ಮಹಾಭಾರತ ಮುಗಿದರೂ ಬಿಜೆಪಿ ಭ್ರಷ್ಟಾಚಾರದ ಕತೆಗಳು ಮುಗಿಯಲ್ಲ: ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನಡುವೆ ಟ್ವೀಟ್ ವಾರ್ ಜೋರಾಗಿದೆ. ಯಾರನ್ನೋ ಮೆಚ್ಚಿಸುವುದಕ್ಕಿಂತ ಬಸವಣ್ಣನವರು ಹೇಳಿದ ಹಾಗೇ ಮೊದಲು "ನಿಮ್ಮ ಮನವ ಸಂತೈಸಿಕೊಳ್ಳಿ" ಪ್ರಿಯಾಂಕ್ ಖರ್ಗೆ ಅವರೇ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಪ್ರಿಯಾಂಕ್, ಮೂರು ಹಗಲು ಮೂರು ರಾತ್ರಿಯಲ್ಲಿ ಮಹಾಭಾರತದ ಕತೆಯನ್ನಾದರೂ ಹೇಳಿ ಮುಗಿಸಬಹುದು, ಆದರೆ ಬಿಜೆಪಿಯ ಭ್ರಷ್ಟಾಚಾರದ ಕತೆಗಳನ್ನು ಹೇಳಿ ಮುಗಿಸಲಾಗದು ಎಂದಿದ್ದಾರೆ.
ಮಾನ್ಯ ಅಶೋಕ್ ಅವರು ತಮ್ಮ ಪಕ್ಷದ ಇತರ ನಾಯಕರ ಮೇಲಿರುವ ಕೋಪವನ್ನು ತೀರಿಸಿಕೊಳ್ಳಲೆಂದೇ ನಮ್ಮನ್ನು ಕೆಣಕುತ್ತಿದ್ದಾರೆ ಎನಿಸುತ್ತದೆ. ನಿಮ್ಮದೇ ಪಕ್ಷದವರಾಗಿದ್ದ ಬಿಜೆಪಿಯ ವಿಷಲ್ ಬ್ಲೋವರ್ ಖ್ಯಾತಿಯ ಯತ್ನಾಳ್ ಅವರು ಹೇಳಿರುವ ಸಂಗತಿಗಳಿಗೆ ಉತ್ತರವಿದೆಯೇ? ಎಂದು ವಿಡಿಯೋ ಹಂಚಿಕೊಂಡಿದ್ದಾರೆ. ಈಶ್ವರಪ್ಪನವರ ನಂತರ ನೋಟ್ ಕೌಂಟಿಂಗ್ ಮೆಷಿನ್ ಇಟ್ಟಿದ್ದ ಖ್ಯಾತಿಗೆ ಯಡಿಯೂರಪ್ಪನವರ ಆಪ್ತ ಪಾತ್ರರಾಗಿದ್ದಾರೆ, ಈ ನೋಟ್ ಕೌಂಟಿಂಗ್ ಮೆಷಿನ್‌ನ ಮಾಲೀಕರು ಯಾರು? ಜಗನ್ನಾಥ ಭವನವಾ? ಅಥವಾ ಕೇಶವ ಕೃಪನಾ? ಎಂದು ಟಾಂಗ್ ನೀಡಿದ್ದಾರೆ.

ನಿಮ್ಮ ಪಕ್ಷದ ಅಧ್ಯಕ್ಷರು ಮೇಲಿಂದ ಮೇಲೆ ಮಾರಿಷಸ್, ದುಬೈ ದೇಶಗಳಿಗೆ ಹೋಗುವುದೇಕೆ? ಅಲ್ಲಿ ಎಷ್ಟು ಆಸ್ತಿಗಳನ್ನು ಮಾಡಿದ್ದಾರೆ? ಈ ಪ್ರಶ್ನೆಗಳನ್ನು ನಿಮ್ಮವರೇ ಕೇಳಿದ್ದಾರೆ, ಇದಕ್ಕೆ ಉತ್ತರ ಹೇಳಿ. ಒಬ್ಬ ಬಸ್ ಕಂಡಕ್ಟರ್ ಮನೆಯಲ್ಲಿ ಸಾವಿರಾರು ಕೋಟಿ ಹಣ ಸಿಗುವಂತಹ ಪವಾಡ ನಡೆಯಲು ಕಾರಣವಾಗಿದ್ದು ಯಾರು, ಇದು ಹೇಗೆ ಸಾಧ್ಯವಾಯ್ತು? ದಯವಿಟ್ಟು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಿವಮೊಗ್ಗ ಸಂಸದರಿಂದ ಉತ್ತರವನ್ನು ಪಡೆದು ಜನರಿಗೆ ತಿಳಿಸಿ ಎಂದು ಸವಾಲು ಹಾಕಿದ್ದಾರೆ.
