡೆಸಲು ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಇನ್ನೂ ಒಪ್ಪಿಗೆ ನೀಡಿಲ್ಲ. ಆದ್ದರಿಂದ, ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮತ್ತೆ ಮನವಿ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

ಮೋದಿ ಭೇಟಿಗೂ ಮೊದಲೇ ಸರ್ವ ಪಕ್ಷಗಳ ಅಭಿಪ್ರಾಯವನ್ನು ಸಂಗ್ರಹಣೆ ಮಾಡಿ, ರಾಜ್ಯದ ನಿಲುವನ್ನು ಪ್ರಧಾನಿಗಳ ಮುಂದಿಟಲು ಸಿದ್ದರಾಮಯ್ಯ ಬಯಸಿದ್ದಾರೆ. ಆದ್ದರಿಂದ, ಸರ್ವ ಪಕ್ಷಗಳ ಸಭೆ ಕರೆಯಲಾಗಿದೆ.
ಮಹದಾಯಿ ಹೋರಾಟಗಾರರು ಕರ್ನಾಟಕ ಬಿಜೆಪಿ ಕಚೇರಿ ಮುಂದೆ ಮೂರು ದಿನಗಳ ಕಾಲ ಧರಣಿ ನಡೆಸಿದ್ದರು. ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ವಿವಾದವನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದ್ದರು.
ಪ್ರಧಾನಿಗಳ ಬಳಿ ಸರ್ವಪಕ್ಷಗಳ ನಿಯೋಗವನ್ನು ತೆಗೆದುಕೊಂಡು ಹೋಗಿ, ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಒತ್ತಡ ಹೇರಬೇಕು ಎಂದು ವೀರೇಶ್ ಸೊರಬದಮಠ ನೇತೃತ್ವದ ನಿಯೋಗ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿತ್ತು.












Click it and Unblock the Notifications