'ಶಿವರಾತ್ರಿ ದಿನ ಬಿಜೆಪಿ ಮೊದಲ ಪಟ್ಟಿ ಪ್ರಕಟ'
ಬೆಂಗಳೂರು, ಫೆ.23: ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಹಾಶಿವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಲು ಬಿಜೆಪಿ ಕೋರ್ ಕಮಿಟಿ ನಿರ್ಧರಿಸಿದೆ. ಭಾರಿ ಕುತೂಹಲ ಕೆರಳಿಸಿರುವ ಕರ್ನಾಟಕದ 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎಂಬ ಸುದ್ದಿ ಬಂದಿದೆ.
ಫೆ.27ರಂದು(ಮಹಾ ಶಿವರಾತ್ರಿ) ಚುನಾವಣೆ ಸಮಿತಿ ಸಭೆ ಸೇರಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುತ್ತೇವೆ ಎಂದು ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು ಸುಳಿವು ನೀಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕರೊಡನೆ ಚರ್ಚೆ ನಡೆಸುವ ಸಂದರ್ಭದಲ್ಲಿ ಈ ವಿಷಯ ಹೊರ ಹಾಕಿದ್ದಾರೆ.
ಹಾಲಿ ಸಂಸದರ ಪೈಕಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಡಿ.ಬಿ.ಚಂದ್ರೇಗೌಡ, ಕೊಪ್ಪಳ ಕ್ಷೇತ್ರದಿಂದ ಶಿವರಾಮೇಗೌಡ, ಶಿವಮೊಗ್ಗದಿಂದ ಬಿ.ವೈ.ರಾಘವೇಂದ್ರ ಅವರಿಗೆ ಟಿಕೆಟ್ ನೀಡದೆ ಬದಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಉದ್ದೇಶಿಸಿದೆ. ಉಳಿದಂತೆ ಎಲ್ಲ ಹಾಲಿ ಸಂಸದರನ್ನು ಚುನಾವಣಾ ಸ್ಪರ್ಧೆಗಿಳಿಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಬಿಜೆಪಿ ಮೂಲಗಳು ತಿಳಿಸಿವೆ. [ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪಟ್ಟಿ ಅಖೈರು ]

ಹಾಸನ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು ಸೇರಿದಂತೆ ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿಲ್ಲ. ಕೆಲವೆಡೆ ಸಮರ್ಥ ಅಭ್ಯರ್ಥಿಗಳಿಗೆ ಹುಡುಕಾಟ ನಡೆಸಿದ್ದರೆ, ಇನ್ನೂ ಕೆಲವೆಡೆ ನೆಪಮಾತ್ರಕ್ಕೆ ಸ್ಪರ್ಧೆಗಿಳಿಸಲಾಗುತ್ತದೆ.
ಉಳಿದ 20 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಶಿವರಾತ್ರಿ ಹಬ್ಬದಂದು ನಡೆಸುವ ಉದ್ದೇಶವಿದೆ. ಬಿಜೆಪಿ ರಾಷ್ಟ್ರೀಯ ನಾಯಕರ ಸರಣಿ ಸಮಾವೇಶ ಕಾರ್ಯಕ್ರಮಗಳಲ್ಲಿ ರಾಜ್ಯ ನಾಯಕರು ಕೂಡ ತೊಡಗಿಕೊಂಡಿದ್ದಾರೆ.
ಇದರಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದು ವಿಳಂಬವಾಗುತ್ತಿದೆ. ಈಗಾಗಲೇ ಹಲವು ಬಾರಿ ಚರ್ಚೆ ನಡೆಸಿ ತೀವ್ರ ಪೈಪೋಟಿ ಇರುವ ಬೆಂಗಳೂರು ಉತ್ತರ, ಚಿಕ್ಕಮಗಳೂರು ಹಾಗೂ ಮೈಸೂರು ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.
ಫೆ.26ರಂದು ಬಿಜೆಪಿ ರಾಜ್ಯಾಧ್ಯಕ್ಷರಾದ ರಾಜನಾಥ್ ಸಿಂಗ್ ಶಿವಮೊಗ್ಗದಲ್ಲಿ ನಡೆಯಲಿರುವ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಕೇಂದ್ರದ ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹ ಅವರು ಯುಪಿಎ ಸರ್ಕಾರದ ಒಂದು ಮತ್ತು ಎರಡನೆ ಅವಧಿಯ ಆರ್ಥಿಕ ವೈಫಲ್ಯ ಕುರಿತು ಉದ್ಯಮಿ ಮತ್ತು ವೃತ್ತಿಪರರೊಂದಿಗೆ ಸಂವಾದ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಘಟಕ ಅಂತಿಮಗೊಳಿಸಿರುವ ಅಭ್ಯರ್ಥಿಗಳ ಪಟ್ಟಿಗೆ ರಾಷ್ಟ್ರೀಯ ನಾಯಕರು ಒಪ್ಪಿಗೆ ಸೂಚಿಸಲಿದ್ದಾರೆ. ಆನಂತರ ದೆಹಲಿಯಲ್ಲಿರುವ ಪಕ್ಷದ ರಾಷ್ಟ್ರೀಯ ಚುನಾವಣಾ ಸಮಿತಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಿದೆ.












Click it and Unblock the Notifications