ಜ.7ರಿಂದ ಮಡಿಕೇರಿಯಲ್ಲಿ ಕನ್ನಡ ನುಡಿ ತೇರು

ಗುರುವಾರ ಮಡಿಕೇರಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆ ನಡೆಸಿದ, ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಜನವರಿ 7, 8 ಮತ್ತು 9ರಂದು ಸಮ್ಮೇಳನ ನಡೆಸಲಾಗುವುದು ಎಂದರು.
ಮಡಿಕೇರಿಯಲ್ಲಿ ಅಗತ್ಯ ಸೌಲಭ್ಯಗಳಿದ್ದು ಸಮ್ಮೇಳನ ನಡೆಸಲು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಪಿ. ರಮೇಶ್ ಒಪ್ಪಿಗೆ ನೀಡಿದರು. ಸಮ್ಮೇಳನಕ್ಕಾಗಿ ರಚಿಸಲಾಗಿರುವ ಲಾಂಛನವನ್ನು ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.
ಲಾಂಛನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಅಧಿಕೃತವಾಗಿ ಬಿಡುಗಡೆ ಮಾಡಲು ಸಭೆಯಲ್ಲಿ ಒಪ್ಪಿಗೆ ಪಡೆಯಲಾಯಿತು. ಮಡಿಕೇರಿಯ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ಹಾಗೂ ಪೊಲೀಸ್ ಮೈದಾನದಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು. (ವೀರಸೇನಾನಿ ನಾಡಿನಲ್ಲಿ ಕನ್ನಡ ಸೇನಾನಿಗಳ ಕಲರವ)
ಸಮ್ಮೇಳನಕ್ಕೆ ಸರ್ಕಾರ ಈಗಾಗಲೇ 1 ಕೋಟಿ ರೂ. ಮಂಜೂರು ಮಾಡಿದೆ. ಆದರೆ, 3 ಕೋಟಿ ರೂ.ಗಳ ಅಂದಾಜು ವೆಚ್ಚ ತಯಾರಿಸಲಾಗಿದೆ. ಹೆಚ್ಚುವರಿಯಾಗಿ ಅಗತ್ಯವಿರುವ ಅನುದಾನಕ್ಕಾಗಿ, ಸಚಿವರು ಹಾಗೂ ಶಾಸಕರು ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಜಿಲ್ಲೆಯ ಜನತೆ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಸಮ್ಮೇಳನವನ್ನು ಯಶಸ್ವಿಗೊಳಿಸಲಾಗುವುದು ಎಂದರು. ಶಾಸಕ ಕೆ.ಜಿ.ಬೋಪಯ್ಯ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಿ.ಕೆ.ರಾಮೇಗೌಡ, ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಜಿ.ಪಂ.ಅಧ್ಯಕ್ಷ ಬಿ.ಶಿವಪ್ಪ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications