ಮಡಿಕೇರಿ ಗಲಭೆ : ಕುಟ್ಟಪ್ಪ ಸಾವಿನ ಪ್ರತೀಕಾರಕ್ಕೆ ಹಮೀದ್ ಹತ್ಯೆ
ಮಡಿಕೇರಿ, ಡಿಸೆಂಬರ್ 16 : ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ವೇಳೆ ನಡೆದ ಗಲಭೆಯಲ್ಲಿ ಶಾಹುಲ್ ಹಮೀದ್‍ನನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಎಚ್‌ಪಿ ಮುಖಂಡ ಕುಟ್ಟಪ್ಪ ಮೃತಪಟ್ಟವಿಚಾರ ತಿಳಿದು ದ್ವೇಷ ಸಾಧಿಸುವ ಉದ್ದೇಶದಿಂದ ಈ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಕೊಡಗು ಎಸ್ಪಿ ವರ್ತಿಕಾ ಕಟಿಯಾರ್ ಅವರು, ಹಮೀದ್ ಅವರನ್ನು ಕೊಲೆ ಮಾಡಿದ್ದ ಬೋಯಿಕೇರಿ ನಿವಾಸಿ ಪಿ.ಯು.ಕಾವೇರಪ್ಪ ಅಲಿಯಾಸ್ ಕವನ್ (31), ಮಡಿಕೇರಿ ನಗರದ ದೇಚೂರು ನಿವಾಸಿ ಎಸ್.ಎಚ್. ಭೀಷ್ಮ ಅಲಿಯಾಸ್ ನಂದ (36) ಹಾಗೂ ಸುದರ್ಶನ ಬಡಾವಣೆ ನಿವಾಸಿ ಕೆ.ಆರ್.ರಮೇಶ್ ಅವರನ್ನು ಬಂಧಿಸಲಾಗಿದೆ ಎಂದರು. [ಮಡಿಕೇರಿ ಗಲಭೆ : ಗುಂಡೇಟು ತಿಂದಿದ್ದ ಶಾಹುಲ್ ಸಾವು]

ದ್ವೇಷ ಸಾಧಿಸಲು ಕೊಲೆ ಮಾಡಿದರು : ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಕುಟ್ಟಪ್ಪ ಮೃತಪಟ್ಟ ವಿಚಾರ ತಿಳಿದು, ದ್ವೇಷ ಸಾಧಿಸುವ ಉದ್ದೇಶದಿಂದ ಹಮೀದ್‌ನನ್ನು ಕೊಲೆ ಮಾಡಿದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. [ಕುಟ್ಟಪ್ಪ ಸಾವು: ಆಕಸ್ಮಿಕವೋ, ಪೂರ್ವ ನಿಯೋಜಿತವೋ?]
ಬಂದೂಕು ತರಲು ಹೇಳಿದರು : ರಮೇಶ್ ಹಾಗೂ ಕಾವೇರಪ್ಪ ಅವರು ಭೀಷ್ಮನಿಗೆ ಕರೆ ಮಾಡಿ ಬಂದೂಕು ತರುವಂತೆ ತಿಳಿಸಿದ್ದಾರೆ. ನಂತರ ಕೆಎ 12 ಪಿ 9925 ಕಪ್ಪು ಬಣ್ಣದ ಅಲ್ಟೋ ಕಾರಿನಲ್ಲಿ ರಮೇಶ್ ಮತ್ತು ಕಾವೇರಪ್ಪ, ಭೀಷ್ಮನ ಮನೆಗೆ ತೆರಳಿ ಆತನೊಂದಿಗೆ ಬಂದೂಕು ಹಿಡಿದು ಮಡಿಕೇರಿ ನಗರ ಸಮೀಪದ ಸಿದ್ದಾಪುರ ರಸ್ತೆಯ ಅರಣ್ಯ ಪ್ರದೇಶವೊಂದಕ್ಕೆ ಬಂದಿದ್ದಾರೆ. [ಕೊಡವರು ಟಿಪ್ಪುವನ್ನು ವಿರೋಧಿಸುವುದೇಕೆ?]
ಕಾವೇರಪ್ಪ ದಾರಿಯಲ್ಲಿ ಹೋಗುತ್ತಿದ್ದ ವಾಹನದಲ್ಲಿದ್ದವರತ್ತ ಗುಂಡು ಹಾರಿಸುತ್ತಾನೆ. ಒಂದು ಗುಂಡು ನೆಲಕ್ಕೆ ತಾಗಿದರೆ, ಮತ್ತೊಂದು ಜೀಪೊಂದರ ಮುಂಭಾಗಕ್ಕೆ ತಗುಲುತ್ತದೆ. 3ನೇ ಗುಂಡು ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಹಮೀದ್‍ಗೆ ತಗಲುತ್ತದೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಆದರೆ, ನವೆಂಬರ್ 12ರಂದು ಹಮೀದ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪುತ್ತಾರೆ.

ಝಂಶೀರ್ ಎಂಬುವವರು ನೀಡಿದ ದೂರಿದ ಅನ್ವಯ ಹಮೀದ್ ಕೊಲೆ ಪ್ರಕರಣದ ತನಿಖೆಗೆ ಮಡಿಕೇರಿ ಡಿವೈಎಸ್‍ಪಿ ರಾಜಶೇಖರ್ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು. ಸುಮಾರು 34 ದಿನಗಳ ತೀವ್ರ ತನಿಖೆಯ ಬಳಿಕ ಖಚಿತ ಮಾಹಿತಿಯನ್ವಯ ಡಿ.15 ರಂದು ಬೆಳಗ್ಗೆ ಮಡಿಕೇರಿ ನಗರದ ಮಂಗೇರಿರ ಮುತ್ತಣ್ಣ ವೃತ್ತದಲ್ಲಿ ಆರೋಪಿ ರಮೇಶನನ್ನು ಬಂಧಿಸಿದ ಪೊಲೀಸರು, ನಂತರ ಉಳಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಮೀದ್ ಕೊಲೆಗೆ ಬಳಸಿದ ಬಂದೂಕು ಹಾಗೂ ಆಲ್ಟೋ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಕಾವೇರಪ್ಪ ಹಿಂದುತ್ವವಾದಿಯಾಗಿದ್ದು, ಚಾಲಕ ರಮೇಶ್ ಆರ್‍ಎಸ್‍ಎಸ್ ಕಾರ್ಯಕರ್ತನಾಗಿದ್ದಾನೆ. ವಿಎಚ್‍ಪಿ ಮುಖಂಡ ಕುಟ್ಟಪ್ಪ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ವರ್ತಿಕಾ ಕಟಿಯಾರ್ ಹೇಳಿದ್ದಾರೆ.












Click it and Unblock the Notifications