ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ಕೇಂದ್ರದ ನಾಯಕರು ಕೂಡ ಕಾರಣ ಎಂದ ರೇಣುಕಾಚಾರ್ಯ
ಭಾರತೀಯ ಜನತಾ ಪಕ್ಷದ ಕೇಂದ್ರದ ನಾಯಕರೇ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೊನ್ನಾಳ್ಳಿ ಪಟ್ಟಣದಲ್ಲಿ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ಆತ್ಮಾವಲೋಕನ ಮತ್ತು ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಸೋಲಿಗೆ ಕಾರಣವಾದ ಹಲವು ಅಂಶಗಳ ಬಗ್ಗೆ ವಿವರಣೆ ನೀಡಿದರು.

ಗೆದ್ದರೆ ನೀವು ಯಾರಿಗು ಉತ್ತರ ನೀಡಬೇಕಿಲ್ಲ, ಆದರೆ ಸೋತಾಗ ನೂರಾರು ಪ್ರಶ್ನೆಗಳು ಎದುರಾಗುವುದು ಸಹಜ, ಕಾರ್ಯಕರ್ತರ ಜೊತೆ ನಾನೂ ಕೂಡ ಆತ್ಮಾವಲಕೋನ ಮಾಡಿಕೊಳ್ಳುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರುಪಾಯಿ ಅನುದಾನ, ಅಭಿವೃದ್ಧಿ ಕಾಮಗಾರಿಗಳನ್ನು ಕ್ಷೇತ್ರದ ಜನತೆಗೆ ತಲುಪಿಸುವಲ್ಲಿ ಎಡವಿದ್ದೇವೆ. ಈಗ ಆತ್ಮವಿಮರ್ಶೆ ಮಾಡಿಕೊಂಡು ಮುಂದಿನ ಹೆಜ್ಜೆ ಇಡಬೇಕು ಎಂದು ಹೇಳಿದರು.
ಒಳ ಮೀಸಲಾತಿ ಬಿಜೆಪಿ ಸೋಲಿಗೆ ಮುಖ್ಯ ಕಾರಣ
ಒಳಮೀಸಲಾತಿ ವಿಚಾರಕ್ಕೆ ಕೈ ಹಾಕಿದ್ದು ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಗಿದೆ, ಒಳ ಮೀಸಲಾತಯಿಂದ ಬಿಜೆಪಿ 45 ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು. ನಾನು ಸೋಲುವುದಕ್ಕೂ ಕೂಡ ಒಳ ಮೀಸಲಾತಿ ವಿವಾದವೇ ಕಾರಣ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಕೇಂದ್ರದ ತಂತ್ರಗಾರಿಕೆ ಕೂಡ ಪಕ್ಷದ ಸೋಲಿಗೆ ಪ್ರಮುಖ ಕಾರಣ. 72 ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದರು, ಇದರಲ್ಲಿ 42 ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿದೆ, ಈ ರೀತಿಯ ತಂತ್ರಗಳು ಕರ್ನಾಟಕದಲ್ಲಿ ನಡೆಯಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಈ ಬಾರಿ ಜನಪರ ಘೋಷಣೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿತು. ನೌಕರರ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಭರವಸೆ ನೀಡಿತು, ಮುಖ್ಯವಾಗಿ ಅವರ ಗ್ಯಾರಂಟಿ ಕಾರ್ಡ್‌ಗಳು ಕೂಡ ಬಿಜೆಪಿ ಸೋಲಿಗೆ ಕಾರಣವಾದವು. ಬೆಲೆ ಏರಿಕೆ, ಚುನಾವಣೆ ಸಂದರ್ಭದಲ್ಲಿ ಪಡಿತರ ಅಕ್ಕಿ ಕಡಿತಗೊಳಿಸಿದ್ದು, ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕೂಡ ಬಿಜೆಪಿ ಸೋಲಿಗೆ ಕಾರಣ ಎಂದು ಹೇಳಿದರು.
ಸೋಲಿನಿಂದ ನಾನು ಕಂಗೆಟ್ಟಿಲ್ಲ
ಈ ಸೋಲಿನಿಂದ ನಾನು ಧೈರ್ಯ ಕಳೆದುಕೊಂಡಿಲ್ಲ, ಕಣ್ಣೀರು ಹಾಕಿಲ್ಲ. ನನ್ನ ತಮ್ಮನ ಮಗ ಸತ್ತಾಗ ಮಾತ್ರ ನಾನು ಅತ್ತಿದ್ದೇನೆ, ಕಾರ್ಯಕರ್ತರ ಜೊತೆ ಸೇರಿ ಮುಂದಿನ ನಡೆ ಬಗ್ಗೆ ಗಮನ ನೀಡುತ್ತೇನೆ. ಕ್ಷೇತ್ರದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಕೆಲಸ ಮಾಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.












Click it and Unblock the Notifications