ಅಶೋಕ್ ಏನು ಹೇಳಿದ್ರು?
ಪ್ರಚಾರದ ಹುಚ್ಚಿಗೆ ಬಿದ್ದಿರುವ ಸಚಿವ ಪ್ರಿಯಾಂಕ್ ಖರ್ಗೆ ಹಳಸಲು ಕತೆಯನ್ನು ಹರಿಬಿಟ್ಟು, ರಾಜ್ಯದ ಜನರ ದಿಕ್ಕು ತಪ್ಪಿಸುವ ವಿಫಲ ಯತ್ನಕ್ಕೆ ಕೈ ಹಾಕಿರುವುದು ಹತಾಶೆಯ ಸಂಕೇತ ಎಂದು ಅಶೋಕ್ ಲೇವಡಿ ಮಾಡಿದ್ದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಅವರ ಸಂಭಾಷಣೆ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ನ್ಯಾಯಾಲಯವೇ ಪ್ರಕರಣವನ್ನು ವಜಾಗೊಳಿಸಿದೆ. ಇಲ್ಲಸಲ್ಲದ ಆರೋಪ ಮಾಡುವುದಕ್ಕಿಂತ ನಿಮ್ಮ ಇಲಾಖೆ ಬಗ್ಗೆಯೇ ಗಮನ ಹರಿಸಿದ್ದರೆ, ಚಾಮರಾಜನಗರ ಜಿಲ್ಲೆಯ ನೀರಗಂಟಿ ಹಾಗೂ ಕಲಬರುಗಿ ಜಿಲ್ಲೆಯ ಗ್ರಂಥಪಾಲಕಿ ಜೀವವಾದರೂ ಉಳಿಯುತ್ತಿತ್ತು. ಹಾಗೇ ನರೇಗಾ ಸಿಬ್ಬಂದಿಗೆ ಸಂಬಳವಾದರೂ ಸಿಗುತ್ತಿತ್ತು ಎಂದು ವಾಗ್ದಾಳಿ ನಡೆಸಿದ್ದರು.
ಕೊನೆ ಮಾತು, ಹಾಗೇ ನಿಮ್ಮದೇ ಪಕ್ಷದ ನಾಯಕಾರದ ವಿ.ಎಸ್.ಉಗ್ರಪ್ಪ-ಸಲೀಂ ಅವರು ಕೆಲ ದಿನಗಳ ಹಿಂದೆ "ಕಮಿಷನ್ ಗಿರಾಕಿ" ಕುರಿತು ಗುಸುಗುಸು ಮಾತನಾಡಿದ್ದರು. ಅದನ್ನೂ ಎಕ್ಸ್‌ನಲ್ಲಿ ಹಂಚಿಕೊಳ್ಳಿ. "ಕಮಿಷನ್ ಗಿರಾಕಿ" ಯಾರು ಎಂಬುವುದನ್ನು ರಾಜ್ಯದ ಜನತೆಗೆ ತಿಳಿಸಿ. ಯಾರನ್ನೋ ಮೆಚ್ಚಿಸುವುದಕ್ಕಿಂತ ಬಸವಣ್ಣನವರು ಹೇಳಿದ ಹಾಗೇ ಮೊದಲು "ನಿಮ್ಮ ಮನವ ಸಂತೈಸಿಕೊಳ್ಳಿ" ಪ್ರಿಯಾಂಕ್ ಖರ್ಗೆ ಅವರೇ ಎಂದು ಅಶೋಕ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದಕ್ಕೆ ಪ್ರಿಯಾಂಕ್ ಖರ್ಗೆ ಕೂಡ ತಿರುಗೇಟು ನೀಡಿದ್ದಾರೆ.












Click it and Unblock the Notifications